ಕ್ಯಾಮೆರಾ ಲೆನ್ಸಿನಲ್ಲಿ ಸೌಂದರ್ಯ ಸೆರೆ

ಶುಕ್ರವಾರ, ಮೇ 24, 2019
28 °C
ಸಿನೆಮಾಟೋಗ್ರಾಫರ್ ಭುವನೇಶ್ ಪ್ರಭು ಹಿರೇಬೆಟ್ಟು

ಕ್ಯಾಮೆರಾ ಲೆನ್ಸಿನಲ್ಲಿ ಸೌಂದರ್ಯ ಸೆರೆ

Published:
Updated:
Prajavani

ಸ್ಯಾಂಡಲ್‌ವುಡ್‌ ಮತ್ತು ಬಾಲಿವುಡ್ ಚಿತ್ರರಂಗದಲ್ಲಿ ಇರುವ ಕಲಾವಿದರು ಮತ್ತು ತಂತ್ರಜ್ಞರ ಪೈಕಿ ಅನೇಕ ಮಂದಿ ಕರಾವಳಿಯ ಜನರಿದ್ದಾರೆ. ಗಾಂಧಿನಗರದಲ್ಲಿ ಮಿಂಚಿ ಕರಾವಳಿಗೆ ಕೀರ್ತಿ ತಂದ ಈ ಪ್ರತಿಭೆಗಳನ್ನು ಅನುಸರಿಸಿ ಅನೇಕ ಯುವ ಪ್ರತಿಭೆಗಳು ಮತ್ತೆ ಮತ್ತೆ ಚಿತ್ರರಂಗಕ್ಕೆ ಲಗ್ಗೆಹಾಕುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಕರಾವಳಿಗರು ನಿರ್ಮಿಸುವ ಕನ್ನಡ, ಹಿಂದಿ ಭಾಷೆಯ ಸಿನೆಮಾಗಳು ಕೂಡಾ ತಮ್ಮದೇ ಆದ ರೀತಿಯಲ್ಲಿ  ವೈಶಿಷ್ಟ್ಯತೆ ಹೊಂದಿವೆ. ಕನ್ನಡ ಹಾಗೂ ಹಿಂದಿ ಚಿತ್ರರಂಗದಲ್ಲಿ ಖ್ಯಾತರಾಗಿರುವ ರೋಹಿತ್ ಶೆಟ್ಟಿ, ಸುನಿಲ್ ಶೆಟ್ಟಿ, ಕಾಶೀನಾಥ್, ಉಪೇಂದ್ರ, ರಿಷಭ್ ಶೆಟ್ಟಿ, ರಕ್ಷಿತ್ ಶೆಟ್ಟಿ, ನಿರೂಪ್ ಭಂಡಾರಿ, ಅನೂಪ್ ಭಂಡಾರಿ, ಕಲ್ಪನಾ, ಜಯಮಾಲಾ, ವಿನಯಪ್ರಸಾದ್, ರಾಜ್ ಬಿ. ಶೆಟ್ಟಿ ಸೇರಿದಂತೆ ಇನ್ನೂ ಅನೇಕ ಮಂದಿ ಕಲಾವಿದರು ನಮ್ಮವರೇ ಆಗಿರುವುದು ಖುಷಿಯ ವಿಚಾರ. 

ತಮ್ಮ ಸೃಜನಶೀಲತೆಯಿಂದಾಗಿ ಗಾಂಧಿನಗರದಲ್ಲಿ ವಿಶೇಷ ಮನ್ನಣೆ ಪಡೆದಿರುವ ಕರಾವಳಿಯ ಹೆಮ್ಮೆಯ ಕಲಾವಿದರು ತುಳುನಾಡಿನ ಕೀರ್ತಿಯನ್ನು ಜಗದಗಲ ಹರಡಿಸಿದ್ದಾರೆ. ಇವರದೇ ಹಾದಿಯಲ್ಲಿ ಗಾಂಧಿನಗರದಲ್ಲಿ ಮಿಂಚುವ ಕನಸು ಹೊತ್ತು ಹೊಸ ಭರವಸೆಯೊಂದಿಗೆ ಕನ್ನಡ ಚಿತ್ರರಂಗದಲ್ಲಿ ಅವಕಾಶ ಪಡೆದುಕೊಂಡಿರುವ ಕರಾವಳಿಯ ಯುವ ಛಾಯಾಗ್ರಾಹಕ ಭುವನೇಶ್ ಪ್ರಭು ಹಿರೇಬೆಟ್ಟು ಅವರು.

ಸೃಷ್ಟಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ’ಒಂದು ಶಾಲೆಯ ಕಥೆ’ ಕನ್ನಡ ಚಿತ್ರಕ್ಕೆ ಸಂಪೂರ್ಣ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ವಿಭಿನ್ನ ರೀತಿಯ ಛಾಯಾಗ್ರಹಣದ ಮೂಲಕ 50ಕ್ಕೂ ಅಧಿಕ ಕನ್ನಡ, ತುಳು ಕಿರುಚಿತ್ರಗಳಿಗೆ ಛಾಯಾಗ್ರಹಣ ನಡೆಸಿ ತನ್ನ ಪ್ರತಿಭೆ ಮೆರೆದಿರುವ ಭುವನೇಶ್ ಅವರು ಬೆಳ್ಳಿತೆರೆಯಲ್ಲಿ ತನ್ನ ಚೊಚ್ಚಲ ಚಿತ್ರವನ್ನು ವಿಭಿನ್ನವಾಗಿ ಪಡಿಮೂಡಿಸುವ ಕನಸು ಹೊತ್ತಿದ್ದಾರೆ.

ಒಂದು ಶಾಲೆಯ ಕಥೆ ಚಿತ್ರದಲ್ಲಿ ಹೊಸಬರಿಗೆ ಅವಕಾಶ ಕೊಡಬೇಕು ಎನ್ನುವುದು ನಿರ್ದೇಶಕರ ಆಸೆ. ಹಾಗಾಗಿ ಯುವ ಛಾಯಾಗ್ರಾಹಕ ಭುವನೇಶ್ ಪ್ರಭು ಅವರಿಗೆ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ಅವಕಾಶ ನೀಡಿದ್ದಾರೆ. ಈ ಮೂಲಕ ಕರಾವಳಿಯ ಅಪ್ಪಟ ಪ್ರತಿಭೆಯ ಕ್ಯಾಮೆರಾ ಕಲೆಯ ಕೈಚಳಕವನ್ನು ಗಾಂಧಿನಗರಕ್ಕೆ ಪರಿಚಯಿಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯವೆನಿಸಿದೆ. ಸಿನೆಮಾಟೋಗ್ರಫಿಯಲ್ಲಿ ಯಾವುದೇ ತಾಂತ್ರಿಕ ಪದವಿಯನ್ನು ಪಡೆಯದಿದ್ದರೂ ಕೂಡಾ ಅರ್ಧ ಶತಕ ಕಿರುಚಿತ್ರಗಳಿಗೆ ಛಾಯಾಗ್ರಹಣ ನಡೆಸಿರುವ ಪ್ರಾಕ್ಟಿಕಲ್ ಅನುಭವದ ಮೇಲೆ ಈ ಜವಾಬ್ದಾರಿಯನ್ನು ಭುವನೇಶ್ ಅವರು ಸವಾಲಾಗಿ ಸ್ವೀಕರಿಸಿ ಈಗಾಗಲೇ ಕಾರ್ಯಪೃವೃತ್ತರಾಗಿದ್ದಾರೆ.

’ಒಂದು ಶಾಲೆಯ ಕಥೆ ಚಿತ್ರದ ಚಿತ್ರೀಕರಣವು ಆಗುಂಬೆ, ಕುದುರೆಮುಖ, ತೀರ್ಥಹಳ್ಳಿ, ಉಡುಪಿ, ಮಂಗಳೂರು, ಮುಂಬಯಿ, ಬೆಂಗಳೂರು, ಸಿಂಗಾಪುರ ಸೇರಿದಂತೆ ವಿವಿಧ ರಮ್ಯ ರಮಣೀಯ ತಾಣಗಳಲ್ಲಿ ನಡೆಯಲಿದೆ. ಈಗಾಗಲೇ ಈ ಚಿತ್ರವನ್ನು ಚಿತ್ರೀಕರಿಸಲು ಯೋಜನೆಯನ್ನು ರೂಪಿಸಿ ತಂಡವು ಕಾರ್ಯಪ್ರವೃತ್ತರಾಗಿದೆ. ಚಿತ್ರಕಥೆಗೆ ಪೂರಕ ವಾಗುವಂತೆ ಸಿನೆಮಾಟೋಗ್ರಾಫಿ ಬಗ್ಗೆ ವಿಶೇಷ ಜ್ಞಾನವನ್ನು ಯೂಟ್ಯೂಬ್‌ ನಂತಹ ಜಾಲತಾಣಗಳಿಂದಲೂ ಪಡೆದುಕೊಂಡಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸುವ ಯೋಚನೆಯೊಂದಿಗೆ ತನ್ನದೇ ಆದ ಸ್ವಂತ ಸಿನೇಮಾ ಕ್ಯಾಮೆರಾವನ್ನು ಹೊಂದಿರುವ ಭುವನೇಶ್ ಅವರ ಕೈಚಳಕ ಈ ಚಿತ್ರದಲ್ಲಿ ಯಾವ ರೀತಿಯಲ್ಲಿ ಮೇಳೈಸಲಿದೆ ಎಂಬುದು ಕಾದು ನೋಡಬೇಕಿದೆ.

 ಚಿತ್ರದ ಮೊದಲ ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮನ್ನ ತೊಡಗಿಸಿ ಬಹಳಷ್ಟು ಪ್ರಾಥಮಿಕ ಹಂತದ ತರಬೇತಿಯಲ್ಲಿ ಛಾಯಾಗ್ರಾಹಣವನ್ನು ನಡೆಸಿ ನಿರ್ಮಾಪಕರಿಂದ ಶಹಬ್ಬಾಸ್‌ ಗಿರಿಯನ್ನು ಪಡೆದುಕೊಂಡಿದ್ದಾರೆ. ಇವರ ಕ್ಯಾಮೆರಾ ಚಳಕ ಆಕರ್ಷಕವಾಗಿದೆ. ಈ ಚಿತ್ರದ ಬಳಿಕ ಸಿನೇಮಾಟೊಗ್ರಫಿಗೆ ಕನ್ನಡ, ತುಳು, ಹಿಂದಿ ಮತ್ತು ಕೊಂಕಣಿ ಭಾಷೆಯ ಚಿತ್ರದಲ್ಲಿ ಅವಕಾಶ ದೊರೆತಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !