ಸೋಮವಾರ, ಸೆಪ್ಟೆಂಬರ್ 27, 2021
23 °C

ಬಿ.ಎ.ಮೊಹಿದೀನ್‌ ರಾಜಕಾರಣ ಮೀರಿದ ಮುತ್ಸದ್ದಿ: ಪ್ರೊ.ಬಿ.ಸುರೇಂದ್ರರಾವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ದೀರ್ಘಕಾಲ ರಾಜಕಾರಣದಲ್ಲಿದ್ದು ಒಳ್ಳೆಯ ಹೆಸರು ಉಳಿಸಿಕೊಳ್ಳುವವರು ವಿರಳ. ಅಂತಹ ಮೇರು ವ್ಯಕ್ತಿತ್ವ ಹೊಂದಿದ್ದ ಬಿ.ಎ.ಮೊಹಿದೀನ್‌ ಅವರು ರಾಜಕಾರಣವನ್ನು ಮೀರಿ ನಿಂತ ಮಾನವೀಯ ಮುಖದ ಮುತ್ಸದ್ಧಿಯಾಗಿದ್ದರು ಎಂದು ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಸುರೇಂದ್ರ ರಾವ್‌ ಹೇಳಿದರು.

ಬುಧವಾರ ನಡೆದ ದಿವಂಗತ ಬಿ.ಎ.ಮೊಹಿದೀನ್‌ ಅವರ ಆತ್ಮಕಥೆ ‘ನನ್ನೊಳಗಿನ ನಾನು’ ಕೃತಿಯ ಇಂಗ್ಲಿಷ್‌ ಅವತರಣಿಕೆ ‘ದಿ ಐ ವಿತಿನ್‌ ಮಿ’ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕೃತಿಯನ್ನು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿರುವ ಸುರೇಂದ್ರ ರಾವ್‌, ಆತ್ಮಕಥನದ ಓದಿನ ಅನುಭವವನ್ನು ಹಂಚಿಕೊಂಡರು.

‘ಇತ್ತೀಚಿನ ದಿನಗಳಲ್ಲಿ ಇಂತಹ ಆತ್ಮಕಥನ ಪ್ರಕಟವಾಗಿಲ್ಲ. ಆತ್ಮಕಥನಗಳು ಕೆಲವೊಮ್ಮೆ ಆತ್ಮಸ್ತುತಿಗಳಾಗುತ್ತವೆ ಆದರೆ, ಇಲ್ಲಿ ಆ ರೀತಿ ಆಗಿಲ್ಲ. ಒಂದು ಕಾಲಘಟ್ಟದ ರಾಜಕೀಯ ಬೆಳವಣಿಗೆಗಳು, ಸಾಮಾಜಿಕ ಜೀವನ ಮತ್ತು ಸಮಾಜ ನಡೆದು ಬಂದ ಹಾದಿಯ ಚಿತ್ರಣವನ್ನು ನಿಖರವಾಗಿ ಕಟ್ಟಿಕೊಡಲಾಗಿದೆ’ ಎಂದರು.

ಕಾಂಗ್ರೆಸ್‌ ಪಕ್ಷದಲ್ಲಿ ಇದ್ದ ಕಾರಣಕ್ಕೇನೋ ತುರ್ತು ಪರಿಸ್ಥಿತಿಯ ಕುರಿತು ಮೊಹಿದೀನ್‌ ಅವರು ತುಸು ಮೃದುವಾಗಿ ಮಾತನಾಡಿದ್ದಾರೆ. ಉಳಿದಂತೆ ತಮ್ಮ ಜೀವಿತಾವಧಿಯ ಎಲ್ಲ ಘಟನೆಗಳನ್ನೂ ಅವರು ವಿಮರ್ಶೆಯ ಸಮೇತ ಮುಂದಿಟ್ಟಿದ್ದಾರೆ. ಯಾವುದೇ ಸಮಾಜ ಅಥವಾ ಸಮುದಾಯ ಇತರರಿಂದ ಬೇರೆಯಾಗಿ ದ್ವೀಪದಂತೆ ಬದುಕಬಾರದು ಎಂಬ ಮಹತ್ತರವಾದ ಸಂದೇಶವನ್ನು ಅವರು ಆತ್ಮಕಥನದ ಮೂಲಕ ನೀಡಿದ್ದಾರೆ. ಅವರ ಸಮಾಜ ಅದನ್ನು ಸ್ವೀಕರಿಸಿ ಮುನ್ನಡೆಯಬೇಕಿದೆ ಎಂದು ಹೇಳಿದರು.

‘ಮೊಹಿದೀನ್‌ ಅವರ ಆತ್ಮಕಥನ ಇಂಗ್ಲಿಷ್‌ಗೆ ಅನುವಾದಗೊಂಡಿದೆ. ಕನ್ನಡ ಮತ್ತು ಇಂಗ್ಲಿಷ್‌ ಎರಡೂ ನಮ್ಮದೇ ಭಾಷೆಗಳು. ಇಂಗ್ಲಿಷ್‌ ಭಾಷೆ ನಮ್ಮದಲ್ಲ ಎಂದು ದೂರವಿರಿಸಿ ಬದುಕುವ ಕಾಲಘಟ್ಟ ಇದಲ್ಲ’ ಎಂದು ಸುರೇಂದ್ರ ರಾವ್‌ ಹೇಳಿದರು.

ಮನಪರಿವರ್ತನೆಗೆ ಕಾರಣವಾಗಲಿ:

ಕೃತಿ ಬಿಡುಗಡೆ ಮಾಡಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್‌ ಮಾತನಾಡಿ, ‘ಬಿ.ಎ.ಮೊಹಿದೀನ್‌ ಅವರು ನಮ್ಮ ಸಮುದಾಯಕ್ಕಾಗಿ ತಾಳ್ಮೆಯಿಂದ ರಾಜಕಾರಣ ಮಾಡಿದವರು. ಸಮುದಾಯದ ಒಳಿತಿಗಾಗಿ ಅನೇಕ ಅವಕಾಶಗಳನ್ನು ತ್ಯಾಗ ಮಾಡಿದವರು. ಅವರ ಮೂಲಕ ಸಮುದಾಯಕ್ಕೆ ದೊಡ್ಡಮಟ್ಟದ ಗೌರವ ದಕ್ಕಿದೆ. ಅವರ ಆತ್ಮಕಥನವು ನಮ್ಮ ಸಮುದಾಯದ ಜನರ ಮನಪರಿವರ್ತನೆಗೆ ಕಾರಣವಾಗಲಿ’ ಎಂದರು.

ಮೊಹಿದೀನ್‌ ಅವರ ಆತ್ಮಕಥನ ಇಂಗ್ಲಿಷ್‌ಗೆ ಅನುವಾದಗೊಂಡಿರುವುದು ಸಂತೋಷದ ಸಂಗತಿ. ಕನ್ನಡ ಒಂದೇ ಭಾಷೆ ಪ್ರತ್ಯೇಕವಾಗಿ ಬೆಳೆಯಲು ಸಾಧ್ಯವಿಲ್ಲ. ಕನ್ನಡ ಮತ್ತು ಇಂಗ್ಲಿಷ್‌ ಪರಸ್ಪರ ಕೊಡುಕೊಳ್ಳುವಿಕೆಯ ಮೂಲಕ ಬೆಳೆಯಬೇಕು ಎಂದು ಹೇಳಿದರು.

ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಐವನ್‌ ಡಿಸೋಜ, ಪತ್ರಕರ್ತ ಅಬ್ದುಸ್ಸಲಾಂ ಪುತ್ತಿಗೆ, ಬ್ಯಾರೀಸ್‌ ಸಮೂಹ ಸಂಸ್ಥೆಗಳ ಮುಖ್ಯಸ್ಥ ಸೈಯದ್‌ ಮುಹಮ್ಮದ್ ಬ್ಯಾರಿ, ಪಿ.ಎ.ಎಂಜಿನಿಯರಿಂಗ್‌ ಕಾಲೇಜಿನ ಪ್ರಾಂಶುಪಾಲ ಡಾ.ಅಬ್ದುಲ್‌ ಶರೀಫ್‌ ಹಾಗೂ ಮೊಹಿದೀನ್‌ ಅವರ ಮಕ್ಕಳು ವೇದಿಕೆಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.