ಬಾಗಲಕೋಟೆ ಲೋಕಸಭಾ ಕ್ಷೇತ್ರ: ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣ

ಭಾನುವಾರ, ಮೇ 26, 2019
32 °C
ಚುನಾವಣೆ ಕರ್ತವ್ಯಕ್ಕೆ 8527 ಸಿಬ್ಬಂದಿ ನೇಮಕ

ಬಾಗಲಕೋಟೆ ಲೋಕಸಭಾ ಕ್ಷೇತ್ರ: ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣ

Published:
Updated:

ಬಾಗಲಕೋಟೆ: ‘ಲೋಕಸಭಾ ಚುನಾವಣೆಗೆ ಏಪ್ರಿಲ್ 23ರಂದು (ಮಂಗಳವಾರ) ಮತದಾನ ನಡೆಯಲಿದೆ. ಎಂಟು ವಿಧಾನಸಭಾ ಕ್ಷೇತ್ರಗಳ 1938 ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ತಿಳಿಸಿದರು. 

ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತ ಮಾಡಿಕೊಂಡಿರುವ ಸಿದ್ಧತೆಯ ಬಗ್ಗೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆ ಕರ್ತವ್ಯಕ್ಕೆ ಒಟ್ಟು 8527 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ’ ಎಂದರು.

‘ಚುನಾವಣಾ ಸಿಬ್ಬಂದಿ ಏಪ್ರಿಲ್ 22ರಂದು ಬೆಳಿಗ್ಗೆ ಮತಗಟ್ಟೆಗಳಿಗೆ ತೆರಳಲಿದ್ದಾರೆ. ಅವರಿಗೆ ಅಲ್ಲಿಯೇ ಊಟದ ವ್ಯವಸ್ಥೆ, ಮೆಡಿಕಲ್ ಕಿಟ್‌ಗಳನ್ನು ಪೂರೈಸಲು ಜಿಲ್ಲಾಮಟ್ಟದ ವೆಲ್‌ಫೇರ್‌ ಸಮಿತಿ ರಚಿಸಲಾಗಿದೆ. ಊಟದ ವ್ಯವಸ್ಥೆಯನ್ನು ಅಕ್ಷರ ದಾಸೋಹದಡಿ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

ಚುನಾವಣಾ ಸಿಬ್ಬಂದಿಗೆ ಮತಗಟ್ಟೆಗೆ ತೆರಳಲು 243 ಬಸ್‌ಗಳು, 76 ಮಿನಿಬಸ್‌ ಹಾಗೂ 80 ಜೀಪ್‌ ಹಾಗೂ ಕ್ರೂಸರ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದರು.

ಸೂಕ್ಷ್ಮ ಮತಗಟ್ಟೆಗಳ ವಿವರ:

ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 405 ಮತಗಟ್ಟೆಗಳನ್ನು ಸೂಕ್ಷ್ಮ ಹಾಗೂ ಕ್ರಿಟಿಕಲ್ ಎಂದು ಗುರುತಿಸಲಾಗಿದೆ. 102 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ, 218ರಲ್ಲಿ ಮೈಕ್ರೋ ಅಬ್ಸರ್ವರ್‌ ಹಾಗೂ 85 ಮತಗಟ್ಟೆಗಳಲ್ಲಿ ವಿಡಿಯೊಗ್ರಾಫರ್ಸ್ ನೇಮಿಸಲಾಗಿದೆ ಎಂದರು.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 17 ಲಕ್ಷದ 547 ಮತದಾರರು ಅರ್ಹತೆ ಪಡೆದಿದ್ದಾರೆ. ಏಪ್ರಿಲ್‌ 4ರವರೆಗೆ ನೋಂದಾಯಿಸಿದವರು ಇದರಲ್ಲಿ ಸೇರಿದ್ದಾರೆ. ಪುರುಷರ ಸಂಖ್ಯೆ 8.50.381 ಇದ್ದು, ಮಹಿಳೆಯರು 8.50.074 ಇದ್ದಾರೆ. ಇತರೆ ಮತದಾರರು 92 ಮಂದಿ ಇರುವುದಾಗಿ ತಿಳಿಸಿದರು.

ಬಿಗಿ ಭದ್ರತೆ: ‘ಈ ಬಾರಿ ಮತಗಟ್ಟೆಗಳ ಭದ್ರತೆಗೆ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅರೆಸೇನಾ ಪಡೆ ಐಟಿಬಿಪಿ ಹಾಗೂ ಸಿಎಪಿಎಫ್ ಈಗಾಗಲೇ ಜಿಲ್ಲೆಗೆ ಬಂದಿದ್ದು, ಯಾವುದೇ ಮತಗಟ್ಟೆಗೆ 20 ನಿಮಿಷದಲ್ಲಿ ತಲುಪಲು ಅನುಕೂಲವಾಗುವಂತೆ ಕ್ಷಿಪ್ರ ಪ್ರಹಾರ ದಳಗಳನ್ನು ನೇಮಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಿಇಒ ಗಂಗೂಬಾಯಿ ಮಾನಕರ, ಹೆಚ್ಚುವರಿ ಜಿಲ್ಲಾಧಿಕಾರಿ ಶಶಿಧರ ಕುರೇರಾ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !