ರಸ್ತೆ, ಕುಡಿವ ನೀರು ಒದಗಿಸದ ಆಡಳಿತ:4 ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ ಬೆದರಿಕೆ

ಮಂಗಳವಾರ, ಏಪ್ರಿಲ್ 23, 2019
27 °C
ಜನರ ಆಕ್ರೋಶ

ರಸ್ತೆ, ಕುಡಿವ ನೀರು ಒದಗಿಸದ ಆಡಳಿತ:4 ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ ಬೆದರಿಕೆ

Published:
Updated:
Prajavani

ಬಾಗೇಪಲ್ಲಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮಕ್ಕೆ ರಸ್ತೆ, ನೀರು ಸೇರಿದಂತೆ ಮೂಲಸೌಲಭ್ಯ ಒದಗಿಸುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ಸೌಲಭ್ಯ ಒದಗಿಸಿಲ್ಲ ಎಂದು ಆಪಾದಿಸಿ ತಾಲ್ಲೂಕಿನ 4 ಗ್ರಾಮಗಳ ಜನರು ಸಾಮೂಹಿಕವಾಗಿ ಚುನಾವಣೆ ಬಹಿಷ್ಕರಿಸುವುದಾಗಿ ತಿಳಿಸಿದ್ದಾರೆ.

ತಾಲ್ಲೂಕಿನ ಯಲ್ಲಂಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಗಾನಪಲ್ಲಿ, ಮರವಪಲ್ಲಿತಾಂಡ, ಸಿದ್ಧನಪಲ್ಲಿ ತಾಂಡ, ಮೈನಗಾನಪಲ್ಲಿ ಗ್ರಾಮಗಳ ಗ್ರಾಮಸ್ಥರು ಸಾಮೂಹಿಕವಾಗಿ ಚುನಾವಣೆಯ ಮತಗಟ್ಟೆ 120ರಲ್ಲಿ ಮತದಾನ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಮತಗಟ್ಟೆಯಲ್ಲಿ 2 ಸಾವಿರಕ್ಕೂ ಹೆಚ್ಚು ಮತದಾರರು ಇದ್ದಾರೆ. ತಾಲ್ಲೂಕಿನ ಕಾಗಾನಪಲ್ಲಿ ಗ್ರಾಮದಲ್ಲಿ 50 ಮನೆಗಳ 400 ಮಂದಿ ಜನರು, ಮರವಪಲ್ಲಿ ತಾಂಡದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ, ಸಿದ್ಧನಪಲ್ಲಿ ತಾಂಡ ಹಾಗೂ ಮೈನಗಾನಪಲ್ಲಿ 500ಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. ಅವರ ಸಮಸ್ಯೆಗೆ ಇದುವರೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಸಮಸ್ಯೆಗಳಿಗೂ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಗ್ರಾಮಗಳ ಜನರು ಚುನಾವಣಾ ಬಹಿಷ್ಕಾರ ಹಾಕುವುದಾಗಿ ತಿಳಿಸಿದ್ದರು. ಆದರೆ ಕಾಗಾನಪಲ್ಲಿ ಗ್ರಾಮಕ್ಕೆ ತಹಶೀಲ್ದಾರ್‌ ಭೇಟಿ ನೀಡಿ ಚುನಾವಣೆ ನಂತರ ರಸ್ತೆ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸಹ ರಸ್ತೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಗ್ರಾಮಕ್ಕೆ ಒದಗಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ರಸ್ತೆ, ಚರಂಡಿ, ಸಿಮೆಂಟ್‌ ರಸ್ತೆ, ವಿದ್ಯುತ್, ಬೀದಿದೀಪ, ಸಾರಿಗೆ ಬಸ್ ವ್ಯವಸ್ಥೆ ಮಾಡಿಲ್ಲ. ಇದನ್ನು ಖಂಡಿಸಿ ಏಪ್ರಿಲ್ 18ರಂದು ನಡೆಯುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

‘ಬಾಗೇಪಲ್ಲಿ ಕೇಂದ್ರಕ್ಕೆ 20 ಕಿ.ಮೀ ದೂರದಲ್ಲಿರುವ ಲಘುಮದ್ದೇಪಲ್ಲಿ ಬಳಿ ಕಾಗಾನಪಲ್ಲಿ ಕ್ರಾಸ್ ಇದೆ. ಕ್ರಾಸ್‌ನಿಂದ ಗ್ರಾಮಗಳಿಗೆ 7 ಕಿ.ಮೀ ನಷ್ಟು ದೂರ ಇದೆ. ಇಲ್ಲಿ ರಸ್ತೆ ಇಲ್ಲ. ಜಲ್ಲಿ, ಕಲ್ಲುಗಳಲ್ಲಿ ನಡೆಯಬೇಕು, ಬಸ್ ಸೌಲಭ್ಯಗಳಿಲ್ಲದ ಕಾರಣ ಖಾಸಗಿ ಆಟೊಗಳಲ್ಲಿ ಪ್ರಯಾಣಿಸಬೇಕಾಗಿದೆ. ರಸ್ತೆಗಳಲ್ಲಿ ಸಂಚರಿಸಲೂ ಆಗುತ್ತಿಲ್ಲ. ರಾತ್ರಿ ಬೇರೆ ಊರುಗಳಿಂದ ಬರಲು ಸಾಧ್ಯವಾಗುತ್ತಿಲ್ಲ. ರಸ್ತೆ ನಿರ್ಮಿಸಲು ಬೇಡಿಕೊಳ್ಳಲಾಗಿತ್ತು. ಆದರೆ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಹೀಗಾಗಿ ಚುನಾವಣೆ ಬಹಿಷ್ಕಾರಕ್ಕೆ ಗ್ರಾಮದ ಜನರು ಒಕ್ಕೊರಲಿನಿಂದ ನಿರ್ಧರಿಸಿದ್ದಾರೆ. ಸ್ವತಃ ಜಿಲ್ಲಾಧಿಕಾರಿಯೇ ಗ್ರಾಮಗಳಿಗೆ ಬಂದು ಸೌಲಭ್ಯ ಒದಗಿಸಲು ಲಿಖಿತ ಭರವಸೆ ನೀಡಬೇಕು’ ಎಂದು ಗ್ರಾಮದ ರಾಜಾರೆಡ್ಡಿ ತಿಳಿಸಿದ್ದಾರೆ.

‘ಬಾಗೇಪಲ್ಲಿಗೆ ಗ್ರಾಮದಿಂದ 3 ಕಿ.ಮೀ ನಷ್ಟು ದೂರ ನಡೆಯಬೇಕು. ಖಾಸಗಿ ವಾಹನಗಳು ಸಂಚರಿಸುವುದಿಲ್ಲ. ವಿದ್ಯಾರ್ಥಿಗಳು, ವೃದ್ಧರು, ಗರ್ಭಿಣಿಯರು, ಬಾಣಂತಿಯರು ನಡೆದುಕೊಂಡೇ ಹೋಗಬೇಕು. ಜಲ್ಲಿ-ಕಲ್ಲುಗಳ ರಸ್ತೆಯಲ್ಲಿ ಬಾಣಂತಿಯರು ನಡೆದರೆ, ಹೆರಿಗೆ ಆಗುವ ಆತಂಕ ಕಾಡುತ್ತದೆ’ ಎಂದು ತಾಂಡಾದ ಸುನಂದಮ್ಮ ಆರೋಪಿಸಿದರು.

‘ಚುನಾವಣೆಯಲ್ಲಿ ಮತದಾರರು ಕಡ್ಡಾಯವಾಗಿ ಮತ ಚಲಾಯಿಸುವುದು ಎಲ್ಲರ ಹಕ್ಕು ಆಗಿದೆ. ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸುವುದು ಸೂಕ್ತವಲ್ಲ. ಗ್ರಾಮಕ್ಕೆ ರಸ್ತೆ, ಮತ್ತಿತರ ಸೌಲಭ್ಯ ಕಲ್ಪಿಸಲು ಸೂಕ್ತ ಕ್ರಮ ಜರುಗಿಸಲಾಗುವುದು. ಗ್ರಾಮಸ್ಥರು ಮತದಾನ ಮಾಡಬೇಕು’ ಎಂದು ತಹಶೀಲ್ದಾರ್ ವಿ.ನಾಗರಾಜ್ ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !