ಗುರುವಾರ , ಸೆಪ್ಟೆಂಬರ್ 19, 2019
26 °C
ಜಿಲ್ಲಾಡಳಿತದಿಂದ ಬಸವ ಜಯಂತಿ ಕಾರ್ಯಕ್ರಮ ಆಚರಣೆ

ಸಮಾನತೆ ಸಂದೇಶ ನೀಡಿದ ಬಸವಣ್ಣ: ಜಿಲ್ಲಾಧಿಕಾರಿ ಆರ್.ರಾಮಚಂದ್ರನ್

Published:
Updated:
Prajavani

ಬಾಗಲಕೋಟೆ: ‘ಬಸವಣ್ಣನವರ ವಿದ್ಯಾಸ್ಥಳ ಹಾಗೂ ಐಕ್ಯ ಸ್ಥಳವಾಗಿರುವ ಬಾಗಲಕೋಟೆ ಜಿಲ್ಲೆ ವಿಶ್ವಕ್ಕೆ ಸಮಾನತೆಯ ಸಂದೇಶ ನೀಡಿದೆ. ಅದು ಹೆಮ್ಮೆಯ ಸಂಗತಿ’ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು.

ಇಲ್ಲಿನ ಜಿಲ್ಲಾ ಆಡಳಿತದಿಂದ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಗುರು ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ಮಾನವ ಕಾಯಕತತ್ವ ರೂಢಿಸಿಕೊಳ್ಳಬೇಕು ಎಂಬುದು ಬಸವಣ್ಣನವರ ಆಶಯವಾಗಿತ್ತು. ಕಾಯಕವೇ ಕೈಲಾಸ ಎಂದು ಹೇಳಿದ ಮಾತು ಇಂದಿಗೂ ಕೂಡ ಪ್ರಚಲಿತವಾಗಿದೆ. ಬಸವಣ್ಣವರು ದುಡಿಮೆಯಿಂದ ಸನ್ಮಾರ್ಗ ಕಂಡುಕೊಳ್ಳಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬರು ತಮ್ಮನ್ನು ತಾವು ಅರಿತು ನಡೆಯಬೇಕು, ನಡೆ-ನುಡಿಗಳು ಒಂದಾಗಿರಬೇಕು ಎಂಬುದು ಅವರ ತತ್ವವಾಗಿತ್ತು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ ಮಾತನಾಡಿ, ‘ದೇಶ ವಿದೇಶಗಳ ಸಂವಿಧಾನ ಮತ್ತು ತತ್ವ ಸಿದ್ಧಾಂತಗಳನ್ನು ಅವಲೋಕಿಸಿದಾಗ ಆ ಎಲ್ಲ ತತ್ವಗಳಿಗೂ ಬಸವಣ್ಣನವರ ವಚನಗಳು ಸ್ಫೂರ್ತಿ ಆಗಿರುವುದು ಕಂಡು ಬರುತ್ತದೆ’ ಎಂದರು.

‘12 ನೇ ಶತಮಾನದ ಈ ಶರಣರು ರಚಿಸಿದ ವಚನಗಳು ಕನ್ನಡ ಭಾಷೆಯಲ್ಲಿದ್ದರಿಂದ ಬೇರೆ ದೇಶಕ್ಕೆ ಹೋಗಲಿಲ್ಲ. ಕನ್ನಡಕ್ಕೆ ಅಂದು ರಾಷ್ಟ್ರೀಯ ಭಾಷೆ ಸ್ಥಾನಮಾನ ದೊರೆಯದೇ ಇರುವುದರಿಂದ ಬೇರೆ ದೇಶದವರಿಗೆ ಈ ವಚನಗಳ ಬಗ್ಗೆ ತಿಳಿದಿರಲಿಲ್ಲ’ ಎಂದರು.

ಕನ್ನಡಿಗ ನೀರಜ್ ಪಾಟೀಲ ಅವರ ಇಚ್ಛಾಶಕ್ತಿಯಿಂದಾಗಿ ಇಂದು ಇಂಗ್ಲೆಂಡ್‌ನ ಥೇಮ್ಸ್ ನದಿ ದಡದಲ್ಲಿ ಬಸವಣ್ಣನವರ ಮೂರ್ತಿ ಸ್ಥಾಪನೆಯಾಗಿದೆ. ಇಂದು ವಿಶ್ವವೇ ಬಸವಣ್ಣನವರ ವಚನಗಳಿಗೆ ಮಾರು ಹೋಗಿದೆ. ಈ ಎಲ್ಲ ಕೀರ್ತಿಯೂ ಅವಳಿ ಜಿಲ್ಲೆಗಳಾದ ವಿಜಯಪುರ-ಬಾಗಲಕೋಟೆಗೆ ಸಲ್ಲಬೇಕಾಗಿದೆ. ನಾವು ಇಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಉಪನ್ಯಾಸಕರಾಗಿ ನೀಡಿದ ಡಾ.ಸುಮಂಗಲಾ ಮೇಟಿ, ‘12ನೇ ಶತಮಾನದಲ್ಲಿ ಅವತರಿಸಿದ್ದ ಬಸವಣ್ಣನವರ ಜೀವನ ಕಾಲಾತೀತವಾದದ್ದು, ಹಲವು ಮೌಲ್ಯಗಳ ಒಟ್ಟು ರೂಪ ಬಸವಣ್ಣನವರು ಎಂದರು. ಅವರ ನಡೆ-ನುಡಿ, ಆಚಾರ-ವಿಚಾರ, ಲೌಕಿಕ ಪಾರಮಾರ್ಥ ಇವೆಲ್ಲವುಗಳು ವೈರುಧ್ಯಗಳೆನಿಸಿದವು. ಪ್ರತಿಯೊಬ್ಬರೂ ಆತ್ಮಸಾಕ್ಷಿಯನ್ನು ಆಧಾರವಾಗಿಟ್ಟುಕೊಂಡು ಆತ್ಮಾವಲೋಕನ ಮಾಡಿಕೊಳ್ಳುತ್ತಾ ಪರಿಶುದ್ಧ ಬದುಕನ್ನು ಅನಾವರಣ ಮಾಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದರು.

ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ದುರ್ಗೇಶ ರುದ್ರಾಕ್ಷಿ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಸ್ವಾಗತಿಸಿದರು. ಕಂದಾಯ ಇಲಾಖೆಯ ಮಲ್ಲಿಕಾರ್ಜುನ ಗುಡೂರ ವಂದಿಸಿದರು. ಶಂಕರಲಿಂಗ ದೇಸಾಯಿ ನಿರೂಪಿಸಿದರು.

Post Comments (+)