ಭಾನುವಾರ, ಸೆಪ್ಟೆಂಬರ್ 22, 2019
23 °C

ಎಸ್ಸೆಸ್ಸೆಲ್ಸಿ: ಬೆಂಕಿಯಲ್ಲಿ ಅರಳಿದ ಹೂವುಗಳು

Published:
Updated:
Prajavani

ಮಂಡ್ಯ: ತಾಯಿಯ ಆಶ್ರಯದಲ್ಲಿ ಬೆಳೆದ ಜೀವನ್‌ಗೌಡ ಎಸ್ಸೆಸ್ಸೆಲ್ಸಿಯಲ್ಲಿ ಶೇ 99.39 ಫಲಿತಾಂಶದೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡ ಬಿ.ಸಿ.ಸಹನಾ ಶೇ 95.68 ಫಲಿತಾಂಶ ಪಡೆದು ಸಾಧನೆ ಮಾಡಿದ್ದಾರೆ.

ಮದ್ದೂರು ತಾಲ್ಲೂಕಿನ ಕೊಣಸಾಲೆ ಗ್ರಾಮದ, ಪೂರ್ಣಪ್ರಜ್ಞಾ ಪ್ರೌಢಶಾಲೆ ವಿದ್ಯಾರ್ಥಿ ಜೀವನ್‌ಗೌಡ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಆರು ವರ್ಷಗಳ ಹಿಂದೆ ಜೀವನ್‌ಗೌಡ ತಾಯಿಯ ನೆರವು ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಉತ್ತಮ ಫಲಿತಾಂಶ ಪಡೆದಿದ್ದಾರೆ. ತಂದೆ ನಿಧನರಾಗಿದ್ದು ತಾಯಿ ಗೀತಾ ಅವರು 2.5 ಎಕರೆ ಭೂಮಿಯಲ್ಲಿ ವ್ಯವಸಾಯ ಮಾಡಿಸುತ್ತಾ ತಮ್ಮಿಬ್ಬರು ಮಕ್ಕಳನ್ನು ಓದಿಸುತ್ತಿದ್ದಾರೆ.

ಶಿಕ್ಷಕರಿಂದ ವೇಳಾಪಟ್ಟಿ ತಯಾರಿಸಿಕೊಂಡು ಪ್ರತಿದಿನ ಆರು ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದ ಜೀವನ್‌ಗೌಡ ಅಂದಿನ ಪಾಠವನ್ನು ಅಂದೇ ಓದಿ ಮುಗಿಸುತ್ತಿದ್ದರು. ಇದರಂತೆ ಉತ್ತಮವಾಗಿ ಪರೀಕ್ಷೆ ಬರೆದು 621 ಅಂಕ ಗಳಿಸಿ ಶಾಲೆ, ಗ್ರಾಮ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಶಾಲೆ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಗೌರವಿಸಲಾಗಿದೆ.

‘ಬೆಳಿಗ್ಗೆ ಮತ್ತು ಸಂಜೆ ಸೇರಿ ದಿನಕ್ಕೆ 8 ತಾಸು ಅಭ್ಯಾಸ ಮಾಡುತ್ತಿದ್ದೆ. ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ಖುಷಿಯಾಗಿದೆ. ಮುಂದೆ ಭಾರತೀಯ ಆಡಳಿತ ಸೇವೆಗೆ ಸೇರುವ ಗುರು ಹೊಂದಿದ್ದೇನೆ’ ಎಂದು ಜೀವನ್‌ಗೌಡ ಹೇಳಿದರು.

ತಂದೆ–ತಾಯಿ ಇಲ್ಲ: ಮಂಡ್ಯ ತಾಲ್ಲೂಕಿನ ಹಳೆ ಬೂದನೂರು ಗ್ರಾಮದ ಬಿ.ಸಿ.ಸಹನಾ ವೆಂಕಟೇಶ್ವರ ವಿದ್ಯಾನಿಕೇತನ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡುತ್ತಾ 591 ಅಂಕ ಗಳಿಸುವ ಮೂಲಕ ಶೇ 95.68 ಫಲಿತಾಂಶ ಪಡೆದಿದ್ದಾರೆ. ಸಹನಾ ಒಂದನೇ ತರಗತಿ ಓದುವಾಗಲೇ ತನ್ನ ತಂದೆ, ತಾಯಿ ಇಬ್ಬರನ್ನೂ ಅಪಘಾತದಲ್ಲಿ ಕಳೆದುಕೊಂಡಿದ್ದಾರೆ. ಅಜ್ಜಿ ನಿಂಗಮ್ಮ(72) ಅವರ ಆಶ್ರಯದಲ್ಲಿ ಬೆಳೆದ ಸಹನಾ, ಮನೆಯಲ್ಲಿ ಕೆಲಸ ಮಾಡುತ್ತಾ ಶಿಕ್ಷಕರ ನೆರವಿನೊಂದಿಗೆ ಉತ್ತಮ ಅಂಕ ಪಡೆದಿದ್ದಾರೆ.

‘ನಾನು ಸಾಧನೆ ಮಾಡಲು ನನಗೆ ಅಜ್ಜಿಯೇ ಪ್ರೇರಣೆಯಾಗಿದ್ದು, ಶಿಕ್ಷಕರ ಉತ್ತಮ ಮಾರ್ಗದರ್ಶನವಿದೆ. ಮುಂದೆ ವೈದ್ಯೆಯಾಗುವ ಗುರಿ ಹೊಂದಿದ್ದೇನೆ’ ಎಂದು ಬಿ.ಸಿ.ಸಹನಾ ಹೇಳಿದರು.

Post Comments (+)