ಬುಧವಾರ, ಸೆಪ್ಟೆಂಬರ್ 22, 2021
21 °C
ಕಸಾಪ ಸಂಸ್ಥಾಪನಾ ದಿನಾಚರಣೆ

ಪರೀಕ್ಷೆಗೆ ಸೀಮಿತವಾದ ಸಾಹಿತ್ಯ, ಪರಂಪರೆ‌: ತೈಲೂರು ವೆಂಕಟಕೃಷ್ಣ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಕನ್ನಡ ನಾಡಿನ ಸಾಹಿತ್ಯ ಹಾಗೂ ಭವ್ಯ ಪರಂಪರೆ ಕೇವಲ ವಿದ್ಯಾರ್ಥಿಗಳ ಪರೀಕ್ಷಾ ದೃಷ್ಟಿಕೋನಕ್ಕೆ ಮಾತ್ರ ಸೀಮಿತವಾಗಿವೆ. ಸರ್ಕಾರ ಈ ವಿಚಾರದಲ್ಲಿ ಬದ್ಧತೆ ಪ್ರದರ್ಶನ ಮಾಡದಿದ್ದರೆ, ಮುಂದೆ ಸಾಹಿತ್ಯ ಪರಂಪರೆ ನಾಶವಾಗುತ್ತದೆ’ ಎಂದು ಸಾಹಿತಿ ತೈಲೂರು ವೆಂಕಟಕೃಷ್ಣ ವಿಷಾದ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಡಾ.ಬೆಸಗರಹಳ್ಳಿ ರಾಮಣ್ಣ ಸಭಾಂಗಣದಲ್ಲಿ ಭಾನುವಾರ ನಡೆದ ಕಸಾಪ 105ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ ಮಹಾರಾಜರ ಕಾಲದಲ್ಲಿ ಕನ್ನಡ ಸಾಹಿತ್ಯ ಹೆಚ್ಚು ಬೆಳವಣಿಗೆಯಾಗಿದೆ. ಅಂದಿನ ಸಾಹಿತ್ಯ ಹಾಗೂ ಸಂಸ್ಕೃತಿ ಬೆಳವಣಿಗೆಯಲ್ಲಿ ದೂರ ದೃಷ್ಟಿ ಅಡಕವಾಗಿತ್ತು. ಅದೇ ಕಾರಣಕ್ಕೆ ಅರಸರು ಹಾಗೂ ದಿವಾನರು ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿ ಸಾಹಿತ್ಯ ಸಂರಕ್ಷಣೆಗೆ ಚಾಲನೆ ಕೊಟ್ಟಿದ್ದರು. ಆದರೆ ಇಂದು ಸಾಹಿತ್ಯ ಮಕ್ಕಳ ಪಠ್ಯಕ್ರಮ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೀಮಿತವಾಗಿದೆ. ನಾಡಿನ ಭವ್ಯ ಸಾಹಿತ್ಯ ಪರಂಪರೆ ಉಳಿಸಲು ಸರ್ಕಾರ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಎರಡು ಕಣ್ಣುಗಳಂತೆ ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ’ ಎಂದರು.

‘ಸಾಹಿತ್ಯ ಪರಿಷತ್ ಉದ್ಘಾಟನೆಯಾದ ಹಲವು ವರ್ಷಗಳು ಕನ್ನಡದ ಕೆಲಸಗಳು ಅತ್ಯಂತ ಚುರುಕಾಗಿ ನಡೆಯುತ್ತಿದ್ದವು. ಕನ್ನಡ ಕಟ್ಟುವ, ಉಳಿಸುವಲ್ಲಿ ಸಾಹಿತಿಗಳು ಕ್ರಿಯಾಶೀಲವಾಗಿದ್ದರು. ಇಂದಿನ ಸಾಹಿತ್ಯ ಮ್ಮೇಳನಗಳು, ಕೆಲವರಿಗಷ್ಟೇ ಸೀಮಿತವಾಗಿದ್ದು, ಜಾತ್ರೆಯ ಸ್ವರೂಪ ಪಡೆದುಕೊಂಡಿವೆ. ಕನ್ನಡ ಕಟ್ಟುವ ಕೆಲಸ ನಿರೀಕ್ಷೆಯಂತೆ ನಡೆಯುತ್ತಿಲ್ಲ. ಆಧುನಿಕ ಶೈಲಿಯ ವೇಗದ ಜೀವನದಲ್ಲಿ ಹಣ ಸಂಪಾದನೆ, ಅಭಿವೃದ್ಧಿ ಹೆಸರಿನಲ್ಲಿ ಸಾಕಷ್ಟು ಅನಾಹುತಗಳು ನಡೆಯುತ್ತಿವೆ. ಸಾಹಿತ್ಯ ಹಾಗೂ ಸಂಸ್ಕೃತಿಯ ಚಿಂತನೆಗಳಿಗೆ ಅವಕಾಶವೇ ಸಿಗದಂತಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ರಾಜರ ಸಾಹಿತ್ಯದ ಕೊಡುಗೆಯನ್ನು ಉಳಿಸಿಕೊಂಡು ಹೋಗಲು ಬದ್ಧರಾಗಿದ್ದರು. ಗಮಕಿಗಳನ್ನು ಹಳ್ಳಿಗಳಿಗೆ ಕರೆದೊಯ್ದು ಸಾಹಿತ್ಯ ವಾಚನ ಮಾಡಿಸುತ್ತಿದ್ದರು. ಗ್ರಾಮೀಣ ಭಾಗದಲ್ಲಿ ₹ 1ಕ್ಕೆ ರಾಮಾಯಣ ಹಾಗೂ ₹ 2ಕ್ಕೆ ಮಹಾಭಾರತ ಕೃತಿಗಳು ದೊರೆಯುವಂತೆ ಮಾಡಿ, ಹಳ್ಳಿಗಳಲ್ಲಿ ಕನ್ನಡ ಸಾಹಿತ್ಯ ಬೆಳೆಸುವುದಕ್ಕೆ ನೆರವಾಗಿದ್ದರು’ ಎಂದರು.

‘ಕರ್ನಾಟಕ ಏಕೀಕರಣದ ಮುಂಚೆಯೇ ಕನ್ನಡ ಸಾಹಿತ್ಯ ಪರಿಷತ್ ನಿರ್ಮಾಣವಾಗಿತ್ತು. ದಿವಾನ್ ಮಿರ್ಜಾ ಇಸ್ಮಾಯಿಲ್ ಸಾಹಿತ್ಯ ಪರಿಷತ್ ಭವನ ನಿರ್ಮಾಣಕ್ಕೆ ನೆರವಾದರು. ನಂತರ ಡಿವಿಜಿ, ಮಾಸ್ತಿ, ಜಿ.ನಾರಾಯಣ ಸಾಹಿತ್ಯವನ್ನು ಹಳ್ಳಿ ಹಳ್ಳಿಗೆ ಕೊಂಡೊಯ್ದರು. ಅಂದಿನ ಪರಿಷತ್ ಪತ್ರಿಕೆ ಪ್ರಾಚೀನ ಸಾಹಿತ್ಯ ಅರಿಯಲು ತುಂಬಾ ಸಹಕಾರಿಯಾಗಿತ್ತು. ಅದನ್ನು ಯಶಸ್ವಿಯಾಗಿ ಮುಂದುವರಿಸಲಾಗಲಿಲ್ಲ. ಈ ನಡುವೆ ಹಳೆಯ ಸಾಹಿತ್ಯ ಪರಿಷತ್ ಕಟ್ಟಡ ನವೀಕರಣ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಅವಕಾಶ ನೀಡದೆ ಕನ್ನಡಕ್ಕೆ ದುಡಿದ ಮಹಾಕವಿಗಳು ಹಾಗೂ ಸಾಹಿತಿಗಳ ಸವಿನೆನಪಿಗಾಗಿ ಕಟ್ಟಡ ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವ ಅಗತ್ಯವಿದೆ’ ಎಂದರು.

ಸಂಸ್ಕೃತ ವಿದ್ವಾಂಸ ಎಂ.ಕೆ.ಶಂಕರನಾರಾಯಣಭಟ್ ಹಾಗೂ ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ ಅವರನ್ನು ಅಭಿನಂದಿಸಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ, ಮಾಂಡವ್ಯ ಸಂಸ್ಥೆ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಸಾಹಿತಿಗಳಾದ ಪ್ರೊ.ಜಿ.ಟಿ.ವೀರಪ್ಪ, ಡಾ.ಹುಸ್ಕೂರು ಕೃಷ್ಣೇಗೌಡ, ಕೆ.ಪಿ.ಬಾಬು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.