ಶುಕ್ರವಾರ, ಸೆಪ್ಟೆಂಬರ್ 24, 2021
23 °C
ಶಿಡ್ಲಘಟ್ಟ ನಗರಸಭೆ, ಬಾಗೇಪಲ್ಲಿ ಪುರಸಭೆಗೆ ಮೇ 29 ರಂದು ಮತದಾನ, ಸರ್ಕಾರದ ನಿರ್ಧಾರ ಕೋರ್ಟ್‌ನಲ್ಲಿ ಪ್ರಶ್ನಿಸಿದ 4 ಸಂಸ್ಥೆಗಳಿಗೆ ಸದ್ಯ ಚುನಾವಣೆ ಇಲ್ಲ

ಎರಡು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ಅವಧಿ ಮುಕ್ತಾಯಗೊಂಡಿರುವ ಸ್ಥಳೀಯ ನಗರ ಸಂಸ್ಥೆಗಳ ಪೈಕಿ ಶಿಡ್ಲಘಟ್ಟ ನಗರಸಭೆ ಮತ್ತು ಬಾಗೇಪಲ್ಲಿ ಪುರಸಭೆಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಮುಹೂರ್ತ ನಿಗದಿಪಡಿಸಿದೆ.

ಈ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅವರು ಮೇ 9 ರಂದು ಅಧಿಸೂಚನೆ ಹೊರಡಿಸಲಿದ್ದು, ಮೇ 16 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮೇ 29 ರಂದು ಮತದಾನ ನಡೆಯಲಿದೆ. ಮೇ 31 ರಂದು ಮತ ಎಣಿಕೆ ಕಾರ್ಯ ನಡೆದು ಫಲಿತಾಂಶ ಹೊರಬೀಳಲಿದೆ.

ಜಿಲ್ಲೆಯಲ್ಲಿ 4 (ಚಿಕ್ಕಬಳ್ಳಾಪುರ, ಗೌರಿಬಿದನೂರು, ಚಿಂತಾಮಣಿ, ಶಿಡ್ಲಘಟ್ಟ) ನಗರಸಭೆಗಳು, ತಲಾ ಒಂದು ಪುರಸಭೆ (ಬಾಗೇಪಲ್ಲಿ), ಪಟ್ಟಣ ಪಂಚಾಯಿತಿ (ಗುಡಿಬಂಡೆ) ಇವೆ. ಈ ಪೈಕಿ ಸರ್ಕಾರ ಹೊರಡಿಸಿದ ಕ್ಷೇತ್ರ ವಿಂಗಡನೆ ಮತ್ತು ವಾರ್ಡ್‌ವಾರು ಮೀಸಲಾತಿ ಅಧಿಸೂಚನೆಯನ್ನು ಪ್ರಶ್ನಿಸಿ ಚಿಕ್ಕಬಳ್ಳಾಪುರ, ಗೌರಿಬಿದನೂರು, ಚಿಂತಾಮಣಿ ನಗರಸಭೆಗಳು ಮತ್ತು ಗುಡಿಬಂಡೆ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿರುವುದರಿಂದ ಆ ನಾಲ್ಕು ಸಂಸ್ಥೆಗಳಿಗೆ ಸದ್ಯ ಚುನಾವಣೆ ನಡೆಯುತ್ತಿಲ್ಲ.

ಈ ಚುನಾವಣೆಯ ನೀತಿ ಸಂಹಿತೆ ತಕ್ಷಣದಿಂದ ಜಾರಿಗೆ ಬಂದಿದ್ದು, ಮೇ 31ರ ವರೆಗೆ ಆಯಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜಾರಿಯಲ್ಲಿರುತ್ತದೆ. ಈ ಚುನಾವಣೆಯಲ್ಲಿ ನಗರಸಭೆ ಸ್ಪರ್ಧಿಸುವ ಅಭ್ಯರ್ಥಿಗಳು ಗರಿಷ್ಠ ₹2 ಲಕ್ಷ ಮತ್ತು ಪುರಸಭೆಗೆ ಸ್ಪರ್ಧಿಸುವವರು ಗರಿಷ್ಠ ₹1.50 ಲಕ್ಷದ ವರೆಗೆ ಚುನಾವಣೆ ವೆಚ್ಚ ಮಾಡಬಹುದಾಗಿದೆ.

ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿದ್ದು, 41 ಮತಗಟ್ಟೆಗಳಿವೆ. ಇಲ್ಲಿ 18,606 ಪುರುಷರು, 18,445 ಮಹಿಳೆಯರು, 6 ಲೈಂಗಿಕ ಅಲ್ಪಸಂಖ್ಯಾತರು ಸೇರಿದಂತೆ 37,057 ಮತದಾರರಿದ್ದಾರೆ. ಇನ್ನು ಬಾಗೇಪಲ್ಲಿ ಪುರಸಭೆಯ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳು, 24 ಮತಗಟ್ಟೆಗಳಿವೆ. 10,265 ಪುರುಷರು, 10,554 ಮಹಿಳೆಯರು, 3 ಲೈಂಗಿಕ ಅಲ್ಪಸಂಖ್ಯಾತರು ಸೇರಿದಂತೆ 20,822 ಮತದಾರರು ಹಕ್ಕು ಚಲಾಯಿಸಬೇಕಿದೆ.

ಕಳೆದ ಮಾರ್ಚ್ 16 ರಂದು ಶಿಡ್ಲಘಟ್ಟ ನಗರಸಭೆ, ಮಾ.18 ರಂದು ಚಿಕ್ಕಬಳ್ಳಾಪುರ, ಗೌರಿಬಿದನೂರು ನಗರಸಭೆಗಳು ಮತ್ತು ಬಾಗೇಪಲ್ಲಿ ಪುರಸಭೆಯಲ್ಲಿ ಆಡಳಿತಾಧಿಕಾರಿ ಅವರ ಅವಧಿ ಮುಕ್ತಾಯಗೊಂಡ ಕಾರಣ ಮಾರ್ಚ್‌ 20 ರಂದು ಕರ್ನಾಟಕ ಪೌರಸಭೆಗಳ ಕಾಯ್ದೆ 1964 ನಿಯಮ–42 (ಕಲಂ–5) ರಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಿ ಹೊಸ ಚುನಾಯಿತ ಕೌನ್ಸಿಲ್ ಅಸ್ತಿತ್ವಕ್ಕೆ ಬರುವರೆಗೂ ಆಡಳಿತಾಧಿಕಾರಿಗಳ ನೇಮಕ ಮಾಡಲಾಗಿತ್ತು.

ಸದ್ಯ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಹಾಗೂ ಗೌರಿಬಿದನೂರು ನಗರಸಭೆಗಳಿಗೆ ಜಿಲ್ಲಾಧಿಕಾರಿ ಅವರು ಹಾಗೂ ಬಾಗೇಪಲ್ಲಿ ಪುರಸಭೆಗೆ ಉಪ ವಿಭಾಗಾಧಿಕಾರಿ ಅವರು ಆಡಳಿತಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಚುನಾವಣಾ ವೇಳಾಪಟ್ಟಿ
ದಿನಾಂಕ ಪ್ರಕ್ರಿಯೆ

ಮೇ 9 ಚುನಾವಣೆ ಅಧಿಸೂಚನೆ ಪ್ರಕಟ
ಮೇ 16 ನಾಮಪತ್ರ ಸಲ್ಲಿಸಲು ಕೊನೆಯ ದಿನ
ಮೇ 17 ನಾಮಪತ್ರಗಳ ಪರಿಶೀಲನೆ
ಮೇ 20 ನಾಮಪತ್ರ ಹಿಂಪಡೆಯಲು ಕೊನೆಯ ದಿನ
ಮೇ 29 ಮತದಾನ
ಮೇ 30 ಅವಶ್ಯವಿದ್ದಲ್ಲಿ ಮರು ಮತದಾನ
ಮೇ 31 ಮತ ಎಣಿಕೆ ಕಾರ್ಯ, ನೀತಿ ಸಂಹಿತೆ ಮುಕ್ತಾಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.