ನಳಿನ್‌ ಸಾಧನೆಯ ವರದಿ ಮಂಡಿಸಲಿ: ಡಿ.ಕೆ.ಶಿವಕುಮಾರ್‌ ಸವಾಲು

ಶುಕ್ರವಾರ, ಏಪ್ರಿಲ್ 26, 2019
24 °C

ನಳಿನ್‌ ಸಾಧನೆಯ ವರದಿ ಮಂಡಿಸಲಿ: ಡಿ.ಕೆ.ಶಿವಕುಮಾರ್‌ ಸವಾಲು

Published:
Updated:

ಮಂಗಳೂರು: ಹತ್ತು ವರ್ಷಗಳ ಕಾಲ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿ ಮತ್ತೆ ಚುನಾವಣಾ ಕಣದಲ್ಲಿರುವ ನಳಿನ್‌ ಕುಮಾರ್‌ ಕಟೀಲ್‌ ತಮ್ಮ ಸಾಧನೆಯ ವರದಿಯನ್ನು ಸಾರ್ವಜನಿಕರ ಮುಂದೆ ಮಂಡಿಸಲಿ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಸವಾಲು ಹಾಕಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘28 ವರ್ಷಗಳಿಂದ ಇಲ್ಲಿ ಬಿಜೆಪಿ ಸಂಸದರಿದ್ದಾರೆ. ಹತ್ತು ವರ್ಷಗಳಿಂದ ನಳಿನ್‌ ಕುಮಾರ್‌ ಅವರೇ ಸಂಸದರು. ಜಿಲ್ಲೆಯ ಅಭಿವೃದ್ಧಿಗೆ ಯಾವ ಯೋಜನೆ ತಂದಿದ್ದಾರೆ? ಎಷ್ಟು ಅನುದಾನ ತಂದಿದ್ದಾರೆ? ಎಂಬುದನ್ನು ಬಹಿರಂಗಪಡಿಸಲಿ’ ಎಂದರು.

'ಜಿಲ್ಲೆಯ ಸಮಸ್ಯೆಗಳ ಕುರಿತು ನಳಿನ್ ಕುಮಾರ್ ಕಟೀಲ್ ಒಂದು ದಿನವೂ ಸಂಸತ್ತಿನಲ್ಲಿ ದನಿ ಎತ್ತಲಿಲ್ಲ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಯಾವುದೇ ಬೃಹತ್‌ ಯೋಜನೆಯನ್ನು ತಂದಿಲ್ಲ. ಕಾಂಗ್ರೆಸ್‌ ಸಂಸದರ ಕಾಲದಲ್ಲಿ ತಂದ ಯೋಜನೆಗಳೇ ಕಾಣುತ್ತಿವೆ. ಸಂಸದನಾಗಿ ತನ್ನ ಜವಾಬ್ದಾರಿ ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ನಳಿನ್‌ ಕುಮಾರ್‌ ಕಟೀಲ್‌, ಜಿಲ್ಲೆಯ ಜನರ ಮತ ಕೇಳುವ ಹಕ್ಕು ಕಳೆದುಕೊಂಡಿದ್ದಾರೆ’ ಎಂದು ಟೀಕಿಸಿದರು.

ವಿಜಯ ಬ್ಯಾಂಕ್ ವಿಲೀನದ ಸಂದರ್ಭದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಒಟ್ಟಾಗಿ ರಾಜ್ಯದ 28 ಸಂಸದರ ನಿಯೋಗ ಕರೆದೊಯ್ದು ಒತ್ತಡ ಹೇರಿದ್ದರೆ ವಿಜಯ ಬ್ಯಾಂಕ್ ವಿಲೀನ ಆಗುತ್ತಿರಲಿಲ್ಲ. ಬರೋಡಾ ಬ್ಯಾಂಕ್‌ ಅನ್ನೇ ವಿಜಯ ಬ್ಯಾಂಕ್‌ನಲ್ಲಿ ವಿಲೀನ ಮಾಡುವಂತೆ ಒತ್ತಡ ಹೇರಬಹುದಿತ್ತು. ಆದರೆ, ಇವರು ಅಂತಹ ಪ್ರಯತ್ನವನ್ನೇ ಮಾಡಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಸ್ವಾಭಿಮಾನ ಉಳಿಸಲು ಸಾಧ್ಯವಾಗದ ಇವರು ಯಾವತ್ತೋ ರಾಜೀನಾಮೆ ನೀಡಬೇಕಿತ್ತು ಎಂದರು.

ಜಿಲ್ಲೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಯಾವ ಕೊಡುಗೆಯನ್ನೂ ನೀಡಿಲ್ಲ. ಇಲ್ಲಿರುವ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಾಕಷ್ಟು ನೆರವು ನೀಡುತ್ತಿದೆ. ಆದರೆ, ಕೇಂದ್ರದಿಂದ ಬಿಡಿಗಾಸೂ ಬರುತ್ತಿಲ್ಲ. ಇದೆಲ್ಲವನ್ನೂ ಜನರು ಗಮನಿಸಿ, ಮತ ಚಲಾಯಿಸಬೇಕು ಎಂದು ಹೇಳಿದರು.

ಯುವಕನನ್ನು ಬೆಂಬಲಿಸಿ:

ನಳಿನ್‌ ಕುಮಾರ್‌ ಕಟೀಲ್‌ ಜಿಲ್ಲೆಗೆ ಬೆಂಕಿ ಹಚ್ಚುವ ಮಾತನಾಡುತ್ತಾರೆ. ಇಂತಹವರು ಜಿಲ್ಲೆಗೆ ಸಂಸದರಾಗದಂತೆ ತಡೆಯಬೇಕು. ಉತ್ಸಾಹಿ ಯುವಕ, ಎಲ್ಲ ಜಾತಿ, ಧರ್ಮದ ಜನರನ್ನು ಒಟ್ಟಿಗೆ ಕರೆದೊಯ್ಯಬಲ್ಲ ಮಿಥುನ್‌ ರೈ ಅವರಿಗೆ ಜಿಲ್ಲೆಯ ಜನರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಸಾವಿರಾರು ಮಂದಿ ಪದವೀಧರರು ಉನ್ನತ ಶಿಕ್ಷಣ ಪಡೆದು, ಪದವೀಧರರಾಗಿ ಹೊರಬರುತ್ತಿದ್ದಾರೆ. ಆದರೆ, ಉದ್ಯೋಗಾವಕಾಶಗಳ ಕೊರತೆಯಿಂದ ಬೆಂಗಳೂರು, ಹೊರ ರಾಜ್ಯ ಮತ್ತು ವಿದೇಶಗಳಿಗೆ ಹೋಗುತ್ತಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆಯಾದರೆ ಇಲ್ಲಿ ಉದ್ಯೋಗ ಸೃಷ್ಟಿಯ ಪರ್ವ ಆರಂಭವಾಗಲಿದೆ. ಮಂಗಳೂರು ಕರ್ನಾಟಕದ ಹೃದಯ. ಇದನ್ನು ಅತ್ಯಂತ ಜೋಪಾನವಾಗಿ ಕಾಪಾಡಬೇಕು. ಈ ಉದ್ದೇಶದಿಂದ ಕ್ರಿಯಾಶೀಲ ವ್ಯಕ್ತಿಯನ್ನು ಸಂಸದನನ್ನಾಗಿ ಆಯ್ಕೆ ಮಾಡಬೇಕು ಎಂದರು.

ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಹರೀಶ್‌ ಕುಮಾರ್‌, ಮಾಜಿ ಶಾಸಕ ಬಿ.ಎ.ಮೊಹಿಯುದ್ದೀನ್‌ ಬಾವಾ, ಮಾಜಿ ಮೇಯರ್‌ಗಳಾದ ಮಹಾಬಲ ಮಾರ್ಲ, ಭಾಸ್ಕರ್ ಕೆ., ಶಶಿಧರ ಹೆಗ್ಡೆ, ಪಕ್ಷದ ಮುಖಂಡರಾದ ಎ.ಸಿ.ವಿನಯರಾಜ್‌, ನವೀನ್‌ ಡಿಸೋಜ, ಎ.ಸಿ.ಭಂಡಾರಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !