ಮಂಗಳವಾರ, ಸೆಪ್ಟೆಂಬರ್ 28, 2021
23 °C
ಸೋಡ ಪ್ರಿಯರ ತಾಣ

ಶಿವಮೊಗ್ಗ ಡಿವಿಎಸ್‌ ವೃತ್ತದ ಬಳಿ ಬಾಯಲ್ಲಿ ನೀರುರಿಸುವ ‘ಜಯಣ್ಣ ಸೋಡ‘

ಅನಿಲ್ ಸಾಗರ್ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ನಗರದ ಬಹುಪಾಲು ಮಂದಿಗೆ ಇಲ್ಲಿನ ಬಸವೇಶ್ವರ ವೃತ್ತ(ಡಿವಿಎಸ್ ವೃತ್ತ)ದ ಬಳಿ ಇರುವ ‘ಜಯಣ್ಣ ಸೋಡ’ ಅತ್ಯಂತ ಚಿರಪರಿಚಿತ. ಈವರೆಗೆ ಲಕ್ಷಾಂತರ ಮಂದಿ ಜಯಣ್ಣ ನೀಡುವ ರುಚಿಕಟ್ಟಾದ ಸೋಡಕ್ಕೆ ಫಿದಾ ಆಗಿದ್ದಾರೆ.

ಅಂಗಡಿ ನೋಡುವುದಕ್ಕೆ ತೀರಾ ಚಿಕ್ಕದಾದರೂ ಇಲ್ಲಿಗೆ ಬರುವ ಗ್ರಾಹಕರ ಸಂಖ್ಯೆ ದೊಡ್ಡದು. ಮಕ್ಕಳು, ಹಿರಿಯರು, ವಿದ್ಯಾರ್ಥಿಗಳು, ಮಹಿಳೆಯರು, ಪ್ರವಾಸಿಗರು ಹೀಗೆ ಎಲ್ಲ ವರ್ಗದ ಜನರೂ ದಿನಂಪ್ರತಿ ಇಲ್ಲಿಗೆ ಭೇಟಿ ನೀಡುತ್ತಾರೆ. ಒಮ್ಮೆ ಇಲ್ಲಿನ ಸೋಡ ಸವಿದವರು ಮತ್ತೆ ಮತ್ತೆ ಇಲ್ಲಿಗೆ ಬರುತ್ತಾರೆ. ಹೆಸರಾಂತ ರಾಜಕಾರಣಿಗಳು, ವೈದ್ಯರು, ಶಿಕ್ಷಕರು, ಎಂಜಿನಿಯರ್ಸ್‌ ಸಹ ಈ ಚಿಕ್ಕ ಅಂಗಡಿಗೆ ಭೇಟಿ ನೀಡಿ ಸಂತೃಪ್ತರಾಗುತ್ತಾರೆ.

ಇನ್ನೂ ಅನೇಕರು ಇಲ್ಲಿನ ತರೇಹವಾರಿ ಸೋಡ, ಸೌತೆಕಾಯಿ ರುಚಿ ಸವಿಯಲೆಂದೇ ವಿವಿಧ ಭಾಗಗಳಿಂದ ಬಂದು ಹೋಗುತ್ತಾರೆ. ಈಗಾಗಲೇ ಇಲ್ಲಿನ ಸೋಡ ಸವಿದು ದೂರದ ಪ್ರದೇಶಗಳಲ್ಲಿ ನೆಲೆಸಿರುವ ಜನರು ಶಿವಮೊಗ್ಗಕ್ಕೆ ಬಂದಾಗ ಒಮ್ಮೆ ಇಲ್ಲಿಗೆ ಭೇಟಿ ನೀಡಿದ ನಂತರವಷ್ಟೇ ಹಿಂದಿರುಗುತ್ತಾರೆ. ಕೆಲವರು ಕುಟುಂಬ ಸಮೇತರಾಗಿ ಬಂದು ಸೋಡ ಸವಿಯುತ್ತಾರೆ.

ಎಲ್ಲರ ಅಚ್ಚುಮೆಚ್ಚು: ನಗರದ ಹಲವೆಡೆ ತರೇಹವಾರಿ ತಂಪು ಪಾನೀಯ ಅಂಗಡಿಗಳು, ಸೋಡ ಕೇಂದ್ರಗಳಿದ್ದರೂ ಬಹುಪಾಲು ಮಂದಿಗೆ ಇಲ್ಲಿ ಸಿಗುವ ಕಟ್ಟಾಮೀಟಾ ಸೋಡ, ಪುದಿನಾ ಸೋಡ, ಜಿಂಜರ್ ಸೋಡಾ, ಸ್ವೀಟ್ ಸೋಡ, ಲೆಮೆನ್ ಸೋಡ, ಸೌತೆಕಾಯಿ ಸವಿದರಷ್ಟೇ ತೃಪ್ತಿ. ಹಾಗಾಗಿ ಜಯಣ್ಣ ಸೋಡ ಎಲ್ಲರ ನೆಚ್ಚಿನ ಪಾನೀಯ ಕೇಂದ್ರವಾಗಿ ಮಾರ್ಪಟ್ಟಿದೆ.

ಪ್ರತಿದಿನ ಸಾವಿರ ಮಂದಿ: ಈ ಸೋಡ ಅಂಗಡಿ ಸುತ್ತ ಹತ್ತಾರು ಕಾಲೇಜುಗಳು, ಕಚೇರಿಗಳು, ಗ್ರಂಥಾಲಯ, ವಿದ್ಯಾರ್ಥಿ ನಿಲಯಗಳು, ಖಾಸಗಿ ಸಂಸ್ಥೆಗಳು ಇರುವುದರಿಂದ ಪ್ರತಿನಿತ್ಯ ತಂಡೋಪತಂಡವಾಗಿ ಇಲ್ಲಿಗೆ ಬಂದು ಹೋಗುತ್ತಾರೆ. ಇಲ್ಲಿನ ರುಚಿಗೆ ಮಾರು ಹೋಗಿರುವ ಗ್ರಾಹಕರು ಅಂಗಡಿ ತೆರೆಯುವುದನ್ನೇ ಕಾಯುತ್ತಾರೆ. ಅಂಗಡಿ ರಜೆ ಹಾಕಿದರಂತೂ ಸಾಕಷ್ಟು ಚಡಪಡಿಸುತ್ತಾರೆ. ಬೆಳಿಗ್ಗೆ 10.30ರಿಂದ ರಾತ್ರಿ 8.30ರವರೆಗೆ ತೆರೆದಿರುವ ಈ ಅಂಗಡಿಗೆ ನಿತ್ಯ ಸುಮಾರು 1000 ಗ್ರಾಹಕರು ಬರುತ್ತಾರೆ. ನಿತ್ಯವೂ ಇಲ್ಲಿ ನೂಕು ನುಗ್ಗಲು ಏರ್ಪಡುತ್ತದೆ. ಆದರೂ ಅನೇಕರು ತಡವಾದರೂ ಸಹ ಇಲ್ಲಿನ ರುಚಿ ಸವಿದ ನಂತರವಷ್ಟೇ ಮುಂದೆ ಸಾಗುತ್ತಾರೆ.  

ದಶಕಗಳ ವೃತ್ತಿ: ‘ಶಿವಮೊಗ್ಗದ ಜನರು ಸುಮಾರು ಆರೇಳು ದಶಕಗಳಿಂದ ಜಯಣ್ಣ ಕುಟುಂಬ ನೀಡುತ್ತಿರುವ ಸೋಡ ಸವಿಯುತ್ತಿದ್ದಾರೆ. ಜಯಣ್ಣರಿಂತ ಮುಂಚೆ ಅವರ ತಂದೆ ರಂಗಪ್ಪ ಮನೆಯಲ್ಲಿ ತಯಾರಿಸಿದ ಸೋಡವನ್ನು ಮನೆ ಮನೆಗೆ ತೆರಳಿ ಮಾರಾಟ ಮಾಡುತ್ತಿದ್ದರು. ಕಾಲನಂತರದಲ್ಲಿ ಅವರು ‘ಸೋಡ ರಂಗಪ್ಪ‘ ಎಂದೇ ಪ್ರಸಿದ್ಧಿಯಾದರು. ಅವರ ತರುವಾಯ ಅವರ ಮಗ ಜಯಣ್ಣ 1974ರಿಂದ ಈ ವೃತ್ತಿ ಮುಂದುವರಿಸಿಕೊಂಡು ಬಂದಿದ್ದಾರೆ. ಸುಮಾರು 45 ವರ್ಷಗಳಿಂದ ಅದೇ ರುಚಿಯನ್ನು ಕಾಪಾಡಿಕೊಂಡು ಬಂದಿರುವ ಜಯಣ್ಣ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇವರಿಗೆ ಮಗ ರೋಹಿತ್ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಮನೆಯಲ್ಲಿಯೇ ಸೋಡ ತಯಾರಿ

ಇನ್ನು ಸೋಡವನ್ನು ಜಯಣ್ಣ ಅವರೇ ಮನೆಯಲ್ಲಿ ತಯಾರಿಸುತ್ತಾರೆ. ಇದಕ್ಕಾಗಿ ರಾತ್ರಿಯಿಂದಲೇ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಾರೆ. ಇವರಿಗೆ ಮನೆಯವರು ಸಹಾಯಕರಾಗಿ ನಿಂತಿದ್ದಾರೆ. ‘ವಂಶಪಾರಂಪರ್ಯವಾಗಿ ಬಂದಿರುವ ಈ ವೃತ್ತಿಯಿಂದಲೇ ಕುಟುಂಬ ನಡೆಯುತ್ತಿದೆ. ಈ ವೃತ್ತಿಯಲ್ಲಿ ನೆಮ್ಮದಿ, ಸಾರ್ಥಕತೆ ಇದೆ ಎನ್ನುತ್ತಾರೆ ಜಯಣ್ಣ‘.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು