ಉತ್ತರಕ್ಕೆ ಅನುದಾನ ಕೊಟ್ಟಿದ್ದರೆ ಹೇಳಿ: ಶಾಸಕ ಬಾವಾ

ಭಾನುವಾರ, ಏಪ್ರಿಲ್ 21, 2019
26 °C

ಉತ್ತರಕ್ಕೆ ಅನುದಾನ ಕೊಟ್ಟಿದ್ದರೆ ಹೇಳಿ: ಶಾಸಕ ಬಾವಾ

Published:
Updated:
Prajavani

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾಗಿ ಹತ್ತು ವರ್ಷ ಪೂರೈಸುತ್ತಿರುವ ನಳಿನ್‌ ಕುಮಾರ್‌ ಕಟೀಲ್‌ ಈವರೆಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಯಾವುದೇ ಅನುದಾನ ಕೊಟ್ಟಿಲ್ಲ. ಹಾಗೇನಾದರೂ ಕೊಟ್ಟಿದ್ದರೆ ಮಾಹಿತಿ ಬಹಿರಂಗಪಡಿಸಲಿ ಎಂದು ಮಾಜಿ ಶಾಸಕ ಬಿ.ಎ.ಮೊಹಿಯುದ್ದೀನ್‌ ಬಾವಾ ಸವಾಲು ಹಾಕಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹತ್ತು ವರ್ಷಗಳಲ್ಲಿ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ₹ 50 ಕೋಟಿ ಅನುದಾನ ಬಂದಿದೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸುರತ್ಕಲ್‌ ಮತ್ತು ಗುರುಪುರ ಪ್ರದೇಶಗಳಿಗೆ ಯಾವುದೇ ಅನುದಾನ ನೀಡಿಲ್ಲ. ಈ ಭಾಗದಲ್ಲಿ ನಮ್ಮ ಸಂಸದರು ಯಾರು ಎಂಬುದೇ ಜನರಿಗೆ ಗೊತ್ತಿಲ್ಲದ ಪರಿಸ್ಥಿತಿ ಇದೆ’ ಎಂದರು.

ನಳಿನ್‌ ಕುಮಾರ್‌ ಕಟೀಲ್‌ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅಧಿಕಾರಿಗಳ ಸಭೆ ನಡೆಸಿ, ಕೆಲಸ ಮಾಡಿಸುವುದು ಗೊತ್ತಿಲ್ಲ. ಸಂಸತ್ತಿನಲ್ಲಿ ಮಾತನಾಡಿ ಜಿಲ್ಲೆಯ ಸಮಸ್ಯೆಗಳನ್ನು ಸರ್ಕಾರದ ಮುಂದಿಡುವುದೂ ಗೊತ್ತಿಲ್ಲ. ಸುಳ್ಳು ಹೇಳಿಕೊಂಡೇ ಹತ್ತು ವರ್ಷ ಪೂರೈಸಿದ್ದಾರೆ ಎಂದು ಟೀಕಿಸಿದರು.

ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್‌ ಶೆಟ್ಟಿ ಕೂಡ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಎಡಪದವು ವ್ಯಾಪ್ತಿಯ ಮುತ್ತೂರಿನಲ್ಲಿ ಸೇತುವೆ ಬಿದ್ದು ವರ್ಷ ಕಳೆದರೂ ಸಂಚಾರಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಿಲ್ಲ. ಸ್ಥಳೀಯರೇ ಸೇತುವೆ ನಿರ್ಮಿಸಿಕೊಳ್ಳಬೇಕಾದ ಸ್ಥಿತಿ ಬಂದಿದೆ. ಶಾಸಕ ಭರತ್‌ ಶೆಟ್ಟಿ ಕೂಡ ಈವರೆಗಿನ ತಮ್ಮ ಸಾಧನೆ ಏನು ಎಂಬುದನ್ನು ಹೇಳಿಕೊಳ್ಳಲಿ ಎಂದರು.

ಸುರತ್ಕಲ್‌ ಟೋಲ್‌ ಗೇಟ್‌ ಮುಚ್ಚಿಸುವ ವಿಚಾರದಲ್ಲಿ ಸಂಸದ, ಶಾಸಕ ಇಬ್ಬರೂ ಮಾತು ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ತುಳು ಸಂಸ್ಕೃತಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜಿಲ್ಲೆಯ ಅಭಿವೃದ್ಧಿಗಾಗಿ ಇಂತಹ ಯುವ ನಾಯಕನ ಅಗತ್ಯವಿದೆ. ಜನರು ಈ ಬಾರಿ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಕಾಂಗ್ರೆಸ್‌ ಮುಖಂಡರಾದ ಆರ್.ಕೆ.ಪೃಥ್ವಿರಾಜ್, ಕೃಷ್ಣ ಅಮೀನ್, ಗಣೇಶ್ ಪೂಜಾರಿ, ಬಾಷಾ ಮಾಸ್ಟರ್, ಮೆಲ್ವಿನ್ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !