ವಿರಾಟ್ ಕೊಹ್ಲಿ ಶತಕ ಸೊಬಗು: ಜಯಭೇರಿ ಮೊಳಗಿಸಿದ ರಾಯಲ್ ಚಾಲೆಂಜರ್ಸ್

ಕೋಲ್ಕತ್ತ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿಯ ಐಪಿಎಲ್ನ ಪ್ಲೇ ಆಫ್ ತಲುಪುವ ಹಾದಿಯಿಂದ ಬಹುತೇಕ ಹೊರಬಿದ್ದಿದೆ. ಆದರೆ, ವಿರಾಟ್ ಕೊಹ್ಲಿಯ ಛಲಕ್ಕೆ ಬರವಿಲ್ಲ.
ಅವರು ತಮ್ಮ ಅಭಿಮಾನಿಗಳನ್ನು ನಿರಾಸೆ ಪಡಿಸುವುದಿಲ್ಲ ಎಂಬ ಮಾತನ್ನು ಶುಕ್ರವಾರ ನಿಜ ಮಾಡಿದರು. ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ವಿರಾಟ್ (100; 58ಎಸೆತ, 9ಬೌಂಡರಿ, 4ಸಿಕ್ಸರ್) ಅಬ್ಬರದ ಶತಕ ಸಿಡಿಸಿದರು. ತಂಡಕ್ಕೆ 10ರನ್ಗಳ ಗೆಲುವು ತಂದುಕೊಟ್ಟರು.
ಆರ್ಸಿಬಿ 20 ಓವರ್ಗಳಲ್ಲಿ 4 ವಿಕೆಟ್ಗಳಿಗೆ 213 ರನ್ ಗಳಿಸಿತು. ಕೋಲ್ಕತ್ತ ನೈಟ್ ರೈಡರ್ಸ್ 5 ವಿಕೆಟ್ಗೆ 203ರನ್ ಗಳಿಸಿತು.
ಆ್ಯಂಡ್ರೆ ರಸೆಲ್ (65; 25ಎ, 2 ಬೌಂ, 9ಸಿ) ಮತ್ತು ನಿತೀಶ್ ರಾಣಾ (ಔಟಾಗದೆ 85; 46ಎ, 9ಬೌಂ, 5ಸಿ) ಆರ್ಭಟಿಸಿದರು. ಇವರ ಅಬ್ಬರ ಕಂಡು ಆರ್ಸಿಬಿಗೆ ಮತ್ತೊಂದು ಸೋಲು ನಿಶ್ಚಿತ ಎಂದು ಭಾವಿಸಿದ್ದವರೇ ಹೆಚ್ಚು.
ಆದರೆ ಅಂತಿಮ ಓವರ್ನಲ್ಲಿ ಮೋಯಿನ್ ಅಲಿ ಮೋಡಿ ಮಾಡಿದರು. ಕೆಕೆಆರ್ ಗೆಲುವಿಗೆ 24ರನ್ಗಳ ಅಗತ್ಯ ವಿತ್ತು. ಮೊದಲ ಎರಡು ಎಸೆತಗಳಲ್ಲಿ ಮೋಯಿನ್ ಕೇವಲ ಒಂದು ರನ್ ನೀಡಿದರು. ಮೂರನೇ ಎಸೆತವನ್ನು ರಸೆಲ್ ಸಿಕ್ಸರ್ಗೆ ಅಟ್ಟಿದರು.
ನಾಲ್ಕನೇ ಎಸೆತದಲ್ಲಿ ರಸೆಲ್ ರನ್ ಗಳಿಸಲು ವಿಫಲರಾದರು. ಆರ್ಸಿಬಿ ಆಟಗಾರರು ಸಂಭ್ರಮಿಸಿದರು. ಮರು ಎಸೆತದಲ್ಲಿ ರಸೆಲ್ ರನೌಟ್ ಆದರು. ಅಂತಿಮ ಎಸೆತವನ್ನು ರಾಣಾ ಸಿಕ್ಸರ್ಗೆ ಅಟ್ಟಿದರೂ ಪ್ರಯೋಜನವಾಗಲಿಲ್ಲ.
ಟಾಸ್ ಗೆದ್ದ ನೈಟ್ ರೈಡರ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಾಲ್ಕನೇ ಓವರ್ನಲ್ಲಿ ಸುನಿಲ್ ನಾರಾ ಯಣ್ ಅವರು ಪಾರ್ಥಿವ್ ಪಟೇಲ್ (11 ರನ್) ವಿಕೆಟ್ ಕಬಳಿಸಿದರು. ಈ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಎಬಿ ಡಿವಿಲಿಯರ್ಸ್ ಬದಲಿಗೆ ಕಣಕ್ಕಿಳಿದ ಅಕ್ಷದೀಪ್ ನಾಥ್ (13 ರನ್) ಕೂಡ ಹೆಚ್ಚು ರನ್ ಗಳಿಸಲಿಲ್ಲ. ಆದರೆ, ವಿರಾಟ್ ಗಟ್ಟಿಯಾಗಿ ನೆಲೆ ನಿಂತರು.
ಆಕರ್ಷಕ ಹೊಡೆತಗಳ ಮೂಲಕ ಬೌಲರ್ಗಳ ಚಿತ್ತ ಕಲಕಿದರು.
ಮೊದಲ ಸುತ್ತಿನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಕೆಕೆಆರ್ ಎದುರಿನ ಪಂದ್ಯದಲ್ಲಿ ವಿರಾಟ್ 84 ರನ್ ಗಳಿಸಿದ್ದರು. ಆದರೆ ಈಡನ್ ಗಾರ್ಡನ್ನಲ್ಲಿ ಐಪಿಎಲ್ನಲ್ಲಿ ತಮ್ಮ ಐದನೇ ಶತಕವನ್ನು ಪೂರೈಸದೇ ಬಿಡಲಿಲ್ಲ. 2016ರ ಆವೃತ್ತಿಯಲ್ಲಿ ಅವರು ನಾಲ್ಕು ಶತಕ ದಾಖಲಿಸಿದ್ದರು. ಅದರ ನಂತರದ ಅವೃತ್ತಿಗಳಲ್ಲಿ ಶತಕ ದಾಖಲಾಗಿರಲಿಲ್ಲ. ಕೊನೆಯ ಓವರ್ನ ಐದನೇ ಎಸೆತದಲ್ಲಿ ಅವರು ಬೌಂಡರಿ ಬಾರಿಸಿ ಶತಕದ ಗಡಿ ಮುಟ್ಟಿದರು. ಇನಿಂಗ್ಸ್ನ ಕೊನೆಯ ಎಸೆತದಲ್ಲಿ ಶುಭಮನ್ ಗಿಲ್ ಅವರಿಗೆ ಕ್ಯಾಚಿತ್ತರು. ಬೌಲರ್ ಹ್ಯಾರಿ ಗರ್ನಿ ವಿಕೆಟ್ ಪಡೆದು ಸಂಭ್ರಮಿಸಿದರು.
ಕೊಹ್ಲಿ–ಅಲಿ ಜೊತೆಯಾಟ: ಒಂಬತ್ತನೇ ಓವರ್ನಲ್ಲಿ ಕೊಹ್ಲಿ ಜೊತೆಗೂಡಿದ ಎಡಗೈ ಬ್ಯಾಟ್ಸ್ಮನ್ ಮೋಯಿನ್ ಅಲಿ ಕೂಡ ಬೀಸಾಟವಾಡಿದರು. ಅವರು ಕೊಹ್ಲಿಗಿಂತ ವೇಗವಾಗಿ ರನ್ ಗಳಿಸಿದರು. ಕೆಕೆಆರ್ ಬೌಲರ್ ಆ್ಯಂಡ್ರೆ ರಸೆಲ್ ಮತ್ತು ಪ್ರಸಿದ್ಧಕೃಷ್ಣ ಅವರನ್ನು ಇನ್ನಿಲ್ಲದಂತೆ ಕಾಡಿದರು.
ಕೇವಲ 25 ಎಸೆತಗಳಲ್ಲಿ ಅರ್ಧಶತಕದ ಗಡಿ ಮುಟ್ಟಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ ಕೊಹ್ಲಿ ಮತ್ತು ಅಲಿ 90 ರನ್ ಸೇರಿಸಿದರು. ಅಲಿ (66; 28ಎ, 5ಬೌಂ, 6ಸಿ) ಹದಿನಾರನೇ ಓವರ್ನಲ್ಲಿ ಔಟಾದರು. ಕ್ರೀಸ್ಗೆ ಬಂದ ಮಾರ್ಕಸ್ ಸ್ಟೊಯಿನಿಸ್ ಕೂಡ (ಔಟಾಗದೆ 17 ರನ್) ತಮ್ಮ ಕಾಣಿಕೆ ನೀಡಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.