ಬನ್ನಿದಿನ್ನಿಗೆ ಹರಿದ ಘಟಪ್ರಭೆ ನೀರು

ಶುಕ್ರವಾರ, ಮೇ 24, 2019
26 °C
ಮುಂದಿನ 45 ದಿನ ನವನಗರದ ಬಾಯಾರಿಕೆ ನೀಗಲಿದೆ ಜೀವಜಲ

ಬನ್ನಿದಿನ್ನಿಗೆ ಹರಿದ ಘಟಪ್ರಭೆ ನೀರು

Published:
Updated:
Prajavani

ಬಾಗಲಕೋಟೆ: ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಹರಿಸಲಾಗಿದೆ. ಬುಧವಾರ ಸಂಜೆ ತಾಲ್ಲೂಕಿನ ಬನ್ನಿದಿನ್ನಿ ಬ್ಯಾರೇಜ್‌ಗೆ ನೀರು ಹರಿದುಬಂದಿದೆ. ಇದರಿಂದ ಬಾಗಲಕೋಟೆಯ ನವನಗರ, ಮುಧೋಳ ಸೇರಿದಂತೆ ಘಟಪ್ರಭಾ ನದಿ ಪಾತ್ರದ ನೂರಾರು ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ಸದ್ಯಕ್ಕೆ ಪರಿಹಾರವಾದಂತಾಗಿದೆ. 

ಏಪ್ರಿಲ್‌ನಲ್ಲಿ ಬಿಸಿಲು ಏರುತ್ತಿದ್ದಂತೆಯೇ ಜಿಲ್ಲೆಯಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ತಲೆದೋರಿತ್ತು. ಹಾಗಾಗಿ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರ ಹಿಡಕಲ್ ಜಲಾಶಯದಿಂದ ನದಿಗೆ ಎರಡು ಟಿಎಂಸಿ ಅಡಿ ನೀರು ಹರಿಸುವಂತೆ ಆದೇಶಿಸಿದ್ದರು.

ದೊಡ್ಡ ಸವಾಲು: ನದಿಗೆ ನೀರು ಹರಿಸಿದರೂ ಅದನ್ನು ಕೊನೆಯ ಭಾಗದ ಬನ್ನಿದಿನ್ನಿ ಬ್ಯಾರೇಜ್‌ವರೆಗೆ ಹರಿಸುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಿನ ಸಂಗತಿಯಾಗಿತ್ತು. ಜನ–ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕೆ ನೀರು ಹರಿಸಲಾಗಿದ್ದರೂ ಅದನ್ನು ಮಾರ್ಗ ಮಧ್ಯದಲ್ಲಿಯೇ ರೈತರು ಕೃಷಿಗೆ ಹಾಗೂ ಉದ್ಯಮಿಗಳು ಕೈಗಾರಿಕೆಗೆ ಬಳಸಿಕೊಂಡಲ್ಲಿ ಕೊನೆಯ ಭಾಗಕ್ಕೆ ನೀರು ತಲುಪುವುದು ಅನುಮಾನ ಎಂಬಂತಾಗಿತ್ತು.

ಅದನ್ನು ತಪ್ಪಿಸಲು ಜಮಖಂಡಿ ಉಪವಿಭಾಗಾಧಿಕಾರಿ ಮೊಹಮ್ಮದ್ ಇಕ್ರಮುಲ್‌ ಷರೀಫ್ ಹಾಗೂ ಬಾಗಲಕೋಟೆ ಉಪವಿಭಾಗಾಧಿಕಾರಿ ಎಚ್‌.ಜಯಾ ತಮ್ಮ ಭಾಗದ ನದಿ ಪಾತ್ರ ಹಾಗೂ ಬ್ಯಾರೇಜ್‌ಗಳ ಬಳಿ ಬಿಡಾರ ಹೂಡಿದ್ದರು. ಜಲಾಶಯದ ನೀರನ್ನು ಬನ್ನಿದಿನ್ನಿ ಬ್ಯಾರೇಜ್‌ಗೆ ತಲುಪಿಸುವ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದರು.

ಕಳೆದ ವರ್ಷ ಹಿಡಕಲ್‌ ಜಲಾಶಯದಿಂದ ನೀರು ಹರಿಯಬಿಟ್ಟರೂ ಅದು ಬನ್ನಿದಿನ್ನಿ ತಲುಪುವ ವೇಳೆಗೆ ಬಹುತೇಕ ಖಾಲಿಯಾಗಿತ್ತು. ಹಾಗಾಗಿ ಈ ಬಾರಿ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕ್ರಮ ಕೈಗೊಂಡಿದ್ದರು. ಮುಧೋಳ ತಾಲ್ಲೂಕಿನಲ್ಲಿ 12 ಬ್ರಿಜ್‌ ಕಂ ಬ್ಯಾರೇಜ್‌ಗಳಿಗೂ ಈ ನೀರನ್ನು ತುಂಬಿಸುವ ಸವಾಲು ಅಧಿಕಾರಿಗಳಿಗೆ ಎದುರಾಗಿತ್ತು. ಅದರಲ್ಲಿಯೂ ಯಶಸ್ಸು ಕಂಡಿದ್ದಾರೆ.

ನದಿಯಿಂದ ಮೋಟಾರ್ ಹಚ್ಚಿ ನೀರು ಪಡೆಯುವ ಪ್ರಯತ್ನಕ್ಕೆ ಕಡಿವಾಣ ಹಾಕಲು ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಜೊತೆಗೆ ಕಂದಾಯ, ಪೊಲೀಸ್, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಗಸ್ತು ತಿರುಗಿ ರೈತರ ಮನವೊಲಿಸಿ ಕೊನೆಯ ಭಾಗಕ್ಕೂ ನೀರು ಹರಿಯುವಂತೆ ಮಾಡಿದರು. ಮುಧೋಳ ತಹಶೀಲ್ದಾರ್ ಡಿ.ಜೆ.ಮಹಾತ್ , ಡಿವೈಎಸ್‌ಪಿ ಆರ್.ಕೆ.ಪಾಟೀಲ, ಬಾಗಲಕೋಟೆ ತಹಶೀಲ್ದಾರ್ ಎಸ್.ಬಿ.ನಾಗಠಾಣ, ಬಿಟಿಡಿಎ ಅಧಿಕಾರಿಗಳು ಈ ಕಾರ್ಯದಲ್ಲಿ ಕೈ ಜೋಡಿಸಿದರು.

 

ಇನ್ನು ಎರಡು ದಿನಕ್ಕೊಮ್ಮೆ ನೀರು..
‘ಹಿಡಕಲ್‌ ಜಲಾಶಯದಿಂದ ನೀರು ಹರಿದುಬಂದಿರುವುದರಿಂದ ಬನ್ನಿದಿನ್ನಿ ಬ್ಯಾರೇಜ್‌ನಲ್ಲಿ ನೀರು ಸಂಗ್ರಹ ಹೆಚ್ಚಳಗೊಂಡಿದೆ. ಈಗ ಲಭ್ಯವಿರುವ ನೀರಿನಲ್ಲಿ ಜೂನ್ 15ರವರೆಗೆ ನವನಗರದ ನಿವಾಸಿಗಳಿಗೆ ಎರಡು ದಿನಕ್ಕೊಮ್ಮೆ ನೀರು ಕೊಡಬಹುದಾಗಿದೆ’ ಎಂದು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರ್ವಾಹಕ ಎಂಜಿನಿಯರ್ ಮೋಹನ ಹಲಗತ್ತಿ ಹೇಳುತ್ತಾರೆ.

’5 ಮೀಟರ್ ಎತ್ತರದ ಬ್ಯಾರೇಜ್‌ನಲ್ಲಿ ಈಗಾಗಲೇ 3.46 ಮೀಟರ್ ವರೆಗೂ ನೀರು ತುಂಬಿದೆ. ಇನ್ನೂ ಕೇವಲ 2.54 ಮೀಟರ್ ಮಾತ್ರ ಬಾಕಿ ಉಳಿದಿದೆ. ಬ್ಯಾರೇಜ್‌ನಲ್ಲಿ ಈಗ 0.059 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಅದು ದಿನ ಬಿಟ್ಟು ದಿನ ನೀರು ಕೊಡುವುದರಿಂದ 40ರಿಂದ 45 ದಿನಗಳಿಗೆ ಆಗಲಿದೆ’ ಎನ್ನುತ್ತಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !