ಕಾಮಗಾರಿ ಸ್ಥಗಿತಕ್ಕೆ ವರ್ತಕರ ಆಕ್ರೋಶ

ಶುಕ್ರವಾರ, ಮೇ 24, 2019
24 °C
ಆಮೆಗತಿಯಲ್ಲಿ ಸಾಗುತ್ತಿರುವ ನಗರದ ಬಿ.ಬಿ ರಸ್ತೆಯಲ್ಲಿ ನಗರಸಭೆ ವತಿಯಿಂದ ಕೈಗೆತ್ತಿಕೊಂಡಿರುವ ಚರಂಡಿ ನಿರ್ಮಾಣ ಕಾಮಗಾರಿ

ಕಾಮಗಾರಿ ಸ್ಥಗಿತಕ್ಕೆ ವರ್ತಕರ ಆಕ್ರೋಶ

Published:
Updated:
Prajavani

ಚಿಕ್ಕಬಳ್ಳಾಪುರ: ನಗರದ ಬಿ.ಬಿ ರಸ್ತೆಯಲ್ಲಿ ನಗರಸಭೆ ವತಿಯಿಂದ ಕೈಗೆತ್ತಿಕೊಂಡಿರುವ ಚರಂಡಿ ನಿರ್ಮಾಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ಅಂಗಡಿಗಳ ವರ್ತಕರು ಬುಧವಾರ ಪ್ರತಿಭಟನೆ ನಡೆಸಿದರು.

ಚರಂಡಿ ನಿರ್ಮಿಸಲು ಗುತ್ತಿಗೆದಾರ ಕಳೆದ ಐದು ದಿನಗಳಿಂದ ಜೆಸಿಬಿ ಮೂಲಕ ಕಾಲುವೆ ತೆಗೆಸಲಾಗುತ್ತಿತ್ತು. ಆದರೆ ಒಬ್ಬ ಪ್ರಭಾವಿ ವರ್ತಕನ ಅನುಕೂಲಕ್ಕಾಗಿ ಇದೀಗ ಆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಇದರ ಹಿಂದೆ ಕೆಲ ನಗರಸಭೆ ಮಾಜಿ ಸದಸ್ಯರ ಕೈವಾಡವಿದೆ. ಮೂರು ದಿನದಲ್ಲಿ ಪೂರ್ಣವಾಗಬೇಕಿದ್ದ ಚರಂಡಿ ಕಾಮಗಾರಿ ನಿಲ್ಲಿಸಿರುವುದರಿಂದ ನಮ್ಮ ವಹಿವಾಟಿಗೆ ತೀವ್ರ ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಅರೆಬರೆ ಕಾಮಗಾರಿಯಿಂದ ಮಳಿಗೆಗಳಿಗೆ ಧೂಳು ಆವರಿಸಿಕೊಳ್ಳುತ್ತಿದೆ. ಕಾಲುವೆ ತೆಗೆದು ಹಾಗೇ ಬಿಟ್ಟಿರುವುದರಿಂದ ಗ್ರಾಹಕರು ಬರದಂತಾಗಿ ವ್ಯಾಪಾರವಿಲ್ಲದೆ ವರ್ತಕರು ನಷ್ಟ ಅನುಭವಿಸುವಂತಾಗಿದೆ. ಆ ನಷ್ಟ ನಮಗೆ ಯಾರು ಕಟ್ಟಿಕೊಡುತ್ತಾರೆ? ಇದಕ್ಕೆಲ್ಲ ನಗರಸಭೆ ಅಧಿಕಾರಿಗಳೇ ನೇರ ಹೊಣೆ ಎಂದು ಆರೋಪಿಸಿದರು.

ಈ ವೇಳೆ ಮಾತನಾಡಿದ ವರ್ತಕ ನಾಗರಾಜ್ ಮಾತನಾಡಿ, ‘ರಸ್ತೆಯ ಅಗಲೀಕರಣ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸದ ಕಾರಣ ಬಿ.ಬಿ ರಸ್ತೆಯಲ್ಲಿನ ಸುಮಾರು 20 ಮಳಿಗೆಗಳ ವರ್ತಕರಿಗೆ ತೀವ್ರ ಅನಾನುಕೂಲವಾಗಿದೆ. ಇಷ್ಟಾದರೂ ನಗರಸಭೆ ಅಧಿಕಾರಿಗಳು ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಲು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.

ವರ್ತಕ ಶ್ರೀಧರ್ ಮಾತನಾಡಿ, ‘ಕಾಮಗಾರಿಯಿಂದ ಜನರಿಗೆ ಪಾದಚಾರಿ ಮಾರ್ಗ ಕೂಡ ಇಲ್ಲದಂತಾಗಿದೆ. ರಸ್ತೆ ಬದಿಗೆ ವಾಹನ ನಿಲುಗಡೆ ಪ್ರದೇಶ ಇರುವುದರಿಂದ ಪಾದಚಾರಿಗಳು ಜೀವಭಯದಲ್ಲಿ ರಸ್ತೆಯಲ್ಲಿ ಹೆಜ್ಜೆ ಹಾಕಬೇಕಾದ ಸ್ಥಿತಿ ತಲೆದೋರಿದೆ. ಬೇಗ ಕಾಮಗಾರಿ ಮುಗಿಸಿ ನಮಗೂ, ಪಾದಚಾರಿಗಳಿಗೂ ಅನುಕೂಲ ಮಾಡಿಕೊಡಿ ಎಂದು ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಸ್ಥಳೀಯ ನಿವಾಸಿ ಅಶ್ವತ್ಥಪ್ಪ ಮಾತನಾಡಿ, ‘ಬಿ.ಬಿ ರಸ್ತೆಯಲ್ಲಿ ಈಗಾಗಲೇ ಜೂನಿಯರ್ ಕಾಲೇಜು ಮುಂಭಾಗ ನಿರ್ಮಾಣಗೊಂಡಿರುವ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದೆ. ಅಲ್ಲಿ ನೀರು ಯಾವ ಕಡೆ ಹರಿಯುತ್ತದೆ ಎಂಬುದೇ ಗೊತ್ತಾಗುತ್ತಿಲ್ಲ. ಸದ್ಯ ಕೈಗೊಂಡಿರುವ ಈ ಕಾಮಗಾರಿ ಕೂಡ ಅವೈಜ್ಞಾನಿಕವಾಗಿದೆ. ಆದ್ದರಿಂದ ಸರಾಗವಾಗಿ ನೀರು ಹರಿದು ಹೋಗುವಂತೆ ಚರಂಡಿ ನಿರ್ಮಿಸಲು ಅಧಿಕಾರಿಗಳು ಗಮನ ಹರಿಸಬೇಕು’ ಎಂದು ಆಗ್ರಹಿಸಿದರು.

ವರ್ತಕರಾದ ರಾಜಣ್ಣ, ಕುಮಾರಣ್ಣ, ಜಾನ್, ನಾರಾಯಣಸ್ವಾಮಿ, ಮಂಜುನಾಥ್, ಮಹೇಶ್, ಸುರೇಶ್, ನಾಗರಾಜ್, ಲಕ್ಷ್ಮೀಶ್, ಧನುಶ್, ಮೂರ್ತಿ, ರಮೇಶ್, ಸುರೇಶ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !