ಶುಕ್ರವಾರ, ಸೆಪ್ಟೆಂಬರ್ 20, 2019
28 °C

ಸ್ತ್ರೀ ಕುಲದ ಘನತೆ ಮೆರೆದ ಮಲ್ಲಮ್ಮ : ಡಿ.ಸಿ

Published:
Updated:
Prajavani

ಬಾಗಲಕೋಟೆ: ‘ಸ್ತ್ರೀ ಕುಲದ ಘನತೆ ಮೆರೆಸಿದ ಶ್ರೇಯ ಮಹಾಮಾತೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನಿಗೆ ಸಲ್ಲುತ್ತದೆ’ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಬಣ್ಣಿಸಿದರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಅಚಲ ಭಕ್ತಿ, ಸಹನಶೀಲತೆ, ತ್ಯಾಗಮಯಿ ಜೀವನ ಹಾಗೂ ಆದರ್ಶ ಸೊಸೆಯಾಗಿ ಬದುಕಿ ಬಾಳಿದ್ದಾರೆ’ ಎಂದರು.

‘ಮಲ್ಲಮ್ಮ ಎಂಬ ಹೆಸರು ಅಷ್ಟು ಮಹತ್ವದ್ದಾಗಿದೆ. ಇದಕ್ಕೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಮಲ್ಲಮ್ಮ ಎಂಬ ಹೆಸರಿನ ಬಾಲಕಿ ಉಪವಾಸ ಸತ್ಯಾಗ್ರಹ ಮಾಡಿ ಶೌಚಾಲಯ ನಿರ್ಮಿಸಿಕೊಂಡಿದ್ದೇ ಸಾಕ್ಷಿ. ಈ ಪುಟ್ಟ ಮಲ್ಲಮ್ಮನ ಹೋರಾಟ ಇತರರಿಗೆ ಮಾದರಿ. ಇಂದಿನ ತಂತ್ರಜ್ಞಾನ ಯುಗದಲ್ಲಿ ಪುರುಷರಷ್ಟೇ ಮಹಿಳೆಯರಿಗೂ ಸಮಾನ ಅವಕಾಶಗಳು ದೊರಕದಿರುವುದು ವಿಷಾದನೀಯ’ ಎಂದರು.

‘ನಾನಾ ಕ್ಷೇತ್ರಗಳಲ್ಲಿ ಮಹಿಳೆ ತನ್ನದೇಯಾದ ಛಾಪು ಮೂಡಿಸುತ್ತಿದ್ದಾರೆ. ಆದರೂ ಸಹ ಬಾಲ್ಯ ವಿವಾಹ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಕಡಿಮೆಯಾಗುತ್ತಿಲ್ಲ. ಈ ವ್ಯವಸ್ಥೆ ಸಂಪೂರ್ಣವಾಗಿ ತೊಡೆದು ಹಾಕುವಲ್ಲಿ ಎಲ್ಲರ ಸಹಕಾರ ಅಗತ್ಯ. ಹೆಮರೆಡ್ಡಿ ಮಲ್ಲಮ್ಮಳು ಕಷ್ಟದ ಸನ್ನಿವೇಶದ ನಡುವೆಯೂ ಬದುಕಿನುದ್ದಕ್ಕು ಆದರ್ಶ ಅನುಸರಿಸಿದವರು’ ಎಂದರು.

ಅತಿಥಿ ಉಪನ್ಯಾಸಕಿ ರೇಖಾ ಗೋಗಿ ಮಾತನಾಡಿ, ’ಶಿವಶರಣೆ ಮಲ್ಲಮ್ಮ ಶ್ರೀಶೈಲದ ದಕ್ಷಿಣ ಭಾಗದಲ್ಲಿ ಹುಟ್ಟಿ, ಹೇಮರೆಡ್ಡಿ ಮನೆತನದ ಸೊಸೆಯಾಗಿ ಬದುಕು ನಡೆಸಿದವರು. ವ್ಯವಸ್ಥೆಯ ಒಳಗೆ ಹೋರಾಟ ಕೈಗೊಂಡವರು ಮಲ್ಲಮ್ಮ’ ಎಂದರು.

ಹೇಮರೆಡ್ಡಿ ಮಲ್ಲಮ್ಮನಿಗೆ ಬದುಕೇ ಒಂದು ಆದರ್ಶವಾಗಿತ್ತು. ಶಿಕ್ಷಣಕ್ಕೆ ಕೊಟ್ಟಿರುವ ಒತ್ತು ಸಂಸ್ಕಾರಕ್ಕೂ ನೀಡುವ ಮೂಲಕ ತಾಳ್ಮೆಯ ಬದುಕು ಕಲಿಸಿಕೊಟ್ಟಿದ್ದಾಳೆ. ದಾನಗುಣ, ದಾಸೋಹ ತತ್ಪರತೆ ಹಾಗೂ ನಿಸ್ವಾರ್ಥ ಭಕ್ತಿಗೆ ಹೆಸರಾಗಿದ್ದು, ಸಾಕ್ಷಾತ್ ಮಲ್ಲಿಕಾರ್ಜುನನೇ ಪರೀಕ್ಷಾರ್ಥವಾಗಿ ಬಂದಾಗ ತನ್ನಲ್ಲಿರುವದೆಲ್ಲವನ್ನು ಉಣ್ಣಲಿಕ್ಕಿದ ಮಹಾತಾಯಿ ಮಲ್ಲಮ್ಮ’ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಜಿಲ್ಲಾ ಪಂಚಾಯ್ತಿ ಸಿಇಒ ಗಂಗೂಬಾಯಿ ಮಾನಕರ, ಹೆಚ್ಚುವರಿ ಜಿಲ್ಲಾಧಿಕಾರಿ ಶಶೀಧರ ಕುರೇರ ಉಪಸ್ಥಿತರಿದ್ದರು. ಎಂ.ಬಿ.ಗುಡೂರ ಸ್ವಾಗತಿಸಿದರು. ಜಾಸ್ಮಿನ್ ಕಿಲ್ಲೆದಾರ ವಂದಿಸಿದರು. ಶಂಕರಲಿಂಗ ದೇಸಾಯಿ ನಿರೂಪಿಸಿದರು.
 

 

Post Comments (+)