ಸೇವೆಗೆ ಸಮರ್ಪಿಸಿಕೊಂಡ ಸ್ವಯಂ ಸೇವಕರು

ಸೋಮವಾರ, ಮೇ 27, 2019
33 °C
ರಾಮಕೃಷ್ಣ ಮಿಷನ್‌ನ ಸ್ವಚ್ಛ ಮಂಗಳೂರು ಅಭಿಯಾನದ ಫಲಶ್ರುತಿ

ಸೇವೆಗೆ ಸಮರ್ಪಿಸಿಕೊಂಡ ಸ್ವಯಂ ಸೇವಕರು

Published:
Updated:
Prajavani

ಮಂಗಳೂರು ನಗರದ ಮೂಲೆಗಳಲ್ಲಿ ರಾಶಿಬಿದ್ದ ಕಸವನ್ನು ಶ್ರಮದಾನದ ಮೂಲಕ ತೆರವು ಮಾಡುವುದಷ್ಟೇ ಅಲ್ಲ, ನಗರವನ್ನು ಸುಂದರಗೊಳಿಸುವ ಕೆಲಸದಲ್ಲಿಯೂ ತೊಡಗಿಸಿಕೊಂಡಿರುವ ರಾಮಕೃಷ್ಣ ಮಿಷನ್‌ ಬಹು ವಿಸ್ತಾರವಾಗಿ ಸ್ವಚ್ಛತೆಯ ಪರಿಕಲ್ಪನೆ ಹೊಂದಿದೆ. ಆದ್ದರಿಂದ ನಗರದ ಹಲವು ಕಡೆಗಳಲ್ಲಿ ಕಸದ ರಾಶಿ ಇದ್ದ ಜಾಗಗಳಲ್ಲಿ ಹೂವಿನ ಕುಂಡಗಳು, ಪುಟ್ಟ ಪಾರ್ಕ್‌ಗಳು ತಲೆ ಎತ್ತಿವೆ. ಸ್ವಚ್ಛಗಾಳಿ ಬೀಸಲು ಅವಕಾಶವೇ ಇಲ್ಲದಂತೆ ಅಸಡ್ಡಾಳವಾಗಿ ಬೆಳೆಯುತ್ತಿದ್ದ ನಗರದಲ್ಲಿ, ಶ್ವಾಸಕೋಶ ಮಾದರಿಯಲ್ಲಿ ನಗರಕ್ಕೆ ಉತ್ತಮ ಉದ್ಯಾನಗಳ ಅವಶ್ಯಕತೆ ಇದೆ. ಖಾಲಿ ಜಾಗಗಳು ಸ್ವಚ್ಛವಾಗಿ, ಕಣ್ಣಿಗೆ ತಂಪು ನೀಡುವಂತೆ ಇರಬೇಕು ಎಂಬ ವಿಚಾರಗಳನ್ನು ನಾಗರಿಕರ ಮನಸ್ಸಿನಲ್ಲಿ ರಾಮಕೃಷ್ಣ ಮಿಷನ್‌ ಬಿತ್ತಿದೆ.

ಮಂಗಳೂರಿನ ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನ ಸುಮಾರು 100ಕ್ಕೂ ಹೆಚ್ಚು ಸ್ವಚ್ಛತಾ ಯೋಧರನ್ನು ಸಜ್ಜುಗೊಳಿಸಿದೆ. ನಾಲ್ಕೂವರೆ ವರ್ಷಗಳಿಂದ ನಡೆಯುತ್ತಿರುವ ಅಭಿಯಾನಕ್ಕೆ ಪ್ರತೀ ಭಾನುವಾರ ತೊಡಗಿಸಿಕೊಂಡ ಸ್ವಯಂ ಸೇವಕರ ಸಂಖ್ಯೆ ಹತ್ತಾರು ಸಾವಿರ ದಾಟಿದರೂ, ಈ ಅಭಿಯಾನಕ್ಕಾಗಿ ಸುಮಾರು 100 ಜನರು ತಮ್ಮ ಸಮಯವನ್ನು ನಿರಂತರವಾಗಿ ವಿನಿಯೋಗಿಸಿದ್ದಾರೆ. 2019ರ ಅಕ್ಟೋಬರ್‌ನಲ್ಲಿ ಭಾನುವಾರದ ಸ್ವಚ್ಛತಾ ಅಭಿಯಾನ ಮುಕ್ತಾಯ ಹಂತಕ್ಕೆ ಬರಲಿದ್ದು, ಬಳಿಕ ‘ಮಂಗಳ ಫೌಂಡೇಶನ್‌’ ಎಂಬ ಹೆಸರಿನಲ್ಲಿ ಸ್ವಚ್ಛತೆಯ ಕಾರ್ಯಕ್ರಮಗಳು ಮುಂದುವರೆಯಲಿವೆ.

ಸ್ವಚ್ಛತಾ ಅಭಿಯಾನದ ನೇತೃತ್ವ ವಹಿಸಿಕೊಂಡಿರುವ ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ ಹೇಳುವ ಪ್ರಕಾರ, ‘ ಸ್ವಚ್ಛ ಭಾರತ ಮಾದರಿಯ ಕಾರ್ಯಕ್ರಮಗಳು ಅಮೆರಿಕ, ಸಿಂಗಪುರದಂತಹ ರಾಷ್ಟ್ರಗಳಲ್ಲಿ ನಡೆದಿವೆ. ಸುಮಾರು 20 ವರ್ಷಗಳ ದೀರ್ಘವಾದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆ ದೇಶ ಹಾಕಿಕೊಂಡಿದ್ದರಿಂದಲೇ ಅಲ್ಲಿನ ಹಾದಿ ಬೀದಿಗಳು ಇಂದು ಸ್ವಚ್ಛವಾಗಿವೆ. ಅದೇ ಮಾದರಿಯಲ್ಲಿ ಭಾರತದ ಜನರಲ್ಲಿಯೂ ಸ್ವಚ್ಛತೆಯ ಮಾನಸಿಕತೆ ಸೃಷ್ಟಿಯಾಗಬೇಕಾದರೆ ನಿರಂತರವಾಗಿ ಅವರಿಗೆ ತಿಳಿಹೇಳುವ ಕಾರ್ಯಕ್ರಮಗಳು ನಡೆಯಬೇಕು. ಅದಕ್ಕೆಂದೇ ರಾಮಕೃಷ್ಣ ಮಿಷನ್‌ ವತಿಯಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ’.

ಸ್ವಚ್ಛ ಮಂಗಳೂರು ಅಭಿಯಾನದಿಂದ ಪ್ರೇರಣೆ ಪಡೆದ ನಾಲ್ವರು ಸ್ವಯಂಸೇವಕರು ತಮ್ಮ ವಿದ್ಯಾಭ್ಯಾಸ ಒಂದು ಹಂತಕ್ಕೆ ಬಂದನಂತರ ಪೂರ್ಣಾವಧಿಯಾಗಿ ಈ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಶ್ರೀನಿವಾಸ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಮುಗಿಸಿದ ನಲ್ಲೂರು ಸಚಿನ್‌ ಶೆಟ್ಟಿ, ಯೋಗದಲ್ಲಿ ಚಿನ್ನದ ಪದಕ ಪಡೆದ ಪ್ರತಿಭಾವಂತ. ಆದರೆ ಸ್ವಚ್ಛಭಾರತ ಯೋಜನೆಯಲ್ಲಿ ಕಸ ಬೇರ್ಪಡಿಸುವ ಅಭಿಯಾನವನ್ನು ಮುತುವರ್ಜಿಯಿಂದ ಮುನ್ನಡೆಸುತ್ತಿದ್ದಾರೆ. ರಂಜನ್‌ ಬೆಳ್ಳರಪಾಡಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಕಾಂ ಓದಿದ್ದು ಆರು ಚಿನ್ನದ ಪದಕ ಪಡೆದ ವಿದ್ಯಾರ್ಥಿ. ಇದೀಗ ತತ್ವಶಾಸ್ತ್ರ ಅಧ್ಯಯನದತ್ತ ಆಸಕ್ತಿ ಹೊಂದಿದ್ದಾರೆ. ಆದರೆ ಶಿಕ್ಷಣದ ನಡುವೆ ರಾಮಕೃಷ್ಣ ಮಿಷನ್‌ಗಾಗಿ  ಸ್ವಚ್ಛಸೋಚ್ ಅಭಿಯಾನದ ಪೂರ್ಣಾವಧಿ ಕೆಲಸ ಮಾಡುತ್ತಿದ್ದಾರೆ.  ಎಂ.ಕಾಂ ಮುಗಿಸಿದ ಮತ್ತೋರ್ವ ಉತ್ಸಾಹಿ ಕಾರ್ಕಳದ ಗುರುಪ್ರಸಾದ್‌ ರಾವ್‌ ಅವರು ಸ್ವಚ್ಛ ಸೋಚ್‌ ಅಭಿಯಾನಕ್ಕೆ ಸಹಾಯ ಮಾಡುತ್ತಿದ್ದಾರೆ.  ಪದವಿ ಓದಿದ ಮಂಗಳೂರಿನ ಕಾಂಚನ ಅವರೂ ಇದೇ ರೀತಿಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

‘ನಾಲ್ಕು ವರ್ಷಗಳಿಂದ ಪ್ರತಿ ಮಂಗಳವಾರ ಸಂಜೆ ರಾಮಕೃಷ್ಣ ಮಠದಲ್ಲಿ ನಡೆಯುವ ಸಭೆಯಲ್ಲಿ 40ಕ್ಕೂ ಹೆಚ್ಚು ಮಂದಿ ಸ್ವಯಂಸೇವಕರು ಭಾಗವಹಿಸುತ್ತಾರೆ. ಸ್ವಚ್ಛ ಯೋಧರ ತಂಡದಲ್ಲಿ 75 ಜನರಿದ್ದು, ಇವರೆಲ್ಲರೂ ವಾರವಿಡೀ ಸ್ವಚ್ಛತೆಯ ಕಣ್ಗಾವಲು ಪಡೆಯಂತೆ ಕೆಲಸ ಮಾಡುತ್ತಾರೆ. ಶ್ರಮದಾನ ನಡೆಸಿದ ಜಾಗವನ್ನು ರಾತ್ರಿ ಹಗಲು ಎನ್ನದೇ ಪಾಳಿ ಪ್ರಕಾರ ಈ ಸ್ವಯಂ ಸೇವಕರು ಕಾಯುತ್ತಾರೆ. ಅಲ್ಲಿ ಕಸ ಹಾಕಲು ಬರುವವರನ್ನು ಭೇಟಿಯಾಗಿ ವಿನಯದಿಂದ ಮಾತನಾಡಿ ಮುಂದಕ್ಕೆ ಅಲ್ಲಿ ಕಸ ಹಾಕದಂತೆ ಮನವೊಲಿಸುತ್ತಾರೆ.’

‘ಉಮಾನಾಥ ಕೋಟೆಕಾರ್‌ ಮತ್ತು ದಿಲ್‌ರಾಜ್‌ ಆಳ್ವ ಅವರ ನೇತೃತ್ವದಲ್ಲಿ ಈ ತಂಡ ಪ್ರತಿದಿನ ಒಂದಲ್ಲ ಒಂದು ಕೆಲಸವನ್ನು ಸ್ವಯಂ ಆಸಕ್ತಿಯಿಂದ ವಹಿಸಿಕೊಂಡು ಮಾಡುತ್ತಿದೆ. ಮಂಗಳೂರು ನಗರದ ಮಟ್ಟಿಗೆ ಈ ನೂರು ಜನರ ಕೆಲಸ 1000 ಜನರ ಕೆಲಸಕ್ಕೆ ಸಮನಾಗಿದೆ’ ಎಂದು ‘ಪ್ರಜಾವಾಣಿ’ ಜೊತೆ ಮಾತನಾಡಿದ ಏಕಗಮ್ಯಾನಂದ ಸ್ವಾಮೀಜಿ ಹೇಳಿದರು.‌ ಶಿಕ್ಷಣ ಮುಗಿಸಿದ ಯುವಜನರು, ಉದ್ಯೋಗದ ನಡುವೆ ದೀರ್ಘ ರಜೆ ಪ‍ಡೆದುಕೊಂಡವರು, ನಿವೃತ್ತರು ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಜನರು ರಾಮಕೃಷ್ಣ ಮಿಷನ್‌ನ ಯೋಜನೆಗಳಿಗಾಗಿ ಪೂರ್ಣಾವಧಿ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಿದ್ಧರಿದ್ದಾರೆ. ಆದರೆ ಸದ್ಯಕ್ಕೆ ಅಂತಹ ಬೃಹತ್‌ ಯೋಜನೆಯನ್ನು ಹಮ್ಮಿಕೊಂಡಿಲ್ಲ.

ಮುಂದಿನ ದಿನಗಳಲ್ಲಿ ಹಸಿಕಸದ ವಿಲೇವಾರಿಗೆ ಮಡಕೆ ಕಾಂಪೋಸ್ಟ್‌ ವಿಧಾನ ಅನುಸರಿಸಿದರೆ, ಒಣಕಸವನ್ನು ಖರೀದಿಸುವ ನಿಟ್ಟಿನಲ್ಲಿ ಯೋಜನೆಯೊಂದನ್ನು ರೂಪುಗೊಳಿಸಲಾಗುತ್ತಿದೆ. ಮಹಾನಗರ ಪಾಲಿಕೆ ಕೂಡ ಈ ನಿಟ್ಟಿನಲ್ಲಿ ಕೈ ಜೋಡಿಸಿರುವುದರಿಂದ ಸ್ವಚ್ಛ ಮಂಗಳೂರು ಅಭಿಯಾನಕ್ಕೆ ವೇಗ ಸಿಕ್ಕಿದೆ. ಜನರಲ್ಲಿ ಅರಿವು ಮೂಡುತ್ತ ಇರುವುದರಿಂದ ಆರಂಭಿಕ ವರ್ಷಗಳಿಗಿಂತ  ಈಗ ಜನರು ಎಲ್ಲೆಂದರಲ್ಲಿ ಕಸ ಹಾಕಲು ಹಿಂದುಮುಂದು ನೋಡುತ್ತಿದ್ದಾರೆ ಎಂಬ ಅಭಿಪ್ರಾಯ ಸ್ವಯಂಸೇವಕರದ್ದು.

 

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !