ಚಿಕ್ಕಬಳ್ಳಾಪುರ: ಮೇ 13ಕ್ಕೆ ಕೋಚಿಮುಲ್ ಚುನಾವಣೆ

ಮಂಗಳವಾರ, ಮೇ 21, 2019
24 °C

ಚಿಕ್ಕಬಳ್ಳಾಪುರ: ಮೇ 13ಕ್ಕೆ ಕೋಚಿಮುಲ್ ಚುನಾವಣೆ

Published:
Updated:
Prajavani

ಚಿಕ್ಕಬಳ್ಳಾಪುರ: ಲೊಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ಆಡಳಿತ ಮಂಡಳಿ ಚುನಾವಣೆ ಗರಿಗೆದರಿದ್ದು, ಮೇ 13ಕ್ಕೆ ಚುನಾವಣೆ ಮುಹೂರ್ತ ನಿಗದಿಯಾಗಿದೆ.

ಕೋಚಿಮುಲ್ ಆಡಳಿತ ಮಂಡಳಿಗೆ ಕೋಲಾರ ಜಿಲ್ಲೆಯಲ್ಲಿ ಐದು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆರು ತಾಲ್ಲೂಕುಗಳಿಂದ ಒಟ್ಟು 11 ನೂತನ ನಿರ್ದೇಶಕರ ಆಯ್ಕೆ ನಡೆಯಲಿದೆ. ಜತೆಗೆ ಪ್ರತಿ ಜಿಲ್ಲೆಗೂ ತಲಾ ಒಂದು ಮಹಿಳಾ ನಿರ್ದೇಶಕರ ಆಯ್ಕೆ ನಡೆಯಲಿದೆ. ಏಪ್ರಿಲ್ 27ರ ಒಳಗೆ ಚುನಾವಣೆ ಅಧಿಸೂಚನೆ ಹೊರ ಬೀಳುವ ನಿರೀಕ್ಷೆ ಇದೆ. ಸದ್ಯ ಕೋಚಿಮುಲ್ ಆಡಳಿತ ಮಂಡಳಿ ಕಾಂಗ್ರೆಸ್ ವಶದಲ್ಲಿದ್ದು ಮಾಲೂರು ಕ್ಷೇತ್ರದ ಶಾಸಕ ಕೆ.ವೈ.ನಂಜೇಗೌಡ ಅವರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಳೆದ ಬಾರಿಯ ಕೋಚಿಮುಲ್ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಜೆಡಿಎಸ್‌, ಗೌರಿಬಿದನೂರು, ಗುಡಿಬಂಡೆ ಮತ್ತು ಬಾಗೇಪಲ್ಲಿಯಲ್ಲಿ ಕಾಂಗ್ರೆಸ್‌ ಮತ್ತು ಚಿಂತಾಮಣಿಯಲ್ಲಿ ಪಕ್ಷೇತರ ಅಭ್ಯರ್ಥಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಮಹಿಳಾ ನಿರ್ದೇಶಕಿ ಸ್ಥಾನ ಕಾಂಗ್ರೆಸ್ ಪಾಲಾಗಿತ್ತು.

ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಜೆಡಿಎಸ್‌ನಿಂದ ಕೋಚಿಮುಲ್‌ಗೆ ಆಯ್ಕೆಯಾಗಿದ್ದ ಕೆ.ವಿ.ನಾಗರಾಜ್‌ ಅವರು ಕಳೆದ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ ಸೇರಿದ ಪರಿಣಾಮ ಜಿಲ್ಲೆಯಲ್ಲಿ ಜೆಡಿಎಸ್‌ ಒಂದು ಸ್ಥಾನಕ್ಕೆ ಇಳಿದಿತ್ತು. ಕೈತಪ್ಪಿರುವ ಆ ಸ್ಥಾನವನ್ನು ಮರಳಿ ಪಡೆಯಲು ಜೆಡಿಎಸ್‌ ಪಾಳೆಯದಲ್ಲಿ ಚುರುಕಿನ ತಂತ್ರಗಾರಿಕೆ ನಡೆದಿವೆ.

ಚಿಕ್ಕಬಳ್ಳಾಪುರದಲ್ಲಿ ಮಂಗಳವಾರ ಜೆಡಿಎಸ್ ಮುಖಂಡರು ಕೋಚಿಮುಲ್ ಚುನಾವಣೆಗೆ ಸಂಬಂಧಿಸಿದಂತೆ ಸಭೆ ನಡೆಸಿದರು. ಸಭೆಯಲ್ಲಿ ಚದುಲಪುರ ನಾರಾಯಣಸ್ವಾಮಿ, ಭರಣಿ ವೆಂಕಟೇಶ್ ಸೇರಿದಂತೆ ನಾಲ್ಕೈದು ಜನರು ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು ಎನ್ನಲಾಗಿದೆ. ಮುಖಂಡರು ಕೊನೆಗೆ ಅಳೆದು ತೂಗಿ ಭರಣಿ ವೆಂಕಟೇಶ್‌ ಅವರನ್ನು ಕಣಕ್ಕೆ ಇಳಿಸಲು ನಿರ್ಧರಿಸಿದ್ದಾರೆ.

ಸದ್ಯದ ಸ್ಥಿತಿಯಲ್ಲಿ ಹಾಲಿ ನಿರ್ದೇಶಕರೇ ಮುಂದಿನ ಚುನಾವಣೆಗೂ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಚಿಂತಾಮಣಿ ಕ್ಷೇತ್ರದಲ್ಲಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಅವರು ಬೆಂಬಲಿತ ಪಕ್ಷೇತರ ನಿರ್ದೇಶಕ ಊಲವಾಡಿ ಅಶ್ವತ್ಥನಾರಾಯಣಬಾಬು ಮತ್ತೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದ್ದು ಅವರ ಪ್ರತಿಸ್ಪರ್ಧಿಯಾಗಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ತಳಗವಾರ ರಾಜಗೋಪಾಲ್ ಅವರು ಅಖಾಡಕ್ಕೆ ಇಳಿಯುವ ಲಕ್ಷಣಗಳು ಗೋಚರಿಸುತ್ತಿವೆ.

ಶಿಡ್ಲಘಟ್ಟದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ, ಜೆಡಿಎಸ್‌ನ ಬಂಕ್ ಮುನಿಯಪ್ಪ ಹಾಲಿ ನಿರ್ದೇಶಕರಾಗಿದ್ದು, ಈ ಬಾರಿಯು ಅವರೇ ಸ್ಪರ್ಧಿಸುತ್ತಾರಾ ಅಥವಾ ಬೇರೆಯವರಿಗೆ ಅವಕಾಶ ನೀಡುತ್ತಾರಾ ಎಂದು ಈವರೆಗೆ ತಿಳಿದು ಬಂದಿಲ್ಲ. ಒಂದೊಮ್ಮೆ, ಮುನಿಯಪ್ಪ ಅವರೇ ಪುನಃ ಸ್ಪರ್ಧೆಗಿಳಿದರೆ ಅವರ ವಿರುದ್ಧ ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ ಅವರು ಸ್ಪರ್ಧಿಸುವ ಸಾಧ್ಯತೆ ಇದೆ.

ಇನ್ನು, ಗೌರಿಬಿದನೂರು ಕ್ಷೇತ್ರದಲ್ಲಿ ಹಾಲಿ ನಿರ್ದೇಶಕ ಕಾಂತರಾಜ್ ಅವರು ಸ್ಪರ್ಧಿಸುವುದು ಖಚಿತವಾಗಿದ್ದು ಅವರ ಪ್ರತಿಸ್ಪರ್ಧಿಯಾಗಿ ಜೆಡಿಎಸ್, ಬಿಜೆಪಿಯಲ್ಲಿ ಯಾರು ಸ್ಪರ್ಧಿಸುತ್ತಾರೆ ಎನ್ನುವುದು ಇನ್ನೂ ನಿಗೂಢವಾಗಿದೆ. ಗುಡಿಬಂಡೆಯಲ್ಲಿ ಹಾಲಿ ನಿರ್ದೇಶಕ ಕಾಂಗ್ರೆಸ್, ಅಶ್ವತ್ಥರೆಡ್ಡಿ ಅವರಿಗೆ ಕಾಂಗ್ರೆಸ್‌ನಲ್ಲಿ ಸಾಕಷ್ಟು ಆಕಾಂಕ್ಷಿಗಳು ಇರುವುದು ತಲೆನೋವಾಗಿದೆ.

ಬಾಗೇಪಲ್ಲಿ ತಾಲ್ಲೂಕಿನಲ್ಲಿ ಕೂಡ ಈ ಬಾರಿ ಆಕಾಂಕ್ಷಿಗಳ ದಂಡು ಹೆಚ್ಚಾಗಿದೆ. ಹೀಗಾಗಿ ಯಾರಿಗೆ ಅವಕಾಶ ಮಾಡಿಕೊಡಬೇಕೆಂಬ ವಿಚಾರದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಪಾಳೆಯಗಳಲ್ಲಿ ಗೊಂದಲ ಮನೆ ಮಾಡಿದೆ ಎನ್ನಲಾಗಿದೆ. ಹಾಲಿ ನಿರ್ದೇಶಕರು ಮತ್ತೊಮ್ಮೆ ತಮಗೇ ಅವಕಾಶ ಮಾಡಿಕೊಡಬೇಕು ಎಂದು ಪಟ್ಟು ಹಿಡಿದಿರುವುದರಿಂದ ಕೋಚಿಮುಲ್ ಚುನಾವಣೆಗೆ ಟಿಕೆಟ್ ಕದನ ತಾರಕಕ್ಕೇರುವ ಲಕ್ಷಣಗಳು ಕಾಣುತ್ತಿವೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !