ಮಂಡ್ಯ: ಕುಡಿಯುವ ನೀರಿಗೆ ತತ್ವಾರ, 100ಕ್ಕೂ ಹೆಚ್ಚು ಹಳ್ಳಿಗಳಿಗೆ ಟ್ಯಾಂಕರ್‌ ನೀರು

ಸೋಮವಾರ, ಮೇ 20, 2019
33 °C
ನಾಲೆಗಳಿಗೆ ಹರಿಯುತ್ತಿದ್ದ ಕೆಆರ್‌ಎಸ್‌ ನೀರು ಮೇ 8ರಂದು ಸ್ಥಗಿತ, ಜನ–ಜಾನುವಾರುಗೆ ಸಂಕಷ್ಟ

ಮಂಡ್ಯ: ಕುಡಿಯುವ ನೀರಿಗೆ ತತ್ವಾರ, 100ಕ್ಕೂ ಹೆಚ್ಚು ಹಳ್ಳಿಗಳಿಗೆ ಟ್ಯಾಂಕರ್‌ ನೀರು

Published:
Updated:
Prajavani

ಮಂಡ್ಯ: ವಿವಿಧೆಡೆ ಕುಡಿಯುವ ನೀರಿಗೆ ತತ್ವಾರ ಎದುರಾಗಿದ್ದು ನಾಗಮಂಗಲ ತಾಲ್ಲೂಕಿನ 80 ಗ್ರಾಮ ಸೇರಿ ಜಿಲ್ಲೆಯ 100ಕ್ಕೂ ಹೆಚ್ಚು ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ  ಪೂರೈಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಆರ್‌ಎಸ್‌ ಜಲಾಶಯದಿಂದ ನಾಲೆಗಳಿಗೆ ಹರಿಯುತ್ತಿರುವ ನೀರು ಮೇ 8ರಂದು(ಬುಧವಾರದಿಂದ) ಸ್ಥಗಿತಗೊಳ್ಳಲಿದ್ದು ಜನ–ಜಾನುವಾರುಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ರೈತರ ಒತ್ತಾಯಕ್ಕೆ ಮಣಿದ ಕಾವೇರಿ ನೀರಾವರಿ ನಿಗಮ ಏ.21ರಂದು ಕೆಆರ್‌ಎಸ್‌ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಿತು. ಇದರಿಂದ ಕೆರೆ, ಕಟ್ಟೆ, ಕೊಳವೆಬಾವಿಗಳು ಮರುಪೂರಣಗೊಂಡು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗಿತ್ತು. ತೀವ್ರ ಸಮಸ್ಯೆ ಇರುವ ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಿದರೆ, ಅಲ್ಪ ಕೊರತೆ ಇರುವ ಹಳ್ಳಿಗಳಿಗೆ ಖಾಸಗಿ ಕೊಳವೆಬಾವಿಗಳಿಂದ ನೀರು ಪಡೆದು ಸರಬರಾಜು ಮಾಡಲಾಗುತ್ತಿತ್ತು.

ಆದರೆ ಬುಧವಾರದಿಂದ ಕೆಆರ್‌ಎಸ್‌ ನೀರು ಸ್ಥಗಿತಗೊಂಡರೆ ಬಿಸಿಲಿನ ಝಳಕ್ಕೆ ಕೊಳವೆಬಾವಿಗಳು ಬತ್ತಿ ಹೋಗುವ ಅಪಾಯ ಎದುರಾಗಿದೆ. ಕುಡಿಯುವ ನೀರು ಪೂರೈಕೆಗೆ ಕೊಳವೆಬಾವಿಗಳನ್ನೇ ಅವಲಂಬಿಸಿರುವ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ. ಕೆಆರ್‌ಎಸ್‌ ಜಲಾಶಯದಲ್ಲಿ ಸದ್ಯ 84.79 ಅಡಿ ನೀರಿನ ಸಂಗ್ರಹವಿದ್ದು ಬೇಸಿಗೆ ಬೆಳೆಗೆ ನೀರು ಸಿಗುವುದು ಅನುಮಾನ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

‘ಶೀಘ್ರ ಮಳೆ ಬಾರದಿದ್ದರೆ ನಮ್ಮನ್ನು ದೇವರೇ ಕಾಪಾಡಬೇಕು. ಕೊಳವೆ ಬಾವಿಗಳಲ್ಲಿ ನೀರು ಪಾತಾಳಕ್ಕೆ ಇಳಿದಿದೆ. ಇಂತಹ ಸಂದರ್ಭದಲ್ಲಿ ನಾಲೆ ನೀರು ನಿಂತರೆ ಕುಡಿಯುವ ನೀರಿಗಾಗಿ ಕಿಲೋಮೀಟರ್‌ ದೂರಕ್ಕೆ ತೆರಳಬೇಕಾದ ಅನಿವಾರ್ಯತೆ ಇದೆ’ ಎಂದು ತಾಲ್ಲೂಕಿನ ಕೀಲಾರ ಗ್ರಾಮದ ರೈತ ಮೋಹನ್‌ಕುಮಾರ್‌ ತಿಳಿಸಿದರು.

‘ಕಟ್ಟು ಪದ್ಧತಿಯಡಿ ಈಗಾಗಲೇ 18 ದಿನಗಳಿಂದ ನೀರು ಹರಿಸಲಾಗಿದೆ. ವೇಳಾಪಟ್ಟಿಯಂತೆ ಮೇ 8ರಂದು ನೀರು ಸ್ಥಗಿತಗೊಳಿಸಲಾಗುವುದು. ಮತ್ತೆ ನೀರು ಹರಿಸುವ ಕುರಿತು ಕಾವೇರಿ ಸಲಹಾ ಸಮಿತಿಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಬೇಕು’ ಎಂದು ಕಾವೇರಿ ನೀರಾವರಿ ನಿಗಮದ ಮೂಲಗಳು ತಿಳಿಸಿವೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !