ದಕ್ಷಿಣ ಕನ್ನಡ: ಫಲಿತಾಂಶ ಏರಿದರೂ ಸ್ಥಾನ ಕುಸಿತ

ಸೋಮವಾರ, ಮೇ 20, 2019
30 °C
ರಾಜ್ಯದಲ್ಲಿ 7ನೇ ಸ್ಥಾನಕ್ಕಿಳಿದ ದಕ್ಷಿಣ ಕನ್ನಡ ಜಿಲ್ಲೆ

ದಕ್ಷಿಣ ಕನ್ನಡ: ಫಲಿತಾಂಶ ಏರಿದರೂ ಸ್ಥಾನ ಕುಸಿತ

Published:
Updated:

ಮಂಗಳೂರು: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶೇ 86.73ರಷ್ಟು ಫಲಿತಾಂಶದೊಂದಿಗೆ ರಾಜ್ಯದಲ್ಲಿ ಏಳನೇ ಸ್ಥಾನ ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಫಲಿತಾಂಶದಲ್ಲಿ ಶೇ 1.17ರಷ್ಟು ಏರಿಕೆಯಾಗಿದ್ದರೂ, ಮೂರು ಸ್ಥಾನಗಳಷ್ಟು ಕೆಳಕ್ಕಿಳಿದಿದೆ.

2017ರಲ್ಲಿ ಶೇ 82.39ರ ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನ ಗಳಿಸಿತ್ತು. 2018ರಲ್ಲಿ ಶೇ 85.56ರ ಫಲಿತಾಂಶದೊಂದಿಗೆ ನಾಲ್ಕನೇ ಸ್ಥಾನಕ್ಕೆ ಇಳಿದಿತ್ತು. ಈ ಬಾರಿ ಇನ್ನೂ ಮೂರು ಸ್ಥಾನ ಕುಸಿದಿದೆ. ಆದರೆ, ಒಟ್ಟಾರೆಯಾಗಿ ಜಿಲ್ಲೆಯ ಶೈಕ್ಷಣಿಕ ಸಾಧನೆಯಲ್ಲಿ ಯಾವುದೇ ಹಿನ್ನಡೆ ಆಗಿಲ್ಲ. ಇತರೆ ಜಿಲ್ಲೆಗಳಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿರುವುದರಿಂದ ರಾಜ್ಯ ಮಟ್ಟದ  ಫಲಿತಾಂಶದಲ್ಲಿ ಜಿಲ್ಲೆಯ ಸ್ಥಾನವಷ್ಟೇ ಬದಲಾಗಿದೆ.

ಜಿಲ್ಲೆಯಲ್ಲಿ ಈ ಬಾರಿ 27,564 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 23,940 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 3,624 ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣರಾಗಿದ್ದಾರೆ. ಈ ವರ್ಷ ಮೊದಲ ಬಾರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಿದ ವಿದ್ಯಾರ್ಥಿಗಳನ್ನು ಗಣನೆಗೆ ತೆಗೆದುಕೊಂಡರೆ ಶೇ 86.85ರಷ್ಟು ಮಂದಿ ಪಾಸಾಗಿದ್ದಾರೆ.

2017ರಲ್ಲಿ ಜಿಲ್ಲೆಯ 66 ಶಾಲೆಗಳಲ್ಲಿ ಶೇ 100ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ 84 ಶಾಲೆಗಳಲ್ಲಿ ಶೇ 100ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಳೆದ ವರ್ಷ ಹತ್ತು ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಶೇ 100ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ 17 ಶಾಲೆಗಳು ಶೇ 100ರ ಫಲಿತಾಂಶದ ಸಾಧನೆ ಮಾಡಿವೆ. ಈ ಬೆಳವಣಿಗೆಯನ್ನು ಧನಾತ್ಮಕ ಅಂಶ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿಶ್ಲೇಷಿಸುತ್ತಿದ್ದಾರೆ.

ಬಂಟ್ವಾಳ ತಾಲ್ಲೂಕಿನಲ್ಲಿ ಶೇ 84.19, ಬೆಳ್ತಂಗಡಿ ತಾಲ್ಲೂಕಿನಲ್ಲಿ ಶೇ 91.64, ಮಂಗಳೂರು ಉತ್ತರ ಬ್ಲಾಕ್‌ನಲ್ಲಿ ಶೇ 87.35, ಮಂಗಳೂರು ದಕ್ಷಿಣ ಬ್ಲಾಕ್‌ನಲ್ಲಿ ಶೇ 84.97, ಮೂಡುಬಿದಿರೆ ಬ್ಲಾಕ್‌ನಲ್ಲಿ ಶೇ 91.52, ಪುತ್ತೂರು ತಾಲ್ಲೂಕಿನಲ್ಲಿ ಶೇ 86.44 ಮತ್ತು ಸುಳ್ಯ ತಾಲ್ಲೂಕಿನಲ್ಲಿ ಶೇ 84.73ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸುಳ್ಯ ತಾಲ್ಲೂಕಿನಲ್ಲಿ ಮಾತ್ರ ಶೇ 0.03ರಷ್ಟು ಕುಸಿತವಾಗಿದೆ. ಉಳಿದ ಎಲ್ಲ ತಾಲ್ಲೂಕುಗಳಲ್ಲೂ ಫಲಿತಾಂಶದಲ್ಲಿ ಏರಿಕೆ ಕಂಡುಬಂದಿದೆ.

‘ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಹಿನ್ನಡೆ ಆಗಿದೆ ಎಂದು ಭಾವಿಸುವಂತಿಲ್ಲ. ಸರಾಸರಿ ಫಲಿತಾಂಶದಲ್ಲಿ ಏರಿಕೆ ಆಗಿದೆ. ಇತರೆ ಜಿಲ್ಲೆಗಳಲ್ಲಿ ಹೆಚ್ಚಿನ ಫಲಿತಾಂಶ ಬಂದಿರುವುದರಿಂದ ಸ್ಥಾನದಲ್ಲಿ ವ್ಯತ್ಯಾಸ ಆಗಿದೆ. ಜಿಲ್ಲೆಯಲ್ಲಿ ಶೇಕಡ 100ರಷ್ಟು ಫಲಿತಾಂಶ ಪಡೆದಿರುವ ಶಾಲೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿದೆ. ಇದು ಈ ಬಾರಿಯ ಫಲಿತಾಂಶದಲ್ಲಿ ಗುರುತಿಸಬೇಕಾಗಿರುವ ಮಹತ್ವದ ವಿಷಯ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೈ.ಶಿವರಾಮಯ್ಯ ಪ್ರತಿಕ್ರಿಯಿಸಿದರು.

ಫಲ ನೀಡಿದ ಪ್ರಯತ್ನ:

ಹಿಂದಿನ ವರ್ಷಗಳಲ್ಲಿ ಬಂಟ್ವಾಳ ತಾಲ್ಲೂಕು ಮತ್ತು ಮಂಗಳೂರು ದಕ್ಷಿಣ ಬ್ಲಾಕ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದರು. ಕಳೆದ ವರ್ಷ ಈ ಎರಡು ಬ್ಲಾಕ್‌ಗಳಲ್ಲೇ ಅನುತ್ತೀರ್ಣರಾದವರ ಸಂಖ್ಯೆ ತಲಾ 1,000ಕ್ಕಿಂತಲೂ ಜಾಸ್ತಿ ಇತ್ತು. ಈ ಎರಡೂ ವಿಭಾಗಗಳಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆಯನ್ನು ತಗ್ಗಿಸಲು ಶಿಕ್ಷಣ ಇಲಾಖೆ ವಿಶೇಷ ಪ್ರಯತ್ನ ಮಾಡಿತ್ತು. ಅದು ಫಲ ನೀಡಿರುವುದು ಫಲಿತಾಂಶದಲ್ಲಿ ಗೋಚರಿಸುತ್ತಿದೆ.

‘ಈ ಬಾರಿ ಯಾವ ಬ್ಲಾಕ್‌ನಲ್ಲೂ ಅನುತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ 1,000ದ ಗಡಿ ತಲುಪಿಲ್ಲ. ಬಂಟ್ವಾಳ ಮತ್ತು ಮಂಗಳೂರು ದಕ್ಷಿಣ ಬ್ಲಾಕ್‌ಗಳಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆ ತಗ್ಗಿಸುವುದಕ್ಕಾಗಿಯೇ ವಿಶೇಷ ತರಗತಿಗಳನ್ನು ನಡೆಸಲಾಗಿತ್ತು. ರ‍್ಯಾಂಕ್‌ ಪಡೆಯುವುದಕ್ಕಿಂತಲೂ ಅನುತ್ತೀರ್ಣರಾಗದೇ ಇರುವುದು ಮುಖ್ಯ. ಈ ಪ್ರಯತ್ನದಲ್ಲಿ ಇಲಾಖೆ ಯಶಸ್ಸು ಕಂಡಿದೆ’ ಎಂದು ಶಿವರಾಮಯ್ಯ ಹೇಳಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !