‘ಜಿನ್ನಾ ಪ್ರಧಾನಿಯಾಗಿದ್ದರೆ ದೇಶ ವಿಭಜನೆ ಆಗುತ್ತಿರಲಿಲ್ಲ’

ಶುಕ್ರವಾರ, ಮೇ 24, 2019
29 °C

‘ಜಿನ್ನಾ ಪ್ರಧಾನಿಯಾಗಿದ್ದರೆ ದೇಶ ವಿಭಜನೆ ಆಗುತ್ತಿರಲಿಲ್ಲ’

Published:
Updated:

ಮಧ್ಯ ಪ್ರದೇಶ: ಜವಾಹರಲಾಲ್‌ ನೆಹರೂ ಅವರು ಮೊಹಮ್ಮದ್‌ ಅಲಿ ಜಿನ್ನಾ ಅವರಿಗೆ ಪ್ರಧಾನಿ ಹುದ್ದೆಯನ್ನು ಬಿಟ್ಟುಕೊಟ್ಟಿದ್ದರೆ ದೇಶ ವಿಭಜನೆಯೇ ಆಗುತ್ತಿರಲಿಲ್ಲ ಎಂದು ರತ್ಲಂ–ಜಬುವಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುಮಾನ್‌ ಸಿಂಗ್‌ ಡಾಮೊರ್‌ ಹೇಳಿದ್ದಾರೆ.

‘ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ನೆಹರೂ ಅವರು ಹಟಮಾರಿಯಂತೆ ವರ್ತಿಸದಿರುತ್ತಿದ್ದರೆ ದೇಶ ಎರಡಾಗಿ ವಿಭಜನೆ ಆಗುತ್ತಿರಲಿಲ್ಲ. ಜಿನ್ನಾ ಅವರು ಭಾರಿ ವಿದ್ಯಾವಂತರಾಗಿದ್ದರು’ಎಂದು ರಾಣಾಪುರ ಪಟ್ಟಣದಲ್ಲಿ ಗುಮಾನ್‌ ಅವರು ಹೇಳಿದ್ದಾರೆ. ಜಮ್ಮು  ಮತ್ತು ಕಾಶ್ಮೀರವು ಈಗಎದುರಿಸುತ್ತಿರುವ ಸಮಸ್ಯೆಗೆ ಕಾಂಗ್ರೆಸ್‌ ಪಕ್ಷವೇ ಕಾರಣ ಎಂದೂ ಗುಮಾನ್‌ ಹೇಳಿದ್ದಾರೆ.

ಭಾರತದ ವಿಭಜನೆಗೆ ಜಿನ್ನಾ ಅವರೇ ಕಾರಣ ಎಂದು ಬಿಜೆಪಿಯ ಹಲವು ಮುಖಂಡರು ಈ ಹಿಂದೆ ಹೇಳಿದ್ದರು. ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರು ಪ್ರಧಾನಿಯಾಗುವುದನ್ನು ನೆಹರೂ ತಡೆದರು ಎಂದೂ ಹಲವರು ಹೇಳಿದ್ದರು.  

ಮಧ್ಯ ಪ್ರದೇಶ ಆರೋಗ್ಯ ಇಲಾಖೆಯ ಎಂಜಿನಿಯರಿಂಗ್‌ ವಿಭಾಗದಲ್ಲಿ ಮುಖ್ಯ ಎಂಜಿನಿಯರ್‌ ಆಗಿ ನಿವೃತ್ತರಾಗಿರುವ ಗುಮಾನ್‌ ಅವರು 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಬುವಾದಿಂದ ಗೆದ್ದಿದ್ದರು. 

ಗುಮಾನ್‌ ಅವರ ಹೇಳಿಕೆಗೆ ಕಾಂಗ್ರೆಸ್‌ ತಿರುಗೇಟು ನೀಡಿದೆ. ‘ಗುಮಾನ್‌ ಅವರಿಗೆ ದೇಶದ ಇತಿಹಾಸವೇ ಗೊತ್ತಿಲ್ಲ. ಜಿನ್ನಾಅವರ ಹಟಮಾರಿತನದಿಂದಾಗಿ ಪಾಕಿಸ್ತಾನ ಸೃಷ್ಟಿಯಾಯಿತು. ಗುಮಾನ್‌ ಅವರು ಪಾಕಿಸ್ತಾನಕ್ಕೆ ಹೋಗಿ ಚುನಾವಣೆಗೆ ಸ್ಪರ್ಧಿಸುವುದು ಒಳಿತು’ ಎಂದು ಜಬುವಾ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ನಿರ್ಮಲ್‌ ಮೆಹ್ತಾ ಹೇಳಿದ್ದಾರೆ. ರತ್ಲಂ– ಜಬುವಾ ಕ್ಷೇತ್ರದಲ್ಲಿ ಮೇ 19ರಂದು ಮತದಾನ ನಡೆಯಲಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !