ಗುರುವಾರ , ಸೆಪ್ಟೆಂಬರ್ 23, 2021
26 °C
ಭಾರತಿನಗರದ ಲಾವಣ್ಯ ಚಿತ್ರಮಂದಿರದಲ್ಲಿ ನಡೆದ ಘಟನೆ

ಪಾರ್ಕಿಂಗ್ ಶುಲ್ಕಕ್ಕಾಗಿ ಪ್ರೇಕ್ಷಕನನ್ನೇ ಕೊಂದರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತಿನಗರದ ‘ಲಾವಣ್ಯ’ ಚಿತ್ರಮಂದಿರದಲ್ಲಿ ಕೆಲಸ ಮಾಡುವ ಇಬ್ಬರು, ಸಿನಿಮಾ ನೋಡಲು ಬಂದಿದ್ದ ಪ್ರೇಕ್ಷಕನನ್ನು ಪಾರ್ಕಿಂಗ್ ಶುಲ್ಕ ಕೊಡಲಿಲ್ಲವೆಂದು ಹೊಡೆದು ‌ಕೊಂದಿದ್ದಾರೆ.

ಆಸ್ಟಿನ್‌ಟೌನ್‌ನ ಭರಣಿಧರನ್ (38) ಕೊಲೆಯಾದವರು. ಆರೋಪಿ ಸೆಲ್ವರಾಜ್‌ನನ್ನು ಘಟನಾ ಸ್ಥಳದಲ್ಲೇ ಬಂಧಿಸಿದ್ದ ಪೊಲೀಸರು, ತಲೆಮರೆಸಿಕೊಂಡಿದ್ದ ಶೇಖರ್‌ನನ್ನು ಆತನ ಮೊಬೈಲ್‌ ಕರೆ ವಿವರ ಆಧರಿಸಿ ಶುಕ್ರವಾರ ಮಧ್ಯಾಹ್ನ ಸೆರೆ ಹಿಡಿದಿದ್ದಾರೆ.

ಟೈಲ್ಸ್ ಅಳವಡಿಸುವ ಕೆಲಸ ಮಾಡುವ ಭರಣಿಧರನ್, ‘ಕಾಂಚನಾ–3’ ಸಿನಿಮಾ ನೋಡಲು ಗುರುವಾರ ಸಂಜೆ 4.30ರ ಸುಮಾರಿಗೆ ಚಿತ್ರಮಂದಿರಕ್ಕೆ ಬಂದಿದ್ದರು. ಬೈಕ್ ನಿಲ್ಲಿಸಿದ ಅವರು, ಸಿನಿಮಾ ಶುರುವಾಗಿದ್ದರಿಂದ ಆತುರದಲ್ಲಿ ಪಾರ್ಕಿಂಗ್ ಶುಲ್ಕವನ್ನೂ ಕೊಡದೆ ಚಿತ್ರಮಂದಿರದೊಳಗೆ ಓಡಿದ್ದರು.

ಆಗ ಬೆನ್ನಟ್ಟಿ ಅವರನ್ನು ಅಡ್ಡಗಟ್ಟಿದ ಸೆಲ್ವರಾಜ್, ₹ 10 ಪಾರ್ಕಿಂಗ್ ಶುಲ್ಕ ಕೊಡುವಂತೆ ಕೇಳಿದ್ದ. ‘ಸದ್ಯ ಚಿಲ್ಲರೆ ಇಲ್ಲ. ಸಿನಿಮಾ ಮುಗಿಸಿಕೊಂಡು ವಾಪಸ್ ಹೋಗುವಾಗ ಹಣ ಕೊಡುತ್ತೇನೆ’ ಎಂದು ಭರಣಿಧರನ್ ಪ್ರತಿಕ್ರಿಯಿಸಿದ್ದರು. ಅದಕ್ಕೆ ಆತ ಒಪ್ಪದಿದ್ದಾಗ ಮಾತಿನ ಚಕಮಕಿ ಶುರುವಾಗಿ ಭರಣಿಧರನ್ ಕೀ ಗೊಂಚಲಿನಿಂದ ಆತನ ಮುಖಕ್ಕೆ ಹಲ್ಲೆ ನಡೆಸಿದ್ದರು. ಆನಂತರ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು.

ಅಲ್ಲೇ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಶೇಖರ್, ಸೆಲ್ವರಾಜ್‌ನ ರಕ್ಷಣೆಗೆ ಬಂದಿದ್ದ. ಇಬ್ಬರೂ ಭರಣಿಧರನ್ ಅವರನ್ನು ಚಿತ್ರಮಂದಿರದ ಕೋಣೆಯೊಂದಕ್ಕೆ ಎಳೆದೊಯ್ದು ಮನಸೋಇಚ್ಛೆ ಥಳಿಸಿದ್ದರು. ತಲೆ ಹಾಗೂ ಎದೆಗೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ಅವರು ಕುಸಿದು ಪ್ರಜ್ಞೆ ತಪ್ಪಿದ್ದರು.

ಪ್ರೇಕ್ಷಕರೊಬ್ಬರು ನಿಯಂತ್ರಣ ಕೊಠಡಿಗೆ ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ದೌಡಾಯಿಸಿದ ಹೊಯ್ಸಳ ಪೊಲೀಸರು, ಗಾಯಾಳುವನ್ನು ಆಂಬುಲೆನ್ಸ್‌ನಲ್ಲಿ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು