ಬಿಜೆಪಿಗೆ ಎಲ್ಲ ವರ್ಗದವರ ಬೆಂಬಲವಿದೆ: ಶ್ರೀನಿವಾಸಪ್ರಸಾದ್

ಶುಕ್ರವಾರ, ಏಪ್ರಿಲ್ 26, 2019
33 °C
ಬಿಜೆಪಿಯಲ್ಲಿದ್ದರೂ ಅಂಬೇಡ್ಕರ್‌ ಸಿದ್ಧಾಂತ ಬಿಟ್ಟಿಲ್ಲ

ಬಿಜೆಪಿಗೆ ಎಲ್ಲ ವರ್ಗದವರ ಬೆಂಬಲವಿದೆ: ಶ್ರೀನಿವಾಸಪ್ರಸಾದ್

Published:
Updated:
Prajavani

ಮೈಸೂರು: ಬಿಜೆಪಿಯು ದಲಿತ ವಿರೋಧಿ, ಹಿಂದುಳಿದ ವರ್ಗದವರ ವಿರೋಧಿ ಎಂಬ ಆರೋಪಗಳು ಕಾಂಗ್ರೆಸ್‌ನ ಚುನಾವಣಾ ಪ್ರಚಾರ ತಂತ್ರದ ಭಾಗವಾಗಿದೆ. ಬಿಜೆಪಿಗೆ ಎಲ್ಲ ವರ್ಗದವರ ಬೆಂಬಲವಿದೆ ಎಂದು ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನರೇಂದ್ರ ಮೋದಿ ಅವರು ಕೇವಲ ಮೇಲ್ವರ್ಗದ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದಿದ್ದಾರಾ? ದಲಿತರು, ಹಿಂದುಳಿದ ವರ್ಗದವರು ಕಾಂಗ್ರೆಸ್‌ಗೆ ಮಾತ್ರ ಮತ ಹಾಕುವುದಾದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಕೇವಲ 44 ಸ್ಥಾನಗಳು ಮಾತ್ರ ಏಕೆ ಬಂದವು ಎಂದು ಪ್ರಶ್ನಿಸಿದರು.

ಬಿಜೆಪಿ ಅಭ್ಯರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಹೇಳಿ ಮತಯಾಚನೆ ಮಾಡುತ್ತಿರುವುದು ಏಕೆ ಎಂಬ ಪ್ರಶ್ನೆಗೆ, ಸಂಸದನಾಗಿ ನೀವು ಎಷ್ಟೇ ಅಭಿವೃದ್ದಿ ಮಾಡಿದರೂ ಮತದಾರರನ್ನು ತೃಪ್ತಿಪಡಿಸಲು ಆಗದು. ಇದು ರಾಷ್ಟ್ರಮಟ್ಟದ ಚುನಾವಣೆ. ಮತದಾರರು ರಾಷ್ಟ್ರಮಟ್ಟದಲ್ಲಿ ಯೋಚನೆ ಮಾಡುತ್ತಾರೆ. ಕೇಂದ್ರದಲ್ಲಿ ಯಾವ ಪಕ್ಷ ಬರುತ್ತದೆ? ಅಲ್ಲಿ ಯಾರು ನಾಯಕತ್ವ ವಹಿಸುತ್ತಾರೆ ಎಂಬುದು ಮುಖ್ಯ. ಆದ್ದರಿಂದ ಅಭಿವೃದ್ಧಿ ಕೆಲಸ ಮಾಡಿದರೂ ಮೋದಿ ಹೆಸರು ಹೇಳಬೇಕಾಗುತ್ತದೆ ಎಂದರು.

‘ರಾಷ್ಟ್ರಮಟ್ಟದಲ್ಲಿ ಮೋದಿ ನಾಯಕತ್ವ, ರಾಜ್ಯದಲ್ಲಿ ಯಡಿಯೂರಪ್ಪ ನಾಯಕತ್ವ ಮತ್ತು 42 ವರ್ಷಗಳ ರಾಜಕೀಯ ಜೀವನದಲ್ಲಿ ಪಡೆದ ಅನುಭವಗಳು ನನ್ನ ಗೆಲುವಿಗೆ ನೆರವಾಗಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಮತ್ತು ಜಿ.ಟಿ.ದೇವೇಗೌಡ ಜಂಟಿ ಪ್ರಚಾರದಿಂದ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ದೋಸ್ತಿಯಿಂದ ಬಿಜೆಪಿಗೆ ಹೆಚ್ಚಿನ ಲಾಭ ಆಗಿದೆ. ದೋಸ್ತಿ–ಬಿಜೆಪಿ ನಡುವೆ ಪೈಪೋಟಿ ನಡೆಯಬೇಕಿತ್ತು. ಆದರೆ ಕಾಂಗ್ರೆಸ್‌–ಜೆಡಿಎಸ್‌ ನಡುವೆಯೇ ಹೋರಾಟ ನಡೆಯುತ್ತಿದೆ. ಹೊಂದಾಣಿಕೆಯೇ ಇಲ್ಲ ಎಂದರು.

ಬಿಜೆಪಿಗೆ ಮುಸ್ಲಿಂ ಮತಗಳು ಬೇಡ ಎಂದು ಈಶ್ವರಪ್ಪ ಹೇಳಿರುವುದು ಸರಿಯಲ್ಲ. ಉದ್ವೇಗದಲ್ಲಿ ಆ ರೀತಿ ಮಾತನಾಡಬಾರದು. ಮುಸ್ಲಿಮರು ಕೂಡಾ ಈ ದೇಶದ ಮತದಾರರಾಗಿದ್ದು, ಮುಖ್ಯವಾಹಿನಿಯಲ್ಲಿರುವವರು ಎಂದು ಹೇಳಿದರು.

‘ಬಿಜೆಪಿಯಲ್ಲಿದ್ದರೂ ಅಂಬೇಡ್ಕರ್‌ ಅವರ ತತ್ವ ಸಿದ್ದಾಂತಗಳಿಂದ ದೂರವಾಗಿಲ್ಲ. ರಾಜಕೀಯದಲ್ಲಿ ಸಕ್ರಿಯವಾಗಿದ್ದರೂ, ಚುನಾವಣಾ ರಾಜಕೀಯದಿಂದ ದೂರವಿರಲು ನಿರ್ಧರಿಸಿದ್ದೆ. ಆದರೆ ಬಿಜೆಪಿ ವರಿಷ್ಠರ ಮನವಿ ಮತ್ತು ಒತ್ತಡಕ್ಕೆ ಮಣಿದು ಸ್ಪರ್ಧಿಸಲು ನಿರ್ಧರಿಸಿದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !