ಸೋಮವಾರ, ಡಿಸೆಂಬರ್ 9, 2019
17 °C
ಐಪಿಎಲ್ ಕ್ರಿಕೆಟ್

ಕೋಟ್ಲಾದಲ್ಲಿ ಮುಗ್ಗರಿಸಿದ ಕೊಹ್ಲಿ ಬಳಗ: ಅಗ್ರಪಟ್ಟಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್‌

Published:
Updated:

ನವದೆಹಲಿ: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಪ್ಲೇ ಆಫ್‌ ಪ್ರವೇಶದ ಸಣ್ಣ ಅವಕಾಶವನ್ನೂ ಭಾನುವಾರ ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಹೊಸಕಿ ಹಾಕಿತು.

ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡವು 16 ರನ್‌ಗಳಿಂದ ಸೋತಿತು. ಇದರೊಂದಿಗೆ ಡೆಲ್ಲಿ ತಂಡವು ಪಾಯಿಂಟ್ ಪಟ್ಟಿಯ ಅಗ್ರ ನಾಲ್ಕರಲ್ಲಿ ತನ್ನ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿತು.

ಟಾಸ್ ಗೆದ್ದ ಡೆಲ್ಲಿ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಶಿಖರ್ ಧವನ್ (50; 37ಎಸೆತ, 5ಬೌಂಡರಿ, 2ಸಿಕ್ಸರ್) ಮತ್ತು ಶ್ರೇಯಸ್ ಅಯ್ಯರ್ (52; 37ಎಸೆತ, 2ಬೌಂಡರಿ, 3ಸಿಕ್ಸರ್) ಅವರ ಅರ್ಧಶತಕಗಳ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 187 ರನ್‌ ಗಳಿಸಿತು.

ಗುರಿ ಬೆನ್ನತ್ತಿದ ಆರ್‌ಸಿಬಿಗೆ  ಪಾರ್ಥಿವ್ ಪಟೇಲ್ (39; 20ಎ, 7ಬೌಂ,1ಸಿ) ಮತ್ತು ನಾಯಕ ವಿರಾಟ್ ಕೊಹ್ಲಿ (23; 17ಎ, 2ಬೌಂ, 1ಸಿ) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 5.5 ಓವರ್‌ಗಳಲ್ಲಿ 63 ರನ್‌ ಗಳಿಸಿದ್ದರು. ಆದರೆ ಈ ಗಟ್ಟಿ ಅಡಿಪಾಯದ ಮೇಲೆ ಗೆಲುವಿನ ಸೌಧ ಕಟ್ಟುವಲ್ಲಿ ಮಧ್ಯಮ ಕ್ರಮಾಂಕ ವಿಫಲವಾಯಿತು. ಇದರಿಂದಾಗಿ ತಂಡವು  20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 171 ರನ್‌ ಗಳಿಸಿತು.

12 ಪಂದ್ಯಗಳನ್ನು ಆಡಿರುವ ಆರ್‌ಸಿಬಿಯು ಮೊದಲ ಆರರಲ್ಲಿ ಸತತ ಸೋಲು ಅನುಭವಿಸಿತ್ತು.

ನಂತರ ಏಳನೇ ಪಂದ್ಯ ಗೆದ್ದಿತ್ತು. ಎಂಟನೇಯದ್ದರಲ್ಲಿ ಸೋತಿತ್ತು. ಅದರ ನಂತರದ ಮೂರು ಪಂದ್ಯಗಳಲ್ಲಿ ಸತತ ಜಯ ಸಾಧಿಸಿತ್ತು. ಆದರೆ, ಅದೇ ಲಯವನ್ನು ಮುಂದುವರಿಸುವಲ್ಲಿ ವಿಫಲವಾಯಿತು. ಡೇಲ್ ಸ್ಟೇನ್ ಮತ್ತು ಮೋಯಿನ್ ಅಲಿ ಅವರ ಅನುಪಸ್ಥಿತಿಯು ತಂಡವನ್ನು ಬಲವಾಗಿ ಕಾಡಿತು. ಅಲಿ ಬದಲು ಸ್ಥಾನ ಪಡೆದಿದ್ದ  ಶಿವಂ ದುಬೆ ಅವರಿಗೆ ಒಂದು ಜೀವದಾನ ಲಭಿಸಿತ್ತು.

ಆದರೆ ಕೇವಲ 24 ರನ್‌ಗಳನ್ನು ಗಳಿಸುವಲ್ಲಿ ಮಾತ್ರ ಅವರು ಸಫಲರಾದರು.

ತಂಡವನ್ನು ಗೆಲುವಿನ ದಡ ಸೇರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಎಬಿ ಡಿವಿಲಿಯರ್ಸ್‌ ಕೂಡ ಕೇವಲ 17 ರನ್‌ ಗಳಿಸಿ ಔಟಾದರು.

ಆರ್‌ಸಿಬಿಗೆ ಇನ್ನೂ ಎರಡು ಪಂದ್ಯಗಳು ಬಾಕಿಯಿವೆ.

ಏಪ್ರಿಲ್ 30ರಂದು ರಾಜಸ್ಥಾನ್ ರಾಯಲ್ಸ್ ಮತ್ತು ಮೇ 4ರಂದು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಆರ್‌ಸಿಬಿ ಎದುರಿಸಲಿದೆ. ಎರಡೂ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ.

12 ಪಂದ್ಯಗಳಿಂದ ಒಟ್ಟು 16 ಅಂಕಗಳನ್ನು ಗಳಿಸಿರುವ ಡೆಲ್ಲಿ ತಂಡವು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಚೆನ್ನೈ ತಂಡವು ಎರಡನೇ ಸ್ಥಾನದಲ್ಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು