ದೇಹದಾರ್ಢ್ಯದ ಮೋಡಿಗಾರ ಮಣಿಕಂಠ

ಸೋಮವಾರ, ಮೇ 27, 2019
23 °C

ದೇಹದಾರ್ಢ್ಯದ ಮೋಡಿಗಾರ ಮಣಿಕಂಠ

Published:
Updated:
Prajavani

ತೊದಲು ಮಾತನಾಡುವಾಗಲೇ ಕೈಗೆ ಸಿಕ್ಕ ಹಾಳೆಯ ಮೇಲೆ ದೃಢಕಾಯದ ಮನುಷ್ಯರ ಆಕೃತಿ ಬಿಡಿಸುತ್ತಿದ್ದ ಈ ಬಾಲಕನಿಗೆ ದೇಹದಾರ್ಢ್ಯ ಪಟುವಾಗುವ ಕನಸು. ಮನೆಯಲ್ಲಿ ಅಪ್ಪ ತಂದಿಡುತ್ತಿದ್ದ ಹಾರೆಕೋಲು, ಟರ್ನಿಂಗ್ ಮಷಿನ್, ಸಿಮೆಂಟಿನ ಉಂಡೆಯನ್ನೇ ಡಂಬಲ್ಸ್ ಮಾಡಿಕೊಂಡು ವ್ಯಾಯಾಮ ಮಾಡುತ್ತಿದ್ದ.

ಮಗನೊಳಗಿನ ಕನಸಿಗೆ ನೀರೆರೆದ ಅಪ್ಪ ಬಸವರಾಜ ಮುರ್ಡೇಶ್ವರ ಅವರ ಶ್ರಮ ಫಲ ಕೊಟ್ಟಿದೆ. ಉತ್ತರ ಕನ್ನಡ ಜಿಲ್ಲೆ ಶಿರಸಿಯ ದೇಹದಾರ್ಢ್ಯ ಪಟು ಮಣಿಕಂಠ ಮುರ್ಡೇಶ್ವರ ಇತ್ತೀಚೆಗಷ್ಟೇ ದೆಹಲಿಯಲ್ಲಿ ನಡೆದ ಮಿಸ್ಟರ್ ಏಷಿಯಾ ಸ್ಪರ್ಧೆಯ 60 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಪಡೆದು ಭರವಸೆ ಮೂಡಿಸಿದ್ದಾರೆ.

ಶಿರಸಿಯಲ್ಲೊಂದು ಪುಟ್ಟ ಜಿಮ್ ಮಾಡಿಕೊಂಡಿರುವ ಅವರು, ಯುವಕರು, ಮಕ್ಕಳಿಗೆ ದೇಹ ಬೆಳೆಸುವ ಕಲೆ ಹೇಳಿಕೊಡುತ್ತಾರೆ. ಅವರ ಜಿಮ್‌ ಎಂದರೆ ವ್ಯಸನಿಗಳ ಪುನರ್ವಸತಿ ಕೇಂದ್ರವಿದ್ದಂತೆ. ‘ನಮ್ಮ ಜಿಮ್‌ ಸೇರುವ ಮೊದಲು ಗುಟ್ಕಾ, ಸಿಗರೆಟ್, ಮದ್ಯ ಸೇವನೆ ತ್ಯಜಿಸಲೇ ಬೇಕು. ಇದು ನನ್ನ ಮೊದಲ ಕರಾರು. ವ್ಯಸನಕ್ಕೆ ಚೆಲ್ಲುವ ಹಣವನ್ನು ಆಹಾರಕ್ಕೆ ಹಾಕಿದರೆ ಬಲಿಷ್ಠರಾಗುತ್ತೀರಿ ಎಂದು ಅವರಿಗೆ ತಿಳಿ ಹೇಳುತ್ತೇನೆ. ಎಷ್ಟೊ ಯುವಕರನ್ನು ವ್ಯಸನಮುಕ್ತಗೊಳಿಸಿದ ಹೆಮ್ಮೆಯೂ ಇದೆ’ ಎನ್ನುತ್ತಾರೆ ಮಣಿಕಂಠ.

ಶಾಲೆಗೆ ಹೋಗುವಾಗ ದೇಹದಾರ್ಢ್ಯ ಪಟುಗಳ ಚಿತ್ರವನ್ನು ಕಟ್ ಮಾಡಿ ಪುಸ್ತಕದಲ್ಲಿ ಇಟ್ಟುಕೊಳ್ಳುತ್ತಿದ್ದ ಮಣಿಕಂಠ, ಇದೇ ಕರ್ಮ ಮಾರ್ಗವೆಂದು ಆಗಲೇ ನಿರ್ಧರಿಸಿ ಬಿಟ್ಟಿದ್ದರು. ಜಿಮ್‌ಗೆ ಹೋಗಲು ದುಡ್ಡಿರಲಿಲ್ಲ. ಅಪ್ಪ ಕಾರ್ಪೆಂಟರ್. ದುಡಿದ ಹಣ ನಿತ್ಯದ ಊಟಕ್ಕೆ ಸರಿಯಾಗುತ್ತಿತ್ತು. ಕಬ್ಬಿಣದ ಸರಳಿಗೆ ಸಿಮೆಂಟ್ ಕಟ್ಟಿ, ತಾವೇ ಡಂಬಲ್ಸ್ ಸಿದ್ಧಪಡಿಸಿ, ಅಭ್ಯಾಸ ಮಾಡಲಾರಂಭಿಸಿದರು.

‘ನನ್ನ ಹಠ ನೋಡಿದ ಅಮ್ಮ ಜಿಮ್‌ ಹೋಗಲು ನೆರವಾದರು. ಈ ಅನುಭವ ಜೀವನದಲ್ಲಿ ಮರೆಯಲಾಗದ ಕಹಿ ಘಟನೆ. ಯಾವ ಜಿಮ್‌ನಲ್ಲೂ ನನ್ನನ್ನು ಸೇರಿಸಿಕೊಳ್ಳಲಿಲ್ಲ. ಎಲ್ಲರೂ ಹೊರಹಾಕಿಬಿಟ್ಟರು. ಅಳುತ್ತ ಮನೆ ಸೇರಿದೆ. ಛಲದ ಪಾಠವನ್ನು ಇಲ್ಲಿಂದಲೇ ಕಲಿತೆ’ ಎನ್ನುವಾಗ ಅವರು ಗದ್ಗದಿತರಾದರು.

ಹೀಗೆ ಆರಂಭವಾದ ಮಣಿಕಂಠ ಅವರ ಪ್ರಯತ್ನ ಸಾಧನೆಯ ಹಾದಿಯಲ್ಲಿ ಸಾಗಿದೆ. 1.5 ಕೆ.ಜಿ.ಯಷ್ಟು ಚಿಕನ್, 30 ಮೊಟ್ಟೆ, ಒಂದು ಕೆ.ಜಿ ತರಕಾರಿ, ಹಾಲೊಡಕು ಪ್ರೊಟೀನ್ ಪೌಡರ್ ಅವರ ನಿತ್ಯದ ಆಹಾರ. ‘ಸ್ಪರ್ಧೆ ಸಮೀಪಿಸಿದಾಗ ಎರಡು ಕೆ.ಜಿ ಚಿಕನ್, 60–70ರಷ್ಟು ಮೊಟ್ಟೆ ತಿನ್ನಬೇಕಾಗುತ್ತದೆ. ಕಾರ್ಬೊಹೈಡ್ರೇಟ್ ಇರುವ ಆಹಾರ ಸೇವನೆ ಕಡಿಮೆ ಮಾಡಬೇಕು. ಪ್ರತಿ ಎರಡೂವರೆ ತಾಸಿಗೊಮ್ಮೆ ಊಟ. ಎಣ್ಣೆ ಹಚ್ಚಿದ ಮೈಗೆ ಮಧ್ಯಾಹ್ನ ಒಂದು ತಾಸು ಬಿಸಿಲು ಸ್ನಾನ. ಮುಕ್ಕಾಲು ತಾಸು ಸೈಕ್ಲಿಂಗ್, ಅರ್ಧ ಗಂಟೆ ವಾಕಿಂಗ್, ಜಾಗಿಂಗ್, ಸಂಜೆ ಮೂರು ತಾಸು ಜಿಮ್‌ನಲ್ಲಿ ತಾಲೀಮು’ ಇವಿಷ್ಟಿದ್ದರೆ ಮಾತ್ರ ದೇಹ ಪ್ರದರ್ಶನಕ್ಕೆ ಸಿದ್ಧವಾಗುತ್ತದೆ ಎನ್ನುತ್ತಾರೆ ಅವರು.

ಎರಡು ಬಾರಿ ಮಿಸ್ಟರ್ ಕರ್ನಾಟಕ, ಮಿಸ್ಟರ್ ಸೌತ್ ಇಂಡಿಯಾ ಬಂಗಾರದ ಪದಕ, ಇನ್ನೂ ಹಲವಾರು ಪ್ರಶಸ್ತಿ ಮುಡಿಗೇರಿಸಿಕೊಂಡಿರುವ 28ರ ಹರೆಯದ ಮಣಿಕಂಠ ಅವರಿಗೆ ವರ್ಡ್ ಚಾಂಪಿಯನ್ ಆಗಬೇಕು, ಒಲಂಪಿಯಾ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂಬ ಹಂಬಲ. ದೇಹ ಬೆಳೆಸಲು ಅಗತ್ಯವಿರುವ ಆಹಾರ ಸೇವನೆಗೆ ಆರ್ಥಿಕ ಮುಗ್ಗಟ್ಟು ಅವರನ್ನು ಕಾಡುತ್ತಿದೆ. ದುಡಿದು ತರುವ ಜೀವ ಮನೆಯಲ್ಲಿ ಕುಳಿತಿದೆ. ಮಗನಿಗೆ ಬೆನ್ನೆಲುಬಾಗಿದ್ದ ಅಪ್ಪ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !