ಗುರುವಾರ , ಸೆಪ್ಟೆಂಬರ್ 19, 2019
22 °C
ಭಾರತ ತಂಡದ ಆಟಗಾರರ ವರ್ಕಲೋಡ್ ಸಮಸ್ಯೆ ಬಗೆಹರಿದ ಸಮಾಧಾನ

ವಿಶ್ವಕಪ್ ಹಾದಿಯಲ್ಲಿ ಐಪಿಎಲ್ ಯಾತ್ರೆ ಮುಗಿಸಿದವರು

Published:
Updated:
Prajavani

ಹೈದರಾಬಾದ್ (ಪಿಟಿಐ):  ಇಂಗ್ಲೆಂಡ್‌ನಲ್ಲಿ ಮೇ 30ರಿಂದ ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕಟ್ ವಿಶ್ವಕಪ್ ಟೂರ್ನಿಯಲ್ಲಿ  ಆಡುವ ಭಾರತ ತಂಡದ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ ಅಭಿಯಾನವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಯಾರೊಬ್ಬರೂ ಗಂಭೀರವಾಗಿ ಗಾಯಗೊಳ್ಳದ ಕಾರಣ ಬಿಸಿಸಿಐ ನಿಟ್ಟುಸಿರು ಬಿಟ್ಟಿದೆ.

ಐಪಿಎಲ್ ಟೂರ್ನಿಗೂ ಮುನ್ನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ತಂಡದ ಆಟಗಾರರು ಐಪಿಎಲ್‌ನಲ್ಲಿ ಕಡಿಮೆ ಪಂದ್ಯಗಳನ್ನು ಆಡಬೇಕು. ಅದರಲ್ಲೂ ಮಧ್ಯಮವೇಗದ ಬೌಲರ್‌ಗಳು ವಿಶ್ರಾಂತಿ ಪಡೆಯಬೇಕು ಎಂಬುದರ ಬಗ್ಗೆ ಪರ ಮತ್ತು ವಿರೋಧ ಚರ್ಚೆಗಳು ನಡೆದಿದ್ದವು.

ಭಾನುವಾರ ಮುಕ್ತಾಯವಾದ ಐಪಿಎಲ್ ಟೂರ್ನಿಯ ಅಂಕಿ ಸಂಖ್ಯೆಗಳ ಮೇಲೆ ಒಮ್ಮೆ ಕಣ್ಣಾಡಿಸಿದರೆ ಈ ಹಿಂದಿನ ಚರ್ಚೆಗಳಿಗೆ ಬಲ ಸಿಕ್ಕಿಲ್ಲ. ಏಕೆಂದರೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಬಹುತೇಕ ಆಟಗಾರರು  ಅತಿ ಕಡಿಮೆ ವಿಶ್ರಾಂತಿ ಪಡೆದಿದ್ದಾರೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಮೊಹಮ್ಮದ್ ಶಮಿ, ಯಜುವೇಂದ್ರ ಚಾಹಲ್, ದಿನೇಶ್ ಕಾರ್ತಿಕ್, ಕೇದಾರ್ ಜಾಧವ್ ಅವರು ಲೀಗ್ ಹಂತದ 14 ಪಂದ್ಯಗಳಲ್ಲಿ ಆಡಿದ್ದಾರೆ.

ಪ್ಲೇ ಆಫ್‌ ಹಂತ ಪ್ರವೇಶಿಸಿದ್ದ ತಂಡಗಳಲ್ಲಿದ್ದ ಮಹೇಂದ್ರಸಿಂಗ್ ಧೋನಿ,  ಆಲ್‌ರೌಂಡರ್ ವಿಜಯಶಂಕರ್ ಮತ್ತು ಮಧ್ಯಮವೇಗಿ ಭುವನೇಶ್ವರ್ ಕುಮಾರ್ 15 ಪಂದ್ಯಗಳಲ್ಲಿ, ರವೀಂದ್ರ ಜಡೇಜ, ಹಾರ್ದಿಕ್ ಪಾಂಡ್ಯ ಮತ್ತು ಜಸ್‌ಪ್ರೀತ್ ಬೂಮ್ರಾ 16 ಪಂದ್ಯಗಳಲ್ಲಿ ಆಡಿದ್ದಾರೆ.  ಆದರೆ, ಚೈನಾಮೆನ್ ಬೌಲರ್ ಕುಲದೀಪ್ ಯಾದವ್ ಅವರೊಬ್ಬರೇ ಕಡಿಮೆ ಪಂದ್ಯಗಳನ್ನು (9) ಆಡಿದ್ದಾರೆ. ಅವರು ಕೋಲ್ಕತ್ತ ನೈಟ್ ರೈಡರ್ಸ್‌ ತಂಡವನ್ನು ಪ್ರತಿನಿಧಿಸಿದ್ದರು.

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಧೋನಿ ಬೆನ್ನುನೋವಿನಿಂದಾಗಿ ಎರಡು, ಸ್ನಾಯುಸೆಳೆತದಿಂದಾಗಿ ಕೇದಾರ್ ಜಾಧವ್ ಒಂದು ಮತ್ತು ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್ ಶರ್ಮಾ ಗಾಯದ ಸಮಸ್ಯೆಯಿಂದಾಗಿ ಒಂದು ಪಂದ್ಯದಲ್ಲಿ ಆಡಿರಲಿಲ್ಲ. ಇವರೆಲ್ಲರೂ ಚೇತರಿಸಿಕೊಂಡಿದ್ದಾರೆ. ಭಾರತವು ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಪಂದ್ಯ ಆಡಲು ಇನ್ನೂ ಮೂರು ವಾರಗಳ ಸಮಯ ಇರುವುದರಿಂದ ಎಲ್ಲ ಆಟಗಾರರಿಗೂ ಸಾಕಷ್ಟು ವಿಶ್ರಾಂತಿ ಮತ್ತು ಪೂರ್ವಾಭ್ಯಾಸಕ್ಕೆ  ಅವಕಾಶ ಇದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

ಆದರೆ, ಈ ಟೂರ್ನಿಯಲ್ಲಿ ಆಡಿದ್ದ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್, ಕಗಿಸೊ ರಬಾಡ ಅವರು ಗಂಭೀರವಾಗಿ ಗಾಯಗೊಂಡು ತಮ್ಮ ತವರಿಗೆ ಮರಳಿದ್ದಾರೆ. ಅವರು ವಿಶ್ವಕಪ್ ಟೂರ್ನಿಗಾಗಿ ಫಿಟ್ ಆಗುವ ಸವಾಲು ಎದುರಿಸುತ್ತಿದ್ದಾರೆ.  ಆದರೆ ಅಂತಹ ಸಮಸ್ಯೆ ಭಾರತ ತಂಡಕ್ಕಿಲ್ಲ.

‘ಎಲ್ಲ ಆಟಗಾರರ ದೈಹಿಕ ಕ್ಷಮತೆಯೂ ಒಂದೇ ರೀತಿ ಇರುವುದಿಲ್ಲ. ನಾನು 10, 12 ಅಥವಾ 15 ಪಂದ್ಯಗಳನ್ನು ಆಡಬಹುದು. ಉಳಿದವರು ಅದಕ್ಕಿಂತ ಹೆಚ್ಚು ಅಥವಾ ಕಡಿಮೆ ಆಡಬಹುದು. ಆದರೆ ನಮ್ಮ ದೇಹದ ಸಾಮರ್ಥ್ಯ ಮತ್ತು ಅವಶ್ಯಕತೆಗಳನ್ನು ಅರಿಯುವಷ್ಟು ಜಾಣ್ಮೆ ಇರಬೇಕು. ವಿಶ್ವಕಪ್‌ನಲ್ಲಿ ಆಡುವುದು ದೊಡ್ಡ ಅವಕಾಶ. ಅದಕ್ಕಾಗಿ ಯಾವುದೇ ತ್ಯಾಗ ಮತ್ತು ಸಿದ್ಧತೆಗೆ ಬದ್ಧರಾಗಿರಬೇಕು’ ಎಂದು ಐಪಿಎಲ್ ಟೂರ್ನಿಗೂ ಮುನ್ನ ವಿರಾಟ್ ಕೊಹ್ಲಿ ಹೇಳಿದ್ದರು.

ಇದೀಗ ಅವರೂ ಸೇರಿದಂತೆ ಬಹುತೇಕ ಎಲ್ಲ  ಆಟಗಾರರೂ ತಮ್ಮ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಐಪಿಎಲ್‌ನಲ್ಲಿ ಸಂಪೂರ್ಣ ಪಣಕ್ಕೊಡ್ಡಿದ್ದರು. ಮುಂದಿನ ಕ್ರಿಕೆಟ್ ಮಹಾಮೇಳದಲ್ಲಿ ಯಾವ ರೀತಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲಿದ್ದಾರೆಂಬ ಕುತೂಹಲ ಮೂಡಿಸಿದ್ದಾರೆ.

Post Comments (+)