ಕಾನ್‌ಸ್ಟೆಬಲ್‌ಗೆ ಡ್ರ್ಯಾಗರ್‌ನಿಂದ ಇರಿತ; ರೌಡಿ ಕಾಲಿಗೆ ಪೊಲೀಸರಿಂದ ಗುಂಡೇಟು

ಶನಿವಾರ, ಮೇ 25, 2019
22 °C
ಬಂಧಿಸಲು ತೆರಳಿದ್ದಾಗ ಘಟನೆ

ಕಾನ್‌ಸ್ಟೆಬಲ್‌ಗೆ ಡ್ರ್ಯಾಗರ್‌ನಿಂದ ಇರಿತ; ರೌಡಿ ಕಾಲಿಗೆ ಪೊಲೀಸರಿಂದ ಗುಂಡೇಟು

Published:
Updated:
Prajavani

ಮಂಗಳೂರು: ಬಂಧನ ಕಾರ್ಯಾಚರಣೆ ವೇಳೆ ಕಾನ್‌ಸ್ಟೆಬಲ್‌ ಒಬ್ಬರ ಮೇಲೆ ಡ್ರ್ಯಾಗರ್‌ನಿಂದ ಹಲ್ಲೆ ನಡೆಸಿದ ಕುಖ್ಯಾತ ರೌಡಿಯೊಬ್ಬನ ಕಾಲಿಗೆ ಗುಂಡು ಹೊಡೆದಿರುವ ನಗರ ಅಪರಾಧ ಘಟಕದ (ಸಿಸಿಬಿ) ಪೊಲೀಸರು, ರೌಡಿಯನ್ನು ಬಂಧಿಸಿದ್ದಾರೆ.

ಮೂರು ಕೊಲೆ ಸೇರಿದಂತೆ ಆರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಒಂದು ಕೊಲೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ಗೌರೀಶ್‌ ಗುಂಡೇಟು ತಿಂದಿರುವ ರೌಡಿ. ಆತನಿಂದ ಹಲ್ಲೆಗೊಳಗಾಗಿರುವ ಸಿಸಿಬಿ ಕಾನ್‌ಸ್ಟೆಬಲ್‌ ಶೀನಪ್ಪ ಫಾದರ್‌ ಮುಲ್ಲರ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ಗದಾರೆ.

‘ಗೌರೀಶ್‌ ಹಫ್ತಾ ನೀಡುವಂತೆ ಬೆದರಿಕೆ ಹಾಕುತ್ತಿರುವ ಕುರಿತು ಬುಧವಾರ ದೂರು ಬಂದಿತ್ತು. ಆತನ ಬಂಧನಕ್ಕೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಗುರುವಾರ ರಾತ್ರಿ 11.15ರ ಸುಮಾರಿಗೆ ಆರೋಪಿಯು ಜೆಪ್ಪಿನಮೊಗರು ಪ್ರೇಸ್ಟೀಜ್‌ ಇಂಟರ್‌ ನ್ಯಾಷನಲ್‌ ಶಾಲೆಯ ಬಳಿ ಇರುವ ಸುಳಿವು ಸಿಕ್ಕಿತ್ತು. ಅಲ್ಲಿಗೆ ತೆರಳಿದ ಸಿಸಿಬಿ ಇನ್‌ಸ್ಪೆಕ್ಟರ್‌ ಶಿವಪ್ರಕಾಶ್‌ ಆರ್‌.ನಾಯ್ಕ್‌ ನೇತೃತ್ವದ ತಂಡ ಗೌರೀಶ್‌ನನ್ನು ಬಂಧಿಸಲು ಯತ್ನಿಸಿತು. ಆಗ ಆತ ಕಾನ್‌ಸ್ಟೆಬಲ್‌ ಮೇಲೆ ಡ್ರ್ಯಾಗರ್‌ನಿಂದ ಹಲ್ಲೆ ನಡೆಸಿದ್ದ’ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್‌ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

ಹಲ್ಲೆಯಿಂದ ಶೀನಪ್ಪ ಅವರ ಎಡ ತೋಳಿಗೆ ಗಾಯವಾಗಿದೆ. ಆರೋಪಿಯು ಮಾರಕಾಸ್ತ್ರ ಹಿಡಿದು ಪ್ರತಿರೋಧ ಮುಂದುವರಿಸಿದ್ದ. ಶರಣಾಗುವಂತೆ ನೀಡಿದ ಸೂಚನೆಗಳನ್ನು ಪಾಲಿಸಲಿಲ್ಲ. ಕೊನೆಯಲ್ಲಿ ಪೊಲೀಸರು ಆತನ ಬಲಗಾಲಿಗೆ ಮೊಣಕಾಲಿನಿಂದ ಕೆಳಕ್ಕೆ ಗುಂಡು ಹೊಡೆದರು. ಗಾಯಗೊಂಡಿದ್ದ ಆತನನ್ನು ಬಂಧಿಸಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕಂಕನಾಡಿ ನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಗೌರೀಶ್‌ ನಗರದ ಕುಖ್ಯಾತ ಪಾತಕಿಯೊಬ್ಬನ ಸಹಚರ ಎಂಬ ಮಾಹಿತಿ ಲಭ್ಯವಾಗಿದ್ದು, ತನಿಖೆ ನಡೆಸಲಾಗುತ್ತಿದೆ. 2012ರಲ್ಲಿ ಕಾವೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆಸಿದ್ದ ಕುಮಾರ್‌ ಎಂಬಾತನ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ಈತನಿಗೆ ಶಿಕ್ಷೆ ವಿಧಿಸಿದೆ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !