ಶುಕ್ರವಾರ, ಫೆಬ್ರವರಿ 28, 2020
19 °C

ಶರಣೆನ್ನಿ ಗವಿಸಿದ್ದೇಶ್ವರ ಸ್ವಾಮಿಜಿ ಜಲಕಾಯಕಕೆ

ಜಗದೀಶ್ ಅಂಗಡಿ Updated:

ಅಕ್ಷರ ಗಾತ್ರ : | |

ಸೂರ್ಯನ ಕಿರಣಗಳು ಭೂಮಿಗೆ ಸೋಕುವ ಮೊದಲೇ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮಿಜಿ, ಮಲಿನಗೊಂಡ ಹಿರೇಹಳ್ಳದಲ್ಲಿ ತೆಪ್ಪದ ಮೇಲೆ ಕೋಲು ಹಿಡಿದು ನಿಂತಿರುತ್ತಾರೆ. ಅವರ ಹಿಂದೆ ಉತ್ಸಾಹಿಗಳ ತಂಡ, ಜತೆಗೆ ಒಂದಿಷ್ಟು ಯಂತ್ರಗಳಿರುತ್ತವೆ.

ಶ್ರೀಗಳು ಯಂತ್ರ ಚಾಲಕರಿಗೆ ಅಂದಿನ ಕೆಲಸಗಳ ವಿವರಗಳನ್ನು ನೀಡುತ್ತಲೇ ಹಳ್ಳದ ಇನ್ನೊಂದು ಭಾಗಕ್ಕೆ ತೆರಳುತ್ತಾರೆ. ಹಳ್ಳದೊಳ ಗಿನ ತ್ಯಾಜ್ಯವನ್ನು ಕೈಯಾರೆ ಸ್ವಚ್ಛಗೊಳಿಸಲು ಆರಂಭಿಸುತ್ತಾರೆ. ಮುಂದೆ ಆರೆಂಟು ಗಂಟೆಗಳ ಕಾಲ ಹಳ್ಳದಲ್ಲಿರುವ ಕೊಳಕು, ಕೈಗಾರಿಕೆ ಹಾಗೂ ನಗರ ತ್ಯಾಜ್ಯಗಳ ಸ್ವಚ್ಛಗೊಳಿಸುವಲ್ಲಿ ನಿರತರಾಗುತ್ತಾರೆ.

ಹೊತ್ತು ಇಳಿಯುತ್ತಿದ್ದಂತೆ, ಹಿರೇಹಳ್ಳ ಪಾತ್ರದ ಸುತ್ತಲಿನ ಹಳ್ಳಿಗಳಿಗೆ ಭೇಟಿ ನೀಡಿ, ಹಳ್ಳದ ಗತ ವೈಭವವನ್ನು ತೆರೆದಿಡುತ್ತಾರೆ. ಈಗ ಜೀವಜಲ ಸಂಕಷ್ಟಕ್ಕೆ ಸಿಲುಕಿರುವ ಹಾಗೂ ಅದಕ್ಕೆ ಮರುಜೀವ ನೀಡುವ ಅಗತ್ಯದ ಕುರಿತು ಪವರ್ ಪಾಯಿಂಟ್ ಪ್ರಸೆಂಟೇಷನ್ ಮಾಡುತ್ತಾರೆ. ‘ನಮ್ಮ ಮಲೀನ ನಾವೇ ಸ್ವಚ್ಛಗೊಳಿಸೋಣ; ಬದುಕಿಗಾಗಿ. ಭವಿಷ್ಯಕ್ಕಾಗಿ. ಮುಂದಿನ ಪೀಳಿಗೆಗಾಗಿ’ ಎನ್ನುತ್ತಲೇ ಜನರ ಸಹಕಾರ ಕೋರುತ್ತಾರೆ. ಕತ್ತಲಾವರಿಸುತ್ತಿರುವಂತೆ ಮಠದ ಆವರಣದಲ್ಲಿ ಮರುದಿನದ ಕೆಲಸಗಳ ಸಿದ್ಧತೆ ಹಾಗೂ ಜವಾಬ್ದಾರಿಗಳಿಗೆ ಅಂತಿಮ ರೂಪುರೇಷೆ ನೀಡುತ್ತಾರೆ.

ಇವು ಮಲಿನಗೊಂಡಿರುವ ಕೊಪ್ಪಳದ ಹೀರೆಹಳ್ಳದ ಪುನಶ್ಚೇತನಕ್ಕಾಗಿ ಗವಿಮಠದ ಶ್ರೀಗಳು ಕೈಗೊಂಡಿರುವ ಶ್ರಮದಾನ, ಅಭಿಯಾನದ ನಿತ್ಯದ ದೃಶ್ಯಗಳು. ಮಾರ್ಚ್‌ 1ರಿಂದ ಚಿಕ್ಕದಾಗಿ ಆರಂಭವಾದ ಜಲ ಕಾಯಕ ಈಗ ಸಮುದಾಯ ಸಹಭಾಗಿತ್ವದ ಮೂಲಕ ಚಳವಳಿ ರೂಪ ಪಡೆದುಕೊಂಡಿದೆ. ಸುತ್ತಲಿನ ಜಿಲ್ಲೆಗಳಲ್ಲಿ ದೊಡ್ಡ ಸದ್ದು-ಸುದ್ದಿ ಮಾಡತೊಡಗಿದೆ. ರಾಜ್ಯದ ಜಲತಜ್ಞರ ಗಮನ ಸೆಳೆಯುತ್ತಿದೆ. ಸರ್ಕಾರದ ಅನುದಾನ ಪಡೆಯದೇ ಸುಮಾರು 24 ಕಿಲೋಮೀಟರ್ ವ್ಯಾಪ್ತಿಯ ನದಿಯ ಸ್ವಚ್ಛತೆ ಹಾಗೂ ಪುನಶ್ಚೇತನದ ಪ್ರಯತ್ನ ಕರ್ನಾಟಕದಲ್ಲಿಯೇ ಮೊದಲು ಎಂದು ಹೇಳಲಾಗುತ್ತಿದೆ. 

ಸ್ವಚ್ಛತೆಗೂ ಮುನ್ನ..

ಚಿಕ್ಕ ಚಿಕ್ಕ ಮೂರು ಹಳ್ಳಗಳು ಮುದ್ಲಾಪುರದ ಬಳಿ ಸಂಗಮವಾಗುತ್ತವೆ. ಅದೇ ಹಿರೇಹಳ್ಳ. ನದಿಯಂತೆ ವಿಶಾಲವಾಗಿ ಹರಿಯುವ ಕಾರಣದಿಂದ ಇದಕ್ಕೆ ಹಿರೇಹಳ್ಳ ಎನ್ನುತ್ತಾರೆ. ಈ ಹಿರೇಹಳ್ಳಕ್ಕೆ 1974ರಲ್ಲಿ ಅಣೆಕಟ್ಟು ಕಟ್ಟುವ ಕಾರ್ಯ ಆರಂಭವಾಗಿ 2002ಕ್ಕೆ ಪೂರ್ಣಗೊಂಡಿತು. ಈ ಹಳ್ಳ ಮುದ್ಲಾಪುರದಿಂದ 24 ಕಿ.ಮೀ ದಕ್ಷಿಣಕ್ಕೆ ಹರಿದು ಡಂಬ್ರಳ್ಳಿ-ಕಾಟ್ರಳ್ಳಿ ಸಮೀಪ ತುಂಗಭದ್ರೆಯ ಒಡಲಲ್ಲಿ ಒಂದಾಗುತ್ತದೆ. ಈ ಹಳ್ಳದ ಎಡದಲ್ಲಿ ಮುದ್ಲಾಪುರ, ಮಾದಿನೂರು, ನರೇಗಲ್, ಯತ್ನಟ್ಟಿ, ದದೇಗಲ್, ಕೋಳೂರು, ಕಾಟ್ರಳ್ಳಿ, ಹಿರೇಸಿಂದೋಗಿ, ಬೂದಿಹಾಳ್, ಡಂಬ್ರಳ್ಳಿ; ಬಲದಲ್ಲಿ ಕಿನ್ನಾಳ, ದೇವಲಾಪುರ, ಚಿಲವಾಡಗಿ, ಭಾಗ್ಯನಗರ, ಕೊಪ್ಪಳ, ಮಂಗಳಾಪುರ, ಹೊರಯತ್ನಾಳ, ಗುನ್ನಾಳ, ಚಿಕ್ಕ ಸಿಂದೋಗಿ ಹಾಗೂ ಗೊಂಡಬಾಳ ಹಳ್ಳಿಗಳು ಬೆಳೆದು ಬಂದಿವೆ.  ಈ ಹಳ್ಳ ಸುಮಾರು ಎರಡೂವರೆ ಲಕ್ಷದಷ್ಟು ಜನರ ಕೃಷಿ ಮತ್ತು ಜೀವನಕ್ಕೆ ದಶಕಗಳ ಕಾಲ ನೀರು ಪೂರೈಸಿದೆ.

ಆದರೆ, ಅಭಿವೃದ್ದಿಯ ತೀವ್ರತೆ, ಬರಗಾಲದ ಛಾಯೆ, ಮರಳು ಗಣಿಗಾರಿಕೆಯ ಸ್ವಾರ್ಥ, ಬದಲಾದ ಕೃಷಿ ಪದ್ದತಿ ಹಾಗೂ ಜನರ ನಿರ್ಲಕ್ಷ್ಯದಿಂದಾಗಿ ಹಿರೇಹಳ್ಳ ಕಸದ ತೊಟ್ಟಿಯಾಗಿದೆ. ಅಲ್ಲೊಂದು ನೀರಿನ ಹರಿವಿತ್ತು ಎಂಬ ಕುರುಹೂ ಇಲ್ಲದಂತಾಗಿದೆ.

ತ್ಯಾಜ್ಯ ಸಾಗಿಸುವ ಚರಂಡಿ

ಕೊಪ್ಪಳ ಪಟ್ಟಣ ದಿನವೊಂದಕ್ಕೆ ಬಳಸುವ ಸರಾಸರಿ ನೀರಿನ ಪ್ರಮಾಣ ಒಂದು ಕೋಟಿ ಲೀಟರ್‌ಗಳಷ್ಟಾದರೆ, ಅದರಲ್ಲಿ ಸುಮಾರು ಶೇ 40ರಷ್ಟು ಬಳಸಿ ಉಳಿಯುವ ತ್ಯಾಜ್ಯದ ನೀರು ಚರಂಡಿಯ ಮೂಲಕ ಹಿರೇಹಳ್ಳಕ್ಕೆ ಸೇರುತ್ತದೆ. ಭಾಗ್ಯನಗರದಲ್ಲಿರುವ ಕೂದಲು ಹಾಗೂ ಬಟ್ಟೆ ಉದ್ಯಮದ ತಾಜ್ಯದ ಅಂತಿಮ ತಾಣವೂ ಇದೇ ಹಳ್ಳವೇ. ಹೀಗೆ ಎರಡು ದಶಕಗಳಿಂದಿಚೆಗೆ ಸತತವಾಗಿ ಹಿರೇಹಳ್ಳ ತನ್ನೊಡಲೊಳಗೆ ಇಂಥ ತ್ಯಾಜ್ಯವನ್ನು ತುಂಬಿಕೊಂಡು, ತುಂಗಭದ್ರೆಯ ಒಡಲಿಗೆ ವರ್ಗಾಯಿಸುತ್ತಲೇ ಇದೆ.

ಮುದ್ಲಾಪುರದ ಹತ್ತಿರ 150 ಮೀಟರ್ ಮೀಟರ್ ವಿಶಾಲವಾಗಿರುವ ಈ ಹಳ್ಳ ಕಾಟ್ರಳ್ಳಿ- ಡಂಬ್ರಳ್ಳಿಯ ಹತ್ತಿರ 70-90 ಮೀಟರ್‌ಗೆ ಕುಬ್ಜಗೊಳ್ಳುತ್ತದೆ. ಒರತೆ ಕೆರೆಗಳಂತೆ ಕಾರ್ಯನಿರ್ವಹಿಸುತ್ತಿದ್ದ ಹಳ್ಳದ ಗುಂಡಿಗಳು ಸಂಪೂರ್ಣ ನಿರ್ನಾಮವಾಗಿವೆ. ಇದು ಹಿರೇಹಳ್ಳದ ಮೇಲಿನ ಆಕ್ರಮಣದ ಒಂದು ಚಿಕ್ಕ ಝಲಕ್ ಅಷ್ಟೇ.

ಹಿರೇಹಳ್ಳದ ನೀರಿನಲ್ಲಿ ದಶಕಗಳ ಕಾಲ ಕೃಷಿ ಮಾಡಿದ ರೈತ ಹುಸೇನ್ ಸಾಬ್, ‘ನಾನು ಈಜು ಕಲಿತದ್ದು, ಮೀನು ಹಿಡಿದಿದ್ದು, ಕುಡಿಯಲು ನೀರು ಬಳಸಿದ್ದು, ಕೃಷಿಗಾಗಿ ನೀರು ಬಳಸಿದ್ದು ಇದೇ ಹಿರೇಹಳ್ಳದಿಂದ. ಆಗ ಹಳ್ಳದ ಅಕ್ಕಪಕ್ಕ ಬೇಸಿಗೆಯಲ್ಲಿ ಕರಬೂಜ ಹಣ್ಣುಗಳು ಸಮೃದ್ಧವಾಗಿ ಸಿಗುತ್ತಿದ್ದವು. ಈಗ ಇದೊಂದು ದೊಡ್ಡ ಚರಂಡಿಯಷ್ಟೇ’ ಎಂದು ನೆನಪಿಸಿಕೊಳ್ಳುತ್ತಾರೆ.

‘ಮ‌ಳೆಗಾಲದಲ್ಲಿ ಕಿಲೋಮೀಟರ್‌ಗಳಷ್ಟು ದೂರದವರೆಗೂ ಇಲ್ಲಿನ ನೀರಿನ ಭೋರ್ಗರೆತ ಕೇಳುತಿತ್ತು. ಕೆಲವೊಮ್ಮೆ ಕಿನ್ನಾಳ-ಮಾದಿನೂರ ಸಂಪರ್ಕ ನಿಂತು ಹೋಗುವಷ್ಟು ನೀರು ಹರಿದಿದ್ದು ನೆನಪಿದೆ. ಪ್ರವಾಹದಲ್ಲಿ ಅನೇಕ ಸಲ ಚಕ್ಕಡಿ ಹಾಗೂ ಜಾನುವಾರುಗಳು ಕೊಚ್ಚಿಹೊದದ್ದೂ ಇದೆ. ಇದರ ರುದ್ರರಮಣೀಯತೆ ನದಿಯನ್ನೂ ಮೀರಿಸುವಂತಿತ್ತು’ ಎಂದು ಗತ ಕಾಲದ ವೈಭವವನ್ನು ಅವರು ವಿವರಿಸುತ್ತಾರೆ.

ಮಲಿನತೆ ಅರಿತಿದ್ದ ಶ್ರೀಗಳು

ಇಂಥದ್ದೊಂದು ಅಪರೂಪದ ಹಳ್ಳದ ಮೇಲಿನ ಆಕ್ರಮಣ, ಅದರಿಂದ ಸಮುದಾಯದ ಆರೋಗ್ಯ ಹಾಗೂ ಆರ್ಥಿಕತೆಯ ಮೇಲೆ ಉಂಟಾದ ಪರಿಣಾಮವನ್ನು ನೋಡುತ್ತಲೇ ಬೆಳೆದಿದ್ದ ಗವಿಮಠದ ಶ್ರೀಗಳು, ‘ಇದಕ್ಕೊಂದು ಪರಿಹಾರ ಹುಡುಕಬೇಕೆಂಬ’ ಚಿಂತನೆಯಲ್ಲಿದ್ದರು. ವರ್ಷಗಳಿಂದ ಮನದಲ್ಲಿ ಕುಡಿಯೊಡೆದಿದ್ದ ಚಿಂತನೆ ದೃಢವಾದ ನಿರ್ಧಾರವಾಗಿ ಬದಲಾದದ್ದು ಪಂಜಾಬ್‌ ರಾಜ್ಯದ 160 ಕಿಲೋಮೀಟರ್ ಉದ್ದದ ಕಾಲಿಬೈನ್ ನದಿ ಸ್ವಚ್ಛತಾ ಆಂದೋಲನ ರೂವಾರಿ ಸಂತ ಬಲಬೀರ್ ಸಿಂಗ್‌ರ ಅವರ ಕಾಯಕ ನೋಡಿಬಂದ ಮೇಲೆ.

ಆಗಿನಿಂದಲೇ, ‘ಯಾರಾದರು ಬರಲಿ, ಬಿಡಲಿ ನಾನಂತೂ ನನ್ನ ಕೈಲಾದಷ್ಟು ಹಿರೇಹಳ್ಳ ಪುನಶ್ಚೇತನ ಮಾಡಿಯೇ ಸಿದ್ಧ’  ಎಂದು ತೀರ್ಮಾನಿಸಿದರು ಸ್ವಾಮೀಜಿ. ಒಂದು ದಿನ ಸೂರ್ಯೋದಯಕ್ಕೂ ಮೊದಲೇ ಮಠದಿಂದ ಹೊರಟು, ಮಲಿನಗೊಂಡ ಹಿರೇಹಳ್ಳದ ಮೇಲೆ ತೇಲುತ್ತಿದ್ದ ತೆಪ್ಪದೊಳಗೆ ಹುಟ್ಟು ಹಿಡಿದು ನಿಂತರು. ಕೈಯಾರೆ ತ್ಯಾಜ್ಯ ತೆಗೆಯಲಾರಂಭಿಸಿದರು. ಆಗಲೇ ಅಲ್ಲಿ ‘ಜಲ ಕ್ರಾಂತಿ’ ಬೀಜವೊಂದು ನೆಟ್ಟಂತಾಯಿತು. ಯಾರ ನೆರವಿಲ್ಲದೇ, ಸ್ವಾಮೀಜಿ ಹಳ್ಳದ ಮಾಲಿನ್ಯವನ್ನು ಸ್ಷಚ್ಚಗೊಳಿಸುತ್ತಿದ್ದನ್ನು ನೋಡಿದವರು, ತಾವೂ ಹಳ್ಳಕ್ಕಿಳಿದರು. ಸ್ವಾಮೀಜಿಯವರ ಜಲಕಾಯಕಕ್ಕೆ ಕೈ ಜೋಡಿಸಿದರು.

ಜನರಿಂದ ಸಿಕ್ಕ ಅಭೂತಪೂರ್ವ ಸ್ಪಂದನೆ ಕಂಡ ಸ್ವಾಮೀಜಿ ‘ನಮ್ಮ ನಡೆ ಹಿರೇಹಳ್ಳದ ಪುನಶ್ಚೇತನದ ಕಡೆ’ ಎಂಬ ಅಭಿಯಾನ ಆರಂಭಿಸಿದರು. ದಾನ ಸ್ವೀಕಾರ ಹಾಗೂ ಸಮುದಾಯದ ಪಾಲ್ಗೊಳ್ಳುವಿಕೆ ಜತೆಗೆ ‘ಹಿರೇಹಳ್ಳ ಸಂರಕ್ಷಣಾ ಹಾಗೂ ಪುನಶ್ಚೇತನ ಟ್ರಸ್ಟ್’ ಆರಂಭಿಸಿದರು. ದಿನಕಳೆದಂತೆ ದಾನದ ಪ್ರಮಾಣ ಪ್ರವಾಹದಂತೆ ಹರಿದುಬಂತು.

ಪ್ರತಿನಿತ್ಯ 50 ಹಿಟಾಚಿ ಯಂತ್ರಗಳು, 10 ಜೆಸಿಬಿಗಳು, 12 ಡೋಜರ್‌ಗಳು ಹಾಗೂ ಸುಮಾರು 30-35 ಟ್ರಾಕ್ಟರ್ ಹಾಗೂ ಟಿಪ್ಪರ್‌ಗಳು ಸ್ವಚ್ಛತಾ (ಹೂಳೆತ್ತುವ) ಕಾರ್ಯಕ್ಕೆ ಬಳಕೆ ಯಾಗುತ್ತಿವೆ. ವಿವಿದ ಸಂಘ-ಸಂಸ್ಥೆಗಳು, ಸರ್ಕಾರಿ ನೌಕರರು, ಕೃಷಿಕರು, ಕಾರ್ಮಿಕರು, ಗುತ್ತಿಗೆದಾರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಣ ಹಾಗೂ ಶ್ರಮವನ್ನು ದಾನದ ರೂಪದಲ್ಲಿ ನೀಡುತ್ತಿದ್ದಾರೆ. ಕಾಮಗಾರಿ ನಡೆಯುವ ಸ್ಥಳದಲ್ಲಿ ಕೆಲಸದಲ್ಲಿ ತೊಡಗಿರುವ ಎಲ್ಲರಿಗೂ ಉಚಿತವಾಗಿ ಪ್ರಸಾದ, ಕುಡಿಯವ ನೀರು ಹಾಗೂ ತಂಪು ಪಾನೀಯಗಳ ವಿತರಣೆಯೂ ನಡೆಯುತ್ತಿದೆ. 

ವಿವಿಧ ಹಂತಗಳಲ್ಲಿ ಸ್ಚಚ್ಛತೆ

ಹಳ್ಳ ಪುನಶ್ಚೇತನದ ಕಾರ್ಯ ವಿವಿಧ ಹಂತಗಳಲ್ಲಿ ನಡೆಯುತ್ತಿದೆ. ಮೊದಲನೆ ಹಂತ 24 ಕಿ.ಮೀ ಪಾತ್ರವನ್ನು ಸ್ವಚ್ಛತೆ ಹಾಗೂ ಹೂಳೆತ್ತುವುದು. ನಂತರ, ಎರಡೂ ಬದಿಗಳಲ್ಲಿ 20 ಅಡಿ ಎತ್ತರದ ಒಡ್ಡು ನಿರ್ಮಾಣ. ಮುಂದೆ, ಅಗತ್ಯವಿರುವಡೆ ಚೆಕ್‍ಡ್ಯಾಂ ಕಟ್ಟಿಸುವುದು. ನಾಲ್ಕನೆ ಹಂತದಲ್ಲಿ ತ್ಯಾಜ್ಯನೀರು ಸಂಸ್ಕರಣಾ ಘಟಕಗಳ ನಿರ್ಮಾಣ. ಐದನೆ ಹಂತದಲ್ಲಿ ಎರಡು ಬದಿಗಳಲ್ಲಿ 2 ಲಕ್ಷ ಗಿಡ ನೆಡುವುದು ಹಾಗೂ ನದಿ ಪಾತ್ರದ ಎಲ್ಲಾ ಹಳ್ಳಿಗಳಲ್ಲೂ ಉದ್ಯಾನ ನಿರ್ಮಿಸುವುದು. ಕೊನೆಯ ಹಂತ ದಲ್ಲಿ ಎರಡೂ ಬದಿಯಲ್ಲಿ ವಾಕಿಂಗ್ ಪಾತ್ ನಿರ್ಮಾಣ.

ಈಗಾಗಲೆ ಸುಮಾರು 21 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಕೆಲಸ ಪೂರ್ಣಗೊಂಡಿದೆ. ‘ಮುಂದೆ, ಟಿಬಿ ಡ್ಯಾಮ್‌ನಿಂದ ಚೆಕ್‌ ಡ್ಯಾಂ, ಕೆರೆಗಳಿಗೆ ನೀರು ತುಂಬಿಸುವುದು. ಇದರಿಂದ ಸುತ್ತಲಿನ 10 ಸಾವಿರ ಕೊಳವೆಬಾವಿಗಳು ಜಲಮರುಪೂರಣವಾಗಿ, ಡ್ಯಾಮ್‌ಗೆ ಹೂಳು ಸೇರುವುದು ತಪ್ಪುತ್ತದೆ. ಮೀನುಗಾರಿಕೆ ಹಾಗೂ ಕೃಷಿ ಚಟುವಟಿಕಗಳು ಉತ್ತೇಜನಗೊಳುತ್ತವೆ. 30 ಹಳ್ಳಿಗಳಲ್ಲಿ ಕುಡಿಯವ ನೀರಿನ ಸಮಸ್ಯೆ ಪರಿಹಾರಗೊಳ್ಳಲಿದೆ’ ಎಂದು ಕೃಷಿ ವಿಜ್ಞಾನಿ ಎಂ. ಬಿ. ಪಾಟೀಲ್ ಹೇಳುತ್ತಾರೆ.

ಅಧಿಕಾರಿಗಳ ಭೇಟಿ

ಜಲತಜ್ಞರಾದ ಶಿವಾನಂದ ಕಳವೆ, ಡಾ ಲಿಂಗರಾಜು, ಕೆರೆ ಸಂರಕ್ಷಕ ಆನಂದ ಮಲ್ಲಿಗೆವಾಡ, ಕರ್ನಾಟಕ ರಾಜ್ಯ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ತಾಂತ್ರಿಕ ಎಂಜಿನಿಯರ್ ಅರವಿಂದ ಗಲಗಲಿ, ನಿವೃತ್ತ ಪೋಲಿಸ್ ಮಹಾನಿರ್ದೇಶಕ ಶಂಕರ್ ಬಿದರಿ ಹಾಗೂ ಕೃಷಿ ವಿಜ್ಞಾನಿ ಎಂ ಬಿ ಪಾಟೀಲ್‌ ಕಾಮಗಾರಿ ಕ್ಷೇತ್ರಕ್ಕೆ ಭೇಟಿ ನೀಡಿ ಮಾರ್ಗದರ್ಶನ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)