ನಕ್ಕಲಕುಂಟೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ, ಖರೀದಿಸಿ ಕುಡಿಯುವ ಸ್ಥಿತಿ ನಿರ್ಮಾಣ

ಭಾನುವಾರ, ಮೇ 26, 2019
28 °C
ಕೈಕೊಟ್ಟ ಏಕೈಕ ಕೊಳವೆಬಾವಿ, 10 ದಿನಗಳಿಂದ ನೀರು ಪೂರೈಕೆ ಇಲ್ಲದೆ ಕಂಗಾಲಾದ ನಾಗರಿಕರು

ನಕ್ಕಲಕುಂಟೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ, ಖರೀದಿಸಿ ಕುಡಿಯುವ ಸ್ಥಿತಿ ನಿರ್ಮಾಣ

Published:
Updated:
Prajavani

ಚಿಕ್ಕಬಳ್ಳಾಪುರ: ನಗರದ 21ನೇ ವಾರ್ಡ್ ವ್ಯಾಪ್ತಿಯ ನಕ್ಕಲಕುಂಟೆ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹಗಲೆಲ್ಲ ದುಡಿದು ಬರುವ ಬಡ ಜನರು ರಾತ್ರಿಯಾದರೆ ನಿದ್ದೆಗೆಟ್ಟು ನೀರಿಗಾಗಿ ಕಾಯ್ದು ಹೈರಾಣಾಗುವ, ನೀರು ಸಿಗದಿರುವಾಗ ದುಡ್ಡು ಕೊಟ್ಟು ಖರೀದಿಸುವ ಸ್ಥಿತಿ ತಲೆದೋರಿದೆ.

ಕಳೆದ ಮೂರು ತಿಂಗಳಿಂದ ನಕ್ಕಲಕುಂಟೆಗೆ ಸಮರ್ಪಕವಾಗಿ ನೀರು ಪೂರೈಕೆಯಾಗಿಲ್ಲ. ನೂರಾರು ಮನೆಗಳಿರುವ ಈ ಬಡಾವಣೆಯಲ್ಲಿ ಇದ್ದ ಏಕೈಕ ಕೊಳವೆಬಾವಿ ಈವರೆಗೆ ಅಲ್ಪಸ್ವಲ್ಪ ನೀರು ಹೊರಹಾಕುತ್ತಿತ್ತು. ಅದು ಸಹ ಇತ್ತೀಚೆಗೆ ಮೋಟರ್ ಕೆಟ್ಟ ಕಾರಣಕ್ಕೆ ಸ್ಥಗಿತಗೊಂಡಿದೆ. ಹೀಗಾಗಿ ದೈನಂದಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಜನರು ನೀರಿಗಾಗಿ ಪರದಾಡುತ್ತಿದ್ದಾರೆ.

ಸದ್ಯ ಇಲ್ಲಿನ ಜನರು, ಹತ್ತಾರು ಬಾರಿ ದೂರು ಹೇಳಿಕೊಂಡರೂ ಸ್ಪಂದಿಸದ ನಗರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಕೆಲವರು ಕೂಲಿ ಮಾಡಿ ಸಂಪಾದಿಸಿದ ಹಣದಲ್ಲಿ ನೀರು ಕೊಂಡು ಕುಡಿಯುತ್ತಿದ್ದರೆ, ಕಡುಬಡವರು ಟ್ಯಾಂಕರ್‌ ನೀರು ಖರೀದಿಸುವವರ ಬಳಿ ಜೀವಜಲಕ್ಕಾಗಿ ಅಂಗಲಾಚುತ್ತಿದ್ದಾರೆ.

ನೀರಿನ ಸಮಸ್ಯೆಯಿಂದ ಬೇಸತ್ತಿದ್ದ ಇಲ್ಲಿನ ಜನರು ಲೋಕಸಭೆ ಚುನಾವಣೆಯಲ್ಲಿ ಮನೆ ಬಾಗಿಲಿಗೆ ಮತ ಕೇಳಲು ಬರುವ ಜನಪ್ರತಿನಿಧಿಗಳಿಗೆ ತಮ್ಮ ಸಮಸ್ಯೆ ದರ್ಶನ ಮಾಡಿಸಿ, ತರಾಟೆಗೆ ತೆಗೆದುಕೊಳ್ಳುವ ಯೋಚನೆಯಲ್ಲಿದ್ದರು. ಆದರೆ ಯಾವೊಬ್ಬ ಜನಪ್ರತಿನಿಧಿ ಇತ್ತ ಪ್ರಚಾರಕ್ಕಾಗಿ ತಲೆ ಹಾಕದೇ ಇರುವುದು ಸ್ಥಳೀಯರಲ್ಲಿ ಬೇಸರದ ಜತೆಗೆ ಆಕ್ರೋಶ ಮೂಡಿಸಿದೆ.

ಬಡಾವಣೆಯಲ್ಲಿ ಇದ್ದ ಒಂದು ಕೊಳವೆಬಾವಿ ಕೂಡ ಕೈಕೊಟ್ಟ ಬಳಿಕ ಕಳೆದ ಹತ್ತು ದಿನಗಳಿಂದ ನೀರು ಸರಬರಾಜು ಕಾಣದೆ ಕಂಗಾಲಾಗಿರುವ ಇಲ್ಲಿನ ಜನರು ಖರೀದಿಸಿದ ನೀರನ್ನು ಅಡುಗೆ, ಕುಡಿಯಲು, ಸ್ನಾನಕ್ಕೆ, ಶೌಚಾಲಯಕ್ಕೆ, ಬಟ್ಟೆ ತೊಳೆಯಲು ಅಡುಗೆ ಎಣ್ಣೆಯಂತೆ ಲೆಕ್ಕ ಹಾಕಿ ಬಳಸುವ ಸ್ಥಿತಿ ಬಂದಿದೆ.

ಪರಿಣಾಮ, ಶೌಚಾಲಯ ಬಳಸಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸಿಗುವ ಅಲ್ಪ ನೀರಿನಲ್ಲಿ ಶೌಚಾಲಯ ಸ್ವಚ್ಛತೆ ಕಾಯ್ದುಕೊಳ್ಳುವುದೇ ದೊಡ್ಡ ಸವಾಲಾಗಿದೆ. ಹೀಗಾಗಿ,ಪುರುಷರು ಅನಿವಾರ್ಯವಾಗಿ ಸಾರ್ವಜನಿಕ ಶೌಚಾಲಗಳ ಮೊರೆ ಹೋಗುತ್ತಿದ್ದಾರೆ.

‘ನಮ್ಮ ಕಷ್ಟ ನೋಡಲಾಗದೆ 10 ದಿನಗಳ ಹಿಂದೆ ನಗರಸಭೆ ಮಾಜಿ ಸದಸ್ಯರೊಬ್ಬರು ಟ್ಯಾಂಕರ್‌ ಮೂಲಕ ಸ್ವಲ್ಪ ನೀರು ಪೂರೈಸಿದ್ದರು. ಅಲ್ಲಿಂದ ಈವರೆಗೆ ಉಳಿದಂತೆ ನಮಗೆ ನೀರು ಪೂರೈಕೆಯಾಗಿಲ್ಲ. ನಗರಸಭೆ ಅಧಿಕಾರಿಗಳಿಗೆ ಹೇಳೋರು, ಕೇಳೋರು ಯಾರೂ ಇಲ್ಲದಂತಾಗಿದೆ‘ ಎಂದು ಸ್ಥಳೀಯ ನಿವಾಸಿ ಪದ್ಮಾ ಅಸಮಾಧಾನ ವ್ಯಕ್ತಪಡಿಸಿದರು.

‘ಇಲ್ಲಿನ ಕೊಳವೆ ಬಾವಿ ಕೆಡುವುದಕ್ಕಿಂತ ಮುಂಚೆ ಕೂಡ ಸುಮಾರು 500–600 ಜನ ರಾತ್ರಿಯೆಲ್ಲ ಕಳ್ಳರಿಗೆ ಕಾಯುವ ರೀತಿ ಕಾದು ನೀರು ಹಿಡಿಯುವ ಸ್ಥಿತಿ ಇತ್ತು. ನಮ್ಮ ಕಷ್ಟ ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ’ ಎಂದು ಬೇಸರ ಹೊರಹಾಕಿದರು.

‘ಒಂದೆಡೆ ನಮಗೆ ನಗರಸಭೆ ನೀರು ಪೂರೈಸುತ್ತಿಲ್ಲ. ಇನ್ನೊಂದೆಡೆ ಹಣ ಕೊಟ್ಟರೂ ಒಂದೊಂದು ಬಾರಿ ಕುಡಿಯುವ ನೀರು ಸಿಗುತ್ತಿಲ್ಲ. 20 ಲೀಟರ್ ನೀರಿಗೆ ₹30 ಕೊಟ್ಟು ಖರೀದಿಸುತ್ತಿದ್ದೇವೆ. ಕೂಲಿ ಮಾಡಿದ ಹಣ ನೀರಿಗೆ ಖರ್ಚಾದರೆ ಬಡವರು ಹೇಗೆ ಬದುಕುವುದು’ ಎಂದು ಸ್ಥಳೀಯ ನಿವಾಸಿ ಗಾಯತ್ರಿ ಖಾರವಾಗಿ ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !