ಗ್ರಾಮಗಳಿಗೆ ಟ್ಯಾಂಕರ್‌ ನೀರು ಪೂರೈಸಿ; ಸಮಸ್ಯೆಗೆ ತಕ್ಷಣ ಸ್ಪಂದಿಸಲು ಸಿಇಒ ಸೂಚನೆ

ಶುಕ್ರವಾರ, ಮೇ 24, 2019
24 °C

ಗ್ರಾಮಗಳಿಗೆ ಟ್ಯಾಂಕರ್‌ ನೀರು ಪೂರೈಸಿ; ಸಮಸ್ಯೆಗೆ ತಕ್ಷಣ ಸ್ಪಂದಿಸಲು ಸಿಇಒ ಸೂಚನೆ

Published:
Updated:
Prajavani

ಬೀದರ್: ‘ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ತುರ್ತಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಬರುವ ದಿನಗಳಲ್ಲಿ ಮಳೆ ಬಾರದಿದ್ದಲ್ಲಿ ನೀರಿನ ಸಮಸ್ಯೆ ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಪಿಡಿಗಳು ಮುನ್ನೆಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಮುಂದಿನ ಒಂದು ವಾರ ಅಥವಾ 15 ದಿನಗಳಲ್ಲಿ ಸಮಸ್ಯೆ ಎದುರಾಗಬಹುದಾದ ಗ್ರಾಮಗಳ ಪಟ್ಟಿಯನ್ನು ಮುಂಚಿತವಾಗಿಯೇ ಸಿದ್ಧಪಡಿಸಿಕೊಳ್ಳಬೇಕು. ಕುಡಿಯುವ ನೀರು ಪೂರೈಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

‘ಜಿಲ್ಲೆಯಲ್ಲಿ ಅಧಿಕ ಬಿಸಿಲು ಇದೆ. ಕೆರೆ ಕಟ್ಟೆಗಳಲ್ಲಿ ನೀರಿ ಪ್ರಮಾಣ ಕಡಿಮೆಯಾಗಿ ಅಂತರ್ಜಲ ಮಟ್ಟ ಸಹ ಕುಸಿಯುತ್ತಿದೆ. ಹೊಸ ಬೋರ್‌ವೆಲ್‌ ಕೊರೆಸುವುದರಲ್ಲಿ ಅರ್ಥವಿರುವುದಿಲ್ಲ. ಸ್ಥಳೀಯವಾಗಿ ಲಭ್ಯವಿರುವ ಖಾಸಗಿ ಬೋರ್‌ವೆಲ್‌ ಹಾಗೂ ತೆರೆದ ಬಾವಿಗಳಿಂದ ನೀರು ಪೂರೈಸಲು ಕ್ರಮಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.

‘ಜಲಮೂಲಗಳು ಬತ್ತಿ ಹೋಗಿರುವ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಬೇಕು. ಈ ಮೂಲಕ ಗ್ರಾಮದ ಜನತೆಯ ನೆರವಿಗೆ ನಿಲ್ಲಬೇಕು’ ಎಂದು ಹೇಳಿದರು.

‘ಟ್ಯಾಂಕರ್‌ಗಳನ್ನು ಬೆಳಗಿನ ಅವಧಿಯಲ್ಲಿ ಕಳುಹಿಸುವ ಮೂಲಕ ಗ್ರಾಮಸ್ಥರು ತಮ್ಮ ಎಂದಿನ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಬೇಕು. ಒಟ್ಟಾರೆ ಗ್ರಾಮಸ್ಥರಿಗೆ ಅನುಕೂಲವಾಗುವ ಸಮಯದಲ್ಲೇ ನೀಡು ಕೊಡಬೇಕು’ ಎಂದು ಹೇಳಿದರು.

‘ಖಾಸಗಿ ಬೋರ್‌ವೆಲ್‌ಗಳಿಂದ ನೀರು ಪಡೆದಲ್ಲಿ ಪ್ರತಿ ವಾರ ಬಿಲ್‌ಗಳನ್ನು ಸಿದ್ಧಪಡಿಸಿ ತಹಶೀಲ್ದಾರರ ಕಚೇರಿಗೆ ಸಲ್ಲಿಸಬೇಕು. ಖಾಸಗಿವರು ಸ್ವ ಇಚ್ಚೆಯಿಂದ ನೀರು ಪೂರೈಕೆ ಮಾಡಲು ಮುಂದೆ ಬಂದರೆ ಅವರಿಗೆ ಪ್ರೋತ್ಸಾಹ ನೀಡಬೇಕು. ಒಟ್ಟಾರೆ ಜನರು ನೀರು ಕೇಳಿ ಪದೇ ಪದೇ ಸರ್ಕಾರಿ ಕಚೇರಿಗಳಿಗೆ ಬರುವುದು ತಪ್ಪುವಂತೆ ಆಗಬೇಕು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಬರ ಪರಿಸ್ಥಿತಿಯನ್ನು ಅವಲೋಕಿಸಲು ಹಾಗೂ ಶೀಘ್ರ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಹೋಬಳಿ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಇವರು ಕಾಲಕಾಲಕ್ಕೆ ನಡೆಸುವ ಸಭೆಗಳಿಗೆ ತಪ್ಪದೇ ಹಾಜರಾಗಿ ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಿ.ಶಿವಯ್ಯ , ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.

ಸಹಾಯವಾಣಿ ಆರಂಭ

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ತುರ್ತಾಗಿ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ.

ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಲ್ಲಿ ‌

ಜಿಲ್ಲಾ ಸಹಾಯವಾಣಿ ಸಂಖ್ಯೆ: 08482-231688, 9743452632,

ತಾಲ್ಲೂಕು ಪಂಚಾಯಿತಿ ಹುಮನಾಬಾದ್: 9986952980,

ಭಾಲ್ಕಿ: 7026486275,

ಬೀದರ್: 9513157459,

ಬಸವಕಲ್ಯಾಣ: 7619199563,

ಔರಾದ್: 8277095699 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !