ಭಾನುವಾರ, ಸೆಪ್ಟೆಂಬರ್ 19, 2021
23 °C

ಅಸಭ್ಯ ವರ್ತನೆ: ದೂರು– ಪ್ರತಿ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್‌ಕುಮಾರ್ ಹೊಸಮನಿ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ’ ಎಂದು ಯುವತಿಯೊಬ್ಬರು ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ. ಪ್ರತಿದೂರು ನೀಡಿರುವ ಸತೀಶ್‌ಕುಮಾರ್, ‘ಯುವತಿ ಹಾಗೂ ಅವರ ತಾಯಿ ನನ್ನನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಯುವತಿ ಹಾಗೂ ಸತೀಶ್‌ಕುಮಾರ್‌ ಇಬ್ಬರೂ ಠಾಣೆಗೆ ಬಂದು ದೂರು ನೀಡಿದ್ದಾರೆ. ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿಕೊಂಡು ಪರಿಶೀಲಿಸಲಾಗುತ್ತಿದೆ’ ಎಂದು ವಿಧಾನಸೌಧ ಪೊಲೀಸರು ಹೇಳಿದರು.

ಯುವತಿಯ ದೂರಿನ ವಿವರ: ‘ಬಿ.ಆರ್‌. ಅಂಬೇಡ್ಕರ್ ಅವರ ಬಗೆಗಿನ ಪುಸ್ತಕ ಕೇಳಲು ವಿ.ವಿ. ಟವರ್‌ನಲ್ಲಿರುವ ಗ್ರಂಥಾಲಯ ಇಲಾಖೆಯ ಕಚೇರಿಗೆ ಮೇ 3ರಂದು ಮಧ್ಯಾಹ್ನ ಹೋಗಿದ್ದೆ. ಸತೀಶ್‌ಕುಮಾರ್‌ ಅವರನ್ನು ಭೇಟಿಯಾಗಿ, ಅಂಬೇಡ್ಕರ್ ಅವರ 300 ಪುಸ್ತಕಗಳನ್ನು ನೀಡುವಂತೆ ಕೇಳಿದ್ದೆ. ಆಗ ಅವರು, ‘500 ಪುಸ್ತಕ ಕೊಡುತ್ತೇನೆ. ನೀನು ಒಬ್ಬಳೇ ನನ್ನ ಬಳಿ ಬರಬೇಕು’ ಎಂದು ಹೇಳಿ ಅಸಭ್ಯವಾಗಿ ವರ್ತಿಸಿದ್ದರು’ ಎಂದು ಯುವತಿ ದೂರಿದ್ದಾರೆ.

ಸತೀಶ್‌ಕುಮಾರ್ ದೂರಿನ ವಿವರ: ‘ಪುಸ್ತಕ ಕೇಳುವ ನೆಪದಲ್ಲಿ ಕಚೇರಿಗೆ ಬಂದಿದ್ದ ಯುವತಿ, ‘₹ 5 ಲಕ್ಷ ಕೊಡು, ಇಲ್ಲದಿದ್ದರೆ ನಿನ್ನ ಮೇಲೆ ಅತ್ಯಾಚಾರ ಯತ್ನ ಪ್ರಕರಣ ದಾಖಲಿಸುತ್ತೇನೆ. ಸರ್ಕಾರಿ ಕೆಲಸದಿಂದ ತೆಗೆದು ಹಾಕಿಸುತ್ತೇನೆ’ ಎಂದು ಬೆದರಿಸಿದ್ದರು’ ಎಂದು ಸತೀಶ್‌ಕುಮಾರ್‌ ದೂರಿದ್ದಾರೆ.

‘ಯುವತಿಯ ತಾಯಿ ಹಾಗೂ ಸಂಘಟನೆಯ ಕೆಲ ಸದಸ್ಯರು ಸಹ ಕಚೇರಿಗೆ ಬಂದು, ‘ನಿನ್ನ ಮೇಲೆ ಕೇಸ್ ದಾಖಲಿಸಿ, ಬುದ್ಧಿ ಕಲಿಸುತ್ತೇವೆ’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಾಯಿಸುವುದಾಗಿ ಬೆದರಿಕೆ ಹಾಕಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ’ ಎಂದು ಆರೋಪಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.