ಶನಿವಾರ, ಸೆಪ್ಟೆಂಬರ್ 18, 2021
24 °C
ಜಿಲ್ಲೆಯ 7 ನಿರ್ದೇಶಕ ಸ್ಥಾನಗಳ ಪೈಕಿ 5 ಕಾಂಗ್ರೆಸ್‌, ತಲಾ ಒಂದು ಜೆಡಿಎಸ್‌ ಮತ್ತು ಪಕ್ಷೇತರ ಅಭ್ಯರ್ಥಿಯ ಪಾಲು

ಕೋಚಿಮುಲ್ ಚುನಾವಣೆ: ಕಾಂಗ್ರೆಸ್‌ಗೆ ಮುನ್ನಡೆ, ನಾಗರಾಜ್‌ಗೆ ಹಿನ್ನೆಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ಆಡಳಿತ ಮಂಡಳಿಯ 9 ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಜಿಲ್ಲೆಯ 4 ಸ್ಥಾನಗಳ ಪೈಕಿ ಎರಡು ಕಾಂಗ್ರೆಸ್‌, ತಲಾ ಒಂದು ಜೆಡಿಎಸ್‌ ಮತ್ತು ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದರು.

13 ಮಂದಿ ನಿರ್ದೇಶಕರ ಸ್ಥಾನಗಳಲ್ಲಿ 4 ಮಂದಿ ಇತ್ತೀಚೆಗಷ್ಟೇ ಅವಿರೋಧವಾಗಿ ಆಯ್ಕೆಯಾಗಿದ್ದರು. ಆ ಪೈಕಿ ಜಿಲ್ಲೆಯಿಂದ ಗೌರಿಬಿದನೂರು ಕ್ಷೇತ್ರದಲ್ಲಿ ಕಾಂತರಾಜ್, ಗುಡಿಬಂಡೆ ಕ್ಷೇತ್ರದಲ್ಲಿ ಅಶ್ವತ್ಥರೆಡ್ಡಿ, ಚಿಕ್ಕಬಳ್ಳಾಪುರ ಮಹಿಳಾ ಕ್ಷೇತ್ರದಿಂದ ಸುನಂದಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಮೂರು ಅಭ್ಯರ್ಥಿಗಳು ಕಾಂಗ್ರೆಸ್‌ ಬೆಂಬಲಿತರು.

ಕೆ.ವಿ.ನಾಗರಾಜ್‌ಗೆ ಮುಖಭಂಗ
ಕೋಚಿಮುಲ್‌ಗೆ ಕಳೆದ ಸುಮಾರು 27 ವರ್ಷಗಳಿಂದ ಸತತವಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಜೆಡಿಎಸ್‌ ಬೆಂಬಲದಿಂದ ಆಯ್ಕೆಯಾಗುತ್ತ ದಾಖಲೆ ನಿರ್ಮಿಸಿದ್ದ ಸಹಕಾರ ಕ್ಷೇತ್ರದ ಹಿರಿಯ ಧುರೀಣ ಕೆ.ವಿ.ನಾಗರಾಜ್‌ ಅವರು ಪಕ್ಷಾಂತರ ಮಾಡಿ ಇದೇ ಮೊದಲ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಮೂರು ಮತಗಳಿಂದ ಸೋತು ಭಾರಿ ಮುಖಭಂಗ ಅನುಭವಿಸಿದರು.

ಚಲಾವಣೆಗೊಂಡ ಒಟ್ಟು 158 ಮತಗಳಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ, ನಲ್ಲಕದೀರೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎನ್‌.ಸಿ.ವೆಂಕಟೇಶ್‌ ಅವರು 80 ಮತಗಳು, ನಾಗರಾಜ್‌ ಅವರು 77 ಮತಗಳನ್ನು ಪಡೆದರು. ಒಂದು ಮತ ಅಸಿಂಧುಗೊಂಡಿತು.

ಕಳೆದ ವಿಧಾನಸಭೆ ಹೊಸ್ತಿಲಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್‌ ಸೇರಿ, ಶಾಸಕ ಡಾ.ಕೆ.ಸುಧಾಕರ್ ಅವರ ಎರಡನೇ ಅವಧಿಯ ಗೆಲುವಿಗೆ ಶ್ರಮಿಸಿದ್ದ ನಾಗರಾಜ್‌ ಅವರನ್ನು ಗೆಲ್ಲಿಸಲು ಸುಧಾಕರ್ ಅವರು ಟೊಂಕ ಕಟ್ಟಿ ನಿಂತಿದ್ದರು. ಆದರೆ ಫಲಿತಾಂಶ ಮಾತ್ರ ಅವರ ನಿರೀಕ್ಷೆಗೆ ವ್ಯತಿರಿಕ್ತವಾಗಿ ಬಂದು ಶಾಸಕರಿಗೆ ಸಹ ಬೇಸರ ಮೂಡಿಸಿದೆ ಎನ್ನಲಾಗಿದೆ.

ಇನ್ನು, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶಾಸಕ ವಿ.ಮುನಿಯಪ್ಪ ಬೆಂಬಲಿತ ಅಭ್ಯರ್ಥಿ ಆರ್.ಶ್ರೀನಿವಾಸ್ (87 ಮತ) ಅವರು ತಮ್ಮ ಪ್ರತಿಸ್ಪರ್ಧಿ ಜೆಡಿಎಸ್‌ ಬೆಂಬಲಿತ ಮುನಿಯಪ್ಪ ಅವರನ್ನು ಒಂದು ಮತದಿಂದ ಸೋಲಿಸಿ ಗೆಲುವಿನ ನಗೆ ಬೀರಿದರು.

ಚಿಂತಾಮಣಿ ತಾಲ್ಲೂಕಿನಲ್ಲಿ ಜೆಡಿಎಸ್‌ ಮೈತ್ರಿಯ ಅಭ್ಯರ್ಥಿಯಾಗಿ ಕೋಚಿಮುಲ್‌ ಮಾಜಿ ನಿರ್ದೇಶಕ ಟಿ.ಎನ್‌. ರಾಜಗೋಪಾಲ್‌ ಮತ್ತು ಮಾಜಿ ಶಾಸಕ ಡಾ. ಎಂ.ಸಿ. ಸುಧಾಕರ್‌ ಬಣದ ಹಾಲಿ ನಿರ್ದೇಶಕ ವೈ.ಬಿ. ಅಶ್ವತ್ಥನಾರಾಯಣ ಬಾಬು ನಡುವೆ ಮತ್ತೆ ಸ್ಪರ್ಧೆ ನಡೆದಿತ್ತು. ರಾಜಗೋಪಾಲ್ (84) ಅವರನ್ನು ಅಶ್ವತ್ಥನಾರಾಯಣ ಬಾಬು (113) ಅವರು 29 ಮತಗಳ ಅಂತರದಿಂದ ಪರಾಭವಗೊಳಿಸಿ ವಿಜಯಲಕ್ಷ್ಮಿ ಒಲಿಸಿಕೊಂಡರು.

ಬಾಗೇಪಲ್ಲಿ ಕ್ಷೇತ್ರದಲ್ಲಿ ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ಬೆಂಬಲಿಗ ವಿ.ಮಂಜುನಾಥ್‌ ರೆಡ್ಡಿ ಅವರು 40 ಮತಗಳನ್ನು ಪಡೆದು ಬೀಗಿದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಿ.ಎಸ್.ಚೌಡರೆಡ್ಡಿ ಅವರು 17 ಮತಗಳಿಗೆ ಸಮಾಧಾನಪಟ್ಟುಕೊಂಡರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು