ಸೋಲು–ಗೆಲುವಿನ ಲೆಕ್ಕಾಚಾರ ಜೋರು;ಕಾಂಗ್ರೆಸ್‌–ಬಿಜೆಪಿ ಪಾಳೆಯಲ್ಲಿ ಬಿಸಿಬಿಸಿ ಚರ್ಚೆ

ಶನಿವಾರ, ಮೇ 25, 2019
27 °C
ಕುತೂಹಲ ತಣಿಯಲು ಇನ್ನೊಂದು ತಿಂಗಳು ಕಾಯಬೇಕು

ಸೋಲು–ಗೆಲುವಿನ ಲೆಕ್ಕಾಚಾರ ಜೋರು;ಕಾಂಗ್ರೆಸ್‌–ಬಿಜೆಪಿ ಪಾಳೆಯಲ್ಲಿ ಬಿಸಿಬಿಸಿ ಚರ್ಚೆ

Published:
Updated:
Prajavani

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತದಾನ ಕೊನೆಗೊಂಡು ಐದು ದಿನಗಳು ಕಳೆದಿವೆ. ಚುನಾವಣೆಯ ಬಿಸಿ ಕಡಿಮೆಯಾಗಿದ್ದು, ಗೆಲುವು–ಸೋಲಿನ ಲೆಕ್ಕಾಚಾರ ಕಾವು ಪಡೆದುಕೊಳ್ಳುತ್ತಿದೆ.

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯಿಲಿ ಮತ್ತು ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡರ ನಡುವೆ ಈ ಬಾರಿ ನೇರ ಹಣಾಹಣಿ ಏರ್ಪಟ್ಟಿತ್ತು. ಇಬ್ಬರು ಕೂಡಾ ಗೆಲುವಿನ ವಿಶ್ವಾಸದಲ್ಲಿದ್ದಾರೆ. ‘ಗೆಲುವು ಖಚಿತ, ಗೆಲುವಿನ ಅಂತರವನ್ನು ಮತದಾರರು ನಿರ್ಧರಿಸಿದ್ದಾರೆ’ ಎಂದು ಇಬ್ಬರೂ ಹೇಳಿಕೊಂಡಿದ್ದಾರೆ.

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ನಿಜಕ್ಕೂ ಕೆಲಸ ಮಾಡಿದೆಯೇ, ಜೆಡಿಎಸ್‌ನ ಮತಗಳಲ್ಲಿ ಎಷ್ಟು ಬಿಜೆಪಿಗೆ ಬಿದ್ದಿವೆ, ಮೈತ್ರಿ ಪಕ್ಷಗಳು ಮತ್ತು ಬಿಜೆಪಿಯಲ್ಲಿನ ಅತೃಪ್ತ ನಾಯಕರ ಆಂತರಿಕ ಒಳಪೆಟ್ಟು ಫಲಿತಾಂಶದ ಮೇಲೆ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಗಳು ರಾಜಕೀಯ ಪಕ್ಷಗಳ ಮುಖಂಡರು, ಬೆಂಬಲಿಗರನ್ನು ಕಾಡುತ್ತಿವೆ. ವಿವಿಧ ರೀತಿಯ ಲೆಕ್ಕಾಚಾರ ಹಾಕಿದರೂ ಗೆಲುವು ಯಾರಿಗೆ ಎಂದು ಊಹಿಸುವುದು ಕಷ್ಟವಾಗುತ್ತಿದೆ.

ಬಚ್ಚೇಗೌಡರ ಸ್ವಕ್ಷೇತ್ರ ಹೊಸಕೋಟೆಯಲ್ಲಿ ಈ ಬಾರಿಯೂ ಅತ್ಯಧಿಕ ಪ್ರಮಾಣದ ಮತದಾನವಾಗಿದೆ. ಆ ಪೈಕಿ ಬಿಜೆಪಿಗೆ ಎಷ್ಟು ಮತಗಳು ಸಿಗಲಿವೆ ಎಂಬುದು ಅಂದಾಜಿಗೆ ನಿಲುಕುತ್ತಿಲ್ಲ. ಇನ್ನು ಚಿಕ್ಕಬಳ್ಳಾಪುರ, ಯಲಹಂಕ, ನೆಲಮಂಗಲ ಮತ್ತು ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಮುನ್ನಡೆ ಗಳಿಸಬಹುದು ಎಂದು ಆ ಪಕ್ಷದ ಮುಖಂಡರು ಲೆಕ್ಕಾಚಾರ ಹಾಕುತ್ತಿದ್ದಾರೆ.

ಇನ್ನೊಂದೆಡೆ ಬಾಗೇಪಲ್ಲಿ, ಗೌರಿಬಿದನೂರು, ದೇವನಹಳ್ಳಿ, ಹೊಸಕೋಟೆಯಲ್ಲಿ ನಮಗೆ ಹೆಚ್ಚಿನ ಮತಗಳು ದೊರೆಯಲಿವೆ ಎಂಬ ವಿಶ್ವಾಸ ಕೈ ಪಾಳೆಯದಲ್ಲಿ ವ್ಯಕ್ತವಾಗುತ್ತಿದೆ. ನಗರ ಪ್ರದೇಶಗಳಲ್ಲಿ ಮತದಾನ ಕಡಿಮೆಯಾಗಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆದಿರುವುದರಿಂದ ತನಗೆ ಲಾಭವಾಗಬಹುದು ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರ.

ದಲಿತರು, ಪರಿಶಿಷ್ಟರು, ಅಲ್ಪಸಂಖ್ಯಾತರು, ಕುರುಬರು ಮತ್ತು ಸಣ್ಣ ಸಮುದಾಯಗಳು ಮೊಯಿಲಿ ಅವರನ್ನು ಗೆಲುವಿನ ದಡ ಸೇರಿಸಲಿವೆ ಎಂಬ ಅಂದಾಜು ಕಾಂಗ್ರೆಸ್‌ ವಲಯದಲ್ಲಿ ವ್ಯಕ್ತವಾಗುತ್ತಿದ್ದರೆ, ಒಕ್ಕಲಿಗರು, ಬಲಿಜ ಮತ್ತು ಮೇಲ್ವರ್ಗದ ಮತಗಳ ಜತೆಗೆ ಜೆಡಿಎಸ್ ಮತಗಳು ಮತ್ತು ಹೊಸ ಮತದಾರರ ಮತಗಳು ಈ ಬಾರಿ ಬಿಜೆಪಿಗೆ ಗೆಲುವು ತಂದುಕೊಟ್ಟು ಮೊದಲ ಬಾರಿಗೆ ಕಾಂಗ್ರೆಸ್‌ ಕೋಟೆಯಲ್ಲಿ ಕಮಲದ ಖಾತೆ ತೆರೆಯಲು ನೆರವಾಗಲಿವೆ ಎಂಬ ಸಮೀಕರಣಗಳು ಹರಿದಾಡುತ್ತಿವೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ 16.58 ಲಕ್ಷ ಮತದಾರರ ಪೈಕಿ 12.63 ಲಕ್ಷ ಮತದಾರರು ಮತ ಚಲಾಯಿಸಿದ್ದರು. ಈ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಎಂ.ವೀರಪ್ಪ ಮೊಯಿಲಿ ಅವರು 4.24 ಲಕ್ಷ, ಬಿಜೆಪಿ ಅಭ್ಯರ್ಥಿ ಬಚ್ಚೇಗೌಡರು 4.15 ಲಕ್ಷ ಮತ್ತು ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ.ಕುಮಾರಸ್ವಾಮಿ ಅವರು 3.46 ಲಕ್ಷ ಮತಗಳನ್ನು ಗಳಿಸಿದ್ದರು.

ಈ ಬಾರಿ ಮತದಾರರ ಸಂಖ್ಯೆ 18.08 ಲಕ್ಷಕ್ಕೆ ಏರಿಕೆಯಾಗಿದೆ. ಈ ಪೈಕಿ 13.88 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಕಾಂಗ್ರೆಸ್‌ ಮತ್ತು ಬಿಜೆಪಿಯ ಸಾಂಪ್ರದಾಯಿಕ ಮತಗಳನ್ನು ಬಿಟ್ಟು, ಕಳೆದ ಬಾರಿ ಕುಮಾರಸ್ವಾಮಿ ಅವರಿಗೆ ಮತ ನೀಡಿದವರು ಮತ್ತು ಕಳೆದ ಐದು ವರ್ಷದಲ್ಲಿ ಹೆಸರು ನೋಂದಾಯಿಸಿಕೊಂಡ 1.32 ಲಕ್ಷ ಹೊಸ ಮತದಾರರಲ್ಲಿ ಮತದಾನ ಮಾಡಿರುವವರ ಒಲುವು ಯಾರತ್ತ ಹೆಚ್ಚು ವಾಲಿದೆಯೋ ಅವರು ಗೆಲ್ಲುವುದು ಖಚಿತ ಎಂಬ ಸಾಮಾನ್ಯ ಲೆಕ್ಕಾಚಾರವೊಂದು ಕ್ಷೇತ್ರದಲ್ಲಿ ಹರಿದಾಡುತ್ತಿದೆ.

ಸದ್ಯ ಕ್ಷೇತ್ರದಲ್ಲಿ ಸೋಲು–ಗೆಲುವಿನ ಲೆಕ್ಕಾಚಾರ ಜೋರಾಗಿಯೇ ನಡೆದಿದ್ದು, ಕುತೂಹಲ ತಣಿಯಲು ಒಂದು ತಿಂಗಳು ಕಾಯುವುದು ಅನಿವಾರ್ಯವಾಗಿದೆ. ಮೇ 23ರಂದು ಯಾರ ಭವಿಷ್ಯ ನಿಜವಾಗಲಿದೆ ಎಂದು ತಿಳಿಯಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !