ಗುರುವಾರ , ಜೂನ್ 24, 2021
27 °C

ದೇವೇಗೌಡರ ಪರಿವಾರವನ್ನು ಸಾರ್ವಜನಿಕ ಜೀವನದಿಂದ ಶಾಶ್ವತವಾಗಿ ಕಿತ್ತೊಗೆಯಿರಿ: ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ/ಚಿಕ್ಕೋಡಿ: ಎರಡನೇ ಹಂತದಲ್ಲಿ ಏಪ್ರಿಲ್ 23ರಂದು ಮತದಾನ ನಡೆಯಲಿರುವ ಉತ್ತರ ಕರ್ನಾಟಕ ಭಾಗದಲ್ಲಿ ಗುರುವಾರ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಬಾಗಲಕೋಟೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರೆ, ‘ದೇವೇಗೌಡರ ಪರಿವಾರವನ್ನು ಸಾರ್ವಜನಿಕ ಜೀವನದಿಂದ ಶಾಶ್ವತವಾಗಿ ಕಿತ್ತೊಗೆಯಿರಿ’ ಎಂದು ಚಿಕ್ಕೋಡಿಯಲ್ಲಿ ಗುಡುಗಿದರು.

‘ತನ್ನ ಅಸ್ತಿತ್ವದ ಪ್ರಶ್ನೆ ಬಂದಾಗಲೆಲ್ಲಾ ಧರ್ಮದ ದಾಳ ಉರುಳಿಸಿ ಕಾಂಗ್ರೆಸ್ ಆಟವಾಡುತ್ತದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಲಿಂಗಾಯತರ ವಿಚಾರದಲ್ಲೂ ಇದೇ ರೀತಿ ನಡೆದುಕೊಂಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ತಾಯಿ ಎದೆ ಹಾಲನ್ನು ಅಣ್ಣ–ತಮ್ಮಂದಿರು ಭಾಗ ಮಾಡಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದ ಮೋದಿ, ಅದೇ ರೀತಿ ಲಿಂಗಾಯತ ಸಮಾಜದ ವಿಭಜನೆಯೂ ಸಾಧ್ಯವಿಲ್ಲ. ಧರ್ಮದಲ್ಲಿ ಗೋಡೆ ಕಟ್ಟುವ ಮೂಲಕ ಅಮ್ಮನ ಎದೆಯಹಾಲಿಗೆ ವಿಷ ಹಿಂಡುವ ಕೆಲಸವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ಧಾರೆ. ಅದರ ನೇತೃತ್ವವನ್ನು ಆ ಪಕ್ಷದ ಮಂತ್ರಿಯೇ ವಹಿಸಿದ್ದಾರೆ’ ಎಂದು ಕಿಡಿಕಾರಿದರು.

‘ರಾಜಕೀಯ ಲಾಭಕ್ಕಾಗಿ ಧರ್ಮ ಒಡೆಯಲು ಮುಂದಾಗಿರುವುದು ಅವರೇ ಬರೆದ ಪತ್ರದ ಮೂಲಕ ಬಹಿರಂಗವಾಗಿದೆ. ಈಗಲೂ ಅದೇ ವಿಚಾರದಲ್ಲಿ ಆ ಪಕ್ಷದ ಇಬ್ಬರು ಮಂತ್ರಿಗಳು ಪರಸ್ಪರ ಕಿತ್ತಾಡುತ್ತಿದ್ದಾರೆ. ಕಾಂಗ್ರೆಸ್‌ನ ಈ ಆಟದ ಬಗ್ಗೆ ಎಚ್ಚರವಹಿಸಿರಿ’ ಎಂದರು.

ಸೈನಿಕರಿಗೆ ಅಪಮಾನ: ‘ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಭಾರತೀಯ ಸೇನೆ ಹಾಗೂ ಸೈನಿಕರಿಗೆ ಅಪಮಾನ ಮಾಡಿದ್ದಾರೆ. ತುತ್ತು ಅನ್ನಕ್ಕೂ ಗತಿ ಇಲ್ಲದವರು ಭಾರತೀಯ ಸೇನೆ ಸೇರುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ಅದ್ಯಾವ ರೀತಿಯ ಭಾಷೆ? ಇಂತಹ ಭಾಷೆಯನ್ನು ಯಾವ ಸ್ವಾಭಿಮಾನಿ ಭಾರತೀಯನೂ ಸಹಿಸುವುದಿಲ್ಲ; ಸ್ವೀಕರಿಸುವುದಿಲ್ಲ.

ಸೈನಿಕರಿಗೆ ಅವಮಾನ ಮಾಡಿದ ಅವರ ಇಡೀ ಕುಟುಂಬಕ್ಕೆ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕು. ಈ ಅಧಿಕಾರ ಅವಧಿಯಲ್ಲಿನ ಕೆಲಸಗಳು ನಿಮಗೆ ಸಮಾಧಾನ ತಂದಿದೆಯೇ? ಪಾಕಿಸ್ತಾನದ ಮೇಲೆ ನಮ್ಮ ಸೈನಿಕರು ನಡೆಸಿದ ದಾಳಿ ಖುಷಿ ತಂದಿದೆಯೇ?’ ಎಂದು ಸಭಿಕರನ್ನು ಕೇಳಿ, ಜೈಕಾರದ ಉತ್ತರ ಪಡೆದರು.

‘ಕಾಂಗ್ರೆಸ್‌ ಹಾಗೂ ಕಳ್ಳರ ಮಹಾಘಟಬಂಧನ ಕೇವಲ ಮೂರು ಗುರಿಗಳನ್ನು ಮಾತ್ರವೇ ಹೊಂದಿದೆ. ಅದು ಅವರವರ ಪರಿವಾರದ ವಿಕಾಸ, ದಲ್ಲಾಳಿಗಳ ವಿಕಾಸ ಹಾಗೂ ಬೆಲೆ ಏರಿಕೆಯ ವಿಕಾಸವೇ ಅವರ ಗುರಿಗಳಾಗಿವೆ. ಇದು ಕಾಂಗ್ರೆಸ್‌ನ ಆದರ್ಶವಾದ. ಕಾಂಗ್ರೆಸ್ ಬಂದರೆ ಬೆಲೆ ಏರಿಕೆ ಬರುತ್ತದೆ ಎನ್ನುವುದೇ ಅವರ ತತ್ವವಾಗಿದೆ. ನಾವು ಅದನ್ನು ನಿಯಂತ್ರಣಕ್ಕೆ ತಂದಿದ್ದೇವೆ’ ಎಂದರು.

ಬಾಲಕೋಟ್–ಬಾಗಲಕೋಟೆ..
‘ಕಾಂಗ್ರೆಸ್‌ನವರಿಗೆ ಬಾಲಕೋಟ್–ಬಾಗಲಕೋಟೆ ನಡುವೆ ವ್ಯತ್ಯಾಸ ಗೊತ್ತಿಲ್ಲ’ ಎಂದು ಕಿಚಾಯಿಸಿದ ಮೋದಿ, ಏರ್‌ ಸ್ಟ್ರೈಕ್ ವೇಳೆ ಪಾಕಿಸ್ತಾನದ ಬಾಲಕೋಟ್‌ ಮೇಲೆ ವಾಯುಪಡೆ ಆಕ್ರಮಣ ಮಾಡಿದರೆ ಇಲ್ಲಿ ಕಾಂಗ್ರೆಸ್‌ನವರು ಅಳುವುದಕ್ಕೆ ಶುರು ಮಾಡಿದ್ದರು. ಗೂಗಲ್‌ನಲ್ಲಿ ಹುಡುಕಾಡಿ ಬಾಲಕೋಟ್‌ ಬದಲಿಗೆ ಬಾಗಲಕೋಟೆ ಎಂದು ಬರೆದುಕೊಂಡಿದ್ದರು. ಹಾಗಾದರೇ ನೀವೇ ಹೇಳಿ ನಿಮ್ಮೂರಿನ ಮೇಲೆ ಬಾಂಬ್‌ ಏನಾದರೂ ಬಿದ್ದಿತ್ತೇ’ ಎಂದು ಮೋದಿ ಪ್ರಶ್ನಿಸಿದರು. ಅದಕ್ಕೆ ಜನರಿಂದ ‘ಇಲ್ಲ’ ಎಂಬ ಕೂಗು ಕೇಳಿಬಂದಿತು.

‘ಬಾಲಕೋಟ್ ಮೇಲಿನ ದಾಳಿಯಲ್ಲಿ ಅಲ್ಲಿನವರು (ಪಾಕಿಸ್ತಾನದವರು) ಸತ್ತರೆ, ಗಾಯಗೊಂಡರೆ, ಕಾಂಗ್ರೆಸ್–ಜೆಡಿಎಸ್‌ನವರು ಇಲ್ಲಿ ನೋವು, ಸಂಕಟ ಪಡುತ್ತಾರೆ. ಅವರ ವೋಟ್‌ ಬ್ಯಾಂಕ್‌ ಬಾಗಲಕೋಟೆಯಲ್ಲಿದೆಯೋ ಅಥವಾ ಬಾಲಕೋಟ್‌ನಲ್ಲಿದೆಯೋ’ ಎಂದು ಛೇಡಿಸಿದ ಮೋದಿ, ‘ಇವರು (ಕಾಂಗ್ರೆಸ್) ಸರ್ಜಿಕಲ್ ಸ್ಟ್ರೈಕ್‌ ಬಗ್ಗೆ ಇಲ್ಲಿ ಸಾಕ್ಷ್ಯಾಧಾರ ಕೇಳುತ್ತಿದ್ದಾರೆ. ಅಲ್ಲಿ ಪಾಕಿಸ್ತಾನ, ಮೋದಿ ಹೊಡೆಯುತ್ತಿದ್ದಾನೆ ರಕ್ಷಿಸಿ, ರಕ್ಷಿಸಿ ಎಂದು ವಿಶ್ವದ ಮುಂದೆ ಮೊರೆ ಇಡುತ್ತಿದೆ’ ಎಂದರು.

**

ಅನುಭವ ಮಂಟಪದ ಮೂಲಕ ಬಸವಣ್ಣ ರೂಪಿಸಿಕೊಟ್ಟ ಜನರ ಸಹಭಾಗಿತ್ವದ ಪ್ರಜಾತಂತ್ರವನ್ನು ಕಳೆದ ಐದು ವರ್ಷಗಳಲ್ಲಿ ಈ ಪ್ರಧಾನ ಸೇವಕ ಸಾಕಾರಗೊಳಿಸಿದ್ದಾನೆ.
-ನರೇಂದ್ರ ಮೋದಿ, ಪ್ರಧಾನ ಮಂತ್ರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು