ಆರ್‌.ಕೆ ಸ್ಟುಡಿಯೊ ಗೋದ್ರೇಜ್‌ಗೆ ಮಾರಾಟ

ಸೋಮವಾರ, ಮೇ 27, 2019
33 °C
ಅತ್ಯಾಧುನಿಕ ವಸತಿ ಸಮುಚ್ಛಯ ನಿರ್ಮಾಣಕ್ಕೆ ಯೋಜನೆ

ಆರ್‌.ಕೆ ಸ್ಟುಡಿಯೊ ಗೋದ್ರೇಜ್‌ಗೆ ಮಾರಾಟ

Published:
Updated:
Prajavani

ಮುಂಬೈ: ’ಆಗ್‌‘ ನಂತಹ ಪ್ರಖ್ಯಾತ ಸಿನಿಮಾ ನಿರ್ಮಾಣವಾಗಿದ್ದ ನಗರದ ಆರ್‌.ಕೆ. ಸ್ಟುಡಿಯೊ ಜಾಗ ಇನ್ಮುಂದೆ ನೆನಪು ಮಾತ್ರ. 2 ಎಕರೆ 2 ಗುಂಟೆ ಜಾಗವನ್ನು ಪ್ರತಿಷ್ಠಿತ ಗೋದ್ರೇಜ್ ಪ್ರಾಪರ್ಟೀಸ್‌ ಖರೀದಿ ಮಾಡಿದ್ದು, ಅಲ್ಲಿ ಅತ್ಯಾಧುನಿಕ ವಸತಿ ಸಮುಚ್ಚಯ ತಲೆ ಎತ್ತಲಿದೆ.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ದಿವಂಗತ ರಾಜ್‌ಕಪೂರ್ ಅವರು ಪ್ರತಿಷ್ಠಿತ ಆರ್‌.ಕೆ. ಸ್ಟುಡಿಯೊವನ್ನು 1948ರಲ್ಲಿ ನಿರ್ಮಿಸಿದ್ದರು. ಅಲ್ಲಿ ಮೊದಲು ಚಿತ್ರೀಕರಣವಾಗಿದ್ದು 'ಆಗ್‌'ನಂತಹ (1948) ಹಿಟ್‌ ಸಿನಿಮಾ. ನಂತರ ರಚನೆಯಾದ ಆರ್‌.ಕೆ ಸಿನಿಮಾ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾದ ‘ಬರ್ಸಾತ್‌’ (1949), ‘ಆವಾರಾ,’ ಶ್ರೀ420 ಅಂತಹ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಕೊಳ್ಳೆ ಹೊಡೆದಿದ್ದವು.

ಮುಂಬೈನ ಚೆಂಬೂರ್‌ನ ಸಾಯನ್‌–ಪನ್‌ವೆಲ್ ರಸ್ತೆಯಲ್ಲಿ 33,000 ಚದರ ಮೀಟರ್ ಹರಡಿಕೊಂಡಿರುವ ಈ ಜಾಗದಲ್ಲಿ ವಸತಿ ಜತೆಗೆ ಶಾಲೆ, ಆಸ್ಪತ್ರೆ, ಶಾಪಿಂಗ್‌ ಮಾಲ್‌ಗಳು ತಲೆ ಎತ್ತಲಿವೆ ಎಂದು ಗೋದ್ರೇಜ್‌ ಕಂಪನಿ ಶನಿವಾರ ತಿಳಿಸಿದೆ.

ಮಾರಾಟದ ಒಪ್ಪಂದದ ನಂತರ ಮಾತನಾಡಿದ ಕಂಪನಿ ಮುಖ್ಯಸ್ಥ ಪಿರೋಜ್‌ ಷಾ ಗೋದ್ರೇಜ್ ಅವರು, ‘ಕಪೂರ್‌ ಸಂಸ್ಥೆಯ ಸ್ವತ್ತಾಗಿದ್ದ ಜಾಗವನ್ನು‌ ಅಭಿವೃದ್ಧಿ ದೃಷ್ಟಿಯಿಂದ ಖರೀದಿಸಿದ್ದೇವೆ. ಮುಂಬೈ ಜನರಿಗೆ ವಿಭಿನ್ನ ಜೀವನ ಶೈಲಿ ನೀಡುವ ಗುರಿಯೊಂದಿಗೆ ಖರೀದಿ ಮಾಡಿದ್ದೇವೆ‘ ಎಂದು ಹೇಳಿದ್ದಾರೆ.

ಸ್ಟುಡಿಯೊ ಮಾಲೀಕರೂ ಆಗಿರುವ ರಾಜ್‌ಕಪೂರ್‌ ಅವರ ಪುತ್ರ ರಣಧೀರ್‌ ಕಪೂರ್‌, ‘ಹಲವು ದಶಕಗಳಿಂದ ನಮ್ಮೊಡನೆ ಇದ್ದ ಆರ್‌.ಕೆ.
ಸ್ಟುಡಿಯೊವನ್ನು ಗೋದ್ರೇಜ್‌ ಕಂಪನಿ ಖರೀದಿ ಮಾಡಿದೆ. ಇಲ್ಲಿ ಆರ್‌.ಕೆ ಸ್ಟುಡಿಯೊದ ಶೈಲಿಯಲ್ಲಿಯೇ ನೂತನ ವಸತಿ ಯೋಜನೆಗಳು ನಿರ್ಮಾಣಗೊಳ್ಳಲಿವೆ’ ಎಂದು ಹೇಳಿದ್ದಾರೆ.
ಈ ಸ್ಟುಡಿಯೊ 2017ರ ಸೆಪ್ಟೆಂಬರ್ 16ರಂದು ನಡೆದ ಬೆಂಕಿ ಅವಘಡದಲ್ಲಿ ನೆಲಮಹಡಿ ಭಸ್ಮವಾಗಿತ್ತು. ’ಸೂಪರ್‌ ಡ್ಯಾನ್ಸರ್‌‘ ರಿಯಾಲಿಟಿ ಷೋ ಚಿತ್ರೀಕರಣ ನಡೆಯುತ್ತಿದ್ದಾಗ ಬೆಂಕಿಬಿದ್ದಿತ್ತು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !