ಸೋಮವಾರ, ಮೇ 23, 2022
30 °C
ಸಾವಯವ ಪದಾರ್ಥಗಳ ಖರೀದಿಗೆ ಮುಗಿಬಿದ್ದ ಸಾರ್ವಜನಿಕರು l ಇದೇ 5ರವರೆಗೆ ಮೇಳ ಆಯೋಜನೆ

ಸಿರಿಧಾನ್ಯಗಳಿಗೆ ಮಾರು ಹೋದ ಬೆಂಗಳೂರಿಗರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದ್ದ ಬಗೆಬಗೆಯ ಸಿರಿಧಾನ್ಯಗಳು, ಚಿಣ್ಣರ ಕೈ ಸೇರಿದ್ದ ಬೆಲ್ಲ, ಜೇನುತುಪ್ಪ, ಕುರುಕಲು ತಿಂಡಿಗಳು. ತಮ್ಮಿಷ್ಟದ ಧಾನ್ಯಗಳನ್ನು ಬುಟ್ಟಿಯಲ್ಲಿ ತುಂಬಿಸಿಕೊಳ್ಳುತ್ತಿದ್ದ ಗ್ರಾಹಕರು...

ಇವೆಲ್ಲಾ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ‘ಕರ್ನಾಟಕ ಸಿರಿಧಾನ್ಯಗಳ ವೈಭವ ಹಾಗೂ ಸಾವಯವ ಆಹಾರ ಮೇಳ’ದಲ್ಲಿ ಶುಕ್ರವಾರ ಕಂಡು ಬಂದ ದೃಶ್ಯಗಳು. 

‘ಗ್ರಾಮೀಣ ಕುಟುಂಬ‌’ದ ವತಿಯಿಂದ ಡಾ.ಮರಿಗೌಡ ಸ್ಮಾರಕಭವನದಲ್ಲಿ ಆಯೋಜಿಸಿರುವ ಸಿರಿಧಾನ್ಯ ಮೇಳಕ್ಕೆ ಗುರುವಾರ ಅದ್ದೂರಿ ಚಾಲನೆ ಸಿಕ್ಕಿತು. ಮೇ 5ರ ವರೆಗೆ ಮೇಳ ನಡೆಯಲಿದೆ. ಸಜ್ಜೆ, ನವಣೆ, ಆರ್ಕ, ಜೋಳ, ಊದಲು, ಬರಗು, ರಾಗಿ, ಸಾಮೆ ಪ್ರಮುಖ ಆಕರ್ಷಣೆಯಾಗಿದ್ದವು. ಫಾಸ್ಟ್‌ಫುಡ್‌ ತಿಂದು ಬೇಸತ್ತಿದ್ದ ನಗರವಾಸಿಗಳಿಗೆ ಹಳ್ಳಿಸೊಗಡಿನ ರುಚಿಯನ್ನು ಮೇಳ ಉಣಬಡಿಸಿತು. 

ಮೊದಲ ದಿನ ನಾನಾ ಬಗೆಯ ಸಾವಯವ ಸಿರಿಧಾನ್ಯ ಖರೀದಿ ಭರದಿಂದ ಸಾಗಿತ್ತು. ಅಲ್ಲಿ ತೆಗೆದಿದ್ದ 80ಕ್ಕೂ ಹೆಚ್ಚು ಮಳಿಗೆಗಳು ಗಮನ ಸೆಳೆದವು. ಸಾವಯವ ಅಕ್ಕಿ, ಬೆಲ್ಲ, ಎಣ್ಣೆ, ಸೌಂದರ್ಯವರ್ಧಕಗಳು, ಸಾಬೂನು, ನೂಡಲ್ಸ್‌, ಗರಿಗರಿಯಾದ ತಿಂಡಿತಿನಿಸುಗಳು ಗ್ರಾಹಕರ
ಕೈಸೇರಿದ್ದವು. 

ರೈತರಿಗೆ ಬೆಂಬಲ ನೀಡಬೇಕು: ಸಿರಿಧಾನ್ಯ ಮೇಳವನ್ನು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು ಉದ್ಘಾಟಿಸಿದರು. ‘ಸಿರಿಧಾನ್ಯಕ್ಕೂ ಜನರ ಆರೋಗ್ಯಕ್ಕೂ ನಿಕಟ ಸಂಬಂಧವಿದೆ. ದೇಶದಲ್ಲಿ ಶೇ 48ರಷ್ಟು ಮಂದಿ ಡಯಾಬಿಟಿಸ್‌ನಿಂದ ಬಳಲುತ್ತಿದ್ದಾರೆ. ಸಾಕಷ್ಟು ರೋಗಗಳು ನಾವು ಸೇವಿಸುತ್ತಿರುವ ಆಹಾರದಿಂದ ಬರುತ್ತಿವೆ. ಸರ್ಕಾರಗಳು ಹೆಚ್ಚಿನ ಬೆಂಬಲ ನೀಡಿದರೆ, ಆರೋಗ್ಯಕರ ಆಹಾರ ಬೆಳೆ ಬೆಳೆಯಲು ರೈತರಿಗೆ ಸಹಕಾರಿಯಾಗುತ್ತದೆ’ ಎಂದು ಸಲಹೆ ನೀಡಿದರು. 

ಕೀಟನಾಶಕದಿಂದ ಜೇನು ಹಾನಿ: ಪರಿಸರ ತಜ್ಞ ಡಾ.ನಾಗೇಶ್ ಹೆಗಡೆ ಅವರಿಗೆ ಈ ಸಾಲಿನ ‘ಗ್ರಾಮೀಣ ಕುಟುಂಬ ವಿಶೇಷ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು. ಬಳಿಕ ಮಾತನಾಡಿ, ‘ಈಗಿನ ಆಹಾರ ಪದಾರ್ಥಗಳಿಗೆ ಕೀಟನಾಶಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತಿದೆ. ಇದರಿಂದ ಜೇನುನೊಣಗಳ ಸಂತತಿ ಕ್ರಮೇಣ ನಾಶ ಆಗುತ್ತಿದೆ. ಇತ್ತೀಚೆಗೆ ಫ್ರಾನ್ಸ್‌ನಲ್ಲಿ ಜೇನುಹುಳುಗಳಿಗೆ ಮಾರಕವಾಗುವ ಎಲ್ಲಾ ಕೀಟನಾಶಕಗಳನ್ನು ನಿಷೇಧ ಮಾಡಿದೆ’ ಎಂದರು.

ಸಿರಿಧಾನ್ಯ ಬೆಳೆಗಾರರಿಗೆ ಸನ್ಮಾನ: ಮೇಳದಲ್ಲಿ ರಾಜ್ಯದ ಏಳು ಮಂದಿ ರೈತರನ್ನು ಸನ್ಮಾನಿಸಲಾಯಿತು. ಬಾಗೇಪಲ್ಲಿ ಲಕ್ಷ್ಮೀ ನಾರಾಯಣ್‌, ಹಾವೇರಿ ಜಗದೀಶ್‌ ಬರದೂರು, ಧಾರವಾಡ ಮಡಿವಾಳಪ್ಪ ತೋಟಗಿ, ಮಂಡ್ಯದ ಸಿ.ಪಿ.ಕೃಷ್ಣಪ್ಪ, ಕೊಪ್ಪಳ ನಾರಾಯಣರಾವ್‌ ಕುಲಕರ್ಣಿ, ಬಾಲನ್‌, ಅರುಣ ಪ್ರಸನ್ನ ಈ ಬಾರಿಯ ಪುರಸ್ಕೃತರು.

ರಾಷ್ಟ್ರೀಯ ನಾಟಕಶಾಲೆ ನಿರ್ದೇಶಕ ಸಿ.ಬಸವಲಿಂಗಯ್ಯ, ಗ್ರಾಮೀಣ ಕುಟುಂಬದ ಸಂಸ್ಥಾಪಕ ಎಂ.ಎಚ್‌.ಶ್ರೀಧರಮೂರ್ತಿ, ಲಾಲ್‌
ಬಾಗ್‌ ಜಂಟಿ ನಿರ್ದೇಶಕ ಜಗದೀಶ್‌, ಉಪನಿರ್ದೇಶಕ ಚಂದ್ರಶೇಖರ್‌, ಮೈಸೂರು ಉದ್ಯಾನ ಕಲಾ ಸಂಘದ ಉಪಾಧ್ಯಕ್ಷ ವಾಸು
ದೇವ್‌, ಕಾರ್ಯದರ್ಶಿ ಜಯಲಕ್ಷ್ಮೀ ವರ್ಮಾ, ಭೀಮೇಶ್‌, ಮಾಲೂರು ವಿಜಯ್ ಕುಮಾರ್‌ ಉಪಸ್ಥಿತರಿದ್ದರು.

ಮೇಳದಲ್ಲಿ ಇನ್ನೇನಿದೆ?

ಮೇ 4ರಂದು ಬೆಳಿಗ್ಗೆ 11 ಗಂಟೆಗೆ ಸಿರಿಧಾನ್ಯ ಹಾಗೂ ಕಾಡು ಕೃಷಿ ತರಬೇತಿ. ಮಧ್ಯಾಹ್ನ 2.30ಕ್ಕೆ ಗೃಹಿಣಿಯರಿಗೆ ಅಡುಗೆ ತರಬೇತಿ ನೀಡಲಿದ್ದಾರೆ. ಮೇ 5ರಂದು ಬೆಳಗ್ಗೆ 11 ಗಂಟೆಗೆ ಸಿರಿಧಾನ್ಯ ಕುರಿತು ಸಂವಾದ ನಡೆಯಲಿದ್ದು, ಆಹಾರ ತಜ್ಞ ಡಾ.ಖಾದರ್‌ ಮಾತನಾಡಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.