ಬುಧವಾರ, ಸೆಪ್ಟೆಂಬರ್ 23, 2020
19 °C

ಪರಿಸರ ಕಾಳಜಿಯ ಕಂಪು; ದೇಶಪ್ರೇಮದ ಪೆಂಪು...

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

Prajavani

ಒಂದು ಸಿನಿಮಾ ಹೇಗಿರಬೇಕು ಎಂಬುದಕ್ಕೆ ನಿರ್ದೇಶಕ ನವೀನ್‌ ಮಾರ್ಲ ಕೊಡಂಗೆ ಉಡುಪಿ ಮಠದಲ್ಲಿ ಬಡಿಸುವ ‘ನೀರ್‌’ ಎಂಬ ಸಾರಿನ ಉದಾಹರಣೆ ಕೊಡುತ್ತಾರೆ. ಹುಳಿ, ಉಪ್ಪು, ಖಾರ ಮತ್ತು ಸಿಹಿಯನ್ನು ಸಮ ಪ್ರಮಾಣದಲ್ಲಿ ಹಾಕಿ ಮಾಡುವ ಈ ಸಾರಿನ ರುಚಿ ಅತ್ಯದ್ಭುತ. ಅದೇರೀತಿ, ಸಿನಿಮಾ ಕೂಡ ಸರ್ವರಿಗೂ ಇಷ್ಟವಾಗುವ ರೀತಿಯಲ್ಲಿ ಮಾಡಿ, ಉಣಬಡಿಸಬೇಕು ಎನ್ನುತ್ತಾರೆ ಅವರು.

ಮಾತು ಮತ್ತು ಬರವಣಿಗೆ ಎರಡರಲ್ಲೂ ಮೊನಚು ಬೆಳೆಸಿಕೊಂಡಿರುವ ನಿರ್ದೇಶಕ ನವೀನ್‌ ಮಾರ್ಲ ಕೊಡಂಗೆ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ‘ವಿಕ್ರಾಂತ್‌’. ಅಧ್ಯಾತ್ಮದಲ್ಲಿ ಆಸಕ್ತಿ, ಆದರ್ಶ ವಿಚಾರಧಾರೆಗಳನ್ನು ಹೊಂದಿರುವ ಮಾರ್ಲ ಅವರು ತಮ್ಮ ಚಿಂತನೆಗಳಿಗೆ ಶೇ 40ರಷ್ಟು ರಂಜನೆಯ ಎರಕ ಹೊಯ್ದು, ಸಮಾಜಕ್ಕೆ ಒಂದು ಸಂದೇಶವನ್ನು ದಾಟಿಸುವಂತಹ ಸಿನಿಮಾ ಮಾಡಿದ್ದಾರೆ. ‘ವಿಕ್ರಾಂತ್‌’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಈಗ ಎಡಿಟಿಂಗ್‌ ಕೆಲಸ ಭರದಿಂದ ಸಾಗಿದೆ.

ಪ್ರಾಚೀನ ಭಾರತದ ಸಂಸ್ಕೃತಿ, ಆಚಾರ ವಿಚಾರಗಳು ರಮ್ಯವಾಗಿದ್ದವು. ಹಿಂದಿನ ಭಾರತಕ್ಕೂ ಈಗಿನ ಭಾರತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ನಮ್ಮ ಶ್ರೀಮಂತ ಸಂಸ್ಕೃತಿಯ ಅವನತಿ ಎಲ್ಲಿಂದ ಆರಂಭವಾಯಿತು ಎಂಬುದರ ಮೇಲೆ ‘ವಿಕ್ರಾಂತ್‌’ ಸಿನಿಮಾ ಬೆಳಕು ಚೆಲ್ಲುತ್ತದೆ. ‘ವಿಕ್ರಾಂತ್‌’ ಅಂದರೆ ಬಲಶಾಲಿ, ಧೈರ್ಯಶಾಲಿ ಎಂದರ್ಥ. ಚಿತ್ರಕ್ಕೆ ಈ ಶೀರ್ಷಿಕೆ ಸೂಚಿಸಿದವರು ಸಿನಿಮಾದ ಸಂಗೀತ ನಿರ್ದೇಶಕ ಭಾಸ್ಕರ್‌ ರಾವ್‌ ಬಿ.ಸಿ.ರೋಡ್‌.

‘ವಿಕ್ರಾಂತ್‌ ಸಿನಿಮಾ ಗುರುಮಠದಿಂದ ಶುರು ಆಗುತ್ತದೆ. ನಮ್ಮ ದೇಶದ ಗುರುಕುಲ ಪದ್ಧತಿ, ಕೃಷಿ ಪದ್ಧತಿಯನ್ನು ಬ್ರಿಟಿಷರು ಹೇಗೆ ಹಾಳು ಮಾಡಿದರು, ಭಾರತದ ಶಕ್ತಿ ಏನು ಎಂಬ ವಿಚಾರಗಳೆಲ್ಲವೂ ಚಿತ್ರದಲ್ಲಿ ಬರುತ್ತದೆ. ಹಾಗೆಯೇ, ನಮ್ಮ ಮನೆಯ ಪರಿಸರದ ನಡುವೆ ನಡೆಯುವ ಘಟನೆಗಳನ್ನೂ ಚಿತ್ರದಲ್ಲಿ ತೋರಿಸಲಾಗಿದೆ. ಸಮಾಜ ಸೇವೆ ಮಾಡುವ ಒಬ್ಬ ಯುವಕನ ಕತೆ ಇಲ್ಲಿದೆ. ‘ವಿಕ್ರಾಂತ್‌’ ಸಿನಿಮಾದಲ್ಲಿ ದೇಶಪ್ರೇಮದ ಜತೆಗೆ ಸ್ಥಳೀಯ ಸಮಸ್ಯೆಗಳ ಮೇಲೂ ಫೋಕಸ್‌ ಮಾಡಿದ್ದೇನೆ. ಸಂಘಟನೆಯ ಯುವಕ, ಅವನ ಮನೆಯ ಪರಿಸ್ಥಿತಿ, ಕರಾವಳಿಯಲ್ಲಿ ತಾಂಡವವಾಡುತ್ತಿರುವ ಗಾಂಜಾ ಸಮಸ್ಯೆ, ಇದರಿಂದಾಗಿ ಯುವಕರ ಮೇಲಾಗುತ್ತಿರುವ ದುಷ್ಪರಿಣಾಮ ಇವೆಲ್ಲವೂ ಸಿನಿಮಾದಲ್ಲಿ ಬರುತ್ತದೆ. ಚಿತ್ರದಲ್ಲಿ ಶೇ 40ರಷ್ಟು ಮಾತ್ರ ಕಾಮಿಡಿ ಇದೆ. ಉಳಿದ ಭಾಗ ಅರ್ಥಪೂರ್ಣವಾಗಿದ್ದು, ಜನರಿಗೆ ಒಂದು ಪ್ರಬಲ ಸಂದೇಶ ದಾಟಿಸುತ್ತದೆ’ ಎನ್ನುತ್ತಾರೆ ನಿರ್ದೇಶಕ ಮಾರ್ಲ.

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳ ಕಾಲ ತೊಡಗಿಸಿಕೊಂಡಿದ್ದ ನವೀನ್‌ ಮಾರ್ಲ ಕೊಡಂಗೆ ಅವರು ಮಧ್ಯದಲ್ಲಿ ಸ್ವಲ್ಪ ವರ್ಷಗಳ ಕಾಲ ಇಸ್ಕಾನ್‌ನಲ್ಲಿ ತೊಡಗಿಸಿಕೊಂಡಿದ್ದರು. ಚಿಕ್ಕಂದಿನಿಂದಲೂ ಅಧ್ಯಾತ್ಮದ ಬಗ್ಗೆ ಒಲವು ಬೆಳೆಸಿಕೊಂಡಿದ್ದ ಅವರು ಈಗಲೂ ಇಸ್ಕಾನ್‌ ಜನತೆ ನಿಕಟ ಸಂಪರ್ಕ ಉಳಿಸಿಕೊಂಡಿದ್ದಾರೆ.

‘ಮನರಂಜನೆಯನ್ನು ಬಯಸಿ ಚಿತ್ರಮಂದಿರಕ್ಕೆ ಬರುವುದು ಶೇ 10ರಷ್ಟು ಪ್ರೇಕ್ಷಕರು ಮಾತ್ರ. ಒಂದು ಸಿನಿಮಾದಲ್ಲಿ ಉತ್ತಮ ಕತೆ, ಚಿತ್ರಕಥೆ ಇರಬೇಕು ಎಂದು ಶೇ 90 ಮಂದಿ ಬಯಸುತ್ತಾರೆ. ಹಾಗಾಗಿ, ಎಲ್ಲರಿಗೂ ಇಷ್ಟವಾಗುವಂತಹ ಸಿನಿಮಾ ಮಾಡಬೇಕು ಎಂಬುದು ನನ್ನ ನಂಬಿಕೆ. ಕೋಸ್ಟಲ್‌ವುಡ್‌ನಲ್ಲಿ ಈಗಿನ ಪರಿಸ್ಥಿತಿ ಹೇಗಿದೆ ಅಂದರೆ, ಶೇ 10 ಜನರಿಗಾಗಿಯೇ ತುಳು ಸಿನಿಮಾಗಳು ನಿರ್ಮಾಣಗೊಳ್ಳುತ್ತಿವೆ. ಈ ಕಾರಣದಿಂದಲೇ ತುಳು ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆ ಕಾಡುತ್ತಿದೆ. ಶೇ 90 ಮಂದಿಯ ಮನಸ್ಸಿಗೆ ಖುಷಿಯಾಗುವಂತಹ ಸಿನಿಮಾ ಮಾಡಿದರೆ ಖಂಡಿತವಾಗಿಯೂ ಜನ ಚಿತ್ರಮಂದಿರಕ್ಕೆ ಬರುತ್ತಾರೆ. ಚಿತ್ರದ ಮಾರುಕಟ್ಟೆ ಕೂಡ ವಿಸ್ತಾರಗೊಳ್ಳುತ್ತದೆ’ ಎನ್ನುತ್ತಾರೆ ಮಾರ್ಲ.

ಭವಿಷ್ಯದ ಭಾರತವನ್ನು ನೆನೆದುಕೊಂಡರೆ ಭಯವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸುವ ಮಾರ್ಲ, ಮುಂದಿನ ಪೀಳಿಗೆ ನೆಮ್ಮದಿಯಿಂದ ಬದುಕಬೇಕಾದರೆ ನಾವು ಈಗಿನಿಂದಲೇ ಎಚ್ಚೆತ್ತುಕೊಳ್ಳಬೇಕು ಎಂದು ಹೇಳುತ್ತಾರೆ. ಗಾಳಿ, ನೀರನ್ನು ದುಡ್ಡು ಕೊಟ್ಟು ಕೊಳ್ಳುವ ಪರಿಸ್ಥಿತಿ ಬಂದಿದೆ. ಈ ನಿಟ್ಟಿನಲ್ಲಿ ಎಲ್ಲರೂ ಜಾಗೃತಗೊಳ್ಳಬೇಕಿದೆ ಎಂಬ ಕಳಕಳಿ ವ್ಯಕ್ತಪಡಿಸುತ್ತಾರೆ ಅವರು.

‘ವಿಕ್ರಾಂತ್‌ ಸಿನಿಮಾ ಎಲ್ಲರಿಗೂ ಇಷ್ಟವಾಗುವಂತೆ ಮೂಡಿಬಂದಿದೆ. ಚಿತ್ರದಲ್ಲಿ ಡಬ್ಬಲ್‌ ಮೀನಿಂಗ್‌ ಇಲ್ಲ. ಸಿನಿಮಾ ವೀಕ್ಷಿಸಲು ಬಂದಂತಹ ಪ್ರೇಕ್ಷಕರು ಒಂದು ಕ್ಷಣವೂ ಕಣ್ಣುಮುಚ್ಚದ ರೀತಿಯ ಬಿಗಿಯಾದ ನಿರೂಪಣೆ ಚಿತ್ರದಲ್ಲಿ ಇದೆ. ಒಂದು ಚಿತ್ರಕ್ಕೆ ಕಸುವು ತುಂಬುವುದು ಕ್ಯಾಮೆರಾಮೆನ್‌. ಇಲ್ಲಿ ಡಿಒಪಿ ರವಿ ಸುವರ್ಣ ಅವರ ಕ್ಯಾಮೆರಾ ಕೈ ಚಳಕ ಅದ್ಭುತವಾಗಿ ಮೂಡಿಬಂದಿದೆ. ಇನ್ನು ಸಂಗೀತ ಮತ್ತು ಚಿತ್ರಗೀತೆಗಳು ಸಿನಿಮಾವನ್ನು ಇನ್ನೊಂದು ಹಂತಕ್ಕೆ ಮೇಲೆತ್ತುತ್ತವೆ. ‘ವಿಕ್ರಾಂತ್‌’ ಸಿನಿಮಾದಲ್ಲಿ ಅತ್ಯದ್ಭುತ ಎನ್ನುವಂತಹ ಸಂಗೀತವಿದೆ. ಇಂಪಾದ ಗೀತೆಗಳಿವೆ. ನಾನು ಈ ಸಿನಿಮಾ ಮಾಡುವುದಕ್ಕೆ ಮುಖ್ಯ ಕಾರಣಕರ್ತರಾದ ಭಾಸ್ಕರ್‌ ರಾವ್‌ ಬಿ.ಸಿ.ರೋಡ್‌ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ. ಎಚ್‌.ಕೆ.ನಯನಾಡು ಅವರ ಸಾಹಿತ್ಯವಿದೆ. ವಿನೋದ್‌ ಶೆಟ್ಟಿ ಕೆಂಚಾರು, ಶೀತಲ್‌ ನಾಯಕ್‌ ಬಲ್ಲಾಳ್‌ ಬಾಗ್‌ ಚಿತ್ರದ ನಾಯಕ ನಾಯಕಿಯರು. ಚಿತ್ರಕ್ಕೆ ಕೌರವ ವೆಂಕಟೇಶ್‌ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದು, ರಾಜೇಂದ್ರ ಬೆದ್ರೋಡಿ ಚಿತ್ರಕ್ಕೆ ಹಣ ಹೂಡಿದ್ದಾರೆ’ ಎನ್ನುತ್ತಾರೆ ಮಾರ್ಲ.

ಬಂಟ್ವಾಳ ಜಯರಾಮ್‌ ಆಚಾರ್ಯ, ಕೊಡಮಣ್‌ ಕಾಂತಪ್ಪ ಶೆಟ್ಟಿ, ರಮೇಶ್‌ ರೈ ಕುಕ್ಕುವಳ್ಳಿ, ಅರವಿಂದ ಬೋಳಾರ್‌, ಅರುವ ಕೊರಗಪ್ಪ ಶೆಟ್ಟಿ, ರಾಧಾಕೃಷ್ಣ ನಾವಡ ಮಧೂರು, ದಿನೇಶ್‌ ರೈ ಕಡಬ, ದಿನೇಶ್‌ ಕೊಡಪದವ್‌, ಪೂರ್ಣಿಮಾ ಯತೀಶ್‌ ರೈ, ಸುನೀತಾ ಎಕ್ಕೂರು, ಸುನೀಲ್‌ ಕೆ.ಆರ್‌.ಕಾರ್ಕಳ, ಅಶೋಕ್‌ ಆಚಾರ್ಯ ಕಾಪು ಕಲ್ಯ ಮೊದಲಾದವರು ಚಿತ್ರದ ತಾರಾಗಣದಲ್ಲಿ ಇದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.