ಮಂಗಳವಾರ, ಏಪ್ರಿಲ್ 7, 2020
19 °C
ಶ್ರೀಲಂಕಾ ಸರಣಿ ಸ್ಫೋಟ: 11 ಭಾರತೀಯರ ಸಾವು, ಶೋಧ ಕಾರ್ಯಕ್ಕೆ ಸೇನೆ

ಡ್ರೋನ್‌ ನಿಷೇಧಿಸಿದ ಶ್ರೀಲಂಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬೊ: ಶ್ರೀಲಂಕಾದ ವಾಯುಪ್ರದೇಶದಲ್ಲಿ ಡ್ರೋನ್‌ ಮತ್ತು ಮಾನವರಹಿತ ಯುದ್ಧ ವಿಮಾನಗಳ ಹಾರಾಟವನ್ನು ನಿಷೇಧಿಸಲಾಗಿದೆ.

ಈಸ್ಟರ್‌ ದಿನದಂದು ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟದಿಂದಾಗಿ ಈ ಕ್ರಮಕೈಗೊಳ್ಳಲಾಗಿದೆ. ಮುಂದಿನ ಆದೇಶದವರೆಗೆ ಈ ಕ್ರಮ ಜಾರಿಯಲ್ಲಿರುತ್ತದೆ ಎಂದು ಶ್ರೀಲಂಕಾ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.

ದೇಶದಲ್ಲಿನ ಪ್ರಸ್ತುತ ಭದ್ರತಾ ಪರಿಸ್ಥಿತಿಯನ್ನು ಅವಲೋಕಿಸಿ ನಿಷೇಧ ಹೇರಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.

 ಮತ್ತೆ 16 ಮಂದಿ ಬಂಧನ: ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ಮತ್ತೆ 16 ಮಂದಿಯನ್ನು ಬಂಧಿಸಲಾಗಿದೆ. ಇದರಿಂದಾಗಿ ಇದುವರೆಗೆ ಒಟ್ಟು 76 ಮಂದಿಯನ್ನು ಬಂಧಿಸಿದಂತಾಗಿದೆ. ಈ ಪ್ರಕರಣದಲ್ಲಿ ಭಾಗಿಯಾದ ಶಂಕಿತರಿಗಾಗಿ ದೇಶದ ವಿವಿಧೆಡೆ ಸೇನೆಯ ನೆರವಿನೊಂದಿಗೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.

‘ಸುಮಾರು 6,300 ಯೋಧರನ್ನು ಶೋಧ ಕಾರ್ಯಕ್ಕೆ ನಿಯೋಜಿಸಲಾಗಿದೆ. ವಾಯುಪಡೆಯಿಂದ 1,000 ಮತ್ತು ನೌಕಾಪಡೆಯ 100 ಯೋಧರು ಇದರಲ್ಲಿ ಸೇರಿದ್ದಾರೆ’ ಎಂದು ಸೇನೆಯ ವಕ್ತಾರ ಬ್ರಿಗೇಡಿಯರ್‌ ಸುಮಿತ್‌ ಅಟಪಟ್ಟು ತಿಳಿಸಿದ್ದಾರೆ.

11 ಭಾರತೀಯರ ಸಾವು: ಸ್ಫೋಟದಲ್ಲಿ ತೀವ್ರ ಗಾಯಗೊಂಡಿದ್ದ ಇನ್ನೊಬ್ಬ ಭಾರತೀಯ ಗುರುವಾರ ಸಾವಿಗೀಡಾಗಿದ್ದಾರೆ. ಇದರಿಂದ ಸಾವಿಗೀಡಾದ ಭಾರತೀಯರ ಸಂಖ್ಯೆ 11ಕ್ಕೆ ಏರಿದೆ. ಸ್ಫೋಟದಲ್ಲಿ ಇದುವರೆಗೆ 36 ವಿದೇಶಿಯರು ಸಾವಿಗೀಡಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

 ಸಾಮೂಹಿಕ ಪ್ರಾರ್ಥನೆ ಇಲ್ಲ:  ಪರಿಸ್ಥಿತಿ ಸುಧಾರಣೆಯಾಗುವವರೆಗೂ ಎಲ್ಲ ಸಾರ್ವಜನಿಕ ಸೇವೆಗಳನ್ನು ಕ್ಯಾಥೊಲಿಕ್‌ ಚರ್ಚ್‌ಗಳು ಸ್ಥಗಿತಗೊಳಿಸಿವೆ.

’ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ದೇಶದ ಪುನರ್‌ ನಿರ್ಮಾಣ ಕಾರ್ಯದಲ್ಲಿ ತೊಡಗಬೇಕು’ ಎಂದು ಕ್ಯಾಥೋಲಿಕ್‌ ಚರ್ಚ್‌ಗಳ ಮುಖ್ಯಸ್ಥ ಮಾಲ್ಕಮ್‌ ಕಾರ್ಡಿನಲ್‌ ರಂಜೀತ್‌ ಕೋರಿದ್ದಾರೆ.

ಆರು ಶಂಕಿತರ ಚಿತ್ರ ಬಿಡುಗಡೆ: ಸರಣಿ ಸ್ಫೋಟದಲ್ಲಿ ಭಾಗಿಯಾದ ಮೂವರು ಮಹಿಳೆಯರು ಸೇರಿದಂತೆ ಆರು ಶಂಕಿತರ ಚಿತ್ರಗಳನ್ನು ಗುರುವಾರ ಬಿಡುಗಡೆ ಮಾಡಲಾಗಿದೆ.

ಶಂಕಿತರ ಹೆಸರುಗಳನ್ನು ಸಹ ಪೊಲೀಸರು ಬಹಿರಂಗಪಡಿಸಿದ್ದಾರೆ. ಇವರ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರನ್ನು ಕೋರಿದ್ದಾರೆ.

ವಾರಾಂತ್ಯದಲ್ಲಿ ಮತ್ತೆ ದಾಳಿ ನಡೆಯುವ ಸಾಧ್ಯತೆಗಳಿರುವುದರಿಂದ ಚರ್ಚ್‌ಗಳಿಗೆ ಭೇಟಿ ನೀಡದಂತೆ ಶ್ರೀಲಂಕಾದಲ್ಲಿನ ಅಮೆರಿಕ ರಾಯಭಾರಿ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ. ಸಾಧ್ಯವಾದಷ್ಟು ಸುರಕ್ಷಿತ ಸ್ಥಳಗಳಲ್ಲಿರಬೇಕು ಎಂದು ಸಲಹೆ ನೀಡಿದೆ.

ಶ್ರೀಮಂತ ಸಹೋದರರಿಂದ ದುಷ್ಕೃತ್ಯ

ಕೊಲಂಬೊ: ಬಾಂಬ್‌ ಸ್ಫೋಟ ನಡೆಸಿದ ಇಬ್ಬರು ಸಹೋದರರು ಶ್ರೀಮಂತ ಕುಟುಂಬದ ಹಿನ್ನೆಲೆಯವರಾಗಿದ್ದು, ಒಬ್ಬನಿಗೆ ಐಎಸ್‌ ಸಂಘಟನೆ ಜತೆ ಸಂಪರ್ಕ ಇರುವುದು ಗೊತ್ತಾಗಿದೆ.

ತಾಮ್ರದ ಕಾರ್ಖಾನೆ ಮಾಲೀಕ 33 ವರ್ಷದ ಇನ್ಶಾಫ್‌ ಇಬ್ರಾಹಿಂ ಶಾಂಗ್ರಿ–ಲಾ ಹೋಟೆಲ್‌ನಲ್ಲಿ ಆತ್ಮಾಹುತಿ ದಾಳಿ ನಡೆಸಿದ್ದ. ಪೊಲೀಸರು ಈತನ ಮನೆಯ ಶೋಧ ಕಾರ್ಯಕ್ಕೆ ತೆರಳಿದಾಗ ಇನ್ನೊಬ್ಬ ಕಿರಿಯ ಸಹೋದರ ಬಾಂಬ್‌ ಸ್ಫೋಟಿಸಿದ. ಸ್ಥಳದಲ್ಲೇ ಆತನ ಜತೆಗೆ ಪತ್ನಿ ಮತ್ತು ಮೂವರು ಮಕ್ಕಳು ಸಾವಿಗೀಡಾದರು.

ಈ ಸಹೋದರರ ತಂದೆ ಮೊಹಮ್ಮದ್‌ ಇಬ್ರಾಹಿಂ ಅವರನ್ನು ಗುರುವಾರ ಬಂಧಿಸಲಾಗಿದೆ. ಮಸಾಲಾ ಪದಾರ್ಥಗಳ ವ್ಯಾಪಾರದಲ್ಲಿ ಖ್ಯಾತಿ ಪಡೆದಿರುವ ಇಬ್ರಾಹಿಂ ಸಾಮಾಜಿಕ ಸೇವೆಗಾಗಿ ಗುರುತಿಸಿಕೊಂಡಿದ್ದಾರೆ. ಮಕ್ಕಳಿಗೆ ನೆರವು ಮತ್ತು ಪ್ರಚೋದನೆ ನೀಡಿದ ಆರೋಪಕ್ಕಾಗಿ ಇವರನ್ನು ಬಂಧಿಸಲಾಗಿದೆ.

‘ಬಡವರಿಗೆ ಮೊಹಮ್ಮದ್‌ ಇಬ್ರಾಹಿಂ ಅಪಾರ ನೆರವು ನೀಡಿದ್ದಾರೆ. ಸಮಾಜ ಸೇವೆಗೆ ಅವರು ಖ್ಯಾತರಾಗಿದ್ದಾರೆ. ಇಂಥವರ ಮಕ್ಕಳು ದುಷ್ಕೃತ್ಯ ಎಸಗಿದ್ದಾರೆ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಇವರಿಂದಾಗಿ ಎಲ್ಲ ಮುಸ್ಲಿಮರನ್ನು ಅನುಮಾನದಿಂದ ನೋಡುವಂತಾಗಿದೆ’ ಎಂದು ಇಬ್ರಾಹಿಂ ನೆರೆ ಮನೆಯಲ್ಲಿರುವ ಫಾತೀಮಾ ಫಜ್ಲಾ ಕಳವಳ ವ್ಯಕ್ತಪಡಿಸಿದರು.

ಇನ್ಶಾಫ್‌ ಇಬ್ರಾಹಿಂ ಸಹೋದರ 31 ವರ್ಷದ ಇಲ್ಹಾಮ್‌ ಇಬ್ರಾಹಿಂ ನ್ಯಾಷನಲ್‌ ತೌಹೀದ್‌ ಜಮಾತ್‌ (ಎನ್‌ಟಿಜೆ) ಸಭೆಗಳಲ್ಲಿ ಭಾಗವಹಿಸುತ್ತಿದ್ದ.

ಮಸೀದಿಯಲ್ಲಿ ಮುಸ್ಲಿಂ ನಿರಾಶ್ರಿತರು

ಕೊಲಂಬೊ (ಎಎಫ್‌ಪಿ):  ಶ್ರೀಲಂಕಾದ ಪಶ್ಚಿಮ ಪ್ರದೇಶದ ನೂರಾರು ಮುಸ್ಲಿಂ ನಿರಾಶ್ರಿತರು ಮಸೀದಿಗಳು ಮತ್ತು ಪೊಲೀಸ್‌ ಠಾಣೆಗಳಲ್ಲಿ ಆಶ್ರಯ ಪಡೆದಿದ್ದಾರೆ.

 ಈಸ್ಟರ್‌ ದಿನದಂದು ನಡೆದ ಸರಣಿ ಸ್ಫೋಟಕ್ಕೆ ಪ್ರತೀಕಾರವಾಗಿ ದಾಳಿ ನಡೆಯುವ ಸಾಧ್ಯತೆಯ ಭೀತಿ ಎದುರಾಗಿರುವುದಿಂದ ಹಲವು ಮುಸ್ಲಿಮರು ಮನೆ ತೊರೆಯುತ್ತಿದ್ದಾರೆ.

ಬೇರೆ ಬೇರೆ ದೇಶಗಳಿಂದ ಬಂದು ನೆಗೊಂಬೊ ನಗರದಲ್ಲಿ ನೆಲೆಸಿದ್ದ ಅಹ್ಮದಿ ಮುಸ್ಲಿಮರನ್ನು ಅಲ್ಲಿನ ಭೂಮಾಲೀಕರು ಬಲವಂತದಿಂದ ತೆರವುಗೊಳಿಸಿದ್ದಾರೆ.

ಈ ನಿರಾಶ್ರಿತರು ಪಾಕಿಸ್ತಾನ, ಅಫ್ಗಾನಿಸ್ತಾನ, ಯೆಮೆನ್‌ ಮತ್ತು ಇರಾನ್‌ ದೇಶದವರು. ಮೂಲಭೂತವಾದಿ ಮುಸ್ಲಿಮರಿಂದ ಅಹ್ಮದಿ ಮುಸ್ಲಿಮರು ಈ ದೇಶಗಳಲ್ಲಿ ದಾಳಿಗೆ ಒಳಗಾಗಿದ್ದಾರೆ. ಅಹ್ಮದಿ ಮುಸ್ಲಿಮರನ್ನು ನಿಜವಾದ ಮುಸ್ಲಿಮರಲ್ಲ ಎನ್ನುವುದು ಮೂಲಭೂತವಾದಿಗಳ ಪ್ರತಿಪಾದನೆಯಾಗಿದೆ.

‘ಶ್ರೀಲಂಕಾದಲ್ಲಿ ನೆಲೆಸಿದ್ದ ನಿರಾಶ್ರಿತರು ಮತ್ತೊಮ್ಮೆ ನಿರಾಶ್ರಿತರಾಗಿದ್ದಾರೆ. ಎರಡನೇ ಬಾರಿ ಈಗ ಅವರನ್ನು ಸ್ಥಳಾಂತರಿಸಲಾಗಿದೆ.  ಬಾಂಬ್‌ ಸ್ಫೋಟಕ್ಕೆ ಸೇಡು ತೀರಿಸಿಕೊಳ್ಳುವವರು ಮುಸ್ಲಿಮರು ಇರುವ ಸ್ಥಳಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಹೀಗಾಗಿ, ಭೂಮಾಲೀಕರು ಅವರನ್ನು ತೆರವುಗೊಳಿಸುತ್ತಿದ್ದಾರೆ’ ಎಂದು ಮಾನವ ಹಕ್ಕುಗಳ ಸಂಘಟನೆಯ ರುಕಿ ಫರ್ನಾಂಡೊ ಹೇಳಿದ್ದಾರೆ.

ಹಲವರು ಸ್ವಯಂ ಇಚ್ಛೆಯಿಂದ ಸುರಕ್ಷತಾ ಸ್ಥಳಗಳಿಗೆ ತೆರಳುತ್ತಿದ್ದಾರೆ. ನೆಗೊಂಬೊದ ಮಸೀದಿಯಲ್ಲಿ ಸುಮಾರು 700 ಮಂದಿ ಹಾಗೂ ಸುಮಾರು 120 ಮಂದಿ ಪೊಲೀಸ್‌ ಠಾಣೆಗಳಲ್ಲಿ ಆಶ್ರಯ ಪಡೆದಿದ್ದಾರೆ.

ರಕ್ಷಣಾ ಕಾರ್ಯದರ್ಶಿ ರಾಜೀನಾಮೆ

ಶ್ರೀಲಂಕಾ ರಕ್ಷಣಾ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೊ ತಮ್ಮ ಹುದ್ದೆಗೆ ಗುರುವಾರ ರಾಜೀನಾಮೆ ನೀಡಿದ್ದಾರೆ.

ಗುಪ್ತಚರ ಮಾಹಿತಿ ಇದ್ದರೂ ಸರಣಿ ಸ್ಫೋಟಗಳನ್ನು ತಡೆಯಲು ವಿಫಲವಾಗಿದ್ದರಿಂದ ರಾಜೀನಾಮೆ ನೀಡುವಂತೆ  ಅಧ್ಯಕ್ಷ ಮೈತ್ರಿಪಾಲ್‌ ಸಿರಿಸೇನಾ ಬುಧವಾರ ಸೂಚಿಸಿದ್ದರು.

ಮಸೀದಿಗೆ ಭದ್ರತೆ

ಶುಕ್ರವಾರದ ಪ್ರಾರ್ಥನೆ ವೇಳೆ ದಾಳಿ ನಡೆಯುವ ಸಾಧ್ಯತೆಗಳಿರುವುದರಿಂದ ಕೊಲಂಬೊದ ಮಸೀದಿಗಳ ಸುತ್ತ ಬಿಗಿ ಭದ್ರತೆ ಮಾಡಲಾಗಿದೆ. ‘ಈಸ್ಟರ್‌ ದಿನದಂದು ದಾಳಿ ನಡೆಸಿದ ಗುಂಪು ಮತ್ತೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ನನಗೆ ಮಾಹಿತಿ ನೀಡಿದೆ. ಹೀಗಾಗಿ, ಎಚ್ಚರಿಕೆವಹಿಸುವಂತೆ ಸೂಚಿಸಲಾಗಿದೆ’ ಎಂದು ಕೊಲಂಬೊದ ದೇವಟಗಹಾ ಮಸೀದಿ ಅಧ್ಯಕ್ಷ ತಿಳಿಸಿದ್ದಾರೆ.

ವೀಸಾ ನೀಡುವ ವ್ಯವಸ್ಥೆ ಸ್ಥಗಿತ

ಶ್ರೀಲಂಕಾಗೆ ಬಂದ ನಂತರ ಸ್ಥಳದಲ್ಲೇ ವೀಸಾ ನೀಡುವ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ‘ಸದ್ಯ 39 ದೇಶಗಳ ನಾಗರಿಕರಿಗೆ ಶ್ರೀಲಂಕಾಗೆ ಬಂದ ಬಳಿಕ ವೀಸಾ ನೀಡುವ ವ್ಯವಸ್ಥೆ ಇದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ  ಈ ಸೌಲಭ್ಯವನ್ನು ತಡೆಹಿಡಿಯಲಾಗಿದೆ’ ಎಂದು ಪ್ರವಾಸೋದ್ಯಮ ಸಚಿವ ಜಾನ್‌ ಅಮರತುಂಗಾ ತಿಳಿಸಿದ್ದಾರೆ.

‘ಸರಣಿ ಸ್ಫೋಟದ ಸಂಚು ರೂಪಿಸಿರುವವರಿಗೆ ಅಂತರರಾಷ್ಟ್ರೀಯ ಸಂಪರ್ಕ ಇರುವುದು ತನಿಖೆಯಿಂದ ಗೊತ್ತಾಗಿದೆ. ಹೀಗಾಗಿ, ವೀಸಾ ಸೌಲಭ್ಯ ದುರುಪಯೋಗವಾಗದಂತೆ ಈ ಕ್ರಮಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು