ಮೋದಿ ಅಭಿವೃದ್ಧಿ ಬಗ್ಗೆ ಮಾತನಾಡಲ್ಲ, ಜನ ಬಿಜೆಪಿ ನಂಬುವುದಿಲ್ಲ-ಸಿದ್ದರಾಮಯ್ಯ ಟೀಕೆ

ಬುಧವಾರ, ಏಪ್ರಿಲ್ 24, 2019
23 °C

ಮೋದಿ ಅಭಿವೃದ್ಧಿ ಬಗ್ಗೆ ಮಾತನಾಡಲ್ಲ, ಜನ ಬಿಜೆಪಿ ನಂಬುವುದಿಲ್ಲ-ಸಿದ್ದರಾಮಯ್ಯ ಟೀಕೆ

Published:
Updated:
Prajavani

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಐದು ವರ್ಷಗಳಲ್ಲಿ ಮಾಡಿರುವ ಸಾಧನೆ ಮತ್ತು ದೇಶದ ಅಭಿವೃದ್ಧಿಯ ಕುರಿತು ಯಾವುದೇ ಮಾತನ್ನಾಡುತ್ತಿಲ್ಲ. ಆದ್ದರಿಂದ ಜನರು ಬಿಜೆಪಿಯನ್ನು ನಂಬುವುದಿಲ್ಲ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿ, ಬಿಜೆಪಿಯು ಕಳೆದ ಐದು ವರ್ಷಗಳಲ್ಲಿ ಏನೇನು ಅಭಿವೃದ್ದಿ ಕೆಲಸಗಳನ್ನು ಮಾಡಿದೆ. ಮುಂದಿನ ಐದು ವರ್ಷಗಳಿಗೆ ಅವರ ಯೋಜನೆಗಳು ಏನು ಎಂಬುದನ್ನು ಜನರು ಗಮನಿಸುತ್ತಿದ್ದಾರೆ. ಅಭಿವೃದ್ಧಿಯನ್ನು ಕಡೆಗಣಿಸಿ ಜನರನ್ನು ಭಾವನಾತ್ಮಕವಾಗಿ ಹಿಡಿದಿಡುವ ಅವರ ತಂತ್ರ ಫಲಿಸದು ಎಂದು ತಿಳಿಸಿದರು.

ಐದು ವರ್ಷಗಳಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅಷ್ಟು ಹುದ್ದೆಗಳನ್ನು ಸೃಷ್ಟಿಸುವುದು ಬೇಡ. ಐದು ವರ್ಷಗಳಲ್ಲಿ ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂಬುದನ್ನಾದರೂ ದೇಶದ ಜನರಿಗೆ ತಿಳಿಸಬೇಕಿತ್ತು ಎಂದರು.

ನೋಟು ರದ್ಧತಿ ವೇಳೆ ₹ 1000 ಮತ್ತು ₹ 500 ಮುಖಬೆಲೆಯ 46 ಲಕ್ಷ ಕೋಟಿ ಮೌಲ್ಯದ ನೋಟುಗಳು ಚಾಲ್ತಿಯಲ್ಲಿದ್ದವು. ಅದರಲ್ಲಿ ಶೇ 99.9 ರಷ್ಟು ನೋಟುಗಳು ವಾಪಸ್‌ ಬಂದಿವೆ. ಈ ತೀರ್ಮಾನದಿಂದ ದೇಶದ ಆರ್ಥಿಕತೆಗೆ ಹಿನ್ನಡೆಯಾಯಿತು. ಜಿಡಿಪಿ ಶೇ 2 ರಷ್ಟು ಕುಸಿಯಿತು. ನೋಟು ರದ್ಧತಿಯಿಂದ ಎಷ್ಟು ಕಪ್ಪು ಹಣ ಹೊರಬಂದವು ಎಂಬ ಮಾಹಿತಿಯನ್ನು ಸರ್ಕಾರ ಇದುವರೆಗೂ ನೀಡಿಲ್ಲ ಎಂದು ಟೀಕಿಸಿದರು.

ಐದು ವರ್ಷಗಳ ಆಡಳಿತದ ಅವಧಿ ಕೊನೆಗೊಳ್ಳುವ ಸಮಯದಲ್ಲಿ ಲೋಕಪಾಲರ ನೇಮಕ ನಡೆದಿದೆ. ಇದೆಲ್ಲಾ ರಾಜಕೀಯ ಗಿಮಿಕ್‌ ಎಂಬುದು ಜನರಿಗೆ ಅರ್ಥವಾಗಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಮೋದಿಗೆ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಕಳೆದ ಐದು ವರ್ಷಗಳಲ್ಲಿ ಇಂಧನ ಮತ್ತು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಚುನಾವಣೆ ಸಮಯದಲ್ಲಿ ಹೇಳಿದ್ದ ಎಲ್ಲದಕ್ಕೂ ತದ್ವಿರುದ್ಧ ಕೆಲಸಗಳು ನಡೆದಿವೆ. ಮೋದಿ ಮತ್ತು ಯೋಗಿ ಆದಿತ್ಯನಾಥ್‌ ಅವರಂತಹ ವ್ಯಕ್ತಿಗಳಿಂದ ದೇಶದ ರಕ್ಷಣೆ ಸಾಧ್ಯವೇ ಎಂದು ಪ್ರಶ್ನಿಸಿದರು.

ಗೊಂದಲ್ಲ ಇಲ್ಲ: ‘ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ತಳಮಟ್ಟದ ಕಾರ್ಯಕರ್ತರಲ್ಲಿ ಅಸಮಾಧಾನ ಇತ್ತು. ಬಹಳ ವರ್ಷಗಳಿಂದ ನಾವು ಪರಸ್ಪರ ಎದುರಾಳಿಗಳಾಗಿದ್ದೆವು. ಆದರೆ ನಾನು ಮತ್ತು ಜಿ.ಟಿ.ದೇವೇಗೌಡ ಜತೆಯಾಗಿ ಪ್ರಚಾರ ಮಾಡಿದ್ದೇವೆ. ಎಲ್ಲ ಗೊಂದಲಗಳು ನಿವಾರಣೆಯಾಗಿವೆ. ಕನಿಷ್ಠ 20 ಸ್ಥಾನಗಳನ್ನು ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !