ಮೈಸೂರು: ಎಚ್ಚೆತ್ತುಕೊಳ್ಳದ ನಗರದ ಮತದಾರರು; ಮಹಿಳೆಯರಿಗಿಂತ ಪುರುಷರು ಮುಂದು

ಶನಿವಾರ, ಮೇ 25, 2019
28 °C
ಮತದಾನ

ಮೈಸೂರು: ಎಚ್ಚೆತ್ತುಕೊಳ್ಳದ ನಗರದ ಮತದಾರರು; ಮಹಿಳೆಯರಿಗಿಂತ ಪುರುಷರು ಮುಂದು

Published:
Updated:

ಮೈಸೂರು: ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ವಿವಿಧ ಕಸರತ್ತು ನಡೆಸುತ್ತದೆಯಾದರೂ, ಹೆಚ್ಚಿನ ಪರಿಣಾಮವನ್ನೇನೂ ಬೀರುವುದಿಲ್ಲ. ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಮತದಾನ ಪ್ರಮಾಣ ಕಳೆದ ಚುನಾವಣೆಗೆ ಹೋಲಿಸಿದರೆ ಅಲ್ಪ ಪ್ರಮಾಣದಲ್ಲಿ ಮಾತ್ರ ಏರಿಕೆ ಕಂಡಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಶೇ 67.30 ರಷ್ಟು ಮತದಾನ ನಡೆದಿತ್ತು. ಗುರುವಾರ ನಡೆದಿದ್ದ ಮತದಾನದಲ್ಲಿ ಶೇ 69.25 ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. 18.94 ಲಕ್ಷ ಮತದಾರರಲ್ಲಿ 13.11 ಲಕ್ಷ ಮಂದಿ ಅಭ್ಯರ್ಥಿಯ ಭವಿಷ್ಯ ನಿರ್ಧರಿಸುವ ಕೆಲಸದಲ್ಲಿ ಭಾಗಿಯಾಗಿದ್ದಾರೆ.

ನಗರ ಪ್ರದೇಶದಲ್ಲಿ ನೀರಸ: ಪ್ರತಿ ಚುನಾವಣೆಯಲ್ಲೂ ಗ್ರಾಮೀಣ ಪ್ರದೇಶಕ್ಕೆ ಹೋಲಿಸಿದರೆ, ನಗರ ಪ್ರದೇಶದಲ್ಲಿ ಮತದಾನದ ಪ್ರಮಾಣ ಕಡಿಮೆಯಿರುತ್ತದೆ. ಈ ಬಾರಿಯೂ ಅದೇ ಪರಿಸ್ಥಿತಿ ಮುಂದುವರಿದಿದೆ. ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದ ವಿವಿಧ ಜಾಗೃತಿ ಕಾರ್ಯಕ್ರಮಗಳ ಹೊರತಾಗಿಯೂ ನಗರದ ಮತದಾರರು ಮತಗಟ್ಟೆಗಳತ್ತ ಬರುವಲ್ಲಿ ಉತ್ಸಾಹ ತೋರಲಿಲ್ಲ.

ಮೈಸೂರು ನಗರ ವ್ಯಾಪ್ತಿಯಲ್ಲಿರುವ ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ಶೇ 60 ರಷ್ಟು ಮತದಾನ ನಡೆದಿದೆ. ಮೈಸೂರು ಲೋಕಸಭಾ ಕ್ಷೇತ್ರದ ಒಟ್ಟಾರೆ ಮತದಾನ ಪ್ರಮಾಣಕ್ಕೆ ಹೋಲಿಸಿದರೆ ಶೇ 9 ರಷ್ಟು ಕಡಿಮೆ ಮತದಾನ ಆಗಿದೆ. ಈ ಮೂರು ಕ್ಷೇತ್ರಗಳಲ್ಲಿ ಮಧ್ಯಾಹ್ನ ಮೂರು ಗಂಟೆಯವರೆಗೂ ಮತದಾನ ನೀರಸವಾಗಿತ್ತು. ಸಂಜೆಯ ವೇಳೆಗೆ ಅಲ್ಪ ವೇಗ ಪಡೆದುಕೊಂಡಿತ್ತು.

ನಗರದ ಮತದಾರರಲ್ಲಿ ವಿದ್ಯಾವಂತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಮತದಾನ ಮಾಡಲು ಆಸಕ್ತಿ ತೋರದಿರುವುದು ಅಚ್ಚರಿ ಮೂಡಿಸಿದೆ. ಜಿಲ್ಲಾ ‘ಸ್ವೀಪ್‌’ ಸಮಿತಿ ವತಿಯಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನಗರದಲ್ಲಿ ಸೈಕ್ಲೋಥಾನ್‌, ಮ್ಯಾರಥಾನ್‌ ಒಳಗೊಂಡಂತೆ ವಿನೂತನ ಕಾರ್ಯಕ್ರಮಗಳ ಮೂಲಕ ಮತದಾರರ ಗಮನ ಸೆಳೆಯಲಾಗಿತ್ತು.

ಪಿರಿಯಾಪಟ್ಟಣ, ಹುಣಸೂರು ಮತ್ತು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಮತದಾರರು ತಮ್ಮ ಹಕ್ಕು ಚಲಾಯಿಸುವಲ್ಲಿ ಉತ್ಸುಕತೆ ತೋರಿದ್ದಾರೆ. ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳ ಮತದಾರರು ಕೂಡಾ ತಮ್ಮ ಜವಾಬ್ದಾರಿ ನಿರ್ವಹಿಸಿದರು.

ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿರುವ ಆದರೆ ಲೋಕಸಭೆ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರಕ್ಕೆ ಸೇರುವ ತಿ.ನರಸೀಪುರ, ಎಚ್‌.ಡಿ.ಕೋಟೆ, ನಂಜನಗೂಡು ಮತ್ತು ವರುಣಾ ವಿಧಾನಸಭಾ ಕ್ಷೇತ್ರಗಳಲ್ಲೂ ಉತ್ತಮ ಮತದಾನ ನಡೆದಿದೆ. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿರುವ ಕೆ.ಆರ್‌.ನಗರದಲ್ಲೂ ಬಿರುಸಿನ ಮತದಾನ ದಾಖಲಾಗಿದೆ.

ಪುರುಷರು ಮುಂದು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಮತದಾನದಲ್ಲಿ ಪುರುಷರು ಮಹಿಳೆಯರನ್ನು ಹಿಂದಿಕ್ಕಿದ್ದಾರೆ. ಪುರುಷರು ಶೇ 70.01 ರಷ್ಟು ಮತದಾನ ಹಾಗೂ ಮಹಿಳೆಯರು 67.71 ರಷ್ಟು ಮತದಾನ ಮಾಡಿದ್ದಾರೆ.

ಈ ಕ್ಷೇತ್ರದಲ್ಲಿ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರು ಇದ್ದಾರೆ. ಆದರೆ ಮತದಾನದ ವಿಚಾರದಲ್ಲಿ ಮಹಿಳೆಯರು ಹಿಂದೆ ಉಳಿದುಕೊಂಡಿದ್ದಾರೆ. 9.44 ಲಕ್ಷ ಪುರುಷ ಮತದಾರರಲ್ಲಿ 6.64 ಲಕ್ಷ ಮಂದಿ ಹಾಗೂ 9.49 ಲಕ್ಷ ಮಹಿಳಾ ಮತದಾರರಲ್ಲಿ 6.47 ಲಕ್ಷ ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತದಾನ ಮಾಡಿದ್ದಾರೆ. ಇತರ ಎಲ್ಲ ಕ್ಷೇತ್ರಗಳಲ್ಲೂ ಪುರುಷರು ಮತದಾನದಲ್ಲಿ ಮಹಿಳೆಯರನ್ನು ಮೀರಿಸಿದ್ದಾರೆ.

ಮೈಸೂರು–ಕೊಡಗು: ವಿಧಾನಸಭಾ ಕ್ಷೇತ್ರವಾರು ಮತದಾನದ ವಿವರ

ಒಟ್ಟು ಮತದಾರರು;    ಮತ ಹಾಕಿದವರು

ಕ್ಷೇತ್ರ; ಪುರುಷರು; ಮಹಿಳೆಯರು; ಇತರರು; ಒಟ್ಟು; ಪುರುಷರು; ಮಹಿಳೆಯರು; ಇತರರು; ಒಟ್ಟು; ಶೇ

ಮಡಿಕೇರಿ;1,09,294;1,11,853;10;2,21,157;83,781;85,513;0;1,69,296;76.55

ವಿರಾಜಪೇಟೆ;1,09,573;1,09,985;15;2,19,573;79,753;79,474;0;1,59,227;72.52

ಪಿರಿಯಾಪಟ್ಟಣ;92,746;90,895;0;1,83,641;74,926;69,886;0;1,44,812;78.86

ಹುಣಸೂರು;1,14,146;1,12,770;4;2,26,920;90,103;85,181;0;1,75,284;77.24

ಚಾಮುಂಡೇಶ್ವರಿ;1,52,727;1,50,055;34;3,02,782;1,11,178;1,05,848;1;2,17,026;71.68

ಕೃಷ್ಣರಾಜ;1,20,125;1,23,532;21;2,43,678;73,788;73,119;0;1,46,907;60.29

ಚಾಮರಾಜ;1,16,370;1,16,929;1;2,33,300;71,320;68,488;1;1,39,809;59.93

ನರಸಿಂಹರಾಜ;1,29,596;1,33,683;42;2,63,321;79,863;79,694;12;1,59,569;60.60

ಒಟ್ಟು;9,44,577;9,49,702;127;18,94,372;6,64,712;6,47,203;14;13,11,930;69.25

ಮಂಡ್ಯ, ಚಾಮರಾಜನಗರ ಲೋಕಸಭೆಗೆ ಸೇರಿರುವ ಕ್ಷೇತ್ರಗಳ ವಿವರ

ವಿಧಾನಸಭಾ ಕ್ಷೇತ್ರ;ಮತದಾನ (ಶೇ)

ತಿ.ನರಸೀಪುರ;68.94

ಎಚ್‌.ಡಿ.ಕೋಟೆ;74.55

ನಂಜನಗೂಡು;76.30

ವರುಣಾ;74.72

ಕೆ.ಆರ್‌.ನಗರ;79.31

 

ಸಿಟಿ/ ಗ್ರಾಮಾಂತರ

ಅಂಕಿ–ಅಂಶ

ಶೇ 69.25 ಮೈಸೂರು ಕ್ಷೇತ್ರದ ಮತದಾನ ಪ್ರಮಾಣ

ಶೇ 67.30 2014ರ ಮತದಾನ ಪ್ರಮಾಣ

 

18.94 ಲಕ್ಷ ಒಟ್ಟು ಮತದಾರರು

13.11 ಲಕ್ಷ ಮತದಾನ ಮಾಡಿದವರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !