ಪಾಕ್ ಜತೆ ಮಾತಾಡಬೇಕೋ, ಉಗ್ರರ ಹೊಡೆಯಬೇಕೋ: ಅಮಿತ್‌ ಶಾ ಟೀಕೆ

ಭಾನುವಾರ, ಏಪ್ರಿಲ್ 21, 2019
26 °C
ಹೊನ್ನಾಳಿಯಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಪಾಕ್ ಜತೆ ಮಾತಾಡಬೇಕೋ, ಉಗ್ರರ ಹೊಡೆಯಬೇಕೋ: ಅಮಿತ್‌ ಶಾ ಟೀಕೆ

Published:
Updated:
Prajavani

ಹೊನ್ನಾಳಿ: ಪಾಕಿಸ್ತಾನದ ಜತೆ ಮಾತನಾಡಿ, ಪ್ರತಿದಾಳಿ ನಡೆಸಬೇಡಿ ಎಂದು ಕಾಂಗ್ರೆಸ್‌ನ ಸ್ಯಾಮ್‌ ಪಿತ್ರೊಡಾ ಹೇಳುತ್ತಾರೆ. ಉಗ್ರರ ವಿಷಯದಲ್ಲಿ ಪಾಕ್‌ ಜತೆ ಮಾತನಾಡಬೇಕೋ, ಅವರನ್ನು ಹೊಡೆದುಹಾಕಬೇಕೋ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಭಾವಾವೇಶದಿಂದ ಪ್ರಶ್ನಿಸಿದರು.

ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ ಅವರ ಪರ ಮತಯಾಚಿಸಲು ಮಂಗಳವಾರ ನಡೆದ ರ‍್ಯಾಲಿಯಲ್ಲಿ ಅವರು ಮಾತನಾಡಿದರು.

‘ಪಾಕಿಸ್ತಾನದಿಂದ ಗುಂಡು ಬಂದರೆ, ನಮ್ಮಿಂದ ಬೆಂಕಿಯುಂಡೆ ಹೋಗುತ್ತೆ. ಪ್ರಧಾನಿ ನರೇಂದ್ರ ಮೋದಿ ಇಚ್ಛಾಶಕ್ತಿಯಿಂದ ನಮ್ಮ ಸೈನಿಕರು ಪಾಕಿಸ್ತಾನದ ಮನೆಗೆ ನುಗ್ಗಿ ಉಗ್ರರನ್ನು ಹೊಡೆದು ಬಂದರು’ ಎಂದು ಹೇಳಿದರು.

ಒಮರ್‌ ಅಬ್ದುಲ್ಲ ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನ ಮಂತ್ರಿ ಬೇಕು ಎನ್ನುತ್ತಾರೆ. ಒಂದು ದೇಶದಲ್ಲಿ ಇಬ್ಬರು ಪ್ರಧಾನಿಗಳು ಇರಲು ಸಾಧ್ಯವೇ ಎಂದು ಪ್ರಶ್ನಿಸಿದ ಅಮಿತ್‌ ಶಾ, ‘ರಾಹುಲ್‌ ಬಾಬಾ, ಒಮರ್‌ ಅಬ್ದುಲ್ಲ ಏನೇ ಹೇಳಲಿ, ಬಿಜೆಪಿ ಕಾರ್ಯಕರ್ತ ಇರುವವರೆಗೆ ಕಾಶ್ಮೀರ ಭಾರತದಲ್ಲೇ ಇರುತ್ತದೆ’ ಎಂದು ದೊಡ್ಡ ದನಿಯಲ್ಲಿ ಎಚ್ಚರಿಸಿದರು.

‘ಮಹಾಘಟಬಂಧನ ಅಧಿಕಾರಕ್ಕೆ ಬಂದರೆ ಕಲಬೆರಕೆ ಸರ್ಕಾರ ಬಂದಂತೆ. ಹಾಗಾದಲ್ಲಿ ಸೋಮವಾರ ಮಾಯಾವತಿ, ಮಂಗಳವಾರ ಅಖಿಲೇಶ್ ಯಾದವ್, ಬುಧವಾರ ದೇವೇಗೌಡ, ಗುರುವಾರ ಚಂದ್ರಬಾಬು ನಾಯ್ಡು, ಶುಕ್ರವಾರ ಶರದ್ ಪವಾರ್, ಶನಿವಾರ ಮಮತಾ ದೀದಿ ಪ್ರಧಾನಿ ಆಗುತ್ತಾರೆ. ಭಾನುವಾರ ಎಲ್ಲರಿಗೂ ರಜೆ, ದೇಶಕ್ಕೂ ರಜೆ’ ಎಂದು ಮಾತಿನ ಚಾಟಿ ಬೀಸಿದರು.

ಕರ್ನಾಟಕಕ್ಕೆ 10 ವರ್ಷ ಯುಪಿಎ ಸರ್ಕಾರ ಅನ್ಯಾಯ ಮಾಡಿತ್ತು. 13ನೇ ಹಣಕಾಸು ಆಯೋಗದಲ್ಲಿ ಕೇವಲ ₹ 88,583 ಕೋಟಿ ಬಿಡುಗಡೆಯಾಗಿತ್ತು. 14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಮೋದಿ ₹ 3 ಲಕ್ಷ 88 ಸಾವಿರದ 971 ಕೋಟಿ ಅನುದಾನ ಮಂಜೂರಾಗುವಂತೆ ಮಾಡಿದ್ದಾರೆ ಎಂದು ಅಂಕಿಅಂಶ ನೀಡಿದರು.

ಕೇಂದ್ರ ಸರ್ಕಾರದ ಉಜ್ವಲಾ, ಸ್ವಚ್ಛ ಭಾರತ್, ಆಯುಷ್ಮಾನ್ ಭಾರತ್ ಮೊದಲಾದ ಯೋಜನೆಗಳ ಯಶಸ್ಸನ್ನು ಪುನರುಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !