ಕೂಡಲಸಂಗಮ: ಬಂಗಾರ ಕಳಸ ಹೊತ್ತರು, ದರ್ಶನ ಪಡೆದರು!

ಭಾನುವಾರ, ಮೇ 26, 2019
27 °C

ಕೂಡಲಸಂಗಮ: ಬಂಗಾರ ಕಳಸ ಹೊತ್ತರು, ದರ್ಶನ ಪಡೆದರು!

Published:
Updated:
Prajavani

ಕೂಡಲಸಂಗಮ: ಸಂಗಮನಾಥನ ರಥೋತ್ಸವ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಬಂಗಾರ ಕಳಶ ಸ್ಪರ್ಶಿಸಿ ಸಂಭ್ರಮಪಟ್ಟರು. ಕೆಲವರು ಕಳಶ ಹೊತ್ತು ನಡೆದರೆ ಇನ್ನೂ ಕೆಲವರು ಸ್ಪರ್ಶಿಸಿದರು.

ಜಿಲ್ಲಾ ಖಜಾನೆಯಲ್ಲಿ ವರ್ಷವಿಡಿ ಭದ್ರತೆಯಲ್ಲಿ ಇಡಲಾಗುವ  ಸಂಗಮೇಶ್ವರನ ಬಂಗಾರ ಕಳಶ ಜಾತ್ರೆಯ ವೇಳೆ ಮೂರು ದಿನ ಮಾತ್ರ ಭಕ್ತರ ದರ್ಶನಕ್ಕೆ ಸಿಗುತ್ತದೆ. ಮಂಗಳವಾರ ಬೆಳಗ್ಗೆ 10 ಗಂಟೆಗೆ ಬಾಗಲಕೋಟೆ ತಹಶೀಲ್ದಾರ್ ಕಾರ್ಯಾಲಯದಲ್ಲಿ ಕಳಶದ ಬಾಬುದಾರರಾದ ಬೂದೂರಿ, ಗೊರಚಿಕ್ಕನವರ, ಪೂಜಾರಿ ಮನೆತನದರು ಕಳಸ ಪಡೆದರು.

ನಂತರ ಪೋಲಿಸ್ ಭದ್ರತೆಯಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ರವರೆಗೆ ಬಾಗಲಕೋಟೆಯ ಹಳೆತಹಶೀಲ್ದಾರ್ ಕಾರ್ಯಾಲಯದಿಂದ ವಲ್ಲಭಬಾಯಿ ಚೌಕ, ಕಪಡಾ ಬಜಾರ್‌ನಲ್ಲಿ ಮೆರವಣಿಗೆ ಮಾಡಿ ಪಾದಯಾತ್ರೆಯ ಮೂಲಕ ಇಡೀ ರಾತ್ರಿ ಕಾಲ್ನಡಿಗೆಯಲ್ಲಿ ಹಳೆಮಲ್ಲಾಪೂರ, ಕಿರಸೂರ, ಭಗವತಿ, ಹಳ್ಳೂರ, ಬೇವೂರ, ಚವಡಕಮ್ಮಲದಿನ್ನಿ ಮಾರ್ಗದ ಮೂಲಕ 47 ಕಿ.ಮೀ ದೂರ ಕ್ರಮಿಸಿ ಬುಧವಾರ ಬೆಳಗ್ಗೆ 9ಕ್ಕೆ ಕೂಡಲಸಂಗಮ ತಲುಪಿತು.

ಮಾರ್ಗದುದ್ದಕ್ಕೂ ಆಯಾ ಗ್ರಾಮಗಳ ಭಕ್ತರು ಕಳಶ ಸ್ವಾಗತಿಸಿ ಪೂಜೆ ಮೆರವಣಿಗೆ ಮಾಡಿ ಮುಂದಿನ ಗ್ರಾಮಕ್ಕೆ ಕಳುಹಿಸಿದರು. ಪಾದ ಯಾತ್ರಿಗಳಿಗೆ ಮಾರ್ಗದುದ್ದಕ್ಕೂ ಭಕ್ತರು ಪ್ರಸಾದ, ತಂಪು ಪಾನೀಯ, ಹಣ್ಣುಗಳನ್ನು ಕೊಟ್ಟರು. ಪಾದಯಾತ್ರೆಯಲ್ಲಿ ಸಾವಿರಾರು ಮಂದಿ ಇದ್ದರು.

9 ಗಂಟೆಗೆ ಸುಕ್ಷೇತ್ರಕ್ಕೆ ಬರುತ್ತಿದ್ದಂತೆಯೇ ವಿವಿಧ ಗ್ರಾಮಗಳಿಂದ ಬಂದಿದ್ದ ಕಲಾ ತಂಡಗಳ ಕಲಾವಿದರು ನೃತ್ಯ ಪ್ರದರ್ಶನ ಮಾಡುತ್ತ ಸಂಗಮೇಶ್ವರ ದೇವಾಲಯಕ್ಕೆ ಬಂದರು. ಗ್ರಾಮದ ಮಹಿಳೆಯರು ಆರತಿಯೊಂದಿಗೆ ಕಳಶದ ಹಿಂದೆ ಐದು ಸುತ್ತು ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಿ ದೇವಾಲಯದಿಂದ ಬಸವೇಶ್ವರ ವೃತ್ತದ ಮೂಲಕ ಗ್ರಾಮದ ಕಳಶದ ಕಟ್ಟೆಯವರೆಗೆ ಮೆರವಣಿಗೆ ಮೂಲಕ ತಂದರು. ನಂತರ ಗ್ರಾಮಸ್ಥರು ಕಳಶಕ್ಕೆ ದೀಡ್ ನಮಸ್ಕಾರ ಹಾಕುವ ಮೂಲಕ ತಮ್ಮ ಭಕ್ತಿ ತೋರ್ಪಡಿಸಿದರು.

‘ಸಂಗಮೇಶ್ವರ ಜಾತ್ರೆ ದಿನ ಮಾತ್ರ ಕೂಡಲಸಂಗಮಕ್ಕೆ ಬರುವ ಬಂಗಾರದ ಕಳಶವನ್ನು ನೊಡುವುದು ಭಾಗ್ಯ. ನಮ್ಮ ಬಯಕೆ ಈಡೇರಿರುವುದಕ್ಕಾಗಿ ಕಳಶದ ಜೊತೆ ಬರುತ್ತೇವೆ’ ಎಂದು ಪಾದಯಾತ್ರೆಯಲ್ಲಿದ್ದ ಭಕ್ತರು ಹೇಳಿದರು.

ಕಳಶ ಹೊರುವ ಇಚ್ಛೆ ಹೊಂದಿದ ಎಲ್ಲರಿಗೂ ಹೊತ್ತುಕೊಳ್ಳಲು ಪಾದಯಾತ್ರೆಯಲ್ಲಿ ಅವಕಾಶ ಇತ್ತು. ಸಂಕಲ್ಪ ಮಾಡಿಕೊಂಡ ಆಸೆ ಈಡೇರಿದ್ದಕ್ಕಾಗಿ ಕೆಲವು ಭಕ್ತರು ಪಾದಯಾತ್ರೆಯಲ್ಲಿ ಬಂದರೆ ಇನ್ನೂ ಕೆಲವರು ಸಂಕಲ್ಪ ಮಾಡಿಕೊಳ್ಳಲು ಬಂದಿದ್ದರು.

***

ವರ್ಷಕ್ಕೆ ಒಂದು ಬಾರಿ ಮಾತ್ರ ಭಕ್ತರಿಗೆ ಕಳಸದ ದರ್ಶನದ ಭಾಗ್ಯ ದೊರೆಯುವುದು. ನಾನು ಕಳೆದ ೩೦ ವರ್ಷದಿಂದ ಕಳಸದ ಜೋತೆ ಪಾದಯಾತ್ರೆಯ ಮೂಲಕ ಜಾತ್ರೆಗೆ ಬರುತ್ತೆನೆ. ಬದುಕು ಸುಂದರಮಯವಾಗಿದೆ. ನಾನು ಸಂಗಮನಾಥನಿಗೆ ಬೇಡಿಕೊಂಡ ಬೇಡಿಕೆಗಳು ಇಡೇರಿವೆ.

– ಸಂಗಪ್ಪ ಮಾಟೂರ, ಕೂಡಲಸಂಗಮ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !