ಶುಕ್ರವಾರ, ಸೆಪ್ಟೆಂಬರ್ 24, 2021
24 °C

ರಾಜ್ಯದಲ್ಲಿ ನೀತಿಸಂಹಿತೆ ಸಡಿಲಿಸಿ: ಚುನಾವಣಾ ಆಯೋಗಕ್ಕೆ ಐವನ್‌ ಡಿಸೋಜ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ರಾಜ್ಯದಲ್ಲಿ ಭೀಕರ ಬರ ಮತ್ತು ಕುಡಿಯುವ ನೀರಿನ ಕೊರತೆ ಉಂಟಾಗಿರುವುದರಿಂದ ಪರಿಸ್ಥಿತಿ ಎದುರಿಸಲು ತುರ್ತು ಕ್ರಮ ಕೈಗೊಳ್ಳುವುದಕ್ಕಾಗಿ ತಕ್ಷಣದಿಂದಲೇ ಚುನಾವಣಾ ನೀತಿಸಂಹಿತೆಯನ್ನು ಸಡಿಲಿಸಬೇಕು ಎಂದು ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಐವನ್‌ ಡಿಸೋಜ ಕೇಂದ್ರ ಚುನಾವಣಾ ಆಯೋಗವನ್ನು ಒತ್ತಾಯಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಮತದಾನ ಮುಗಿದು ಎರಡು ವಾರ ಕಳೆದಿದೆ. ಇಲ್ಲಿ ಬರ ನಿರ್ವಹಣೆಯಂತಹ ತುರ್ತು ಕೆಲಸಗಳ ವಿಚಾರದಲ್ಲಿ ಸಭೆ ನಡೆಸಲು ಮುಖ್ಯಮಂತ್ರಿ ಮತ್ತು ಸಚಿವರಿಗೆ ಅವಕಾಶ ನೀಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿತ್ತು. ಆದರೆ, ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು ನೀತಿಸಂಹಿತೆ ಸಡಿಲಿಕೆಯನ್ನು ವಿರೋಧಿಸಿ ಪತ್ರ ಬರೆದಿದ್ದಾರೆ. ಇದರಿಂದ ಜನರ ಸಂಕಷ್ಟಕ್ಕೆ ಸ್ಪಂದಿಸಲಾಗದ ಸ್ಥಿತಿ ಸೃಷ್ಟಿಯಾಗಿದೆ’ ಎಂದರು.

ಮುಖ್ಯಮಂತ್ರಿ, ಸಚಿವರು ಮತ್ತು ಸಂಸದೀಯ ಕಾರ್ಯದರ್ಶಿಗಳು ಆಡಳಿತ ನಿರ್ವಹಣೆಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳದಂತೆ ತಡೆಯುತ್ತಿರುವುದು ಸರಿಯಲ್ಲ. ಇದರಿಂದ ಬರ ಪರಿಸ್ಥಿತಿ ನಿರ್ವಹಣೆಗೆ ಅಡ್ಡಿಯಾಗುತ್ತಿದೆ. ಈಗ ನೀತಿಸಂಹಿತೆ ಜಾರಿಯನ್ನು ಸ್ವಲ್ಪ ಸಡಿಲಿಸಿರುವ ಚುನಾವಣಾ ಆಯೋಗ, ಅಧಿಕಾರಿಗಳಿಗೆ ಸಭೆ ನಡೆಸುವ ಅವಕಾಶ ನೀಡಿದೆ. ಮುಖ್ಯಮಂತ್ರಿ, ಸಚಿವರು ಮತ್ತು ಸಂಸದೀಯ ಕಾರ್ಯದರ್ಶಿಗಳಿಗೂ ಸಭೆ ನಡೆಸಲು ಅವಕಾಶ ನೀಡಿ ನೀತಿಸಂಹಿತೆ ಸಡಿಲಿಸಬೇಕು ಎಂದು ಆಗ್ರಹಿಸಿದರು.

₹ 132 ಕೋಟಿ ಬಿಡುಗಡೆ: ಬರ ಪರಿಸ್ಥಿತಿ ನಿರ್ವಹಣೆಗಾಗಿ ಕಂದಾಯ ಇಲಾಖೆಯಿಂದ ಜಿಲ್ಲಾಧಿಕಾರಿಗಳಿಗೆ ₹ 132 ಕೋಟಿ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಅಗತ್ಯಕ್ಕೆ ತಕ್ಕಷ್ಟು ಹಣವಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಣಚಾಯತ್‌ ರಾಜ್‌ ಸೇರಿದಂತೆ ಇತರೆ ಇಲಾಖೆಗಳಿಂದಲೂ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಕುಡಿಯುವ ನೀರಿನ ಕೊರತೆ ಆಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೊರತೆ ಉಂಟಾದ ಜನವಸತಿಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಯಾವುದೇ ಭಾಗದಲ್ಲಿ ಸಮಸ್ಯೆ ಇದ್ದರೂ ಜನರು ನೇರವಾಗಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತರಬೇಕು. ಆಗ ತುರ್ತಾಗಿ ಸ್ಪಂದಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ 4.38 ಮೀಟರ್‌ಗೆ ಕುಸಿದಿದೆ. 2018ರ ಮೇ 6ರಂದು ನೀರಿನ ಸಂಗ್ರಹ 5.6 ಮೀಟರ್‌ ಇತ್ತು. ಈ ಬಾರಿ ಹೆಚ್ಚಿನ ಕೊರತೆ ಕಾಡುತ್ತಿದೆ. ಆವಿಯಾಗುತ್ತಿರುವ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದರು.

‘ಮುಂದಿನ ದಿನಗಳಲ್ಲಿ ಮತ್ತೆ ನೀರಿನ ಕೊರತೆ ಆಗದಂತೆ ತಡೆಯಲು ತುಂಬೆ ಅಣೆಕಟ್ಟೆಯಲ್ಲಿ ತುಂಬಿರುವ ಹೂಳನ್ನು ಹೊರಕ್ಕೆ ತೆಗೆಯುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಈ ಕಾಮಗಾರಿಗೆ ಜಿಲ್ಲಾಧಿಕಾರಿಯವರು ಈಗಾಗಲೇ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ’ ಎಂದು ಐವನ್‌ ತಿಳಿಸಿದರು.

ಚರಂಡಿಗಳ ನಿರ್ಮಾಣ:

ಕಳೆದ ವರ್ಷದ ಮಳೆಗಾಲದಲ್ಲಿ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಳೆಯ ನೀರು ತುಂಬಿ, ತಡೆಗೋಡೆ ಕುಸಿದಿತ್ತು. ಈ ಬಾರಿ ಮಳೆಗಾಲದಲ್ಲಿ ಮತ್ತೆ ಸಮಸ್ಯೆ ಆಗದಂತೆ ತಡೆಯಲು ಅಲ್ಲಿ ಏಳು ಹೊಸ ಚರಂಡಿಗಳನ್ನು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು