ಬೆಳೆದ ಗಿಡಗಳನ್ನೇ ನೆಟ್ಟರೆ ಉಳಿದಾವು!

ಭಾನುವಾರ, ಮೇ 26, 2019
27 °C
‘ನಮ್ಮ ನಗರ ನಮ್ಮ ಧ್ವನಿ’

ಬೆಳೆದ ಗಿಡಗಳನ್ನೇ ನೆಟ್ಟರೆ ಉಳಿದಾವು!

Published:
Updated:
Prajavani

ಪ್ರತಿ ವರ್ಷ ಅರಣ್ಯ ಇಲಾಖೆಯು ಸಾಮಾಜಿಕ ಅರಣ್ಯೀಕರಣ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ ಲಕ್ಷಾಂತರ ಸಸಿಗಳನ್ನು ನೆಡುತ್ತಿದೆ. 2018–19ರಲ್ಲಿ ನಗರ ಮಿತಿಯಲ್ಲಿ 150 ಕಿಲೋ ಮೀಟರ್ ಉದ್ದ ರಸ್ತೆಗಳಲ್ಲಿ 6.5 ಲಕ್ಷ ಗಿಡಗಳನ್ನು ನೆಡಲಾಗಿತ್ತು. ಈ ಪೈಕಿ ಶೇ 90ರಷ್ಟು ಸಸಿಗಳು ಉಳಿದುಕೊಂಡಿರುವುದು ಅರಮನೆ ನಗರಿ ಹಸಿರು ನಗರಿಯಾಗಿ ಶೋಭಿಸುವಂತಾಗಿದೆ.

ನಗರದಲ್ಲಿ ಪ್ರತಿ 2 ಕಿಲೋ ಮೀಟರ್‌ಗೆ ಒಬ್ಬ ವಾಚರ್‌ಗಳಿದ್ದಾರೆ. ಸಸಿಯೊಂದನ್ನು ನೆಟ್ಟು 8–10 ತಿಂಗಳು  ಕನಿಷ್ಠವೆಂದರೂ 200 ಲೀಟರ್‌ ನೀರು ಹಾಕುತ್ತಾರೆ. ಮಳೆಗಾಲ ಶುರುವಾಗುವವರೆಗೆ ಒಟ್ಟು ನಾಲ್ಕು ಬಾರಿ ನೀರು ಹಾಕಿರುತ್ತಾರೆ. ಹಸು ಇತ್ಯಾದಿ ಪ್ರಾಣಿಗಳು ತಿಂದು ಹಾಳಾಗದಂತೆ, ಕಿಡಿಗೇಡಿಗಳು ಕಿತ್ತುಹಾಕದಂತೆ ಸಸಿಗಳ ಮೇಲೆ ಹದ್ದಿನ ಕಣ್ಣು ಇಟ್ಟಿರುತ್ತಾರೆ. ಈ ಸತತ ಶ್ರಮ, ಪರಿಸರಪರ ಕಾಳಜಿಯಿಂದಾಗಿ ಬಹುತೇಕ ಸಸಿ ಇಲ್ಲಿ ಉಳಿದುಕೊಂಡಿವೆ. ಹಾಳಾಗಿರುವ ಸಸಿಗಳನ್ನು ಗುರುತಿಸಿ, ಹೆಚ್ಚುವರಿಯಾಗಿ ಎರಡು ಸಸಿಗಳನ್ನು ನೆಡುವ ಮೂಲಕ ಸಮತೋಲನ ಕಾಪಾಡಲಾಗುತ್ತಿದೆ.

ಅರಣ್ಯ ಇಲಾಖೆಯ ಮೈಸೂರು ವಿಭಾಗದ ವ್ಯಾಪ್ತಿ ಸಾಕಷ್ಟು ಹಿರಿದಾಗಿದೆ. ಮೈಸೂರು ನಗರ, ಮೈಸೂರು ಜಿಲ್ಲೆ, ನಂಜನಗೂಡು, ತಿ.ನರಸೀಪುರ, ಎಚ್‌.ಡಿ.ಕೋಟೆ, ಸರಗೂರು ಸೇರಿದಂತೆ ಇಲ್ಲಿನ ಎಲ್ಲ ರಸ್ತೆ, ಬಡಾವಣೆಗಳು, ಗ್ರಾಮಗಳಲ್ಲಿ ಸಸಿ ನೆಟ್ಟು ಬೆಳೆಸುವ ಕೆಲಸ ನಡೆದಿದೆ. ತನ್ನ ವ್ಯಾಪ್ತಿಯಲ್ಲಿ ಒಟ್ಟು 200 ಕಿಲೋ ಮೀಟರ್‌ ಉದ್ದದ ರಸ್ತೆಯಲ್ಲಿ ಗಿಡಗಳನ್ನು ನಡೆಲಾಗಿದೆ. ಬರೋಬ್ಬರಿ 12.7 ಲಕ್ಷ ಸಸಿಗಳನ್ನು ನೆಟ್ಟು ಪೋಷಿಸಲಾಗಿದೆ. ಎಳೆ ಸಸಿಯನ್ನು ನೆಟ್ಟರೆ ಅದು ಬದುಕುಳಿಯುವ ಸಾಧ್ಯತೆ ಬಲು ಕಡಿಮೆ ಎನ್ನುವ ಪಾಠವನ್ನು ಅರಣ್ಯ ಇಲಾಖೆ ಕಳೆದ ಎರಡು ವರ್ಷಗಳ ಹಿಂದೆ ಕಲಿತಿತ್ತು. ಹೀಗಾಗಿ, ಇಲಾಖೆಯು ಎರಡು ವರ್ಷಗಳಿಂದ ಸಸಿಗಳನ್ನು ತನ್ನ ತೋಟಗಳಲ್ಲಿ ಕನಿಷ್ಠವೆಂದರೂ 10 ಅಡಿ ಎತ್ತರಕ್ಕೆ ಬೆಳೆಸಿ, ಸಾಕಷ್ಟು ಬಲಿತ ಗಿಡಗಳನ್ನೇ ನೆಡುವ ಮೂಲಕ ಯಶಸ್ಸು ಕಂಡಿದೆ.

‘ಎಳೆಯ ಸಸಿಗಳು ಬೇರು ಬಿಟ್ಟು 8–10 ಅಡಿ ಬೆಳೆಯಲು ಹಲವು ಸವಾಲುಗಳಿರುತ್ತದೆ. ಮಾನವ, ಪ್ರಾಣಿ, ಪರಿಸರ ಇತ್ಯಾದಿ ಅಂಶಗಳು ಪ್ರಭಾವ ಬೀರುತ್ತವೆ. ಇದಕ್ಕೆ ನಾವು ಅವಕಾಶ ಕೊಡಲೇಬಾರದು. ನಾವೇ ಸಸಿಗಳನ್ನು ಸಾಕಷ್ಟು ಕಾಲ ತೋಟದಲ್ಲಿ ಬೆಳೆಸಿ, ಅದು ಬದುಕುಳಿಯುತ್ತದೆ ಎಂಬ ನಂಬಿಕೆ ಬಂದ ಮೇಲೆ ರಸ್ತೆ ಬದಿಯಲ್ಲಿ ನೆಡಲು ಶುರುಮಾಡಿಕೊಂಡೆವು. ನಮಗೆ ಅದು ಫಲ ಕೊಟ್ಟಿತು. ಶೇ 10ರಷ್ಟು ಸಸಿಗಳು ಸಾಯುತ್ತವೆ ನಿಜ. ಆದರೆ, ಅದು ನಮಗೆ ದೊಡ್ಡ ನಷ್ಟವಲ್ಲ’ ಎಂದು ಡಿಸಿಎಫ್ ಪ್ರಶಾಂತ್‌ ಕುಮಾರ್‌ ‘ಪ್ರಜಾವಾಣಿ’ ಜತೆ ತಮ್ಮ ಅನುಭವ ಹಂಚಿಕೊಂಡರು.

ಈ ವರ್ಷ ಸಮರೋಪಾದಿ ಹಸಿರೀಕರಣ:

ಅರಣ್ಯೀಕರಣ ಯೋಜನೆ ಈ ವರ್ಷ ಸಮರೋಪಾದಿಯಲ್ಲಿ ನಡೆಯಲಿದೆ. ಈ ವರ್ಷ ನಾಗರಿಕರಿಗೆ ನೀಡಲೆಂದೇ 8.9 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ. ಇಲಾಖೆಗಾಗಿ 3 ಲಕ್ಷ ಬೆಳೆದ ಸಸಿಗಳನ್ನು ಮೀಸಲಿಟ್ಟುಕೊಂಡಿದೆ. ಇದರ ಪೈಕಿ ಮೈಸೂರು ನಗರದಲ್ಲಿ 30 ಸಾವಿರ, ತಾಲ್ಲೂಕುಗಳನ್ನು ಸಂಪರ್ಕಿಸುವ ಹೆದ್ದಾರಿಗಳಿಗಾಗಿ 25 ಸಾವಿರ ಸಸಿಗಳನ್ನು ಕನಿಷ್ಠ 8 ಅಡಿ ಎತ್ತರಕ್ಕೆ ಬೆಳೆಸಿ ನೆಡಲು ಕಾದಿರಿಸಿಕೊಳ್ಳಲಾಗಿದೆ.

‘ನಾವು ಸಸಿಗಳನ್ನು ನೆಡುವುದು ಮಾತ್ರ ಮುಖ್ಯವಲ್ಲ. ಅವು ಉಳಿದುಕೊಂಡರೆ ಮಾತ್ರ ಶ್ರಮ ಸಾರ್ಥಕವಾದಂತೆ. ಹಾಗಾಗಿ, ಬೆಳೆದ ಸಸಿಗಳನ್ನೇ ನೆಡುತ್ತಿದ್ದೇವೆ. ನಗರ ಮಿತಿಯಲ್ಲಿ 10 ಜಾತಿಯ ಸಸಿಗಳನ್ನು ನೆಡುತ್ತೇವೆ. ಕಠಿಣ ಪರಿಸರಕ್ಕೆ ಹೊಂದಿಕೊಳ್ಳುವ ಪ್ರಭೇದದ ಸಸಿಗಳನ್ನೇ ಆಯ್ಕೆ ಮಾಡಿಕೊಂಡಿದ್ದೇವೆ’ ಎಂದು ಪ್ರಶಾಂತ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !