ಜಲಮೂಲ ಪುನಶ್ಚೇತನ ಶ್ರಮದಾನಕ್ಕೆ ಚಾಲನೆ; ಅಂತರ್ಜಲ ವೃದ್ಧಿಗೆ ವಿನೂತನ ಪ್ರಯೋಗ

ಶನಿವಾರ, ಮೇ 25, 2019
22 °C
ಕುಸಿಯುತ್ತಿರುವ ಅಂತರ್ಜಲ ತಡೆಗೆ ಜಿಲ್ಲಾಡಳಿತದ ಕ್ರ,ಮ, ಮೊದಲ ದಿನ ಬಸಪ್ಪ ಛತ್ರ ಪ್ರದೇಶದ ಪುಷ್ಕರಣಿ ಸ್ವಚ್ಛತೆ

ಜಲಮೂಲ ಪುನಶ್ಚೇತನ ಶ್ರಮದಾನಕ್ಕೆ ಚಾಲನೆ; ಅಂತರ್ಜಲ ವೃದ್ಧಿಗೆ ವಿನೂತನ ಪ್ರಯೋಗ

Published:
Updated:
Prajavani

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ದಿನೇ ದಿನೇ ಕುಸಿಯುತ್ತಿರುವ ಅಂತರ್ಜಲ ಮಟ್ಟ ವೃದ್ಧಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ಹಾಗೂ ಸಂಘಟನೆಗಳ ಸಹಕಾರದೊಂದಿಗೆ ಜಿಲ್ಲಾಡಳಿತ ರೂಪಿಸಿದ ಕೆರೆ, ಕಾಲುವೆ, ಬಾವಿ, ಪುಷ್ಕರಣಿಗಳನ್ನು ಪುನಶ್ಚೇತನಗೊಳಿಸುವ ಶ್ರಮದಾನ ಕಾರ್ಯಕ್ರಮಕ್ಕೆ ಬುಧವಾರ ನಗರದಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಚಾಲನೆ ನೀಡಿದರು.

ನಗರದ ಬಿ.ಬಿ ರಸ್ತೆಯ ಬಸಪ್ಪ ಛತ್ರ ಪ್ರದೇಶದಲ್ಲಿರುವ ಪುರಾತನ ಪುಷ್ಕರಣಿಯನ್ನು ಬುಧವಾರ ಜಿಲ್ಲೆಯ ವಿವಿಧ ಕಾಲೇಜುಗಳ ಎನ್.ಸಿ.ಸಿ, ಎನ್.ಎಸ್.ಎಸ್, ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಅಧಿಕಾರಿಗಳು, ಸಾರ್ವಜನಿಕರ ಸಹಕಾರದೊಂದಿಗೆ ಸ್ವಚ್ಛಗೊಳಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಜಿಲ್ಲಾಧಿಕಾರಿ ಅವರು ಸಹ ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದು ವಿಶೇಷವಾಗಿತ್ತು.

ಈ ವೇಳೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಸತತ ಬರಗಾಲ ತಲೆದೋರುತ್ತಿರುವುದರಿಂದ ನೀರಿನ ಪ್ರತಿ ಹನಿಯೂ ಅಮೂಲ್ಯವಾಗಿದೆ. ಇಂತಹ ಸಂದರ್ಭದಲ್ಲಿ ನೀರಿನ ಮಿತ ಬಳಕೆ ಹಾಗೂ ಸಂಗ್ರಹಣೆ ಮಾಡುವುದು ಸಾರ್ವಜನಿಕರ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಈ ಕಾರ್ಯಕ್ಕೆ ನಾಗರಿಕರೂ ಸ್ವಯಂ ಪ್ರೇರಿತರಾಗಿ ಮುಂದೆ ಬಂದು ತಮ್ಮ ಕೈಲಾದ ಸೇವೆಯನ್ನು ಸಲ್ಲಿಸಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಐತಿಹಾಸಿಕ ಸ್ಥಳಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹಾಗಾಗಿ, ಇಂದಿನಿಂದ ಜಿಲ್ಲೆಯ ಕೆರೆ, ಕಾಲುವೆ, ಬಾವಿ, ಪುಷ್ಕರಣಿಗಳನ್ನು ಸ್ವಚ್ಛಗೊಳಿಸಿ ಪುನಶ್ಚೇತನಗೊಳಿಸುವ ಮೂಲಕ ಹೊಸ ರೂಪ ಕೊಡಲು ನಿರ್ಧರಿಸಿದ್ದೇವೆ. ನಗರ ಪ್ರದೇಶ ಮಾತ್ರವಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿರುವ ಪುಷ್ಕರಣಿಗಳನ್ನು ಸಹ ಸ್ವಚ್ಛಗೊಳಿಸುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು’ ಎಂದು ತಿಳಿಸಿದರು.

‘ಈ ಮಳೆಗಾಲದಲ್ಲಿ ಕೆರೆಗಳು ಮತ್ತು ಪುಷ್ಕರಣಿಗಳಲ್ಲಿ ನೀರು ಸಂಗ್ರಹಿಸಿ ಅಂತರ್ಜಲ ಮಟ್ಟ ಹೆಚ್ಚಿಸಬೇಕು ಎಂಬ ಉದ್ದೇಶವಿದೆ. ಆದ್ದರಿಂದ, ಈ ತಿಂಗಳಿನಲ್ಲಿ ಪುಷ್ಕರಣಿ ಮತ್ತು ಕೆರೆಗಳಲ್ಲಿನ ಹೂಳು ತೆಗೆಸುತ್ತೇವೆ. ಹೂಳು ತೆಗೆಯಲು ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಮುಂದೆ ಬರುತ್ತಿದ್ದಾರೆ. ಕೆಲ ಕ್ರಷರ್ ಮಾಲಿಕರು ಹೂಳು ತೆಗೆಯಲು ಟಿಪ್ಪರ್ ಮತ್ತು ಜೆಸಿಬಿ ಒದಗಿಸುವುದಾಗಿ ತಿಳಿಸಿದ್ದಾರೆ. ಪ್ರತಿ ತಾಲ್ಲೂಕಿನಲ್ಲಿ 5 ಕೆರೆಗಳ ಹೂಳು ತೆಗೆಸಲಾಗುತ್ತದೆ’ ಎಂದರು.

‘ರಾಜಕಾಲುವೆಗಳು ಒತ್ತುವರಿಯಾಗಿರುವುದು ನನ್ನ ಗಮನಕ್ಕೆ ಬಂದಿದೆ. ಒತ್ತುವರಿ ಮಾಡಿಕೊಂಡು ಮನೆಗಳನ್ನು ಕಟ್ಟಿಕೊಂಡವರಿಗೆ ನೋಟೀಸ್ ಕೊಟ್ಟು ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ. ಬಸಪ್ಪ ಛತ್ರ ಪ್ರದೇಶದಲ್ಲಿ ಕುಸ್ತಿ ಅಖಾಡ, ಚಿತ್ರ ಕಲಾವಿದರಿಗೆ ಗ್ಯಾಲರಿ ನಿರ್ಮಿಸುವ ಚಿಂತನೆ ಇದೆ’ ಎಂದು ಹೇಳಿದರು.

ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ನಟರಾಜ್, ನಗರಸಭೆ ಆಯುಕ್ತ ಉಮಾಕಾಂತ್, ಜಿಲ್ಲೆಯ ವಿವಿಧ ಕಾಲೇಜುಗಳ ಎನ್.ಸಿ.ಸಿ, ಎನ್.ಎಸ್.ಎಸ್, ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಪತ್ರಕರ್ತರು ಶ್ರಮದಾನದಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !