ಬದಲಾಯಿತು ರಸೆಲ್ ಮಾರುಕಟ್ಟೆಯ ಚಿತ್ರಣ

ಶುಕ್ರವಾರ, ಮೇ 24, 2019
30 °C
ಒತ್ತುವರಿ ತೆರವು: ಹೈಕೋರ್ಟ್ ಆದೇಶದನ್ವಯ ಕಾರ್ಯಾಚರಣೆ l ಸ್ವಚ್ಛವಾದ ಕಾರಿಡಾರ್‌ ಪ್ರದೇಶ

ಬದಲಾಯಿತು ರಸೆಲ್ ಮಾರುಕಟ್ಟೆಯ ಚಿತ್ರಣ

Published:
Updated:
Prajavani

ಬೆಂಗಳೂರು: ಕಾಲಿಡಲೂ ಜಾಗವಿಲ್ಲವೇನೋ ಎಂಬಂತೆ ಜನರಿಂದ ಸದಾ ಗಿಜಿಗುಡುತ್ತಿದ್ದ, ಕಸ– ಕೊಚ್ಚೆಗಳಿಂದಾಗಿ ಮೂಗು ಮುಚ್ಚಿಕೊಂಡೇ ತಿರುಗಬೇಕಾದ ದುಸ್ಥಿತಿಯಲ್ಲಿದ್ದ ಶಿವಾಜಿನಗರದ ರಸೆಲ್ ಮಾರುಕಟ್ಟೆ ಚಿತ್ರಣವೇ ಬದಲಾಗಿದೆ. 

ಇಲ್ಲಿ ಗ್ರಾಹಕರು ನಡೆದಾಡುವ ಜಾಗವನ್ನು ಆಕ್ರಮಿಸಿಕೊಂಡಿದ್ದ ಅಂಗಡಿಯ ಮುಂಗಟ್ಟುಗಳನ್ನು ಶನಿವಾರ ಬೆಳಿಗ್ಗೆ ವ್ಯಾಪಾರಿಗಳೇ ಹಿಂದಕ್ಕೆ ಸರಿಸಿದರು. ನೋಡನೋಡುತ್ತಲೇ ಇಲ್ಲಿನ ಕಾರಿಡಾರ್‌ಗಳು ಸ್ವಚ್ಛವಾದವು. ಇದೇನಾಗುತ್ತಿದೆ ಎಂದು ಸೋಜಿಗ ಪಡುವಷ್ಟರಲ್ಲಿ ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ದಂಡು ದೌಡಾಯಿಸಿ ಬಂತು. ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿಯೂ ಸ್ಥಳಕ್ಕಾಗಮಿಸಿದರು. ಜೆಸಿಬಿ, ಟಿಪ್ಪರ್, ಟ್ರ್ಯಾಕ್ಟರ್‌ಗಳು ಸ್ಥಳಕ್ಕೆ ಬಂದವು. 

‘ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಅಗ್ನಿ ಅವಘಡಗಳು ಸಂಭವಿಸಿದರೆ ನಿಭಾಯಿಸಲು ಕಷ್ಟದಾಯಕವಾದ ಪರಿಸ್ಥಿತಿ ಇದೆ’ ಎಂದು ದೂರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ಹೈಕೋರ್ಟ್‌ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಬಿಬಿಎಂಪಿ ಶನಿವಾರ ಈ ಮಾರುಕಟ್ಟೆಯ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿತು.

ತೆರವು ಕಾರ್ಯಾಚರಣೆ ಬಗ್ಗೆ 5 ದಿನಗಳ ಹಿಂದೆಯೇ ವ್ಯಾಪಾರಿಗಳಿಗೆ ಬಿಬಿಎಂಪಿ ಅಧಿಕಾರಿಗಳು ಮಾಹಿತಿ  ನೀಡಿದ್ದರು. ಆದರೆ, ರಂಜಾನ್ ಹಬ್ಬ ಇರುವ ಕಾರಣ ಸದ್ಯಕ್ಕೆ ತೆರವು ಮಾಡದಂತೆ ರಸೆಲ್ ಮಾರುಕಟ್ಟೆ ವ್ಯಾಪಾರಿಗಳ ಸಂಘ ಮನವಿ ಮಾಡಿತ್ತು. ಹೈಕೋರ್ಟ್‌ ಆದೇಶ ಪಾಲಿಸಬೇಕಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮುಂದೂಡಲು ಪಾಲಿಕೆ ಅಧಿಕಾರಿಗಳು ಒಪ್ಪಿರಲಿಲ್ಲ.

ದಿನ ಬೆಳಿಗ್ಗೆ ವ್ಯಾಪಾರಕ್ಕೆ ಸಜ್ಜಾಗುವ ವರ್ತಕರು ಶನಿವಾರ ತಮ್ಮ ಮಳಿಗೆಗಳ ಮುಂದೆ ಚಾಚಿಕೊಂಡಿದ್ದ ಸಾಮಗ್ರಿಗಳನ್ನು ಸ್ವಯಂ ತೆರವುಗೊಳಿಸಿದರು. ಕಾರಿಡಾರ್‌ಗಳನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸಿದರು.

ಬಿಬಿಎಂಪಿ ವಿಶೇಷ ಆಯುಕ್ತ (ಮಾರುಕಟ್ಟೆ) ರವೀಂದ್ರ ಮತ್ತು ಜಂಟಿ ಆಯುಕ್ತ ( ಘನತ್ಯಾಜ್ಯ) ಸರ್ಫರಾಜ್ ಖಾನ್ ನೇತೃತ್ವದ ಅಧಿಕಾರಿಗಳ ತಂಡ ಇಡೀ ಮಾರುಕಟ್ಟೆಯನ್ನು ಪರಿಶೀಲನೆ ನಡೆಸಿತು. ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ತೆರವು ಮಾಡದ ವ್ಯಾಪಾರಿಗಳ ಸಾಮಗ್ರಿಗಳನ್ನು ನಿರ್ದಾಕ್ಷಿಣ್ಯವಾಗಿ ಟ್ರ್ಯಾಕ್ಟರ್‌ಗೆ ತುಂಬಿತು. ಅಂಗಡಿಯಿಂದ ಚಾಚಿಕೊಂಡಿದ್ದ ಚಾವಣಿ, ಮೆಟ್ಟಿಲು ಮತ್ತು ಫಲಕಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.

ಅಗ್ನಿ ಶಾಮಕ ಇಲಾಖೆ ವರದಿ: ಹೈಕೋರ್ಟ್ ಆದೇಶ ಪಾಲಿಸಬೇಕಿದ್ದು, ಮಾರುಕಟ್ಟೆಗಳಲ್ಲಿ ಸುರಕ್ಷತೆಗೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ವರದಿ ನೀಡುವಂತೆ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಮಹಾನಿರ್ದೇಶಕ ಎಂ.ಎನ್. ರೆಡ್ಡಿ ಅವರಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಮಾ.27ರಂದು ಪತ್ರ ಬರೆದಿದ್ದರು.

‘421 ಮಳಿಗೆಗಳಿರುವ ರಸೆಲ್ ಮಾರುಕಟ್ಟೆಯಲ್ಲಿ ಸುರಕ್ಷತೆ ಇಲ್ಲ. ಆಕಸ್ಮಿಕವಾಗಿ ಅವಘಡಗಳು ಸಂಭವಿಸಿದರೆ ಜನರ ಪ್ರಾಣ ರಕ್ಷಣೆಗೆ ಅವಕಾಶಗಳಿಲ್ಲ. ಅಗ್ನಿಶಾಮಕ ವಾಹನಗಳು ಮತ್ತು ಆಂಬುಲೆನ್ಸ್‌ಗಳು ಒಳಕ್ಕೆ ಹೋಗಲು ಜಾಗವೇ ಇಲ್ಲ ಎಂದು ರೆಡ್ಡಿ ಅವರು ವರದಿಯಲ್ಲಿ ತಿಳಿಸಿದ್ದರು’ ಎಂದು ಎಂದು ಬೆಂಗಳೂರು ಪೂರ್ವ ವಲಯದ ಪ್ರಾದೇಶಿಕ ಅಗ್ನಿ ಶಾಮಕ ಅಧಿಕಾರಿ ಎಂ.ಆರ್. ನರಸಿಂಹಮೂರ್ತಿ ತಿಳಿಸಿದರು.

‘ಅಗ್ನಿಶಾಮಕ ವಾಹನ ಬಂದು ಹೋಗಲು ಅನುಕೂಲ ಕಲ್ಪಿಸುವ ಸಲುವಾಗಿ ಮಾರುಕಟ್ಟೆಯ ಬಲಭಾಗ ದಲ್ಲಿ ಅನ್ಯವಾಹನಗಳ ನಿಲುಗಡೆ ನಿಷೇಧಿಸಬೇಕು. ಜಾರುವ ಗೇಟ್‌ ಅಳವಡಿಸಿ, ನಿರ್ವಹಣೆಗೆ ಸಿಬ್ಬಂದಿ ನಿಯೋಜಿಸಬೇಕು. ಅವಘಡ ಸಂಭವಿಸಿದರೆ ಜನ ಕೂಡಲೇ ಹೊರ ಬರಲು ಪಾದಚಾರಿ ಮಾರ್ಗಗಳು ವಿಶಾಲವಾಗಿರಬೇಕು ಎಂದು ವರದಿಯಲ್ಲಿ ಉಲ್ಲೇಖಿಸಿದ್ದರು’ ಎಂದರು. ಈ ವರದಿ ಆಧರಿಸಿ ಶನಿವಾರ ತೆರವು ಕಾರ್ಯಾಚರಣೆ ನಡೆಯಿತು. 

700 ಸಿಬ್ಬಂದಿ: ಕಾರ್ಯಾಚರಣೆಯಲ್ಲಿ ಪಾಲಿಕೆ, ಬೆಸ್ಕಾಂ, ಜಲಮಂಡಳಿ, ಅಗ್ನಿಶಾಮಕ ದಳ, ಪೊಲೀಸ್
ಇಲಾಖೆ ಸೇರಿ 700ಕ್ಕೂ ಸಿಬ್ಬಂದಿ ಪಾಲ್ಗೊಂಡರು. 6 ಜೆಸಿಬಿ ಮತ್ತು 6 ಟಿಪ್ಪರ್‌ಗಳನ್ನು ಬಳಸಿಕೊಳ್ಳಲಾಯಿತು ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.

ಸ್ಟೀಫನ್ ಸ್ಕ್ವೇರ್ ಮಾರುಕಟ್ಟೆ ರಸ್ತೆ ಸುಗಮ

ಗುಜರಿ ಅಂಗಡಿಗಳೇ ತುಂಬಿಕೊಂಡಿದ್ದ ಸ್ಟೀಫನ್ ಸ್ಕ್ವೇರ್ ಮಾರುಕಟ್ಟೆ ರಸ್ತೆಯಲ್ಲಿಯೂ ತೆರವು ಕಾರ್ಯಾಚರಣೆ ನಡೆಯಿತು. ಈ ರಸ್ತೆಯಲ್ಲೀಗ  ವಾಹನಗಳು ಸುಗಮವಾಗಿ ಸಂಚರಿಸಬಹುದಾಗಿದೆ.

ಪೆಟ್ಟಿಗೆ ಅಂಗಡಿಗಳ ಹೊರಗೆ ರಾಶಿ ಹಾಕಿದ್ದ ಎಲ್ಲ ವಸ್ತುಗಳನ್ನು ಅಂಗಡಿಗಳ ಮಾಲೀಕರೇ ತೆರವು ಮಾಡಿದರು.

ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ತೆರವು ಮಾಡಬೇಕಾದ ಸ್ಥಳಗಳನ್ನು ಗುರುತು ಮಾಡಿದರು. ಅಷ್ಟರಲ್ಲಿ ಮಾರುಕಟ್ಟೆಯ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳೇ ಮುಂದಾಳತ್ವ ವಹಿಸಿ ಒತ್ತುವರಿ ತೆರವುಗೊಳಿಸಿದರು.

ಚಾಂದಿನಿ ಚೌಕ ರಸ್ತೆ, ಒಣ ಮೀನು ಮಾರುಕಟ್ಟೆಯ ನ್ಯೂ ಮಾರ್ಕೆಟ್ ರಸ್ತೆ, ಬೀಫ್ ಮಾರುಕಟ್ಟೆ ಮತ್ತು ಅದಕ್ಕೆ ಹೊಂದಿಕೊಂಡಂತೆ ಇರುವ ಬ್ರಾಡ್‌ ವೇ ರಸ್ತೆಗಳಲ್ಲೂ ಒತ್ತುವರಿ ತೆರವುಗೊಳಿಸಲಾಯಿತು.

ಲಾಠಿ ಬೀಸಿದ ಪೊಲೀಸರು

ರಸೆಲ್ ಮಾರುಕಟ್ಟೆಯ ಹಿಂಭಾಗದ ಗೋಡೆಗೆ ಅಂಟಿಕೊಂಡು ಅನಧಿಕೃತವಾಗಿ ನಿರ್ಮಿಸಿದ್ದ ಮೀನು ಮಾರಾಟದ ಐದಾರು ಮಳಿಗೆಗಳನ್ನು ಅಧಿಕಾರಿಗಳು ತೆರವುಗೊಳಿಸಿದರು.

‘ಪಾಲಿಕೆಯಿಂದ ಅನುಮತಿ ಪಡೆದಿದ್ದೇವೆ. ಹಾಗಾಗಿ ಮಳಿಗೆ ತೆರವುಗೊಳಿಸಬಾರದು’ ಎಂದು ಮೀನು ವ್ಯಾಪಾರಿಗಳು ಮನವಿ ಮಾಡಿದರು. ಅನುಮತಿ ಪತ್ರ ತೋರಿಸುವಂತೆ ಅಧಿಕಾರಿಗಳು ಸೂಚಿಸಿದಾಗ ‘ಒಂದೆರಡು ಗಂಟೆ ಅವಕಾಶ ಕೊಡಿ’ ಎಂದು ವ್ಯಾಪಾರಿಗಳು ಕೋರಿದರು.

ಈ ಸಂದರ್ಭದಲ್ಲಿ ಜನ ಗುಂಪು ಸೇರಿದ್ದರಿಂದ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಕೂಡಲೇ ಪೊಲೀಸರು, ಅಲ್ಲಿ ಸೇರಿದ್ದ ಜನರತ್ತ ಲಾಠಿ ಬೀಸಿ ಚದುರಿಸಿದರು.

ಮುಂದಿನ ಕಾರ್ಯಾಚರಣೆ‌ ಮಡಿವಾಳದಲ್ಲಿ 

ನ್ಯಾಯಾಲಯದ ಆದೇಶ ಪಾಲಿಸುವ ಸಲುವಾಗಿ ಎಲ್ಲಾ ಮಾರುಕಟ್ಟೆಗಳಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪಾಲಿಕೆ ವಿಶೇಷ ಆಯುಕ್ತ ರವೀಂದ್ರ ತಿಳಿಸಿದರು.

ಮುಂದಿನ ಕಾರ್ಯಾಚರಣೆ ಮಡಿವಾಳ ಮಾರುಕಟ್ಟೆಯಲ್ಲಿ ನಡೆಯಲಿದೆ. ಹಂತ–ಹಂತವಾಗಿ ಎಲ್ಲಾ ಮಾರುಕಟ್ಟೆಗಳ ಒತ್ತುವರಿಯನ್ನೂ ತೆರವು ಮಾಡಲಾಗುವುದು ಎಂದು ತಿಳಿಸಿದರು.

‘ರಸೆಲ್ ಮಾರುಕಟ್ಟೆಯಲ್ಲಿ 6 ತಂಡಗಳು ಕಾರ್ಯಾಚರಣೆ ನಡೆಸಿವೆ. ಇಲ್ಲಿ ಬೀದಿ ಬದಿ ವ್ಯಾಪಾರಿಗಳಿಲ್ಲ. ಮಳಿಗೆಯವರೇ ರಸ್ತೆ ಮತ್ತು ಪಾದಚಾರಿ ಮಾರ್ಗ ಒತ್ತುವರಿ ಮಾಡಿದ್ದಾರೆ. ಮೊದಲೇ ತಿಳಿಸಿ ಕಾರ್ಯಾಚರಣೆ ಮಾಡಿದ್ದರಿಂದ ಅಷ್ಟಾಗಿ ವಿರೋಧ ವ್ಯಕ್ತವಾಗಿಲಿಲ್ಲ’ ಎಂದರು.

ಬಡವರ ಅಂಗಡಿಗಳೇ ಗುರಿ

‘ಬಡವರ ಅಂಗಡಿಗಳನ್ನೇ ಗುರಿಯಾಗಿಸಿಕೊಂಡು ಬಿಬಿಎಂಪಿ ಈ ಕಾರ್ಯಾಚರಣೆ ನಡೆಸಿದೆ’ ಎಂದು ರಸೆಲ್ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಬ್ರೀಸ್ ಚೌದರಿ ಆರೋಪಿಸಿದರು.

‘ರಂಜಾನ್ ಸಮೀಪಿಸುತ್ತಿರುವ ಕಾರಣ ವ್ಯಾಪಾರ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ತೆರವು ಮಾಡಿದ್ದರಿಂದ ಬಡ ವ್ಯಾಪಾರಿಗಳಿಗೆ ತೊಂದರೆ ಆಗಿದೆ. ಬಡವರಿಗಾಗಿ ಒತ್ತುವರಿಯಲ್ಲಿ 1 ಅಡಿಯಷ್ಟು ಜಾಗವನ್ನಾದರೂ ಉಳಿಸಿಕೊಡಬೇಕು’ ಎಂದು ಅವರು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !