ಬಹಿರಂಗ ಪ್ರಚಾರಕ್ಕೆ ತೆರೆ; ಕ್ಷೇತ್ರದಲ್ಲಿ ಮತದಾನಕ್ಕೆ ಸಕಲ ಸಿದ್ಧತೆ

ಶನಿವಾರ, ಏಪ್ರಿಲ್ 20, 2019
32 °C
ಏ.19ರ ವರೆಗೆ ನಿಷೇಧಾಜ್ಞೆ ಜಾರಿ, ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 2,284 ಮತಗಟ್ಟೆಗಳು ಸಜ್ಜು

ಬಹಿರಂಗ ಪ್ರಚಾರಕ್ಕೆ ತೆರೆ; ಕ್ಷೇತ್ರದಲ್ಲಿ ಮತದಾನಕ್ಕೆ ಸಕಲ ಸಿದ್ಧತೆ

Published:
Updated:
Prajavani

ಚಿಕ್ಕಬಳ್ಳಾಪುರ: ‘ಲೋಕಸಭೆ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ನಡೆಸಲು ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ. ಗುರುವಾರ(ಏ.18) ಪ್ರತಿಯೊಬ್ಬ ಮತದಾರರು ಯಾವುದೇ ಆಮಿಷ, ಒತ್ತಡಕ್ಕೆ ಒಳಗಾಗದೆ ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತ ಚಲಾಯಿಸಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ಅನಿರುದ್ಧ್ ಶ್ರವಣ್ ಮನವಿ ಮಾಡಿದರು.

ಚುನಾವಣೆ ಸಿದ್ಧತೆ ಕುರಿತಂತೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಎಂಟು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ 18.08 ಲಕ್ಷ ಮತದಾರರಿದ್ದಾರೆ. ಮತದಾನಕ್ಕಾಗಿ 2,284 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 481 ಅತಿಸೂಕ್ಷ ಮತಗಟ್ಟೆಗಳಿದ್ದು, ಅವುಗಳಲ್ಲಿ ಕೇಂದ್ರ ಸ್ವಾಮ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುವ 435 ಸಿಬ್ಬಂದಿಯನ್ನು ವೀಕ್ಷಕರನ್ನಾಗಿ ನಿಯೋಜಿಸಲಾಗುತ್ತದೆ’ ಎಂದು ಹೇಳಿದರು.

‘ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಈಗಾಗಲೇ ಕುಡಿಯುವ ನೀರು, ವಿದ್ಯುತ್, ಪೀಠೋಪಕರಣ, ವಿಶ್ರಾಂತಿ ಕೊಠಡಿ, ಶೌಚಾಲಯ, ಅಂಗವಿಕಲರ ಅನುಕೂಲಕ್ಕಾಗಿ ರ್‍ಯಾಂಪ್‌ನಂತಹ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಜಿಲ್ಲೆಯಲ್ಲಿ ದೈಹಿಕ, ದೃಷ್ಟಿ, ಮಾನಸಿಕ ಅಸ್ವಸ್ಥರು, ಬುದ್ದಿಮಾಂದ್ಯರು ಸೇರಿದಂತೆ 12,344 ಅಂಗವಿಕಲ ಮತದಾರರಿದ್ದಾರೆ. ಅವರಿಗಾಗಿ ಮತಗಟ್ಟೆಗಳಲ್ಲಿ ಗಾಲಿ ಕುರ್ಚಿ, ಅಂಧರಿಗೆ ಬ್ರೈಲ್ ಪಿಲಿಯುಳ್ಳ ಮಂತ್ರಯಂತ್ರದ ಘಟಕಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಮತದಾನ ಮುಕ್ತಾಯದ ಸಮಯದಿಂದ 48 ಗಂಟೆಗಳ ಮುಂಚೆ ಬಹಿರಂಗ ಪ್ರಚಾರ ಸ್ಥಗಿತಗೊಳ್ಳುತ್ತದೆ. ಮಂಗಳವಾರ ಸಂಜೆ 6ರ ನಂತರ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ಮಾಡಬಹುದಷ್ಟೇ. ಐದಕ್ಕಿಂತ ಹೆಚ್ಚು ಜನರು ಗುಂಪುಗೂಡಿ ಪ್ರಚಾರ ನಡೆಸುವಂತಿಲ್ಲ. ಪ್ರಮಾಣೀಕರಣ ಪತ್ರ ಪಡೆಯದೇ ಯಾವುದೇ ಅಭ್ಯರ್ಥಿ ಮತ್ತು ರಾಜಕೀಯ ಪಕ್ಷಗಳು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಚುನಾವಣೆ ಪ್ರಚಾರ ಮಾಡುವುದು ನಿಷೇಧಿಸಲಾಗಿದೆ’ ಎಂದರು.

‘ಅಭ್ಯರ್ಥಿಗಳು ತಮಗೆ ಅನುಮತಿ ನೀಡಲಾದ ಒಂದು ವಾಹನವನ್ನು ಮಾತ್ರ ಪ್ರಚಾರಕ್ಕಾಗಿ ಬಳಸಬಹುದು. ಮಂಗಳವಾರ ಸಂಜೆ 6ರಿಂದ ಮತದಾನ ಮುಗಿಯುವವರೆಗೂ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಮತದಾರರನ್ನು ಬಿಟ್ಟು ಪರ ಸ್ಥಳದ ವ್ಯಕ್ತಿಗಳು ಇರುವಂತಿಲ್ಲ. ಈ ಬಗ್ಗೆ ಈಗಾಗಲೇ ವಸತಿ ಗೃಹಗಳಿಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

‘ಈಗಾಗಲೇ ಮತದಾರರ ಚೀಟಿ ಮತ್ತು ಮಾರ್ಗದರ್ಶಿ ಸೂಚಿ ಮುದ್ರಿಸಿ ಬೂತ್ ಮಟ್ಟದ ಅಧಿಕಾರಿಗಳ ಮೂಲಕ ಮತದಾರರಿಗೆ ಹಂಚಿಕೆ ಮಾಡುತ್ತಿದ್ದೇವೆ. ಅಧಿಕಾರಿಗಳಿಂದ ಇವುಗಳನ್ನು ಪಡೆದುಕೊಳ್ಳದವರು ಮತಗಟ್ಟೆ ಬಳಿ ತೆರೆಯುವ ಮತದಾರರ ಸಹಾಯ ಕೇಂದ್ರದಲ್ಲಿ ಕೇಳಿ ಪಡೆದುಕೊಳ್ಳಬಹುದು’ ಎಂದು ತಿಳಿಸಿದರು.

‘ಮತದಾರರ ಬಳಿ ತಮ್ಮ ಗುರುತಿನ ಚೀಟಿ ಇಲ್ಲದಿದ್ದರೆ ಪಾಸ್‌ಪೋರ್ಟ್, ಪಾನ್‌ಕಾರ್ಡ್, ಆಧಾರ್ ಕಾರ್ಡ್, ಚಾಲನಾ ಪರವಾನಗಿ ಪತ್ರ, ಬ್ಯಾಂಕ್ ಪಾಸ್‌ಬುಕ್, ಅಧಿಕೃತ ಗುರುತಿನ ಚೀಟಿಗಳು ಸೇರಿದಂತೆ ಸುಮಾರು 11 ಬಗೆಯ ದಾಖಲಾತಿಗಳಲ್ಲಿ ಒಂದನ್ನು ಮತಗಟ್ಟೆ ಅಧಿಕಾರಿಗಳಿಗೆ ತೋರಿಸಿ ತಮ್ಮ ಮತ ಚಲಾಯಿಸಬಹುದು’ ಎಂದರು.

‘ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳಿಂದ ಮತಯಂತ್ರಗಳನ್ನು ತಂದು ರಾಷ್ಟ್ರೀಯ ಹೆದ್ದಾರಿ–7ರಲ್ಲಿರುವ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿ ಇಡಲಾಗುತ್ತದೆ. ಆ ಕೊಠಡಿಗಳಿಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ, ಅರೆಸೇನಾ ಪಡೆ ಸಿಬ್ಬಂದಿ ಭದ್ರತೆ ಒದಗಿಸಲಾಗುತ್ತದೆ. ಮೇ 23 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಅಲ್ಲಿಯವರೆಗೆ ಮತಯಂತ್ರಗಳ ಕೊಠಡಿ ಮೇಲೆ ನಿಗಾ ಇಡಲು ಬಯಸುವ ಅಭ್ಯರ್ಥಿಗಳ ಪ್ರತಿನಿಧಿಗಳಿಗೆ ವಸತಿಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ’ ಎಂದು ಹೇಳಿದರು.

ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಮತದಾರರು ಮತ್ತು ಮತಗಟ್ಟೆ ವಿವರ

ಕ್ಷೇತ್ರ              ಪುರುಷ          ಮಹಿಳೆ       ಇತರೆ ಒಟ್ಟು ಮತಗಟ್ಟೆ
ಗೌರಿಬಿದನೂರು 1,01,572    1,02,459 2 2,04,033 261

ಬಾಗೇಪಲ್ಲಿ        98,714     1,00,105 33 1,98,852 263

ಚಿಕ್ಕಬಳ್ಳಾಪುರ   99,825     1,00,776 21 2,00,622 254

ಯಲಹಂಕ       1,98,731    1,88,475 60 3,87,266 376

ಹೊಸಕೋಟೆ    1,07,766 1,04,956 26 2,12,748 286

ದೇವನಹಳ್ಳಿ     1,00,602 98,935 19 1,99,556 292

ದೊಡ್ಡಬಳ್ಳಾಪುರ 1,01,256 1,00,417 6 2,01,679 276

ನೆಲಮಂಗಲ    1,01,997 1,01,536 70 2,03,603 276

ಒಟ್ಟು     9,10,463   8,97,659  237 18,08,359 2,284

* 9,10,463 ಪುರುಷ ಮತದಾರರು

* 8,97,659 ಮಹಿಳಾ ಮತದಾರರು
* 237 ತೃತೀಯ ಲಿಂಗಿ ಮತದಾರರು

* 18,08,359 ಒಟ್ಟು ಮತದಾರರು

* 2,284 ಒಟ್ಟು ಮತಗಟ್ಟೆಗಳು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !