ಮತ್ತೊಮ್ಮೆ ಮೋದಿ ಬೆಂಬಲಿಸಿ: ತೆಲಂಗಾಣ ಬಿಜೆಪಿ ಮುಖಂಡನ ಮನವಿ

ಸೋಮವಾರ, ಏಪ್ರಿಲ್ 22, 2019
31 °C
ಬಿಜೆಪಿ ಅಭ್ಯರ್ಥಿ ಪರ ತೆಲಂಗಾಣದ ಮಾಜಿ ಶಾಸಕ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಇಂದ್ರಸೇನಾ ರೆಡ್ಡಿ ಮತ ಯಾಚನೆ

ಮತ್ತೊಮ್ಮೆ ಮೋದಿ ಬೆಂಬಲಿಸಿ: ತೆಲಂಗಾಣ ಬಿಜೆಪಿ ಮುಖಂಡನ ಮನವಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ಕಳೆದ ಐದು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ಜನಸಾಮಾನ್ಯರ ಪರವಾಗಿ ಕೆಲಸ ಮಾಡಿದ್ದಾರೆ. ಅವರು ಆರಂಭಿಸಿದ ಜನಪರ ಯೋಜನೆಗಳನ್ನು ಪೂರ್ಣಗೊಳಿಸಲು ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು’ ಎಂದು ತೆಲಂಗಾಣದ ಮಾಜಿ ಶಾಸಕ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಇಂದ್ರಸೇನಾ ರೆಡ್ಡಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ 50 ವರ್ಷಗಳಿಂದ ದಿನನಿತ್ಯದ ವಸ್ತುಗಳ ಬೆಲೆಗಳು ಜಾಸ್ತಿಯಾಗುತ್ತಲೇ ಹೋಗಿವೆ. ಆದರೆ, ಕಳೆದ ಐದು ವರ್ಷಗಳಲ್ಲಿ ಅಡುಗೆ ಎಣ್ಣೆ, ಉಪ್ಪು, ಸಕ್ಕರೆ, ಸಾಂಬಾರ್ ಪದಾರ್ಥಗಳ ಬೆಲೆ ಕಡಿಮೆಯಾಗಿದಯೇ ಹೊರತು ಏರಿಕೆಯಾಗಿಲ್ಲ. ಮೋದಿ ಅವರು ಭ್ರಷ್ಟಾಚಾರವನ್ನು ಮಟ್ಟ ಹಾಕಿರುವುದೇ ಇದಕ್ಕೆ ಕಾರಣ’ ಎಂದು ಹೇಳಿದರು.

‘ರೈತರು ಈ ಹಿಂದೆ ರಸಗೊಬ್ಬರಗಳು ಬೇಕಾದರೆ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ಆದರೆ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ರೈತರಿಗೆ ಮೋಸ ಮಾಡುತ್ತಿದ್ದ ರಸಗೊಬ್ಬರ ಕಂಪನಿಗಳ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಂಡು ಎಲ್ಲರಿಗೂ ರಸಗೊಬ್ಬರ ದೊರೆಯುವಂತೆ ಮಾಡಿದ್ದಾರೆ. ಬಿಜೆಪಿ ಆಡಳಿತದಲ್ಲಿ ಬಾಂಬ್ ದಾಳಿ, ಹಾಗೂ ನಕ್ಸಲ್‌ ಚಟುವಟಿಕೆಗಳನ್ನು ಮಟ್ಟ ಹಾಕಲಾಗಿದೆ’ ಎಂದರು.

‘ಮೋದಿ ಅವರು ಪಾರದರ್ಶಕ, ಭ್ರಷ್ಟಾಚಾರ, ಕಳಂಕ ರಹಿತ ಆಡಳಿತ ನೀಡಿದ್ದಾರೆ. ಆದ್ದರಿಂದ ಇವತ್ತು ನಮಗೆ ಬರೀ ಮಾತನಾಡುವ ಸಂಸದರು ಬೇಕಾಗಿಲ್ಲ. ಕೆಲಸ ಮಾಡುವವರು ಬೇಕಾಗಿದ್ದಾರೆ. ಸಂಸದ ಮೊಯಿಲಿ ಅವರು ಬೆಂಗಳೂರಿಗೆ ಹತ್ತಿರವಿರುವ ಈ ಜಿಲ್ಲೆಯಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಿ ನಿರುದ್ಯೋಗ ನಿವಾರಿಸಬಹುದಿತ್ತು. ಅದನ್ನು ಮಾಡಲಿಲ್ಲ. ರೈತರಿಗೆ ಕೃಷಿಗೆ ನೀರು ಕೊಡುವಲ್ಲಿ ಮೊಯಿಲಿ ಅವರು ವಿಫಲರಾಗಿದ್ದಾರೆ’ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್ ಮಾತನಾಡಿ, ‘ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಟಲ್ ಬಿಹಾರಿ ವಾಜಪೇಯಿ ಅವರ ಕೊಡುಗೆ. ಅದಕ್ಕೆ ಕೆಂಪೇಗೌಡ ಹೆಸರು ಇಡಲು ಅನುಮೋದನೆ ಕೊಟ್ಟವರು ನಾವು .ಆದರೆ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಬೇಕು ಎಂದು ವೀರಪ್ಪ ಮೊಯಿಲಿ ಅವರು ಕುತಂತ್ರ ಮಾಡಿದ್ದರು’ ಎಂದು ಆರೋಪಿಸಿದರು.

ತೆಲಂಗಾಣದ ಮಾಜಿ ಶಾಸಕ ರಾಮಚಂದ್ರ ರೆಡ್ಡಿ, ಬಿಜೆಪಿ ಕಿಸಾನ್ ಮೊರ್ಚಾ ರಾಷ್ಟ್ರೀಯ ಕಾರ್ಯದರ್ಶಿ ಸುಗುಣಾಕರ ರಾವ್, ಜಿಲ್ಲೆಯ ಚುನಾವಣಾ ಉಸ್ತುವಾರಿ ಸಚ್ಚಿದಾನಂದ ಮೂರ್ತಿ, ರೈತ ಮೋರ್ಚಾ ಜಿಲ್ಲಾ ಘಟಕ ಅಧ್ಯಕ್ಷ ರಾಮಪ್ಪ, ಮುಖಂಡರಾದ ಮುರಳಿ, ಮಲ್ಲಿಕಾರ್ಜುನ್, ಶ್ರೀನಿವಾಸರೆಡ್ಡಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !