ಮಂಗಳವಾರ, ಮೇ 17, 2022
26 °C
ಜಚನಿ ಕಾಲೇಜಿನಲ್ಲಿ ಆಯೋಜಿಸಿದ್ದ ಮಕ್ಕಳ ಸಾಂಸ್ಕೃತಿಕ ತರಬೇತಿ ಶಿಬಿರ ಸಮಾರೋಪ

ಸಂಸ್ಕೃತಿ ಮರೆಯಾದರೆ ಅಶಾಂತಿ ತಾಂಡವ: ಪ್ರೊ.ಕೋಡಿರಂಗಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಸಾಹಿತ್ಯ, ಸಂಸ್ಕೃತಿ ಮರೆಯಾಗುತ್ತಿರುವ ದೇಶಗಳಲ್ಲಿ ಅಧರ್ಮ, ದ್ವೇಷ, ಅಶಾಂತಿಯತ್ತ ಸಾಗುತ್ತದೆ. ಆದ್ದರಿಂದ, ಇವತ್ತು ನಮ್ಮ ಮಕ್ಕಳಿಗೆ ಮಹಾನ್ ವ್ಯಕ್ತಿಗಳ ಸಾಧನೆ, ತತ್ವ, ಆದರ್ಶಗಳು ಪಾಲನೆಯ ಗುಣ ಬೆಳೆಸಬೇಕಿದೆ’ ಎಂದು ಶಾಂತಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೋಡಿರಂಗಪ್ಪ ತಿಳಿಸಿದರು.

ನಿಡುಮಾಮಿಡಿ ಜಗದ್ಗುರು ಶಾಖಾ ಮಠ, ಕರ್ನಾಟಕ ಜನಕಲಾರಂಗ, ಸ್ವಾಮಿ ವಿವೇಕಾನಂದ ಕಲಾಬಳಗ ಮತ್ತು ಕಲಾ ಕೇಂದ್ರ, ಅನನ್ಯ ಕಲಾರಂಗ, ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಅಧ್ಯಯನ ಕೇಂದ್ರ ಸಹಯೋಗದಲ್ಲಿ ನಗರದ ಜಚನಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಮಕ್ಕಳ ಸಾಂಸ್ಕೃತಿಕ ತರಬೇತಿ ಶಿಬಿರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಉನ್ನತ ಮಟ್ಟದ ಶಾಲೆಗಳು ತಮ್ಮ ಸ್ವಾರ್ಥಕ್ಕಾಗಿ ಮಕ್ಕಳ ಭವಿಷ್ಯವನ್ನು ಹಾಳು ಮಾಡಲು ಮುಂದಾಗಿವೆ. ಮಕ್ಕಳಿಗೆ ದಿನ ನಿತ್ಯ ಪಠ್ಯ ಓದಿ ಅಂಕ ಪಡೆಯುವ ಯಂತ್ರಗಳನ್ನಾಗಿ ಮಾರ್ಪಡಿಸಿವೆ. ವಿಜ್ಞಾನವನ್ನು ಅವೈಜ್ಞಾನಿಕವಾಗಿ ಹೇಳಿಕೊಡಲಾಗುತ್ತಿದೆ. ಇದೊಂದು ಅಪಾಯಕಾರಿ ಸಂಗತಿ’ ಎಂದು ಆತಂಕ ವ್ಯಕ್ತಪಡಿಸಿದರು.

‘ಶಾಲಾ-ಕಾಲೇಜಿನ ಬೋಧಕರು ಮಕ್ಕಳ ಮನಸ್ಸಿನ ಭಾವನೆ ಅರ್ಥ ಮಾಡಿಕೊಳ್ಳಬೇಕು. ವೈಜ್ಞಾನಿಕ ವಿಚಾರದ ಕಲಿಕೆಗೆ ಸ್ವಾತಂತ್ರ್ಯ ನೀಡಬೇಕು. ಬುದ್ಧಿವಂತಿಕೆ ಸಾಮರ್ಥ್ಯ ಹೆಚ್ಚಿಸಲು ಸಂಗೀತ, ಸಾಹಿತ್ಯ, ಸಂಸ್ಕೃತಿ, ಕೆರೆ, ಬಾವಿ, ಜಲಾಶಯ, ಪ್ರಕೃತಿ, ಆಕಾಶ, ನಕ್ಷತ್ರ, ಸೂರ್ಯ, ಚಂದ್ರ, ಭೂಮಿ ಭೂಗರ್ಭದಂತಹ ವಿಚಾರಗಳನ್ನು ಹೇಳಿಕೊಡಬೇಕು. ಅದರಿಂದ ಮಕ್ಕಳಲ್ಲಿ ಅಲೋಚಿಸುವ ಶಕ್ತಿ ಬೆಳೆಯುತ್ತದೆ’ ಎಂದು ತಿಳಿಸಿದರು.

‘ಪ್ರತಿಭೆಗೆ ಶ್ರೀಮಂತ, ಬಡವ ಎಂಬ ಭೇದವಿರುವುದಿಲ್ಲ. ಎಲ್ಲಿ ಬೇಕಾದರೂ ಪ್ರತಿಭೆಗಳು ಹುಟ್ಟಬಹುದು. ಅದಕ್ಕೆ ನಿಯಮಗಳು ಇಲ್ಲ. ಆದ್ದರಿಂದ ಪೋಷಕರು ಮತ್ತು ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವತ್ತ ಗಮನ ಹರಿಸಬೇಕು. ಇಡೀ ಜಗತ್ತು ಒಂದೇ ಎಂಬ ಭಾವನೆ ಎಲ್ಲರಲ್ಲೂ ಮೂಡಿದಾಗ ಮಾತ್ರ ನಾವು ವಿಶ್ವಮಾನವರಾಗಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದೇರ್ಶಕ ವೆಂಕಟಾಚಲಪತಿ ಮಾತನಾಡಿ, ‘ಮಕ್ಕಳಿಗೆ ಅಧ್ಯಯನ ಪೂರಕವಾದ ಶಿಬಿರಗಳಲ್ಲಿ ಕಲಿಕೆಗೆ ಅವಕಾಶ ಮಾಡಿಕೊಡಬೇಕು. ಶಾಲಾ-ಕಾಲೇಜುಗಳಲ್ಲಿ ಒತ್ತಡ ಹೇರಿ ಕಲಿಸುವ ವಿದ್ಯೆ ಸಮಾಜಕ್ಕೆ ಪ್ರಯೋಜನವಿಲ್ಲ. ಅದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಪೋಷಕರು ಮಕ್ಕಳಲ್ಲಿ ಮಾನವೀಯ ಮೌಲ್ಯ ಒಳಗೊಂಡಿರುವ ಸಾಹಿತ್ಯ, ಸಂಸ್ಕೃತಿ ವಿಚಾರ ಮನೋಭಾವನೆ ಬೆಳೆಸಬೇಕು’ ಎಂದು ಹೇಳಿದರು.

ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಜಚನಿ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಶಿವಜ್ಯೋತಿ, ಮಾನವ ಹಕ್ಕುಗಳ ಹಿತರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಕಾರ್ಯಪಡೆ ಜಿಲ್ಲಾ ಘಟಕ ಅಧ್ಯಕ್ಷ ಟಿ.ಆರ್.ಕೃಷ್ಣಪ್ಪ, ಶಿಬಿರದ ನಿರ್ದೇಶಕ ಎ.ವಿ.ವೆಂಕಟರಾಮ, ಗೋಲ್ಡನ್ ಗ್ಲೀಮ್ಸ್ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ಕೆ.ಆರ್.ಶಶಿಕಲಾ, ಜಚನಿ ಕಾನೂನು ಕಾಲೇಜಿನ ಪ್ರಾಂಶುಪಾಲ ಸುರೇಶ್, ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರದ ಸಂಯೋಜಕ ಕೆ.ಪಿ ನಾಗೇಶ್, ರಂಗ ನಿರ್ದೇಶಕ ಸೋ.ಸು ನಾಗೇಂದ್ರನಾಥ, ಮುನಿರಾಜು, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ಸಾಹಿತಿ ಚೌಡಪ್ಪ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.