ತುಮಕೂರಲ್ಲಿ ಬರ; ಹೆಚ್ಚುತ್ತಿದೆ ಕರಡಿ ದಾಳಿ

ಬುಧವಾರ, ಮೇ 22, 2019
29 °C
ರಾಜ್ಯದಲ್ಲಿಯೇ ಅತಿ ಹೆಚ್ಚು ಪ್ರಕರಣ

ತುಮಕೂರಲ್ಲಿ ಬರ; ಹೆಚ್ಚುತ್ತಿದೆ ಕರಡಿ ದಾಳಿ

Published:
Updated:
Prajavani

ತುಮಕೂರು: ಜಿಲ್ಲೆಯಲ್ಲಿನ ಬರದ ಗಂಭೀರತೆ ಮನುಷ್ಯ ಮತ್ತು ವನ್ಯಜೀವಿ ಸಂಘರ್ಷವನ್ನು ತೀವ್ರವಾಗಿಸಿದೆ. ದಿನದಿಂದ ದಿನಕ್ಕೆ ಬರ ಹೆಚ್ಚಿದಂತೆ ಕರಡಿ ದಾಳಿಗಳು ಅಧಿಕವಾಗುತ್ತಿವೆ.

ಅರಣ್ಯ ಇಲಾಖೆ ಪ್ರಕಾರ 2018ರ ಏಪ್ರಿಲ್‌ನಿಂದ 2019ರ ಮಾರ್ಚ್‌ವರೆಗೆ 38 ಜನರ ಮೇಲೆ ಕರಡಿ ದಾಳಿಗಳು ನಡೆದಿವೆ. ಈ ದಾಳಿಗಳಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಕಳೆದ 14ವರ್ಷಗಳಲ್ಲಿಯೇ ಜಿಲ್ಲೆಯಲ್ಲಿ ಅತಿಹೆಚ್ಚು ಕರಡಿ ದಾಳಿ ಪ್ರಕರಣಗಳು ಈ ವರ್ಷ ದಾಖಲಾಗಿವೆ.

ಕರಡಿ ದಾಳಿ ವಿಚಾರದಲ್ಲಿ ತುಮಕೂರು ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿದೆ. ಈ ಹಿಂದಿನ ವರ್ಷಗಳಲ್ಲಿ ಬರ ಅಧಿಕವಾಗಿದ್ದಾ
ಗಲೆಲ್ಲಾ ದಾಳಿಗಳೂ ಹೆಚ್ಚು ದಾಖಲಾಗಿವೆ.

ಇತ್ತೀಚೆಗೆ ಪಾವಗಡ ತಾಲ್ಲೂಕು ಸಾಸಲಕುಂಟೆ ಗ್ರಾಮದ ಗುಡ್ಡದಲ್ಲಿ ರೈತರೊಬ್ಬರನ್ನು ಸಾಯಿಸಿದ ಕರಡಿ, ಶವ ಸ್ಥಳಾಂತರಕ್ಕೆ ಮುಂದಾದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಮೂರು ತಾಸು ಸತಾಯಿಸಿತ್ತು. ಮತ್ತೆ ಐದಾರು ಜನರ ಮೇಲೆ ದಾಳಿ ನಡೆಸಿತ್ತು. ರೊಚ್ಚಿಗೆದ್ದ ಜನರು ಕುಡುಗೋಲು, ಮಚ್ಚುಗಳಿಂದ ಕರಡಿಯನ್ನು ಕೊಂದಿದ್ದರು. ತೋವಿನಕೆರೆ ಭಾಗದಲ್ಲಿ ಬೆಳಿಗ್ಗೆ ಹೊಲಗಳಲ್ಲಿ ಹೂ ಬಿಡಿಸುವ ಮಹಿಳೆಯರ ಮೇಲೆ ಸರಣಿಯಾಗಿ ದಾಳಿಗಳು ನಡೆಯುತ್ತಲೇ ಇವೆ.

ಪಾವಗಡ, ಕೊರಟಗೆರೆ, ಮಧುಗಿರಿ, ಶಿರಾ ಸೀಮೆಯಲ್ಲಿ ದಾಳಿ ಭೀತಿಯಿಂದ ಜನರು ಸಂಜೆ ಮತ್ತು ಬೆಳ್ಳಂಬೆಳಿಗ್ಗೆ ಹೊಲ– ತೋಟಗಳಿಗೆ ಹೋಗಲುಹಿಂಜರಿಯುತ್ತಿದ್ದಾರೆ. ಮಧುಗಿರಿ-ಕೊರಟಗೆರೆ ನಡುವಿನ ತಿಮ್ಮಲಾಪುರ ಮೀಸಲು ಅರಣ್ಯವನ್ನು ‘ಕರಡಿ ವನ್ಯಜೀವಿ ಧಾಮ’ ಎಂದು ಘೋಷಿಸುವಂತೆ ಈ ಭಾಗದ ಜನರು ಆಗ್ರಹಿಸುತ್ತಲೇ ಇದ್ದಾರೆ.

ಜಿಲ್ಲೆಯ ಗುಡ್ಡಗಳಲ್ಲಿ ನೈಸರ್ಗಿಕವಾಗಿ ಸೀತಾಫಲ ಹೇರಳವಾಗಿ ಬೆಳೆಯುತ್ತದೆ. ಈ ಸೀತಾಫಲ ಕರಡಿಗಳಿಗೆ ಹಲಸಿನಷ್ಟೇ ಪ್ರಿಯವಾದುದು. ಸ್ವಲ್ಪ ಮಳೆಸುರಿದರೂ ಸೀತಾಫಲ ಗಿಡಗಳು ಸಮೃದ್ಧವಾಗಿ ಫಸಲು ಬಿಡುತ್ತಿದ್ದವು. ಗುಡ್ಡಗಳಲ್ಲಿ ಆಹಾರ ದೊರೆಯುವ ಕಾರಣ ಕರಡಿಗಳ ಸಂಖ್ಯೆಯೂ ವೃದ್ಧಿಸಿದೆ. ಐದಾರು ವರ್ಷಗಳ ಹಿಂದೆ ಅರಣ್ಯ ಇಲಾಖೆಯು ಸೀತಾಫಲದ ಗಿಡಗಳನ್ನು ವಾರ್ಷಿಕ ₹1 ಲಕ್ಷದಿಂದ ₹1.5 ಲಕ್ಷಕ್ಕೆ ಗುತ್ತಿಗೆ ನೀಡುತ್ತಿತ್ತು. ಕರಡಿಗಳ ಸಂಖ್ಯೆ ಹೆಚ್ಚಿದಂತೆ ಈ ಗುತ್ತಿಗೆಯನ್ನು ನಿಲ್ಲಿಸಲಾಯಿತು. ಸೀತಾಫಲ ಹಣ್ಣುಗಳು ಪೂರ್ಣವಾಗಿ ಕರಡಿಗಳಿಗೆ ಮೀಸಲಾದವು.

ಆದರೆ, ಈಗ ಮಳೆ ಇಲ್ಲದ ಕಾರಣ ಸೀತಾಫಲ ಗಿಡಗಳು ಪೂರ್ಣವಾಗಿ ಒಣಗಿವೆ. ಆಹಾರ ಇಲ್ಲದೆ ಕರಡಿಗಳು ಹಳ್ಳಿಗಳತ್ತ ಎಡತಾಕುತ್ತ ಜನರ ಮೇಲೆ ದಾಳಿ ನಡೆಸಿವೆ.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 4

  Sad
 • 2

  Frustrated
 • 5

  Angry

Comments:

0 comments

Write the first review for this !