ಆರ್‌ಸಿಬಿ ಮೇಲೆ ಬತ್ತದ ಅಭಿಮಾನಿಗಳ ಪ್ರೀತಿ

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಒಂದು ಪಂದ್ಯದಲ್ಲಿಯೂ ಆಡದ ಕರ್ನಾಟಕದ ಹುಡುಗ; ಹೊಸ ಪ್ರಯೋಗಗಳಿಗೆ ಮನಸ್ಸು ಮಾಡದ ಕೊಹ್ಲಿ

ಆರ್‌ಸಿಬಿ ಮೇಲೆ ಬತ್ತದ ಅಭಿಮಾನಿಗಳ ಪ್ರೀತಿ

Published:
Updated:
Prajavani

ಬೆಂಗಳೂರು: ‘ಧನ್ಯವಾದ ಅಭಿಮಾನಿಗಳೇ. ನಿಮ್ಮ ಅಭಿಮಾನ, ಪ್ರೀತಿ ಇಲ್ಲಾಂದ್ರೆ ನಾವೇನೂ ಅಲ್ಲ. ಅಭಿಮಾನಿಗಳು, ಕ್ರೀಡಾಂಗಣದ ಸಿಬ್ಬಂದಿ ಮತ್ತು ನೆರವು ಸಿಬ್ಬಂದಿಯ ಪ್ರೀತಿಗೆ ನಾವು ಅಭಾರಿಯಾಗಿದ್ದೇವೆ. ಮುಂದಿನ ವರ್ಷ ಉತ್ತಮವಾದ ಸಿದ್ದತೆಯೊಂದಿಗೆ ಮರಳುತ್ತೇವೆ’–

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಭಾನುವಾರ ಸಂಜೆ ಮಾಡಿರುವ ಟ್ವೀಟ್‌ ಇದು. ಇಲ್ಲಿಯ ಅಭಿಮಾನಿಗಳ ಪ್ರೀತಿಗೆ ಅವರು ಸೋತಿದ್ದಾರೆ.

ಶನಿವಾರ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಪ್ಪತ್ತೇಳು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಸೇರಿದ್ದರು. ರಾತ್ರಿ ಎಂಟಕ್ಕೆ ಶುರುವಾಗುವ ಪಂದ್ಯಕ್ಕೆ ಸಂಜೆ ಐದರಿಂದಲೇ ಕ್ರೀಡಾಂಗಣದತ್ತ ಹೋಗಿದ್ದರು. ರಾತ್ರಿ 12ರವರೆಗೂ ತಮ್ಮ ಜಾಗ ಬಿಟ್ಟು ಕದಲಲಿಲ್ಲ. ಪಂದ್ಯದ ಆರಂಭದಿಂದ ಕೊನೆಯವರೆಗೂ ’ಆರ್‌ಸಿಬಿ..ಆರ್‌ಸಿಬಿ..’ ಮೊರೆತ ನಿಂತಿರಲಿಲ್ಲ.

ಈ ಆವೃತ್ತಿಯ ಕೊನೆಯ ಪಂದ್ಯ ಇದಾಗಿತ್ತು. ಆದರೂ ಮೊದಲ ಪಂದ್ಯಕ್ಕೆ ಇದ್ದಷ್ಟೇ ಉತ್ಸಾಹದ ವಾತಾವರಣ ಇತ್ತು. ಒಟ್ಟು 14 ಪಂದ್ಯಗಳಲ್ಲಿ ಆರ್‌ಸಿಬಿ ಗೆದ್ದಿದ್ದು ಐದರಲ್ಲಿ ಮಾತ್ರ. ಎಂಟರಲ್ಲಿ ಸೋತಿದೆ. ಬೆಂಗಳೂರಿನಲ್ಲಿ ನಡೆದಿದ್ದ ಏಳು ಪಂದ್ಯಗಳಲ್ಲಿ ಮೂರು ಗೆದ್ದು, ಮೂರು ಸೋತಿತ್ತು. ಒಂದು ಪಂದ್ಯ ಮಳೆಗಾಹುತಿಯಾಗಿತ್ತು.  ಏನೇಲ್ಲಾ ಆದರೂ ಬೆಂಗಳೂರು ಕ್ರಿಕೆಟಿಗರ ಆರ್‌ಸಿಬಿ ಪ್ರೀತಿ ಮಾತ್ರ ಒಂಚೂರು ಕಡಿಮೆಯಾಗಲಿಲ್ಲ. ಇದಕ್ಕೆ ಪ್ರತಿಯಾಗಿ ವಿರಾಟ್ ಬಳಗವು ಪಂದ್ಯದ ನಂತರ ಕೃತಜ್ಞತೆ ಸಲ್ಲಿಸಿತು 

ಕನ್ನಡಿಗನಿಗೆ ಸಿಗದ ಅವಕಾಶ:  ತಂಡದಲ್ಲಿ ಸ್ಥಾನ ಪಡೆದಿದ್ದ ರಾಜ್ಯದ ಏಕೈಕ ಆಟಗಾರನಿಗೆ ಕಣಕ್ಕಿಳಿಯುವ ಅವಕಾಶ ಕೊನೆಗೂ ಸಿಗಲಿಲ್ಲ ಎಂಬ ಕೊರಗೂ ಮಾತ್ರ ಉಳಿಯಿತು.

ಹೋದ ವರ್ಷದ ಆವೃತ್ತಿಯಲ್ಲಿಯೂ ಇದೇ ರೀತಿಯಾಗಿತ್ತು. ಆಗ ತಂಡದಲ್ಲಿದ್ದ ಪವನ್ ದೇಶಪಾಂಡೆ ಮತ್ತು ಅನಿರುದ್ಧ ಜೋಶಿ ಇಡೀ ಟೂರ್ನಿಯಲ್ಲಿ ಬೆಂಚ್ ಕಾಯಿಸಿದ್ದರು. ಪವನ್ ಮತ್ತು ಅನಿರುದ್ಧ ಅವರು ದೇಶಿ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡಿದ್ದರೂ ಅವರನ್ನು ಈ ಬಾರಿಯ ತಂಡದಲ್ಲಿ ಆರ್‌ಸಿಬಿ ಸೇರ್ಪಡೆ ಮಾಡಿಕೊಳ್ಳಲಿಲ್ಲ. ಕಿರಿಯ ಆಟಗಾರ ದೇವದತ್ ಪಡಿಕ್ಕಲ್ ಒಬ್ಬರೇ ಸ್ಥಾನ ಪಡೆದಿದ್ದರು. ಆದರೆ ಅವರಿಗೆ ಹನ್ನೊಂದರ ಬಳಗದಲ್ಲಿ ಅವಕಾಶವೇ ಸಿಗಲಿಲ್ಲ. 19 ವರ್ಷದ ದೇವದತ್ತ ಅವರು 19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡಿದ್ದರು. ಪ್ಲೇ ಆಫ್ ಅವಕಾಶ ಕಳೆದುಕೊಂಡ ನಂತರದ ಪಂದ್ಯಗಳಲ್ಲಿ ಗೆಲುವಿನ ಒತ್ತಡ ಇರದಿದ್ದ ಸಂದರ್ಭದಲ್ಲಿ ಯುವ ಆಟಗಾರನಿಗೆ ಅವಕಾಶ ನೀಡಬಹುದಿತ್ತು.

ಮುಂಬೈ ಇಂಡಿಯನ್ಸ್‌ ತಂಡವು ರಸಿಕ್ ಸಲಾಂ, ರಾಜಸ್ಥಾನ್ ರಾಯಲ್ಸ್ ತಂಡದಲ್ಲಿರುವ 16 ವರ್ಷದ ರಿಯಾನ್ ಪರಾಗ್ ಅವರಿಗೆ ಅವಕಾಶ ನೀಡಿತ್ತು. ಅದರಲ್ಲಿ ರಿಯಾನ್ ಸಫಲರಾದರು. ಆರ್‌ಸಿಬಿಯು ಪ್ರಯಾಸ್ ರೇ ಬರ್ಮನ್ ಅವರಿಗೆ ಕೇವಲ ಒಂದು ಪಂದ್ಯದಲ್ಲಿ ಆಡಿಸಿತ್ತು. ದೇವದತ್ತ ಅವರನ್ನು ಆಡಿಸುವ ಗೋಜಿಗೆ ಹೋಗಲಿಲ್ಲ. ಇವತ್ತು ಇಡೀ ಭಾರತದಲ್ಲಿ ಕರ್ನಾಟಕವೇ ಕ್ರಿಕೆಟ್‌ನ ‘ಶಕ್ತಿಕೇಂದ್ರ’ವಾಗಿ ಗುರುತಿಸಿಕೊಂಡಿದೆ. ಐಪಿಎಲ್‌ನ ಬೇರೆ ಬೇರೆ ತಂಡಗಳಲ್ಲಿರುವ ಕನ್ನಡಿಗರು ಮಿಂಚುತ್ತಿದ್ದಾರೆ. ಆದರೆ ಬೆಂಗಳೂರಿನ ತಂಡದಲ್ಲಿ ಅವರಿಗೆ ಸ್ಥಾನವಿಲ್ಲ.

‘ಇದು ಗಂಭೀರ ವಿಷಯ. ಕೆಎಸ್‌ಸಿಎ ಮತ್ತು ಬಿಸಿಸಿಐ ಮಧ್ಯಸ್ಥಿಕೆ ವಹಿಸುವುದು ಅಗತ್ಯ. ಕನ್ನಡಿಗ ಆಟಗಾರರು ಇಲ್ಲದಿದ್ದರೂ ಅಭಿಮಾನಿಗಳು ಈ ರೀತಿ ಬೆಂಬಲಿಸುತ್ತಿದ್ದಾರೆ. ಸ್ಥಳೀಯ ಆಟಗಾರರು ಇದ್ದು, ಚೆನ್ನಾಗಿ ಆಡಿದ್ದರೆ ಇನ್ನೆಷ್ಟು ಸಂಭ್ರಮಿಸುತ್ತಿದ್ದರೋ ಏನೋ.  ಆದ್ದರಿಂದ ಮುಂದಿನ ಬಾರಿಯಾದರೂ ನಮ್ಮ ಹುಡುಗರಿಗೆ ಈ ತಂಡದಲ್ಲಿ ಆಡುವ ಅವಕಾಶಸಿಗುವಂತಾಗಲಿ’ ಎಂದು ಶನಿವಾರ ಪಂದ್ಯ ನೋಡಲು ಬಂದಿದ್ದ ಎಂಜಿನಿಯರ್ ಸುನಿಲ್ ಕುಮಾರ್ ಹೇಳಿದರು.

‘ಕೊನೆಯ ಪಂದ್ಯವಾದರೂ ನಮ್ಮನ್ನು ಬೆಂಬಲಿಸಲು ಇಷ್ಟು ಪ್ರಮಾಣದಲ್ಲಿ ಜನ ಸೇರಿದ್ದಾರೆ. ಅವರ ಪ್ರೀತಿಗೆ ನಮ್ಮ ಬಳಗವು ಭಾವುಕವಾಗಿದೆ. ಇಂತಹ ಪ್ರೀತಿ ಬಹುಶಃ ಬೇರೆ ಯಾವುದೇ  ಫ್ರ್ಯಾಂಚೈಸ್‌ಗೂ ಸಿಕ್ಕಿರುವ ಸಾಧ್ಯತೆಯೇ ಇಲ್ಲ. ಅದಕ್ಕಾಗಿಯೇ ನಮ್ಮ ಈ ಪಂದ್ಯದ ಜಯವನ್ನು ಅಭಿಮಾನಿಗಳಿಗೆ ಅರ್ಪಿಸುತ್ತೇವೆ’ ಎಂದು ತಂಡದ ಆಲ್‌ರೌಂಡರ್ ಗುರುಕೀರತ್ ಸಿಂಗ್ ಮಾನ್ ಸುದ್ದಿಗಾರರಿಗೆ ಹೇಳಿದರು.

ಜಾಲತಾಣಿಗರ ಹೃದಯ ಕದ್ದ ಆರ್‌ಸಿಬಿ ಗರ್ಲ್!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಆರ್‌ಸಿಬಿ ತಂಡ ಗೆದ್ದ ಸುದ್ದಿಗಿಂತಲೂ ಹೆಚ್ಚು ಜನಪ್ರಿಯವಾಗಿದ್ದ ದೀಪಿಕಾಘೋಷ್!

ಹೌದು; ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಆರ್‌ಸಿಬಿ ಅಭಿಮಾನಿ, ಯುವತಿ ದೀಪಿಕಾ ಘೋಷ್ ಈಗ ಜಾಲತಾಣದಲ್ಲಿ ಯುವತಾರೆಯಂತೆ ಕಂಗೊಳಿಸುತ್ತಿದ್ದಾರೆ. ಅವರು ಆರ್‌ಸಿಬಿ ತಂಡವನ್ನು ಬೆಂಬಲಿಸುತ್ತ ಕುಣಿದಾಡುವ, ಚಿಯರ್ ಮಾಡುವ ಚಿತ್ರಗಳು ಮತ್ತು ವಿಡಿಯೊಗಳು ಸಿಕ್ಕಾಪಟ್ಟೆ ಮೆಚ್ಚುಗೆ ಗಳಿಸಿವೆ.

ಅದರಲ್ಲಿ ದೀಪಿಕಾ ತಮ್ಮ ಇನ್ಸ್ಟಾ ಗ್ರಾಮ್‌ನಲ್ಲಿ ಹಾಕಿಕೊಂಡ ವಿಡಿಯೊ ತುಣಕನ್ನು ಕೇವಲ 24 ಗಂಟೆಗಳೊಳಗೆ  ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ.

ಪಂದ್ಯ ನಡೆಯುವ ಸಂದರ್ಭದಲ್ಲಿ ಸ್ಟಾರ್ ಸ್ಪೋರ್ಟ್ಸ್‌ ಚಾನೆಲ್‌ ಮೂಲಕ ಟಿವಿ ಪರದೆಯ ಮೇಲೆ ಪದೇ ಪದೇ ಈ ಯುವತಿಯನ್ನು ತೋರಿಸಲಾಗಿತ್ತು. ಇದೇ ಕಾರಣಕ್ಕೆ ಅವರು ಈಗ ಸಾಮಾಜಿಕ ಜಾಲತಾಣದಲ್ಲಿಯೂ ಜನಪ್ರಿಯರಾಗಿದ್ದಾರೆ.

‘ಟಿವಿ ಕ್ಯಾಮೆರಾಮನ್ ಮತ್ತು ಜನರ ಹೃದಯ ಗೆದ್ದ ಹುಡುಗಿ’ ಎಂದು ಹಲವರು ಟ್ವೀಟ್ ಮಾಡಿದ್ದಾರೆ.

 ‘ಈ ಯುವತಿಯನ್ನು ಆರ್‌ಸಿಬಿಯ ಪ್ರತಿಯೊಂದು ಪಂದ್ಯಕ್ಕೂ ಕರೆಸಿ. ಲಕ್ಕಿ ಗರ್ಲ್ ಆಗಿ ಬರುತ್ತಾರೆ. ಆರ್‌ಸಿಬಿ ಗೆಲ್ಲುತ್ತದೆ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ದೀಪಿಕಾ ಘೋಷ್ ಅವರು ಸುಮಾರು ಆರು ವರ್ಷಗಳಿಂದ ಆರ್‌ಸಿಬಿಯನ್ನು ಬೆಂಬಲಿಸುತ್ತಿದ್ದಾರಂತೆ. ಪ್ರತಿ ವರ್ಷವೂ ತಂದೆ ಮತ್ತು ಸಹೋದರಿಯೊಂದಿಗೆ ಪಂದ್ಯ ವೀಕ್ಷಿಸುತ್ತಾರೆ. ಈ ಬಾರಿ ಅವರು ಗಮನ ಸೆಳೆದಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !